ಅಹ್ಮದ್ ನಗರ ಅಯ್ಯಪ್ಪ ದೇಗುಲ ಮತ್ತು ಕುಂಬಳೆ ಮುಂಡುಪಳ್ಳದ ಶ್ರೀ ರಾಜರಾಜೇಶ್ವರಿ ದೇವಸ್ಥಾನಗಳ ಸಂಸ್ಥಾಪಕ, ಕೊಡುಗೈ ದಾನಿ, ಕಲಾ ಪೋಷಕ, ಧಾರ್ಮಿಕ – ಸಾಮಾಜಿಕ ಸೇವಾಕರ್ತ ಉದ್ಯಮಿ ಕೆ.ಕೆ.ಶೆಟ್ಟಿ ಅಹ್ಮದ್ ನಗರ ಅವರು ಜೂನ್ 23 ರಂದು ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ 2024 ನೇ ಸಾಲಿನ ಪ್ರತಿಷ್ಠಿತ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿಯನ್ನು ಸ್ವೀಕರಿಸಿದರು. ಬೆಂಗಳೂರಿನ ಆರ್ಯಭಟ ಸಾಂಸ್ಕೃತಿಕ ಸಂಸ್ಥೆಯ ವತಿಯಿಂದ ವಿದೇಶೀ ಗಣ್ಯರು ಸೇರಿದಂತೆ 60 ಮಂದಿ ಸಾಧಕರಿಗೆ 49 ನೇ ವರ್ಷದ ‘ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ’ಯನ್ನು ಘೋಷಿಸಲಾಗಿತ್ತು.
ಯಶಸ್ಸಿನ ಹಾದಿ : ಮೂಲತಃ ಕುಂಬಳೆಯವರಾದ ಕುತ್ತಿಕ್ಕಾರು ಕಿಂಞಣ್ಣ ಶೆಟ್ಟಿ ಅವರು ಪುತ್ತೂರು ಸಂತ ಫಿಲೋಮಿನಾ ಕಾಲೇಜಿನಲ್ಲಿ ಪಿಯುಸಿ ಪೂರೈಸಿ 1980 ರಲ್ಲಿ ಅಹ್ಮದ್ ನಗರ ಸೇರಿದರು. ಹೋಟೆಲ್ ಉದ್ಯಮಕ್ಕೆ ತೊಡಗಿದ ಅವರು ಪ್ರಸ್ತುತ ತಮ್ಮ ಶಬರಿ ಇಂಡಸ್ಟ್ರಿಯಲ್ ಕ್ಯಾಟರಿಂಗ್ ಮೂಲಕ 55 ಕ್ಕೂ ಮಿಕ್ಕಿದ ಪ್ರಮುಖ ಕಂಪೆನಿಗಳಲ್ಲಿ ಕ್ಯಾಂಟೀನ್ ಗಳನ್ನು ನಡೆಸುತ್ತಿದ್ದಾರೆ. 1990 ರಲ್ಲಿ ಅಹ್ಮದ್ ನಗರದಲ್ಲಿ ಸುಂದರವಾದ ಅಯ್ಯಪ್ಪ ಮಂದಿರ ಕಟ್ಟಿಸಿ ಅದರ ಸ್ಥಾಪಕ ಅಧ್ಯಕ್ಷರಾದರು. 2020 ರಲ್ಲಿ ತಮ್ಮ ಹುಟ್ಟೂರು ಮುಂಡಪಳ್ಳದಲ್ಲಿ ನೂತನ ಶ್ರೀ ರಾಜರಾಜೇಶ್ವರಿ ದೇವಸ್ಥಾನವನ್ನು ನಿರ್ಮಿಸಿ ಅದರ ಆಡಳಿತ ಮೊಕ್ತೇಸರರಾಗಿದ್ದಾರೆ. ಅಡೂರು, ಮಧೂರು, ಕನ್ಯಾನ ಕ್ಷೇತ್ರಗಳ ಜೀರ್ಣೋದ್ಧಾರ ಕಾರ್ಯದಲ್ಲಿ ಪ್ರಮುಖ ಕೆಲಸಗಳನ್ನು ತಾವೇ ಮಾಡಿರುತ್ತಾರೆ. ಕಾಸರಗೋಡು ಸುತ್ತಮುತ್ತಲಿನ ಸುಮಾರು 50 ದೇಗುಲ, ಮಠ, ಮಂದಿರ ಮತ್ತು ವಿದ್ಯಾಸಂಸ್ಥೆಗಳ ಜೀರ್ಣೋದ್ಧಾರ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಉದಾರ ಧನ ಸಹಾಯ ನೀಡುತ್ತಿದ್ದಾರೆ.
