ವಿದ್ಯಾಗಿರಿ: ವಿದ್ಯಾರ್ಥಿಗಳು ಶಿಸ್ತು ಹಾಗೂ ಸಮಯ ಪ್ರಜ್ಞೆಯನ್ನು ಮೈಗೂಡಿಸಿ ಕೊಂಡಾಗ ಯಶಸ್ಸು ಸಾಧ್ಯ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಹೇಳಿದರು. ಆಳ್ವಾಸ್ ಪದವಿಪೂರ್ವ ಕಾಲೇಜಿನ ವಾಣಿಜ್ಯ ಸಂಘ ಮತ್ತು ಮಹಿಳಾ ಕಲ್ಯಾಣ ಸಂಘದ ಉದ್ಘಾಟನೆ ಹಾಗೂ ಸಿ.ಎ. ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಸ್ಪಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಋಣಾತ್ಮಕ ಚಿಂತೆಯನ್ನು ಬಿಡಬೇಕು. ಭಾವನಾತ್ಮಕ ವಿಷಯಗಳಿಗೆ ಮಹತ್ವ ನೀಡಬಾರದು. ದೈನಂದಿನ ಬದುಕಿನಲ್ಲಿ ಶೈಕ್ಷಣಿಕವಾಗಿ ಪರಿಶ್ರಮ ಹಾಕಬೇಕು. ವಾಣಿಜ್ಯ ಶಿಕ್ಷಣಕ್ಕೆ ಜಾಗತಿಕ ಮಟ್ಟದಲ್ಲಿ ಮಹತ್ವ ದೊರೆತಿದ್ದು, ಈ ನಿಟ್ಟಿನಲ್ಲಿ ಕಠಿಣ ಪರಿಶ್ರಮ ಹಾಕಿದರೆ ವಿದ್ಯಾರ್ಥಿಗಳ ಬದುಕು ಹಸನಾಗುತ್ತದೆ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ, ಆಳ್ವಾಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ. ಮೋಹಮ್ಮದ್ ಸದಾಕತ್, ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ್ ಎಂ.ಡಿ. ಹಾಗೂ ಕಲಾವಿಭಾಗದ ಡೀನ್ ವೇಣುಗೋಪಾಲ್ ಶೆಟ್ಟಿ ಉಪಸ್ಥಿತರಿದ್ದರು. ಉಪನ್ಯಾಸಕಿ ರಶ್ಮೀನ್ ಸ್ವಾಗತಿಸಿದರು. ಉಪನ್ಯಾಸಕ ಪ್ರಭಾತ್ ಎಸ್. ಆರ್. ವಂದಿಸಿದರು. ಉಪನ್ಯಾಸಕ ರಾಜೇಶ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು. ಸಿ.ಎ. ಪರೀಕ್ಷೆಯಲ್ಲಿ ಉತ್ತೀರ್ಣರಾದ ೪೨ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.