ಯೋಗ್ಯ ಪ್ರಶ್ನಾ ಚಿಂತಕರನ್ನು ಕರೆಸಿ ಕುಟುಂಬ ಸದಸ್ಯರ ವೈರತ್ವ, ನಾಗದೇವಗಳ ಕೋಪ, ಶಾಪ ಪರಿಹಾರ ಕರ್ಮಾದಿಗಳನ್ನು ಮಾಡಿ ತರವಾಡು, ನಾಗದೇವಗಳ ತಾಣ ಕೋಲಾದಿಗಳನ್ನು ವರ್ಷಂಪ್ರತಿ ಎಲ್ಲರೂ ಒಟ್ಟು ಸೇರಿ ಆಚರಿಸುತ್ತಿರುವ ಕುಟುಂಬಗಳ ಸಂಖ್ಯೆ ಮೀರಿ ಬೆಳೆಯುತ್ತಿವೆ. ಇದಲ್ಲದೆ ಕುಟುಂಬ ಪದ್ಧತಿ ಕೂಡಿ ಬಾಳುವುದೇ ಕುಟುಂಬ ಪರಂಪರೆ. ಆದರೆ ಇದಕ್ಕೆ ಅಪವಾದ ಎಂಬಂತೆ ನಮ್ಮ ಕುಂಬಳೆ ಸೀಮೆಯ ಪ್ರತಿಷ್ಠಿತ ಎರಡು ಬಂಟ ಕುಟುಂಬಗಳಲ್ಲಿ ತಂತ್ರಿಗಳಿದ್ದು ದೇವ ಪ್ರಶ್ನೆ ಚಿಂತಿಸಲಾಯಿತು. ದುರದೃಷ್ಟವಶಾತ್ ಆ ಕುಟುಂಬಗಳು ಈಗ ಕಡ್ಡಿ ಮುರಿದಂತೆ ನಾಲ್ಕು ಭಾಗವಾಯಿತು. ಈ ದೇವ ಮಾನವರ ಸಮಕ್ಷಮದಲ್ಲಿ ಹೀಗಾಗಬಹುದೇ? ಕಾರಣ ಏನೇ ಇರಲಿ, ನೀವು ಒಂದಾಗುದಿಲ್ಲವಾದರೆ ಮುಂದೆ ಬರುವ ದುರಿತಗಳನ್ನು ನೀವೇ ಅನುಭವಿಸಿ ಎಂದು ಹೇಳಿ ಇವರು ಹೊರಡುತ್ತಿದ್ದರೇ ಈ ದುರ್ಗತಿ ಆಗುತ್ತಿತ್ತೆ..?
ಈ ಕುಟುಂಬದಲ್ಲಿ ವಿದ್ಯಾವಂತರು ಸಮಾಜದಲ್ಲಿ ಗೌರವ ಸ್ಥಾನಮಾನ ಗಳಿಸಿದವರಿದ್ದರೂ ಪವಿತ್ರವಾದ ಮಾತೃಮೂಲ ಸಂಸ್ಕಾರಕ್ಕೆ ಅಪಮಾನ ಮಾಡಿದರೆಂಬುದೇ ಪ್ರಶ್ನಾರ್ಥಕ. ಆಶ್ಚರ್ಯ ಘಟನೆ ಮಾಡುವ ಮೊದಲೇ ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಬೆಳ್ತಂಗಡಿ ತಾಲೂಕಿನ ಒಂದು ಹಳ್ಳಿಯಲ್ಲಿ ಒಂದೇ ಕುಟುಂಬಕ್ಕೆ ಸೇರಿದ ಅರಮನೆಗಳಿರುವ ಒಕ್ಕಲಿಗ ಸಮಾಜದಲ್ಲಿ ಪುತ್ತೂರಿನ ಖ್ಯಾತ ಬ್ರಾಹ್ಮಣ ಜ್ಯೋತಿಷ್ಯರು ದೇವ ಪ್ರಶ್ನೆ, ಚಿಂತಿಸಿ ಅವರಲ್ಲಿ ಏಳು ಮನೆಯವರನ್ನು ಅರಮನೆಗಳಿಂದ ಬೇರ್ಪಡಿಸಿ ಮೂಲ ಮನೆಗೆ ಸೇರದಂತೆ ಆಜ್ಞಾಪಿಸಿದರಂತೆ. ಅವರನ್ನು ಬಿಟ್ಟು ಉಳಿದ 58 ಮನೆಯವರು ಮೂಲ ಮನೆಯಲ್ಲಿ ದೈವ ದೇವರ ಮುಡಿಪು ಗುರುಹಿರಿಯರ ಕಾರ್ಯ ಮಾಡಲು ಉಪದೇಶಿಸಿದರು. ಇತ್ತ ಏಳು ಮನೆಯಲ್ಲಿ ವಯೋ ವೃದ್ಧ ಸ್ತ್ರೀಯೊಬ್ಬರು ಅಸುನೀಗಿದಾಗ 58 ಮನೆಗಳಿಗೆ ಹೇಳಿಕೆ ನೀಡಿದರು. ಯಾರೊಬ್ಬರೂ ಸೇರುವ ಸ್ಥಿತಿಯಲ್ಲಿ ಇಲ್ಲದ ಕಾರಣ ಊರವರು ಸೇರಿ ಅಂತ್ಯಸಂಸ್ಕಾರ ಮಾಡಿದುದು ಎಲ್ಲಾ ವಾರ್ತಾ ಮಾಧ್ಯಮಗಳಲ್ಲಿ ಸುದ್ದಿಯಾಗಿದೆ. ಇದಕ್ಕೆ ಕಾರಣವನ್ನು ತಿಳಿದಾಗ ಅಣ್ಣ ತಮ್ಮಂದಿರೊಳಗೆ ಹಲವಾರು ವರ್ಷಗಳಿಂದ ಆಸ್ತಿಯ ಕೇಸು ನಡೆಯುತ್ತಿತ್ತು. ಆದರೆ ಅವರೆಲ್ಲರೂ ಈ ತನಕ ಮೂಲ ಮನೆಯಲ್ಲಿ ನಡೆಯುತ್ತಿದ್ದ ಎಲ್ಲಾ ವರ್ಷದ ಪರ್ವಗಳಿಗೂ ಬಂದು ಸೇರುತ್ತಿದ್ದರು. ಮುಡಿಪು ಪೂಜೆ ಮಾಡಿ ಉಂಡು ಹೋಗುತ್ತಿದ್ದರು. ಆ ಸೌಹಾರ್ದತೆಗೆ ಕೊಲ್ಲಿ ಬೀಳಲು ಕಾರಣವೇ ದೇವಪ್ರಶ್ನೆ ಎಂದು ತಿರಸ್ಕರಿಸಲ್ಪಟ್ಟ 7 ಮನೆಯವರು ಹಾಗೂ ಊರವರ ಕೊರಗು. ನಮಗೆ ಮೂಲ ಮನೆಗೆ ಎಲ್ಲರಂತೆ ಸೇರಿ ಬಾಳುವ ಹಕ್ಕಿನ ನ್ಯಾಯ ಒದಗಿಸಿ ಕೊಡಬೇಕೆಂದು ಜಿಲ್ಲೆಯ ಒಕ್ಕಲಿಗ ಸಮಾಜದ ಮೊರೆ ಹೋಗುವಂತಾಗಿದೆ.
ನಮ್ಮ ಧರ್ಮ ಚಿಂತಕರು, ತಂತ್ರಿಗಳು ಪ್ರಶ್ನೆಯವರ ಪ್ರಧಾನ ಉದ್ದೇಶವೆಂದರೆ ಚದುರಿ ಹೋದವರ ಒಗ್ಗೂಡಿಸುವ ಬೆಸುಗೆ ಕಾರ್ಯದ ಬದಲಾಗಿ ಒಡೆದು ಆಳುವ ಅಂದರೆ ಉಭಯ ಕುಟುಂಬಗಳಿಂದ ಲಾಭ ಪಡೆಯುವ ಉದ್ದೇಶವಾದರೆ ಅದರ ಆಯಸ್ಸು ಅಲ್ಪ ಎಂದು ತಿಳಿಯಬೇಕು. ಕೂಡಿ ಬಾಳಿದರೆ ಕುಟುಂಬದ ಬಗ್ಗೆ ನಾನು ಈ ಮೊದಲು ಹಲವಾರು ಲೇಖನಗಳಲ್ಲಿ ಬರೆದಿದ್ದೇನೆ. ಪ್ರಶ್ನೆ ಚಿಂತಕರು ಹಾಗೂ ವೈದಿಕರು ಮೊದಲಾಗಿ ತೌಳವ ನೆಲದ ಮೂಲ ಸಂಸ್ಕಾರವನ್ನು ತಿಳಿಯಬೇಕು. ನಮ್ಮ ಊರಲ್ಲಿ ಅಣ್ಣ ತಮ್ಮಂದಿರ ಬ್ರಾಹ್ಮಣ ಮನೆಗಳಲ್ಲಿ ಬೇರೆ ಬೇರೆ ಮುಡಿಪು ಇದ್ದು ವರ್ಷಂಪ್ರತಿ ಪರಸ್ಪರ ಎರಡು ಮನೆಗಳಲ್ಲಿ ಸೇರಿ ಮುಡಿಪು ಪೂಜೆ ಮಾಡಿ ಉಂಡು ಹೋಗುತ್ತಾರೆ. ಇದರಿಂದ ಮಾತ್ರ ತಿಳಿಯಬಹುದು ಅವರಲ್ಲಿ ಕುಟುಂಬ ಪದ್ಧತಿ ಇದೆ ಎಂದು. ನಮ್ಮ ತೌಳವ ಸಂಸ್ಕಾರದಲ್ಲಿ ನೂರಾರು ಮನೆಗಳಲ್ಲಿ ಎಲ್ಲೇ ಎಷ್ಟೇ ಜನರು ವಾಸಿಸಲಿ ಅವರೆಲ್ಲರಿಗೂ ಮೂಲ ಮನೆಯಲ್ಲಿ ಮುಡಿಪು, ನಾಗ, ಧರ್ಮದೈವಗಳ ತಾಣವಾಗಿದೆ. ಧರ್ಮದೈವದ ಮಾತಿಗೆ ನಿಮ್ಮನ್ನು ಹೆತ್ತ ತಾಯಿ ಬೇರೆಯಾದರೂ ಇಡೀ ಸಂಸಾರವನ್ನು ಮಡಿಲಲ್ಲಿ ಹಾಕಿ ರಕ್ಷಿಸುವಳು ನಾನಲ್ಲವೇ ಎನ್ನುತ್ತಾಳೆ.
ಇಲ್ಲಿ ಬೇರೆ ಬೇರೆ ದೈವಗಳಿಗೆ ಬೇರೆ ಬೇರೆ ಕೋಳಿ ಅದನ್ನು ಕೊಯ್ಯುವ ರೀತಿ, ಅಡುಗೆಯ ಕ್ರಮ, ಬಡಿಸುವ ರೀತಿ ಇದರ ಭಕ್ಷ್ಯಗಳಲ್ಲಿ ಅದೆಷ್ಟೋ ವ್ಯತ್ಯಾಸವಿದೆ. ಅದು ಬ್ರಾಹ್ಮಣ ಜ್ಯೋತಿಷ್ಯರಿಗೆ ಹೇಗೆ ತಿಳಿಯಬೇಕು. ಅದಕ್ಕಾಗಿ ಸಾವಿರಾರು ವರ್ಷಗಳ ಹಿಂದೆಯೇ ಮಾತನಾಡುವ ದೈವಕ್ಕೆ ಪ್ರಶ್ನೆ ಇರಲಿಲ್ಲ ಅಥವಾ ಬೇಕಿದ್ದರೆ ಮಾಂಸಹಾರಿ ಪ್ರಶ್ನೆಯವರನ್ನು ಮಾತ್ರ ಕರ್ಮಿಗಳನ್ನು ಗುರುತಿಸಿದ್ದಾರೆ ಎಂಬುದಕ್ಕೆ ಇಲ್ಲಿ ಶಾಸ್ತ್ರವಿದೆ.
ಬರಹ : ಕಡಾರು ವಿಶ್ವನಾಥ್ ರೈ