ಮುಲುಂಡ್ ಬಂಟ್ಸ್ ನ 16 ನೇ ವಾರ್ಷಿಕ ಮಹಾಸಭೆ ಶಾಂತಾರಾಮ್ ಬಿ. ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಜೂನ್ 28 ರ ಶುಕ್ರವಾರ ಸಂಜೆ ಥಾಣೆ ಚೆಕ್ ನಾಕ ಸಮೀಪದ ಶಿಲ್ಪಾ ರೆಸಿಡೆನ್ಸಿ ಹೋಟೆಲ್ ನಲ್ಲಿ ಜರಗಿತು. ಈ ಸಂದರ್ಭದಲ್ಲಿ ಮುಲುಂಡ್ ಬಂಟ್ಸ್ ನ 2024-26 ನೇ ಸಾಲಿನ ನೂತನ ಅಧ್ಯಕ್ಷರನ್ನಾಗಿ ಕಳೆದೆರಡು ವರ್ಷದಿಂದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದ ಥಾಣೆ ಮತ್ತು ಮುಲುಂಡ್ ಪರಿಸರದ ಜನಪ್ರಿಯ ಸಂಘಟಕ, ಲೆಕ್ಕ ಪರಿಶೋಧಕ ಸಿಎ ಕರುಣಾಕರ್ ಶೆಟ್ಟಿಯವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಸಿಎ ಕರುಣಾಕರ್ ಶೆಟ್ಟಿ ಮೂಲತಃ ಉಡುಪಿಯ ಅಂಬಲ್ಪಾಡಿಯವರು. ಅಂಬಲ್ಪಾಡಿ ಗುಜ್ಜಿ ಹೌಸ್ ಅಪ್ಪು ಶೆಟ್ಟಿ ಮತ್ತು ಅಂಬಲ್ಪಾಡಿ ಮೇಲ್ಮನೆ ಕಮಲಾ ಶೆಟ್ಟಿ ದಂಪತಿಯ ಸುಪುತ್ರ. ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ಆದಿ ಉಡುಪಿಯ ಸ್ಕೂಲ್ ನಿಂದ ಮಾಧ್ಯಮಿಕ ಹಾಗೂ ಉಚ್ಛ ಮಾಧ್ಯಮಿಕ ಶಿಕ್ಷಣವನ್ನು ಉಡುಪಿ ಬೋರ್ಡ್ ಹೈಸ್ಕೂಲ್ ನಲ್ಲಿ ಪೂರೈಸಿರುವರು. ಉಡುಪಿಯ ಎಂ.ಜಿ.ಎಂ. ಕಾಲೇಜಿನಲ್ಲಿ ಬಿಕಾಂ ಪದವಿ ಪೂರೈಸಿ ಮುಂಬಯಿಗೆ ಆಗಮಿಸಿದರು. ಮುಂದಿನ ಶಿಕ್ಷಣ ಮುಂಬಯಿಯ ಕೆ.ಸಿ. ಲಾ ಕಾಲೇಜಿನಿಂದ ಕಾನೂನು ಶಿಕ್ಷಣ, ಜೊತೆಗೆ 1982 ರಲ್ಲಿ ಲೆಕ್ಕ ಪರಿಶೋಧಕ ಶಿಕ್ಷಣವನ್ನೂ ಪೂರೈಸಿಕೊಂಡಿರುವ ಅವರು ಬಿಎಸ್ಸಿ, ಎಲ್ ಎಲ್ ಬಿ, ಎಫ್.ಸಿ.ಎ. ಪದವೀಧರ, ಈಗ ಕರುಣಾಕರ್ ಆಂಡ್ ಎಸೋಸಿಯೇಟ್ಸ್ (ಚಾರ್ಟೆಡ್ ಅಕೌಂಟೆಂಟ್ಸ್ ) ಸಂಸ್ಥೆಯನ್ನು ಸ್ಥಾಪಿಸಿ ದೇಶ- ವಿದೇಶದ ಸುಮಾರು 1,500 ಗ್ರಾಹಕರ ಸಹಕಾರದೊಂದಿಗೆ ತಮ್ಮ ಉದ್ಯಮ ಕ್ಷೇತ್ರವನ್ನು ಮುನ್ನಡೆಸುತ್ತಿದ್ದಾರೆ.
ಉದ್ಯಮದ ಜೊತೆಗೆ ಸಮಾಜಪರ ಸೇವಾ ಕಾರ್ಯಗಳಲ್ಲೂ ತಮ್ಮನ್ನು ತಾವು ಸಕ್ರಿಯವಾಗಿರಿಸಿಕೊಂಡಿರುವ ಸಿಎ ಕರುಣಾಕರ್ ಶೆಟ್ಟಿ ಥಾಣೆ ಬಂಟ್ಸ್ ನಲ್ಲಿ 2011-12 ಮತ್ತು 2012-13 ನೇ ಸಾಲಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವುದಲ್ಲದೇ, ಥಾಣೆ ಬಂಟ್ಸ್ ನ ಸ್ವಂತ ಕಚೇರಿಯ ಸ್ಥಾಪನೆಯ ಹಿನ್ನಲೆಯಲ್ಲಿ ಬಹುಮೂಲ್ಯ ಕೊಡುಗೆಯನ್ನು ನೀಡಿದ ಹಿರಿಮೆ ಇವರದ್ದಾಗಿದೆ. ಹಾಗೆಯೇ ರೋಟರಿ ಕ್ಲಬ್ ನ ಮುಂಬಯಿ ಮತ್ತು ಮುಲುಂಡ್ ವಲಯದ 1994-95 ನೇ ಸಾಲಿನ ಯುವ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಹೆಚ್ಚುಗಾರಿಕೆ ಇವರದ್ದಾಗಿದೆ.
ಮಹಾರಾಷ್ಟ್ರ ಸರಕಾರದ ವಿಶೇಷ ದಂಡಾಧಿಕಾರಿಯಾಗಿ, ವಿದ್ಯಾ ಪ್ರಸಾರಕ ಮಂಡಳಿ ಮುಲುಂಡ್ ಪದವಿ ಕಾಲೇಜಿನ ಗೌ. ಕೋಶಾಧಿಕಾರಿಯಾಗಿ, ಮಾತೃಭೂಮಿ ಕೋ. ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಗೌ. ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸಿದ ಅವರು, ಮುಲುಂಡಿನ ಕೊನಾರ್ಕ್ ಇಂದ್ರಪ್ರಸ್ಥ ಹೌಸಿಂಗ್ ಸೊಸೈಟಿ ನಿವಾಸಿಯಾಗಿದ್ದಾರೆ. ಪತ್ನಿ ಶಶಿಪ್ರಭಾ ಶೆಟ್ಟಿ, ಲೆಕ್ಕ ಪರಿಶೋಧಕಿಯಾಗಿರುವ ಪುತ್ರಿ ಸಿಎ ಪ್ರಿಯಾಂಕಾ ಶೆಟ್ಟಿ, ಅಳಿಯ ಡಾ. ರಘುರಾಜ್ ಹೆಗ್ಡೆ, ಪುತ್ರ ನ್ಯಾಯವಾದಿ ಪ್ರಿತ್ವೀಷ್ ಶೆಟ್ಟಿ, ನ್ಯಾಯವಾದಿ ಸೊಸೆ ದೇವಿಕಾರವರೊಂದಿಗೆ ಸುಖಿ ಸಂಸಾರವನ್ನು ಮುನ್ನಡೆಸುತ್ತಿದ್ದಾರೆ.