‘ಯಕ್ಷಾಂಗಣ ಮಂಗಳೂರು’ ಚಿಂತನ – ಮಂಥನ ಮತ್ತು ಪ್ರದರ್ಶನ ವೇದಿಕೆಯ ಗೌರವ ಉಪಾಧ್ಯಕ್ಷರಾಗಿರುವ ಕೆ.ಕೆ ಶೆಟ್ಟಿ ಅವರು, ಇತ್ತೀಚೆಗೆ ಯಕ್ಷ ಧ್ರುವ ಪಟ್ಲ ಫೌಂಡೇಶನ್ ನ ಪಟ್ಲ ಯಕ್ಷಾಶ್ರಯ ಯೋಜನೆಯಂತೆ ಕಾಸರಗೋಡಿನ ಕಲಾವಿದರೊಬ್ಬರ ಗೃಹ ನಿರ್ಮಾಣದ ಖರ್ಚನ್ನು ಭರಿಸಿದ್ದಾರೆ. ಅಹ್ಮದ್ ನಗರದಲ್ಲಿ ಕನ್ನಡ ಸಂಘ ಮತ್ತು ಹೊರನಾಡ ಕನ್ನಡಿಗರ ಸಂಘಗಳ ಸ್ಥಾಪಕ ಅಧ್ಯಕ್ಷರೂ ಆಗಿದ್ದಾರೆ. ಭಾರತ – ಭಾರತಿ ಸಂಸ್ಥೆಯಲ್ಲಿ ಅವರು ಸಕ್ರೀಯರು. ಪೂನಾ ಬಂಟರ ಸಂಘದ ಕಾರ್ಯಕಾರಿಣಿ ಸದಸ್ಯರಾಗಿರುವುದಲ್ಲದೇ ಕಾಸರಗೋಡಿನಲ್ಲಿ ನೂತನ ಬಂಟರ ಭವನ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಬಂಟ್ವಾಳ ಸಮೀಪ ವಿಶಾಲ ಕೃಷಿ ಭೂಮಿ ಖರೀದಿಸಿ ಅದನ್ನು ಅಭಿವೃದ್ಧಿಪಡಿಸುತ್ತಿರುವ ಪ್ರಗತಿಪರ ಕೃಷಿಕರೂ ಆಗಿದ್ದಾರೆ. ಕೆ.ಕೆ ಶೆಟ್ಟರ ಧರ್ಮಪತ್ನಿ ಮೂಡುಬೆಳ್ಳೆ ಮೇಲ್ಮನೆ ವಿನಯ ಕೆ ಶೆಟ್ಟಿಯವರು. ಇಬ್ಬರು ಗಂಡುಮಕ್ಕಳ ಸಂತೃಪ್ತ ಸಂಸಾರ ಅವರದು.
ಪ್ರಶಸ್ತಿ ಪ್ರದಾನ ಸಮಾರಂಭ : ‘ಆರ್ಯಭಟ ಪ್ರಶಸ್ತಿ ಪ್ರದಾನ’ದ ವರ್ಣರಂಜಿತ ಸಮಾರಂಭವನ್ನು ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಡಾ| ಹೆಚ್. ಬಿ ಪ್ರಭಾಕರ ಶಾಸ್ತ್ರಿಯವರು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ| ಮಹೇಶ್ ಜೋಶಿ ಮತ್ತು ಖ್ಯಾತ ಚಲನಚಿತ್ರ ನಟ, ನಿರ್ದೇಶಕ ಡಾ. ಎಸ್ ನಾರಾಯಣ್ ಭಾಗವಹಿಸಿದ್ದರು. ಆರ್ಯಭಟ ಸಂಸ್ಥೆಯ ಸಂಸ್ಥಾಪಕರಾದ ಡಾ. ಹೆಚ್. ಎಲ್.ಎನ್ ರಾವ್ ಅಧ್ಯಕ್ಷತೆ ವಹಿಸಿದ್ದರು. ಯಕ್ಷಾಂಗಣದ ಕಾರ್ಯಾಧ್ಯಕ್ಷ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ, ಕೆ.ಕೆ.ಶೆಟ್ಟರ ಪತ್ನಿ ವಿನಯ ಕೆ.ಶೆಟ್ಟಿ, ಪುತ್ರ ಯಶ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಭಾಸ್ಕರ್ ರೈ ಕುಕ್ಕುವಳ್ಳಿ