ಇಂದು ಅಪ್ಪ ಅಮ್ಮ ಆಗಿರುವ ಎಲ್ಲರಿಗೂ ಅರ್ಪಣೆ ಈ ಬರಹ. ಸುಮಾರು ಹತ್ತಿಪ್ಪತ್ತು ವರ್ಷಗಳ ಹಿಂದೆ ತಂದೆ ತಾಯಿಯಾದ ಹೆಚ್ಚಿನ ಎಲ್ಲರ ಬಾಲ್ಯವೂ ಹೆಚ್ಚಾಗಿ ಹಳ್ಳಿಯೋ ಅಥವಾ ನಂತರ ಬಂದ ಪಟ್ಟಣದ ಬದುಕೋ ಅಂತೂ ಕಷ್ಟ ಪಡದ ಬದುಕಾಗಿರಲಿಲ್ಲ. ಸುಖದ ಸುಪ್ಪತ್ತಿಗೆಯಲ್ಲಿ ಹುಟ್ಟಿದಾಗ ಬೆಳ್ಳಿ ತಟ್ಟೆ ಬಂಗಾರದ ಚಮಚ ಬಾಯಿಗಿಟ್ಟು ಹುಟ್ಟಿದವರು ಬಾರೀ ಕಡಿಮೆ. ಹೆಚ್ಚಿನ ಅನುಪಾನದ ಬದುಕೂ ಆಗಿರಲಿಲ್ಲ. ಆದರೆ ಅದು ಅನುಭವದ ಬದುಕಾಗಿತ್ತು. ಇದು ಮಾತ್ರ ಅಕ್ಷರ ಸಹ ಸತ್ಯ. ತಂದೆಯ ಸಣ್ಣ ಸಂಪಾದನೆಯಲ್ಲೇ ಬದುಕು ಕಟ್ಟಿಕೊಂಡ ಸಂಸಾರಗಳೇ ಹೆಚ್ಚು. ಹಾಗಾಗಿ ಶಾಲೆ ಕಾಲೇಜುಗಳ ದಿನಗಳಲ್ಲಿ ಬೆಳಗ್ಗೆ ಮನೆಯಲ್ಲೇ ಮಾಡಿದ ದೋಸೆ, ಇಡ್ಲಿ, ಸಜ್ಜಿಗೆ, ಪುಂಡಿ, ಗಟ್ಟಿಗಳಂತಹ ಸಾಂಪ್ರದಾಯಿಕ ತಿಂಡಿಗಳು ಆಮೇಲೆ ಊಟಕ್ಕೆ ಮನೆಯಿಂದಲೇ ಲಂಚ್ ಬಾಕ್ಸ್, ಅಪರೂಪಕ್ಕೆ ಕ್ಯಾಂಟೀನ್ ಊಟ ತಿಂಡಿ ಅದು ಬಿಟ್ಟರೆ ಹೊರಗಡೆ ಹೋಟೆಲ್ ಊಟವಂತು ಇಲ್ಲವೇ ಇಲ್ಲ. ಇನ್ನು ಅವರ ಬರ್ತ್ ಡೇಗೆ ಹೊಸ ಬಟ್ಟೆ ಆಗಲೇಬೇಕು ಎಂಬ ಯಾವ ಕಾನೂನು ಇಲ್ಲ, ಹಟವೂ ಇಲ್ಲ. ಅಪ್ಪಿ ತಪ್ಪಿ ಹಟ ಮಾಡಿದರೆ ಈಗಿನ ಕಂಪಲ್ಸರೀ ಕೇಕಿನ ಬದಲು ಬೆನ್ನಿಗೆ ಛಡಿ ಏಟೇ ದಕ್ಕುತ್ತಿತ್ತು.
ಎಷ್ಟು ರಶ್ ಇದ್ದರೂ ಸಮಯಕ್ಕೆ ಸರಿಯಾಗಿ ಬರುತ್ತಿದ್ದ ಬಸ್ಸನ್ನೇ ಅವಲಂಬಿಸಬೇಕು. ಮತ್ತೆ ಶಾಲೆಯ ಬಸ್ಸು, ಜುಂ ಎಂದು ಹೋಗುವ ಕಾರು ಗೀರು ಇಲ್ಲವೇ ಇಲ್ಲ ಬಿಡಿ. ಇನ್ನು ಶಾಲೆಯಿಂದ ಬಂದ ಮೇಲೆ ಮನೆಕೆಲಸ, ಸೌದೆ, ದನ, ಕೋಣ, ಕೃಷಿ ಬದುಕು ಎಂದು ಸಾಕಷ್ಟು ನಮುನೆ ನಮೂನೆಯ ಕೆಲಸ ಮಾಡಲೇ ಬೇಕು. ಮತ್ತೆ ರಾಟೆಯಿಂದ ಪಾತಾಳದಷ್ಟು ಆಳದ ಬಾವಿಯಿಂದ ರಾಟೆ ಬಳಸಿ ನೀರೆಳೆದು ಹಂಡೆಗೆ ತುಂಬಿಸಿ ಆಮೇಲೆ ತರಗೆಲೆ, ಬೆರಣಿ, ತೆಂಗಿನ, ತಾಳೆಯ ಗರಿ ಇತ್ಯಾದಿ ಇಟ್ಟು ಕಾಯಿಸಿದ ಹಂಡೆಯ ನೀರಿನ ಸ್ನಾನದ ನಂತರ ರಾತ್ರಿ ದೇವರಿಗೆ ದೀಪವಿಟ್ಟು ದೇವರ ಭಜನೆ ಹಾಡಿದ ಮೇಲೆಯೇ ರಾತ್ರಿಯ ಗಂಜಿ ಊಟ. ಅಲ್ಲೂ ಮನೆಯ ಹೊಲದಲ್ಲಿ ಮಾಡಿದ ಸೌತೆಯೋ, ಕುಂಬಳವೋ, ಹರಿವೆಯೋ, ಬಸಳೆಯೋ ಅಥವಾ ಒಣ ಮೀನಿನ ಚಟ್ನಿಯೋ ಊಟಕ್ಕೆ ಕೆಲವೊಮ್ಮೆ ಯಾವುದೂ ಇಲ್ಲದೆ ಖಾಲಿ ಚಟ್ನಿ ಅಥವಾ ಉಪ್ಪುಂಚಿಯಲ್ಲಿ ಉಂಡವರೂ ಹಲವರು.
ಚಿಮಿಣಿ, ಲ್ಯಾಂಪ್ ಗಳ ಬೆಳಕಲ್ಲಿ ರಾತ್ರಿ ಕೇಳುತ್ತಿದ್ದ ಕಾಣದಿದ್ದರೂ ಕಣ್ಣಿಗೆ ಕಟ್ಟುವಂತಿದ್ದ ರೇಡಿಯೋದ ಇಂಪಾದ ಧ್ವನಿಯ ನಾಟಕವೋ, ಯಕ್ಷಗಾನವೋ ಅದೇ ಮಹಾ ಸಾಂಸ್ಕೃತಿಕ ಕಾರ್ಯಕ್ರಮಗಳಾಗಿತ್ತು. ಆದರೆ ಆಗಲೂ ಒಂದು ರೀತಿಯ ಸಂತೋಷವಿತ್ತು. ಇದ್ದದನ್ನು ಮನಪೂರ್ತಿ ಅನುಭವಿಸುವ ಉದಾರ ಮನಸ್ಥಿತಿ ಇತ್ತು. ಯಾರೂ ಯಾಕಾಗಿಯಾದರೂ ಹುಟ್ಟಿದೆವೋ ಎಂದು ಅಂದುಕೊಳ್ಳುತ್ತಿರಲಿಲ್ಲ. ಯಾವುದಕ್ಕೂ ಕುರುಬದೆ ಹೆಚ್ಚು ಬೇಸರ ಪಡದೆ, ಖುಷಿ ಖುಷಿಯಾಗಿ ಸಿಕ್ಕ ಅವಕಾಶವನ್ನು ಉಪಯೋಗಿಸಿ ಶಾಲೆ ಕಾಲೇಜುಗಳಲ್ಲೂ ತಮ್ಮ ಯೋಗ್ಯತಾನುಸಾರ ಕಲಿತು ಜೀವನದ ಒಂದು ದಾರಿ ಕಂಡು ಕೊಳ್ಳುತ್ತಿದ್ದರು. ಆಗ ಎಷ್ಟು ಪೆಟ್ಟು ತಿಂದಿದ್ದರೂ ತಂದೆ ತಾಯಿಯ ಮೇಲೆ ಯಾವತ್ತೂ ಭಕ್ತಿ ಗೌರವ ಕಡಿಮೆಯಾಗಲಿಲ್ಲ. ಕಲಿಯುವಾಗ ಇದ್ದ ಗುರುಭಕ್ತಿ, ಹಿರಿಯರ ಮೇಲಿನ ಭಕ್ತಿ ಅದು ವರ್ಣಿಸಲು ಅಸಾಧ್ಯ. ಮತ್ತೊಂದು ಪ್ರಾಮುಖ್ಯ ವಿಚಾರ ಆಗ ಕಲಿಯುವ ವಿಷಯಗಳ ಮೇಲಿನ ಆಸಕ್ತಿಯೂ ಹೆಚ್ಚಿತ್ತು ಎನ್ನಬಹುದು. ಕಲಿತು ಮಾರ್ಕ್ಸ್ ತೆಗೆದು ಒಳ್ಳೆಯ ಕೆಲಸ ಸಿಗಬೇಕು ಎನ್ನುವುದಕ್ಕಿಂತಲೂ ಟೀಚರ್ ಮಾಸ್ಟ್ರ್ ಗಳ ಮೇಲಿನ ಹೆದರಿಕೆ ಮತ್ತು ಒಂದು ವೇಳೆ ಫೇಲ್ ಆದರೆ ಮನೆಯಲ್ಲಿನ ಅಪ್ಪ ಅಮ್ಮನ, ಮಾವನ ಬೈಗುಳ, ಹುಣಸೇ ಕಾಯಿಯ ಮರದ ಗೆಲ್ಲಿನ ಪೆಟ್ಟಿನ ಹೆದರಿಕೆ, ಇದು ಮಾತ್ರವಲ್ಲ ನೆರೆಕೆರೆಯವರೆದುರು ಮರ್ಯಾದೆಯ ಪ್ರಶ್ನೆ ಇದೆಲ್ಲವೂ ಮುಖ್ಯವಾಗಿತ್ತು.
