ಗಣೇಶ ಚತುರ್ಥಿಯನ್ನು ತುಳುನಾಡಿನ ಜನರು “ಚೌತಿ ಹಬ್ಬ’ ಎಂದು ಸಂಭ್ರಮದಿಂದ ಆಚರಿಸುತ್ತಾರೆ . ಇದು ತುಳುನಾಡಿನ ಪ್ರದೇಶದ ಜನತೆಗೂ , ಗಣಪತಿ ದೇವರಿಗೂ ಪ್ರೀತಿಯ ಕೊಂಡಿಯಾಗಿದೆ . ಇದು ಊರಿನ ಎಲ್ಲಾ ದೈವ – ದೇವಸ್ಥಾನಕ್ಕೆ ಸಲ್ಲುವ ಪರ್ವ . ಈ ಸಂದರ್ಭದಲ್ಲಿ ಈ ಪ್ರದೇಶದ ವಿಶಿಷ್ಟವಾದ ಸಂಪ್ರದಾಯವೆಂದರೆ ಚೌತಿ ಆಚರಣೆಯಲ್ಲಿ ಗಣೇಶನನ್ನು ಸಂಕೇತಿಸಲು ಯಾವುದೇ ಕೃತಕ ರಾಸಾಯನಿಕ ಮೂರ್ತಿಯನ್ನಿಡದೆ ಕಬ್ಬನ್ನು ಬಳಸಿ ಅದನ್ನೇ ದೇವರು ಎಂದು ಪ್ರತಿನಿಧಿಸುವುದು. ತುಳುನಾಡು ಪ್ರದೇಶದ ಹಲವಾರು ಪದ್ಧತಿಗಳಂತೆ ಇದು ಕೂಡ ಕೃಷಿ ಪದ್ಧತಿಗಳಿಗೆ ಬಲವಾದ ಸಂಬಂಧವನ್ನು ಹೊಂದಿದೆ ಮತ್ತು ಪ್ರಕೃತಿ ಮಾತೆಯ ಗೌರವಕ್ಕೆ ಕಾರಣವಾಗಿದೆ . ಈ ಎಲ್ಲಾ ಆಚರಣೆಗಳನ್ನು ಜೈವಿಕ ವಿಘಟನೆಯ ವಸ್ತುಗಳೊಂದಿಗೆ ನಡೆಸಲಾಗುತ್ತದೆ .ಇದರಿಂದ ಸಾಮಾನ್ಯವಾಗಿ ಸುತ್ತು ಮುತ್ತಲಿನ ಪರಿಸರಕ್ಕೆ ಯಾವುದೇ ಹಾನಿಯಾಗುವುದಿಲ್ಲ.
ಚೌತಿ ಆಚರಣೆಯಲ್ಲಿ ಕಬ್ಬಿನ ಗಣೇಶ :
ಚೌತಿ ಆಚರಣೆಯ ಅಂಗವಾಗಿ ತುಳುವರು ಕಬ್ಬಿನ ತುಂಡುಗಳಿಂದ ಪಿರಮಿಡ್ ರಚನೆಯನ್ನು ರಚಿಸಿ ,ಅದರಲ್ಲಿ ಭಗವಂತನನ್ನು ಪ್ರತಿನಿಧಿಸುತ್ತಾರೆ. ಕಬ್ಬು ಗಣಪತಿಗೆ ಅತಿ ಪ್ರಿಯ ವಸ್ತುವಾಗಿದೆ.ಇಲ್ಲಿ ಕಬ್ಬನ್ನು ಸುಮಾರು ಒಂದು ಅಡಿ ಉದ್ದಕ್ಕೆ ತುಂಡು ಭಾಗ ಮಾಡಿ, ಕೊನೆಯ ಹಂತದ ಕೆಲವನ್ನು ಸಣ್ಣ ಭಾಗ ತುಂಡುಗಳನ್ನಾಗಿ ಮಾಡಿ ಚೌಕಾಕಾರದಲ್ಲಿ ಪಿರಮಿಡ್ ರೀತಿಯಲ್ಲಿ ಅದನ್ನು ಜೋಡಿಸುತ್ತಾರೆ. ಈ ಜೋಡಿಸುವ ವಿಧಾನ ಕೆಲವು ಆಯಾಯ ಪ್ರದೇಶಕ್ಕನುಗುಣವಾಗಿ ಸ್ವಲ್ಪ ವ್ಯತ್ಯಾಸ ಇರಬಹುದು. ನಂತರ ಇದನ್ನು ಬಹಳಷ್ಟು ವರ್ಣ ರಂಜಿತ ಹೂಗಳಿಂದ ,ದೀಪಗಳಿಂದ ಅಲಂಕರಿಸುತ್ತಾರೆ .ಇದನ್ನು ದೇವರ ಮನೆಯಲ್ಲಿ ಅಥವಾ ತುಳಸಿಕಟ್ಟೆಯ ಮುಂದೆ ಅಲಂಕರಿಸಿ ಸಂಜೆ ತನಕ ಇಟ್ಟು ನಂತರ ಬಂಧು-ಬಳಗ, ಹಿತವರು ,ಅಕ್ಕಪಕ್ಕದ ಮನೆಯವರೊಡನೆ ಪ್ರಸಾದ ರೂಪವಾಗಿ ಹಂಚಿ ತಿನ್ನುತ್ತಾರೆ.
‘ ಅಲಂಕಾರ ‘ಮತ್ತು “ಚೌತಿ ಬಳಸುವ (ಅರ್ಪಣೆ ) ವಿಧಾನ :
ಚೌತಿ ಬಳಸುವ ಮೊದಲು ತುಳಸಿ ಕಟ್ಟೆಯನ್ನು ಸ್ವಚ್ಛಗೊಳಿಸಿ, ನಾಲ್ಕು ಕಡೆ ನಾಲ್ಕು ದೊಡ್ಡ -ದೊಡ್ಡ ಕಬ್ಬನ್ನು ಆಧಾರವಾಗಿ ಕಟ್ಟಿ ಇದನ್ನು ಮಾವಿನ ಎಲೆಗಳಿಂದ ತೋರಣ ಕಟ್ಟಿ ಶೃಂಗರಿಸುತ್ತಾರೆ. ತುಳಸಿ ಕಟ್ಟೆಯ ಎದುರು ಎರಡು ಮಣೆಗಳನ್ನು ಇಟ್ಟು ಮೊದಲಿಗೆ ಗಣಪತಿ ಇಡುತ್ತಾರೆ. ಗಣಪತಿ ಇಡುವುದು ಎಂದರೆ ಒಂದು ಬಾಳೆಯ ಎಲೆಯ (ಕೊಡಿ ತುಂಡು )ಇಟ್ಟು ಇಲ್ಲಿ ಸ್ವಲ್ಪ ಅಕ್ಕಿ ಹಾಕಿ ಇದರ ಮೇಲೆ ಒಂದು ತೆಂಗಿನಕಾಯಿ ,ವೀಳ್ಯ ಅಡಿಕೆ ,ಹೂ ಇಡುವುದು. ನಂತರ ಮೊದಲೇ ಭಾಗ ಮಾಡಿ ಇಟ್ಟುಕೊಂಡಂತಹ ಕಬ್ಬನ್ನು ಮಣೆಯ ಮೇಲೆ ಪಿರಮಿಡ್ ತರಹ ಜೋಡಿಸುತ್ತಾರೆ ಬಳಿಕ ಅನೇಕ ಬಗೆಯ ಹೂವುಗಳಿಂದ ಇದನ್ನು ಶೃಂಗರಿಸುತ್ತಾರೆ. ಈ ಪಿರಮಿಡ್ ಹಿಂದೆ ಎರಡು ‘ಜ್ಯೋತಿ ಕೋಲು’ ಎಂದು ದೊಡ್ಡ ಕೊಡಿ ಕಬ್ಬಿನ ತುಂಡನ್ನು ಕೂಡ ಇಡುತ್ತಾರೆ. ಕೆಲವು ಕಡೆ ಇದಕ್ಕೆ ಶೃಂಗರಿಸಲು ಹುರುಳಿ ಹೂವು (ಕುಡುತ ಪೂ) ಉಪಯೋಗಿಸುತ್ತಾರೆ.
ಈ ಹೂವಿನ (ಕುಡುತ ಪೂ)ತಯಾರಿ ಚೌತಿಯ ಒಂದು ವಾರಕ್ಕೆ ಮೊದಲೇ ಆರಂಭಗೊಳ್ಳುತ್ತದೆ. ಕುಡುತ ಪೂ (ಹುರುಳಿ ಹೂವ)ನ್ನು ತಯಾರಿಸಲು ಹುರುಳಿಯನ್ನು ಮೊದಲೇ ನೀರಲ್ಲಿ ನೆನೆಸಿಟ್ಟು, ಮರುದಿನ ನೀರು ಬಸಿದು, ಹರಸಿನ ಹುಡಿ ಬೆರೆಸಿ ,ಕೆಂಪು ಮಣ್ಣಿನಲ್ಲಿ ಹಾಕಿ ,ಒಂದು ದೊಡ್ಡ ಅಗಲ ಬಾಯಿ ಇರುವ ಮಣ್ಣಿನ ಮಡಕೆ ಮುಚ್ಚಿಟ್ಟು ಇಡುತ್ತಾರೆ. ಅರಸಿನ ಹುಡಿ ಬೆರೆಸುವ ಉದ್ದೇಶ ಹುರುಳಿ, ಹಳದಿ ಬಣ್ಣದಲ್ಲಿ ಮೊಳಕೆ ಒಡೆದು ಬಂದು , ಅದರ ಸೌಂದರ್ಯ ಇನ್ನಷ್ಟು ಹೆಚ್ಚಾಗುತ್ತದೆ. ಐದಾರು ದಿನ ಬಿಟ್ಟು, ಚೌತಿಯಂದು ಹುರುಳಿ ಮೊಳಕೆಗೆ ಮುಚ್ಚಿಟ್ಟಂತಹ ಮಡಿಕೆ ತೆಗೆದು ನೋಡುವಾಗ ,ಚೆನ್ನಾಗಿ ಹಳದಿ ಬಣ್ಣದಲ್ಲಿ ಹುರುಳಿಯ ಮೊಳಕೆಗಿಡಗಳು ಉದ್ದ ಉದ್ದಗೆ ಬೆಳೆದು ತಯಾರಾಗಿರುತ್ತದೆ. ಇದರ ಬೇರನ್ನು ಕೊಯ್ದು ಸಣ್ಣ ಸಣ್ಣ ಸೂಡಿ ಕಟ್ಟುತ್ತಾರೆ .ಈ ಹುರುಳಿ ಬೀಜದ ಮೊಳಕೆಯ ಸೂಡಿಯಿಂದ ಚೌತಿ ದೇವರನ್ನು ಅಲಂಕರಿಸುತ್ತಾರೆ. ಅದು ಅಲ್ಲದೆ ತುಳುನಾಡಿನ ಮನೆಯಲ್ಲೇ ಕಾಣಸಿಗುವ ದಾಸವಾಳ, ಗೌರಿ ಪುಷ್ಪ ,ರಥ ಪುಷ್ಪ , ಪಚ್ಚೆಕೊರಲ್ ,ಸುಗಂಧಿ, ಪಿಂಗಾರ,( ಹಿಂಗಾರ) ಗರಿಕೆ, ರತ್ನಗಂಧಿ ,ಕರವೀರ , ತುಂಬೆದ ಹೂ ಮೊದಲಾದ ಪುಷ್ಪಗಳನ್ನು , ಈ ಜೋಡಿಸಲ್ಪಟ್ಟ ಕಬ್ಬಿನ ತುಂಡುಗಳ ನಡುವೆ ಇಟ್ಟು ಶೃಂಗರಿಸುತ್ತಾರೆ .ಅಲ್ಲದೆ ‘ಮುದ್ಯಾಲ’ ಎಂಬ ಪರಿಮಳದ ಬೇರನ್ನು ಕೂಡ ಇಡುತ್ತಾರೆ. ‘ಮುದ್ಯಾಲ’ ಎಂಬುದು ಒಂದು ಅದ್ಭುತವಾದ ಪರಿಮಳವಾದ ಬೇರು ಹಾಗೂ ಒಂದು ನೈಸರ್ಗಿಕ room freshener ಕೂಡ ಆಗಿದೆ.
ಅನಂತರ ಗಣಪತಿಗೆ ಬಗೆ ಬಗೆಯ ತಿನಿಸುಗಳನ್ನು ಅರ್ಪಿಸುತ್ತಾರೆ .ಮುಖ್ಯವಾಗಿ ಉಪ್ಪು ಹಾಕದೆ ತಯಾರಿಸಿದ ನೀರುದೋಸೆ ,ಉಂಡುಲಗ( ಅಕ್ಕಿ ಹಿಟ್ಟಿನಿಂದ ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿ, ತುಪ್ಪದಲ್ಲಿ ಕಾಯಿಸಿದ )ಅಲ್ಲದೆ ಮೋದಕ ,ಅಪ್ಪ , ಕಡುಬು, ಪಂಚಕಜ್ಜಾಯ , ಚಕ್ಕುಲಿ , ಉಂಡೆ, ಅರಳು (ಪೊರಿ / ಪೊದ್ದೂಲ್) ಬೆಲ್ಲ ಹಾಗೂ ಹಲವಾರು ಬಗೆಯ ಹಣ್ಣು ಹಂಪಲುಗಳು , ಸೀಯಾಳ, ಹಾಗೂ ತಮ್ಮ ತೋಟದಲ್ಲೆ ಬೆಳೆದು ತಯಾರಾದ ಕದಳಿ ಬಾಳೆಹಣ್ಣು . ಇವು ಅಲ್ಲದೆ ಕೆಂಡದಲ್ಲಿ ಸುಟ್ಟು ಕಾಯಿಸಿದ ಗೇರುಬೀಜ ಮತ್ತು ಹಲಸಿನ ಹಣ್ಣಿನ ಬೀಜವನ್ನು ಕೂಡ ಅರ್ಪಿಸುತ್ತಾರೆ. ಹಲಸಿನ ಬೀಜದ ಅರ್ಪಣೆಗೂ ಒಂದು ಸಣ್ಣ ಕಥೆ ಇದೆ . ಒಂದೂರಲ್ಲಿ ಒಂದು ಬಡಮುದುಕಿ, ಚೌತಿ ಹಬ್ಬಕ್ಕೆ ಏನೂ ಇಲ್ಲದೆ ತನ್ನಲ್ಲಿದ್ದ ಸ್ವಲ್ಪ ಹಲಸಿನ ಬೀಜವನ್ನೇ ಸುಟ್ಟು ಅರ್ಪಿಸಿದಳಂತೆ. ಅದಕ್ಕೂ ಹೊಟ್ಟೆ ಬಾಕ ಗಣೇಶ ಕೈಯೊಡ್ಡಿ ಬಂದನಂತೆ. ಆದ್ದರಿಂದ ತುಳುವರು ಹಲಸಿನ ಬೀಜವನ್ನು ಕೂಡ ಚೌತಿಗೆ ಬಳಸಲು ಉಪಯೋಗಿಸುತ್ತಾರೆ. ಅಕ್ಕಿ ಹಿಟ್ಟಿನಿಂದ ತಯಾರಾದ ತಿಪಿಲ (ದೀಪ) ವನ್ನು ತುಪ್ಪದಲ್ಲಿ ಬೆಳಗಿಸಿ ಗಣಪತಿಗೆ ಅರ್ಪಿಸುತ್ತಾರೆ. ಮನೆ ಯಜಮಾನ ಖುದ್ದಾಗಿ ಗಂಧದ ಕೊರಡನ್ನು ತಿಕ್ಕಿ , ತೀಡಿ ತಯಾರಿಸಿದ ಗಂಧವನ್ನು ಎಲ್ಲೆಡೆ ಪೂಸಿ ನಂತರ ದೂಪದ ಆರತಿ ಎತ್ತುತ್ತಾರೆ .ಕೊನೆಗೆ ಕರ್ಪೂರದ ಆರತಿ ಕೊಟ್ಟು ದೇವರಿಗೆ ಕೊನೆಯ ಆರತಿಯನ್ನು ತೋರಿಸುತ್ತಾರೆ . ತುಂಬೆಹೂವಿನ ಜೊತೆ ಬೆರೆಸಿದ ಅಕ್ಕಿಯನ್ನು ಅಕ್ಷತೆ ರೂಪವಾಗಿ ಸ್ವಲ್ಪ ಎಲ್ಲಾ ಮನೆ ಮಂದಿಯವರಿಗೆ ಹಂಚಿ ಪ್ರಾರ್ಥನೆ ಮಾಡಿ ಕೈಮುಗಿಯುತ್ತಾರೆ.
ಚಿಕ್ಕ ಮಕ್ಕಳಿಗೆ ಆಕಾಶ ತೋರಿಸಿ ‘ನೋಡು ಪುಟ್ಟ , ಇಲಿ ಮೇಲೆ ಕುಳಿತು ಗಣೇಶ ಬರುತ್ತಿದ್ದಾನೆ, ನಮ್ಮ ಮನೆಯ ‘ಚೌತಿ ಬಳಸಿದ್ದನ್ನು’ ತಿನ್ನಲು ಬರುತ್ತಿದ್ದಾನೆ ‘ ಎಂದು ಕಶ್ಮಲವಿಲ್ಲದ ಭಾವಪೂರ್ವಕವಾದ ಭಕ್ತಿಯನ್ನು ಬಿಂಬಿಸುತ್ತಾರೆ.ಇದನ್ನು ಹೀಗೆ ಸಂಜೆತನಕ ಇಟ್ಟು, ನಂತರ ತೆಗೆದು ಪ್ರಸಾದ ರೂಪದಲ್ಲಿ ತಿನ್ನುತ್ತಾರೆ.
ಚೌತಿ ಊಟ:
ಇದು ತುಳುನಾಡಿನ ಮನೆಯಲ್ಲಿ ಬೆಳೆದ ತರಕಾರಿಯಿಂದ ತಯಾರಿಸಿದ ಹಬ್ಬದೂಟ. ಮುಳ್ಳು ಸೌತೆಯ ಪಚ್ಚೊಡಿ, ಉಪ್ಪು ಶುಂಠಿ, ಪದೆಂಗಿ ಗಸಿ , ಬೆಂಡೆ – ಅಂಬಡೆ ಸುಕ್ಕ, ಅಲಸಂಡೆ, ಹೀರೆಕಾಯಿ ಪಲ್ಯ , ತಿಮರೆ ಚಟ್ನಿ ಕೊನೆಗೆ ಪಾಯಸ. ಈ ಚೌತಿ ಹಬ್ಬ ತುಳುನಾಡಿನ ಜನತೆಗೆ ತನ್ನ ಪ್ರಕೃತಿ ಮಾತೆಯೊಡನೆ ಭಕ್ತಿಯೊಂದಿಗೆ ಸಾಮರಸ್ಯದ ಜೊತೆ ಬೆರೆಸುವ ಹಬ್ಬವಾಗಿದೆ . ಇದು ಊರಿನಿಂದ ಮುಂಬಯಿಗೂ ತಲುಪಿ ನಮ್ಮ ಮನೆಯಲ್ಲೂ ಪ್ರತಿ ವರುಷ ಸಂಭ್ರಮದಿಂದ ಆಚರಿಸಿಕೊಂಡು ಬರುತ್ತಿದ್ದೇವೆ .
ಅಶ್ವಿತಾ ಶೆಟ್ಟಿ ಇನೋಳಿ