“ಮೇರು ಸಾಹಿತಿ, ಕಾದಂಬರಿಕಾರರಾದ ಡಾ. ಶಿವರಾಮ ಕಾರಂತ, ಎಸ್ ಎಲ್ ಭೈರಪ್ಪ ಮತ್ತು ನಾಟಕಕಾರರಾದ ಗಿರೀಶ್ ಕಾರ್ನಾಡ್ ಮೊದಲಾದವರ ಸಾಹಿತ್ಯ ತನ್ನನ್ನು ಬರವಣಿಗೆಯತ್ತ ಸೆಳೆಯಿತು. ಶಾಲಾ ದಿನಗಳಲ್ಲಿ ಸಣ್ಣ ಕತೆಗಳನ್ನು ಬರೆಯಲು ಆರಂಭಿಸಿ ನನ್ನದೇ ಆದ ಶೈಲಿಯನ್ನು ರೂಢಿಸಿಕೊಂಡಿರುವುದರಿಂದ ಓದುಗರನ್ನು ಸೆಳೆಯಲು ಸಾಧ್ಯವಾಯಿತು” ಎಂದು ಹಿರಿಯ ಕತೆಗಾರ ರಾಜೇಂದ್ರ ಬಿ ಶೆಟ್ಟಿ ಅವರು ನುಡಿದರು.
ಅವರು ಸೆಪ್ಟೆಂಬರ್ 21ರ ಶನಿವಾರದಂದು ಕಲೀನಾ ಕ್ಯಾಂಪಸ್ ನ ಕನ್ನಡ ವಿಭಾಗಕ್ಕೆ ಭೇಟಿ ನೀಡಿ ಸಾಹಿತ್ಯ ಸಂವಾದದಲ್ಲಿ ಪಾಲ್ಗೊಂಡು ಪ್ರಶ್ನೆಗಳಿಗೆ ಉತ್ತರಿಸುತ್ತಾ ತಮ್ಮ ಸಾಹಿತ್ಯ ಪಯಣದ ಹೆಜ್ಜೆ ಗುರುತುಗಳ ಕುರಿತಾಗಿ ಹಲವಾರು ವಿಷಯಗಳನ್ನು ಹಂಚಿಕೊಂಡರು. “ಅಧ್ಯಾಪಕರ ಪ್ರೋತ್ಸಾಹ ಕಥನ ಸಾಹಿತ್ಯದಲ್ಲಿ ಮುಂದುವರೆಯಲು ಕಾರಣೀಭೂತವಾಯಿತು. ಇಂಜಿನಿಯರ್ ವೃತ್ತಿಯೊಂದಿಗೆ ತನ್ನ ಮೆಚ್ಚಿನ ಪ್ರವೃತ್ತಿಯಲ್ಲಿ ತೊಡಗಿಸಿಕೊಂಡು ಸಾಹಿತ್ಯದ ಸೇವೆ ಮಾಡಲು ಸಂತೋಷವೆನಿಸುತ್ತಿದೆ” ಎಂದು ಅವರು ನುಡಿದರು.
ಸಾಹಿತ್ಯದ ಜೊತೆಗೆ ಸಾಂಸ್ಕೃತಿಕ ಪರಿಚಾರಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಕಥನ ಸಾಹಿತ್ಯದಲ್ಲಿ ತಮ್ಮ ವಿಭಿನ್ನ ಶೈಲಿಗೆ ಹೆಸರಾಗಿರುವ ರಾಜೇಂದ್ರ ಶೆಟ್ಟಿ ಅವರಿಗೆ ವಿಭಾಗದ ಮುಖ್ಯಸ್ಥ ಪ್ರೊ. ಜಿ.ಎನ್ ಉಪಾಧ್ಯ ಶುಭವನ್ನು ಹಾರೈಸಿದರು. ಇಂಜಿನಿಯರ್ ಆಗಿದ್ದುಕೊಂಡು ಸಾಹಿತ್ಯ ಕೃಷಿಯಲ್ಲಿ ನಿರತರಾಗಿರುವ ರಾಜೇಂದ್ರ ಶೆಟ್ಟಿ ಅವರ ಸಾಧನೆ ಅಭಿಮಾನ ಪಡುವ ಸಂಗತಿ ಎಂದು ಅವರು ನುಡಿದರು. ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಪೂರ್ಣಿಮಾ ಸುಧಾಕರ್ ಶೆಟ್ಟಿ ಅವರು ಕಾರ್ಯಕ್ರಮ ನಿರ್ವಹಿಸಿದರು. ಸವಿತಾ ಅರುಣ್ ಶೆಟ್ಟಿ ಅವರು ವಂದಿಸಿದರು.