ಬಂಟರ ಚಾವಡಿ ಪರ್ಕಳ (ರಿ) ಇದರ ವಾರ್ಷಿಕ ಮಹಾಸಭೆಯು ಸೆಪ್ಟೆಂಬರ್ 29 ರಂದು ಆದಿತ್ಯವಾರ ಪರ್ಕಳದ ಸುರಕ್ಷಾ ಸಭಾಭವನದಲ್ಲಿ ಜರಗಿತು. ಸಭೆಯ ಅಧ್ಯಕ್ಷ ಸ್ಥಾನವನ್ನು ಚಾವಡಿಯ ಅಧ್ಯಕ್ಷರಾದ ಅರುಣಾಚಲ ಹೆಗ್ಡೆಯವರು ವಹಿಸಿದ್ದರು. ಸಂಘದ ಗೌರಾವಾಧ್ಯಕ್ಷರಾದ ಜಯರಾಜ್ ಹೆಗ್ಡೆಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಾಧ್ಯಕ್ಷರಾದ ವಸಂತ ಶೆಟ್ಟಿ ಹಿರೇಬೆಟ್ಟು, ಪ್ರಧಾನ ಕಾರ್ಯದರ್ಶಿ ದಿನೇಶ್ ಹೆಗ್ಡೆ ಆತ್ರಾಡಿ, ಕೋಶಾಧಿಕಾರಿ ವಸಂತ ಶೆಟ್ಟಿ ಚೆನ್ನಿಬೆಟ್ಟು, ಸಂಘಟನಾ ಕಾರ್ಯದರ್ಶಿ ದಿವಾಕರ ಶೆಟ್ಟಿ ಹೆರ್ಗ ವೇದಿಕೆಯಲ್ಲಿ ಆಸೀನರಾಗಿದ್ದರು.
ವಸಂತ ಶೆಟ್ಟಿ ಚೆನ್ನಿಬೆಟ್ಟು ಪ್ರಾರ್ಥನೆ ಮಾಡಿದರು. ಅಧ್ಯಕ್ಷರಾದ ಅರುಣಾಚಲ ಹೆಗ್ಡೆಯವರು ಸಭೆಗೆ ಆಗಮಿಸಿದ ಎಲ್ಲಾ ಸದಸ್ಯರನ್ನು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ದಿನೇಶ್ ಹೆಗ್ಡೆಯವರು ಸಂಘದ ಕಾರ್ಯ ಚಟುವಟಿಕೆಗಳ ವರದಿಯನ್ನು ಮಂಡಿಸಿದರು. ಮಾಜಿ ಕಾರ್ಯಾಧ್ಯಕ್ಷ ದಿನಕರ ಶೆಟ್ಟಿಯವರು ಸಂಘದ ಧ್ಯೇಯೋದ್ದೇಶದ ಬಗ್ಗೆ ಪ್ರಾಸ್ಥಾವಿಕವಾಗಿ ಮಾತಾಡಿದರು. ಕೋಶಾಧಿಕಾರಿ ವಸಂತ ಶೆಟ್ಟಿ ಚೆನ್ನಿಬೆಟ್ಟು 2023-24ನೇ ಸಾಲಿನ ಪರಿಶೋಧಿತ ಲೆಕ್ಕಪತ್ರಗಳನ್ನು ಮಂಡಿಸಿದರು ಮತ್ತು ಅದಕ್ಕೆ ಸಭೆಯ ಸದಸ್ಯರ ಅನುಮೋದನೆಯನ್ನು ಪಡೆದುಕೊಂಡರು. ಹಾಜರಿದ್ದ ಸದಸ್ಯರ ಅನುಮತಿ ಮೇರೆಗೆ 2024-25ನೇ ಸಾಲಿಗೆ ಲೆಕ್ಕಪರಿಶೋಧಕರಾಗಿ ಅರುಣ್ ನಾಯಕ್ & ಕಂಪೆನಿಯನ್ನೇ ಮುಂದುವರೆಸಲು ನಿರ್ಧರಿಸಲಾಯಿತು.
ಗೌರವಾಧ್ಯಕ್ಷರಾದ ಜಯರಾಜ್ ಹೆಗ್ಡೆಯವರು ಮುಂದೆ ಸಂಘಟನೆಯನ್ನು ಬಲಪಡಿಸುವುದರ ಬಗ್ಗೆ ಸದಸ್ಯರು ಯಾವ ರೀತಿ ಕೆಲಸ ಮಾಡಬೇಕು ಎಂಬುದರ ಬಗ್ಗೆ ಮಾತನಾಡಿದರು. ಅಧ್ಯಕ್ಷರಾದ ಅರುಣಾಚಲ ಹೆಗ್ಡೆಯವರು ಸಂಘದ ಕಾರ್ಯ ಚಟುವಟಿಕೆಗಳಲ್ಲಿ ಎಲ್ಲಾ ಸದಸ್ಯರ ಪಾಲ್ಗೊಳ್ಳುವಿಕೆಯನ್ನು ಶ್ಲಾಘಿಸಿದರು. ಮುಂದೆ ಕೂಡಾ ಸಂಘದ ಕಾರ್ಯಕ್ರಮಗಳನ್ನು ನಡೆಸಿಕೊಂಡು ಹೋಗಲು ಎಲ್ಲಾ ಸದಸ್ಯರ ಸಹಕಾರವನ್ನು ಕೋರಿದರು. ಮಾಜಿ ಅಧ್ಯಕ್ಷರಾದ ಶಿವರಾಮ ಶೆಟ್ಟಿಯವರು ಸಂಘದ ಕಾರ್ಯ ಚಟುವಟಿಕೆಗಳನ್ನು ನಡೆಸಲು ಸಂಘಕ್ಕೆ ತುರ್ತು ಜಾಗದ ಅವಶ್ಯಕತೆಯ ಬಗ್ಗೆ ಸದಸ್ಯರಿಗೆ ಮನವರಿಕೆ ಮಾಡಿದರು.
ನಿಕಟಪೂರ್ವ ಅಧ್ಯಕ್ಷರಾದ ತಾರಾನಾಥ್ ಹೆಗ್ಡೆಯವರು ಬಂಟರು ಸಂಘಟಿತರಾಗುವ ಅವಶ್ಯಕತೆಯ ಬಗ್ಗೆ ಮತ್ತು ಯಾವ ರೀತಿಯಲ್ಲಿ ಸಂಘದ ಕಾರ್ಯ ಚಟುವಟಿಕೆಗಳನ್ನು ನಡೆಸಿಕೊಂಡು ಹೋಗಬೇಕು ಎಂಬುದರ ಬಗ್ಗೆ ಸದಸ್ಯರಿಗೆ ಮಾಹಿತಿ ನೀಡಿದರು. ಕಾರ್ಯಾಧ್ಯಕ್ಷರಾದ ವಸಂತ ಶೆಟ್ಟಿ ಹಿರೇಬೆಟ್ಟುರವರು ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು. ರಾಷ್ಟ್ರಗೀತೆಯೊಂದಿಗೆ ಮಹಾಸಭೆಯನ್ನು ಮುಕ್ತಾಯಗೊಂಡಿತು.