ವಿದ್ಯಾಗಿರಿ: ಆಯುರ್ವೇದದ ಪ್ರಸೂತಿ ತಂತ್ರದಲ್ಲಿ ಸ್ತ್ರೀ ರೋಗಕ್ಕೆ ಹಲವಾರು ಪರಿಹಾರವಿದೆ ಎಂದು ಆಳ್ವಾಸ್ ಹೆಲ್ತ್ ಸೆಂಟರ್ ಸ್ತ್ರೀರೋಗತಜ್ಞೆ ಡಾ ಹನಾ ಶೆಟ್ಟಿ ನುಡಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ(ರಿ) ಆಳ್ವಾಸ್ ನಿರಾಮಯ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಆಳ್ವಾಸ್ ಆಯುರ್ವೇದ ಕಾಲೇಜಿನ ಪ್ರಸೂತಿ ತಂತ್ರ ಮತ್ತು ಸ್ತ್ರೀ ರೋಗ ಸ್ನಾತಕೋತ್ತರ ವಿಭಾಗ, ಮೂಡಬಿದಿರೆ ಬಂಟರ ಮಹಿಳಾ ಸಂಘದ ಜಂಟಿ ಆಶ್ರಯದಲ್ಲಿ ಮೂಡಬಿದಿರೆಯ ಕನ್ನಡ ಭವನದಲ್ಲಿ ಬುಧವಾರ ಹಮ್ಮಿಕೊಂಡ ‘ಸ್ತ್ರೀ ರೋಗ ಮಾಹಿತಿ ಹಾಗು ಉಚಿತ ಆರೋಗ್ಯ ತಪಾಸಣಾ’ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸ್ತ್ರೀರೋಗದ ಕುರಿತು ಅರಿವು ಮೂಡಿಸಿ ಹಾಗೂ ರಿಯಾಯಿತಿ ದರದಲ್ಲಿ ಔಷಧವನ್ನು ಒದಗಿಸಿ, ಮುಂಬರುವ ದಿನಗಳಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಭೇಟಿ ನೀಡಿ ಸೂಕ್ತ ಪರಿಹಾರವನ್ನು ಕಂಡುಕೊಳ್ಳುವವರಿಗೆ ನೆರವಾಗುತ್ತೇವೆ ಎಂದರು. ಒಂದು ಕುಟುಂಬದ ಸ್ತ್ರೀ ಆರೋಗ್ಯವಾಗಿದ್ದಾಗ ಮಾತ್ರ, ಕುಟುಂಬದ ಎಲ್ಲಾ ಸದಸ್ಯರು ಆರೋಗ್ಯದಿಂದಿರಲು ಸಾಧ್ಯ ಎಂದು ಹೇಳಿದರು.
ಆಳ್ವಾಸ್ ನಿರಾಮಯದ ವೈದ್ಯಕೀಯ ನಿರ್ದೇಶಕಿ ಡಾ ಸುರೇಖಾ ಪೈ, ಮಾತನಾಡಿ, ಬಹುತೇಕ ಸ್ತ್ರೀಯರು ಮುಟ್ಟಿನ ಸಂದರ್ಭದಲ್ಲಿ ಅನುಭವಿಸುವ ತೊಳಲಾಟವನ್ನು ವೈದ್ಯರ ಬಳಿ ತಿಳಿಸಿ ಪರಿಹಾರ ಕಂಡುಕೊಳ್ಳುವಲ್ಲಿ ಹಿಂದೇಟು ಹಾಕುತ್ತಾರೆ. ಸ್ತ್ರೀಯರಿಗೆ ಅವರ ಆರೋಗ್ಯ, ಅವರ ಕಾಳಜಿ ಎಲ್ಲದಕ್ಕಿಂತಲೂ ಹೆಚ್ಚು ಅವಶ್ಯಕ ಎಂದರು. ನಮ್ಮಲ್ಲಿ ಎಲ್ಲಾ ಚಿಕಿತ್ಸೆಗಳು ರಿಯಾಯಿತಿ ದರದಲ್ಲಿ ಲಭ್ಯವಿದ್ದು, ಸ್ಥಳೀಯ ಜನರು ಈ ರೀತಿಯ ವಿಶೇಷ ಉಚಿತ ಸ್ತ್ರೀರೋಗ ವೈದ್ಯಕೀಯ ತಪಾಸಣೆಯ ಪ್ರಯೋಜನವನ್ನು ಪಡೆಯಬೇಕು ಎಂದು ಮನವಿ ಮಾಡಿದರು .
ಶಿಬಿರದ ವಿಶೇಷತೆಯಾಗಿ, ತಜ್ಞ ಆಯುರ್ವೇದ ವೈದ್ಯರೊಂದಿಗೆ ಸಮಾಲೋಚನೆ, ನುರಿತ ವೈದ್ಯಕೀಯ ವೃತ್ತಿಪರರಿಂದ ಸಮಗ್ರ ಮೌಲ್ಯಮಾಪನ, ಸ್ತ್ರೀ ರೋಗಗಳು ಹಾಗೂ ಅವುಗಳನ್ನು ತಡೆಗಟ್ಟುವ ಕ್ರಮಗಳ ತಿಳುವಳಿಕೆ ಮತ್ತು ಪರಿಣಿತರೊಂದಿಗೆ ಸಂವಾದಾತ್ಮಕ ಪ್ರಶ್ನೋತ್ತರ ನಡೆಯಿತು. 50ಕ್ಕೂ ಅಧಿಕ ಜನರು ಶಿಬಿರದ ಪ್ರಯೋಜನ ಪಡೆದರು.
ಕಾರ್ಯಕ್ರಮದಲ್ಲಿ ಬಂಟರ ಮಹಿಳಾ ಸಂಘದ ಅಧ್ಯಕ್ಷೆ ಶೋಭಾ ಹೆಗ್ಡೆ, ಸ್ನಾತಕೋತ್ತರ ವಿಭಾಗದ ಡಾ ಮಾನಸಿ, ಡಾ ಕವಿತಾ, ಕಾರ್ಯಕ್ರಮದ ಸಂಯೋಜಕ ಸುಮನ್ ಶೆಟ್ಟಿ, ಬಂಟರ ಸಂಘ ಮಹಿಳಾ ಘಟಕದ ಪದಾಧಿಕಾರಿಗಳು, ಪದವಿ ಹಾಗೂ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಆಳ್ವಾಸ್ ಆಯುರ್ವೇದ ಕಾಲೇಜಿನ ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ವೈದ್ಯರು ಶಿಬಿರವನ್ನು ನಡೆಸಿಕೊಟ್ಟರು.