ಮಾನ ಮರ್ಯಾದೆ ಎಂಬುದಕ್ಕೆ ಈಗಿನಕ್ಕಿಂತ ಹೆಚ್ಚು ಬೆಲೆಯಿತ್ತು. ಮಾತ್ರವಲ್ಲ ತಮ್ಮನ್ನು ಸಾಕಿ ಸಲಹಿದ ತಂದೆ ತಾಯಿ ಹುಟ್ಟಿ ಬೆಳೆದ ಅವಿಭಕ್ತ ಕುಟುಂಬದ ಮನೆಯ ಎಲ್ಲಾ ಸದಸ್ಯರನ್ನು ಮರೆಯದೆ, ಊರಿನ ಶಾಲೆ, ಕಲಿಸಿದ ಉಪಾಧ್ಯಾಯರು ಟೀಚರು, ಹಳೆಯ ಗೆಳೆಯರು ಎಲ್ಲರನ್ನೂ ಮರೆಯದೆ ಬದುಕು ಕಲಿಸಿದ ಬಾಲ್ಯವನ್ನು ಮರೆಯದೇ ಈವತ್ತಿಗೂ ಆ ಕಳೆದ ಬಾಲ್ಯವನ್ನು ಮರೆಯಲಿಲ್ಲ. ಆದರೆ….
ಈಗಿನ ಸೊಂಪಿನಲ್ಲಿ ಬೆಳೆದ ನಮ್ಮ ಹತ್ತಿಪ್ಪತ್ತರ ಹದಿ ಹರೆಯದೆ ಮಕ್ಕಳ ಬಾಲ್ಯ ಮತ್ತು ಅವರ ಮನಸ್ಥಿತಿ ಮತ್ತು ಮನೆಸ್ಥಿತಿ ಎಲ್ಲವೂ ವಿಚಿತ್ರ!. ಬಾಲ್ಯದಲ್ಲೇ ಹೆಚ್ಚಾಗಿ ರೋಯಲ್ ಜೀವನ. ಕಾರಣ ಈ ರೀತಿ ಕಷ್ಟಪಟ್ಟು ಜೀವನ ಕಟ್ಟಿದ ತಂದೆ ತಾಯಿ ತಮ್ಮ ಮಕ್ಕಳು ಹೀಗೆ ಕಷ್ಟಪಡಬಾರದು ಎಂಬ ದೂರಾಲೋಚನೆಯಿಂದ ಇರುವ ಒಂದೋ ಎರಡೋ ಮಕ್ಕಳಿಗೆ ಯಾವುದೇ ಕಷ್ಟ ಕೊಡದೆ, ಅವರು ಕಷ್ಟ ಪಡದೆ ಬಿಂದಾಸ್ ಇರಬೇಕು ಎಂದು ಯೋಚಿಸುತ್ತಾರೆ ಮತ್ತು ನಾವೂ ಹಾಗೆಯೇ ಯೋಚಿಸಿದೆವು. ತಪ್ಪಲ್ಲ ಯಾವುದೇ ತಂದೆ ತಾಯಿಗಳೂ ನಮ್ಮ ಮಕ್ಕಳು ಸುಖವಾಗಿರಬೇಕು ಎಂದು ಆಶಿಸುವುದು ತಪ್ಪಲ್ಲ. ಹಾಗಾಗಿ ನಾವು ಸಣ್ಣಂದಿನಲ್ಲಿ ಅನುಭವಿಸಿದ ಮೇಲೆ ವಿವರಿಸಿದ ಹಳ್ಳಿಯ ಜೀವನವಾಗಲಿ ಪಟ್ಟ ಕಷ್ಟವಾಗಲೀ ನಮ್ಮ ಮಕ್ಕಳಿಗೆ ಕೊಡಲಿಲ್ಲ. ಒಂದು ಬಳಪದ ಕಡ್ಡಿಗೆ ಬೇಕಾದ ಐದು ಪೈಸೆಗೆ ಪಟ್ಟ ಪಾಡಾಗಲೀ, ಶಾಲೆಯ ಫೀಸ್ ಗೆ ಗೋಗೊರೆದ, ಅತ್ತು ಕೂಗಿದ, ಪೆಟ್ಟು ತಿಂದ ದಿನಗಳಾಗಲೀ ನಮ್ಮ ಮಕ್ಕಳಿಗೆ ಇಲ್ಲ. ಹೈಯ್ ಫೈ ಶಾಲೆ, ವಾರಕ್ಕೆ ವಿಧ ವಿಧ ಬಣ್ಣದ ನಾಲ್ಕು ವಿಧದ ಝಮ್ ಅನ್ನುವ ಯೂನಿಪಾರ್ಮ್, ಸ್ವಿಮ್ಮಿಂಗ್, ಸ್ಕೇಟಿಂಗ್, ವಾಲಿಬಾಲ್, ಸಂಗೀತ ತರಗತಿ, ಕಬಡ್ಡಿ, ಕ್ರಿಕೆಟ್ ಎಂದು ಅಡ್ವಟೈಸ್ ಮಾಡಿ ಕೆಲವು ದಿವಸಗಳು ಕಲಿಸುವ ಶಾಲೆಗಳೇ ಸಾಲು ಸಾಲು. ಅದು ಶೋಕೀ ದಿನಗಳೇ.. ಆಮೇಲೆ ಟ್ಯೂಷನ್, ಕೋಚಿಂಗ್ ಹೋಗಲು ಬರಲು ಹಳದಿ ಬಣ್ಣದ ಸುಂದರ ರಶ್ ರಹಿತ ಬಸ್ಸು. ಇಳಿಸಲು ಹತ್ತಿಸಲು ಆಯಾಗಳು. ಶಾಲೆಯಲ್ಲೇ ಬಗೆ ಬಗೆಯ ಮಧ್ಯಾಹ್ನದ ಊಟ, ಮನೆಗೆ ಬಂದು ಹೋಮ್ ವರ್ಕ್ ಬಿಟ್ಟರೆ ಮನೆಯಲ್ಲಿ ಜೀವನದ ಪಾಠ ಕಲಿಸುವ ಯಾವುದೇ ಕರ್ತವ್ಯಗಳಿಲ್ಲ. ಬರೀ ಓದೂ ಓದೂ ಓದೂ… ಹಾಗಾಗಿ ಮನೆಯ ಯಾವ ಕೆಲಸದ ಕುರಿತೂ ತಂದೆ ತಾಯಿ ಪಟ್ಟ ಕಷ್ಟದ ಪಟ್ಟಿಯಾಗಲೀ ಯಾವುದೂ ಇಲ್ಲ. ಆ ಬಗ್ಗೆ ಹೇಳಿದರೂ ಅದೆಲ್ಲವೂ ನಮ್ಮ ಪ್ರಾರಾಬ್ದ ಕರ್ಮ ಎಂದು ಮೂದಲಿಸುವ ಮಕ್ಕಳಿಗೇನೂ ಕಮ್ಮಿ ಇಲ್ಲ.
ಮುಖ್ಯವಾಗಿ ತಿಂಗಳಿಗೆ ಸಾವಿರ ಸಾವಿರ ವರ್ಷಕ್ಕೆ ಲಕ್ಷ ಲಕ್ಷ ಸುರಿದು ನರ್ಸರಿಯಿಂದ ತೊಡಗಿಸಿ ಡಿಗ್ರಿ, ಇಂಜಿನಿಯರ್ ವರೆಗೆ ಬರುವ ಪ್ರಯಾಣದ ದಾರಿಯಲ್ಲಿ ಬದುಕಿನ ದಾರಿ ತೋರಿಸಿದ ಶಿಕ್ಷಕರ ಯಾರ ನೆನಪೂ ಇಲ್ಲ. ಆ ಮಕ್ಕಳು ಹೇಳುವಂತೆ ಅವರು ