ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಮೂರನೆಯ ಅಧ್ಯಕ್ಷರಾಗಿದ್ದ ವಿಶ್ವನಾಥ ಯು. ಮಾಡ ಅವರ ನಿಧನಕ್ಕೆ ಸಮಿತಿಯ ವತಿಯಿಂದ ನುಡಿ ನಮನ ಸಲ್ಲಿಸಲಾಯಿತು. ಸಾಂತಾಕ್ರೂಜ್ ಪೂರ್ವದ ಪೇಜಾವರ ಮಠದಲ್ಲಿ ದಕ್ಷಿಣ ಕನ್ನಡ ಜಿಲ್ಲೆಗಳ ಸರ್ವತೋಮುಖ ಅಭಿವೃದ್ಧಿಯ ಬಗ್ಗೆ ಯಶಸ್ವಿಯಾಗಿ ಹೋರಾಟ ನಡೆಸುತ್ತಿರುವ ಏಕೈಕ ಸರ್ಕಾರೇತರ ಸಂಘಟನೆ, ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಮಾಜಿ ಅಧ್ಯಕ್ಷ ವಿಶ್ವನಾಥ ಯು. ಮಾಡ ಅವರ ಸಂತಾಪ ಸಭೆಯಲ್ಲಿ ಗಣ್ಯರು ಮಾತನಾಡಿದರು. ತೋನ್ಸೆ ಜಯಕೃಷ್ಣ ಎ. ಶೆಟ್ಟಿ (ಸಮಿತಿಯ ಸಂಸ್ಥಾಪಕರು) ಮಾತನಾಡಿ, ಮಾಡ ಅವರ ಶಿಸ್ತಿನ ಜೀವನ ಪದ್ಧತಿ, ಕಠಿಣ ಪರಿಶ್ರಮ ಮತ್ತು ಅವರ ವ್ಯಕ್ತಿತ್ವವು ತಮ್ಮ ಸಾಧನೆಗೆ ಪ್ರೇರಣೆ ನೀಡಿದೆ. ಅವರಿಂದ ನಾವು ಬಹಳಷ್ಟು ಶಿಸ್ತಿನ ಅನುಭವ ಪಡೆದಿದ್ದೇವೆ. ಸಮಿತಿಗೆ ಅವರು ಮಾಡಿದ ಸೇವೆ ಪ್ರಯೋಜನಕಾರಿಯಾಗಿದೆ. ಅವರು ನಡೆದು ಬಂದ ದಾರಿ ಇತರರಿಗೂ ಮಾರ್ಗದರ್ಶನವಾಗಲಿ ಹಾಗೂ ಸಮಿತಿಯಲ್ಲಿ ಅವರ ಹೆಸರು ಸದಾ ಕಾಲ ಉಳಿಯುವಂತಾಗಲಿ. ಅವರ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ದೇವರು ಅವರ ಕುಟುಂಬಕ್ಕೆ ಕರುಣಿಸಲಿ ಎಂದು ನುಡಿದರು. ವಿಶ್ವನಾಥ ಯು. ಮಾಡ ಅವರೊಂದಿಗೆ ದೀರ್ಘಕಾಲದ ಗೆಳೆತನ ನಮ್ಮದಾಗಿತ್ತು. ಅವರು ಸೇವೆ ಮಾಡುತ್ತಿದ್ದ ಎಲ್ಲಾ ಸಂಘಟನೆಗಳಲ್ಲಿ ಶಿಸ್ತನ್ನು ಪಾಲಿಸಿಕೊಂಡು ಬರುತ್ತಿದ್ದರು. ಅವರ ಸೇವಾ ಕಾರ್ಯ ನಮ್ಮ ಸಮಿತಿಗೆ ಆದರ್ಶವಾಗಿದೆ ಎಂದರು.
ಧರ್ಮಪಾಲ ಯು. ದೇವಾಡಿಗ (ಸಮಿತಿಯ ಮಾಜಿ ಅಧ್ಯಕ್ಷರು), ಮುಂಡ್ಕೂರು ಸುರೇಂದ್ರ ಸಾಲ್ಯಾನ್ (ಸಮಿತಿಯ ಗೌರವ ಪ್ರಧಾನ ಕಾರ್ಯದರ್ಶಿ), ನಿತ್ಯಾನಂದ ಡಿ. ಕೋಟ್ಯಾನ್ (ಸಮಿತಿಯ ಅಧ್ಯಕ್ಷರು), ಸಮಿತಿಯ ಉಪಾಧ್ಯಕ್ಷರಾದ ಸಿ.ಎ ಐ.ಆರ್. ಶೆಟ್ಟಿ, ದೇವಾಡಿಗ ಸಂಘದ ಅಧ್ಯಕ್ಷ ರವಿ ದೇವಾಡಿಗ, ಬಂಟರ ಸಂಘ ಮುಂಬಯಿಯ ಗೌರವ ಪ್ರಧಾನ ಕಾರ್ಯದರ್ಶಿ ಡಾ| ಆರ್.ಕೆ. ಶೆಟ್ಟಿ, ಭಂಡಾರಿ ಸೇವಾ ಸಂಘದ ಮಾಜಿ ಅಧ್ಯಕ್ಷ ನ್ಯಾ. ಆರ್.ಎಂ. ಭಂಡಾರಿ, ಶ್ರೀ ಶನಿ ಮಹಾತ್ಮ ಪೂಜಾ ಸಮಿತಿ ಖಾರ್ ಇದರ ಗೌರವ ಅಧ್ಯಕ್ಷ ಶಂಕರ ಸುವರ್ಣ, ಡಾ| ಸುರೇಂದ್ರ ಕುಮಾರ್ ಹೆಗ್ಡೆ, ನ್ಯಾ. ಸಂತೋಷ್ ಹೆಗ್ಡೆ, ಕುಲಾಲ ಸಂಘದ ಗೌರವ ಅಧ್ಯಕ್ಷ ದೇವದಾಸ ಕುಲಾಲ್, ಲೋಕನಾಥ್ ಪೂಜಾರಿ, ಡಾ. ತುಕಾರಾಮ ಶೆಟ್ಟಿ, ವಿಶ್ವನಾಥ್ ಮಾಡ ಅವರ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಸಲ್ಲಿಸಿ, ಅವರೊಂದಿಗಿನ ನೆನಪುಗಳನ್ನು ಸ್ಮರಿಸಿದರು. ಸಭೆಯಲ್ಲಿ ಜ್ಯೋತಿ ಕ್ರೆಡಿಟ್ ಸೊಸೈಟಿಯ ಕಾರ್ಯಾಧ್ಯಕ್ಷ ಗಿರೀಶ್ ಸಾಲ್ಯಾನ್, ನ್ಯಾ. ಗುಣಾಕರ ಶೆಟ್ಟಿ, ಗೌರವ ಕಾರ್ಯದರ್ಶಿ ಹ್ಯಾರಿ ಸಿಕ್ವೇರಾ, ಜೊತೆ ಕೋಶಾಧಿಕಾರಿಗಳಾದ ತೋನ್ಸೆ ಸಂಜೀವ ಪೂಜಾರಿ, ರಾಕೇಶ್ ಭಂಡಾರಿ ಮೊದಲಾದವರು ಉಪಸ್ಥಿತರಿದ್ದು, ಸಮಿತಿಯ ಮಾಜಿ ಅಧ್ಯಕ್ಷ ವಿಶ್ವನಾಥ ಯು. ಮಾಡ ಅವರ ನಿಧನಕ್ಕೆ ಪುಷ್ಪ ನಮನ ಸಲ್ಲಿಸಿದರು.

ಚಿತ್ರ, ವರದಿ : ದಿನೇಶ್ ಕುಲಾಲ್











































































































