ತಾನೋರ್ವ ಇನ್ಫಾರ್ಮೇಶನ್ ಟೆಕ್ನಾಲಜಿ ಕ್ಷೇತ್ರದ ಯಶಸ್ವಿ ಉದ್ಯಮಿಯಾಗಿ ಗುರುತಿಸಿ ಕೊಂಡಿರುವುದರೊಂದಿಗೆ ತನ್ನ ಸಮುದಾಯ ಬಾಂಧವರ ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ಚಟುವಟಿಕೆಗಳೊಂದಿಗೆ ಕೈ ಜೋಡಿಸಿಕೊಂಡು ತನ್ನಿಂದಾಗುವ ಆರ್ಥಿಕ ಸಹಾಯ ನೀಡುವುದರ ಜೊತೆಗೆ ಅವರ ಕೌಟುಂಬಿಕ ಸಮಸ್ಯೆಗಳಿಗೆ ಸ್ಫಂದಿಸುವ ಓರ್ವ ಉದಾರ ಹೃದಯದ ಉದಾತ್ತ ವ್ಯಕ್ತಿತ್ವ ಎಂಬಂತೆ ಅಮರನಾಥ ಲಕ್ಷ್ಮಣ್ ಶೆಟ್ಟಿಯವರು ಗುರುತಿಸಿಕೊಂಡಿದ್ದಾರೆ. ಕಂಪ್ಯೂಟರ್ ಇಂಜಿನಿಯರ್ ಪದವೀಧರರಾಗಿರುವ ಜೊತೆಗೆ ಮ್ಯಾನೇಜ್ಮೆಂಟ್ ಪಿ.ಜಿ ಡಿಪ್ಲೊಮಾ ಹೊಂದಿರುವ ಇವರು ತನ್ನ ಶಿಕ್ಷಣ ಪೂರೈಸಿದ ಬಳಿಕ ತನ್ನದೇ ಆದ LDS Infotech Pvt Ltd ಎಂಬ ಸಂಸ್ಥೆಯನ್ನು ಹುಟ್ಟು ಹಾಕಿ ಸಂಸ್ಥೆಯು ಮಾರುಕಟ್ಟೆಯ ಬಹು ಬೇಡಿಕೆಯ ತಂತ್ರವಿಜ್ಞಾನ ಸಂಸ್ಥೆ ಎಂಬಂತೆ ಗುರುತಿಸಲ್ಪಟ್ಟಿತು. ಕೇವಲ ನಾಲ್ಕು ಮಂದಿ ಸಹಾಯಕರೊಂದಿಗೆ ಆರಂಭಿಸಲ್ಪಟ್ಟ ಈ ಸಂಸ್ಥೆ ಇಂದು ನೂರೈವತ್ತು ಜನ ಉನ್ನತ ಶಿಕ್ಷಣ ಪಡೆದ ಸದಸ್ಯರ ತಂಡದೊಂದಿಗೆ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ತನ್ನ ಸಂಸ್ಥೆ 25 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿ ಬೆಳ್ಳಿ ಹಬ್ಬದ ಸಂಭ್ರಮವನ್ನು ಮೇ ತಿಂಗಳಿನಲ್ಲಿ ಆಚರಿಸಿದೆ.
ಟೆಕ್ನಾಲಜಿ ಸೊಲ್ಯೂಷನ್ಸ್ ಗ್ರೂಪ್ ಇದರ ಪಾಲುದಾರಿಕೆಯಲ್ಲಿಯೂ ಕಾರ್ಯ ನಿರ್ವಹಿಸಿದ ವಿಸ್ತೃತ ಅನುಭವ ಹೊಂದಿದ ಇವರು ಇಂದು ತನ್ನ ಉದ್ಯಮ ಕ್ಷೇತ್ರದಲ್ಲಿ ಯಶಸ್ಸನ್ನು ಸಂಪಾದಿಸುವುದರೊಂದಿಗೆ ಸಮಾಜಮುಖಿ ಚಿಂತನೆಗಳ ಮೂಲಕವೂ ಪರಿಚಯಿಸಿ ಕೊಂಡಿದ್ದಾರೆ. ರೀಜನಲ್ ಮೆನೇಜರ್ ಡೇಟಾ ಪ್ರೊ ಇನ್ಫೋ ವರ್ಲ್ಡ್ ಲಿಮಿಟೆಡ್, ಡಿಸ್ಟ್ರಿಬ್ಯೂಟರ್ ಆಫ್ ಮೈಕ್ರೊ ಸಾಫ್ಟ್ Adobe CA APC etc ಎಂಡ್ IT Services ಆಗಿ ಅನುಭವ ಹೊಂದಿದ ಅಮರನಾಥ ಶೆಟ್ಟಿ ಅವರು ಬಂಟರ ಸಂಘ ಮುಂಬಯಿ ಇದರ ಬೊರಿವಲಿ ಪ್ರಾದೇಶಿಕ ಸಮಿತಿಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ, ಶಿಕ್ಷಣ ಸಮಿತಿ ಐಟಿ ವಿಭಾಗದ ಕಾರ್ಯಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೂಡುಬಿದಿರೆಯ ಕಾನ ಶ್ರೀ ನಾಗಬ್ರಹ್ಮಲಿಂಗೇಶ್ವರ ಮಂದಿರದ ಪ್ರವರ್ತಕ ಟ್ರಸ್ಟಿ ಆಗಿರುವ ಅಮರನಾಥ್ ಶೆಟ್ಟಿಯವರು ತನ್ನ ಧಾರ್ಮಿಕ ಶ್ರದ್ಧೆಯನ್ನು ತೋರಿಸಿಕೊಂಡಿದ್ದಾರೆ.
ರಾಷ್ಟ್ರೀಯ ಮಟ್ಟದ ಐಟಿ ಸರ್ವಿಸಸ್ ಸಂಸ್ಥೆ ISODA ಸಂಸ್ಥೆಯ ಛೇರ್ಮನ್ ಆಗಿ ಸೇವೆ ಸಲ್ಲಿಸಿದ ಹೆಗ್ಗಳಿಕೆಯೂ ಶ್ರೀಯುತರಿಗಿದೆ. ಲಯನ್ಸ್ ಕ್ಲಬ್ ಮುಂಬಯಿ ಕಾರ್ಪೋರೇಟ್ ಇದರ ಮಾಜಿ ಅಧ್ಯಕ್ಷರಾಗಿ, ISODA ಇದರ ನಿಕಟಪೂರ್ವ ಅಧ್ಯಕ್ಷರಾಗಿ ಬಿಸಿನೆಸ್ ನೆಟ್ವರ್ಕ್ ಇಂಟರ್ನ್ಯಾಷನಲ್ ಇದರ ಚಾಪ್ಟರ್ ಡೈರೆಕ್ಟರ್ ಆಗಿ, ASIRT ಇದರ ಸಲಹೆಗಾರರಾಗಿ ಕಾರ್ಯಾನುಭವ ಹೊಂದಿರುವುದರ ಜೊತೆಗೆ ಅನೇಕ ಪ್ರತಿಷ್ಠಿತ ಐಟಿ ಕಂಪನಿಗಳ ಸಲಹೆಗಾರರಾಗಿ ನೇಮಕಗೊಂಡಿರುವ ಅಮರನಾಥ ಶೆಟ್ಟಿ ಅವರು ನೂರಾರು ವಿದ್ಯಾವಂತ ಯುವಕರಿಗೆ ಉದ್ಯೋಗ ಅವಕಾಶ ಕಲ್ಪಿಸುವುದರ ಮೂಲಕ ಅನೇಕ ಕುಟುಂಬಗಳ ಪಾಲಿನ ಅನ್ನದಾತ ಎನಿಸಿಕೊಂಡಿದ್ದಾರೆ. ಇನ್ನೂ ನೂರಾರು ವಿದ್ಯಾವಂತ ಯುವಕರಿಗೆ ಉದ್ಯೋಗ ನೀಡಲು ಬಯಸಿದ್ದಾರೆ.
ವೈವಾಹಿಕ ಜೀವನದಲ್ಲಿ ಇಬ್ಬರು ಗಂಡು ಮಕ್ಕಳನ್ನು ಹೊಂದಿರುವ ಇವರು ಮಕ್ಕಳಿಗೆ ಆರ್ಕಿಟೆಕ್ಟ್ ಮತ್ತು ಇಂಜಿನಿಯರಿಂಗ್ ವಿಭಾಗದಲ್ಲಿ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯ ಮೂಲಕ ಉನ್ನತ ಶಿಕ್ಷಣ ನೀಡಿ ಭವಿಷ್ಯದಲ್ಲಿ ಉತ್ತಮ ಜೀವನ ನಡೆಸಲು ಅನುವು ಮಾಡಿ ಕೊಟ್ಟಿದ್ದಾರೆ. ಶ್ರೀಯುತರ ಧರ್ಮಪತ್ನಿ ಶೈಲಜಾ ಅಮರನಾಥ ಶೆಟ್ಟಿಯವರು ಉತ್ತಮ ಸಂಘಟಕಿ, ಕಲಾವಿದೆ, ಹವ್ಯಾಸಿ ಯಕ್ಷಗಾನ ಕಲಾವಿದೆ, ಗಾಯಕಿ ಹಾಗೂ ಸಮಾಜ ಸೇವಕಿಯಾಗಿ ಗುರುತಿಸಿಕೊಂಡಿದ್ದು ಬಂಟರ ಸಂಘ ಮುಂಬಯಿ ಇದರ ದಹಿಸರ್ ಜೋಗೀಶ್ವರಿ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ನಿಕಟಪೂರ್ವ ಕಾರ್ಯಾಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ್ದಾರೆ. ಹೀಗೆ ಓರ್ವ ಯಶಸ್ವಿ ಉದ್ಯಮಿಯಾಗಿ, ಜನಪರ ಕಾಳಜಿಯ ಸಮಾಜ ಬಾಂಧವನಾಗಿ ಗುರುತಿಸಿಕೊಂಡಿರುವ ಅಮರನಾಥ್ ಲಕ್ಷ್ಮಣ್ ಶೆಟ್ಟಿ ಅವರ ಭವಿಷ್ಯ ಜೀವನ ಸುಖ, ಶಾಂತಿ, ಸಮೃದ್ಧಿ, ನೆಮ್ಮದಿಯಿಂದ ಕೂಡಿರಲಿ ಎಂದು ನಾವೆಲ್ಲಾ ಹಾರೈಸೋಣ.
ಅರುಣ್ ಶೆಟ್ಟಿ ಎರ್ಮಾಳ್
ಗೌರವ ಸಂಪಾದಕರು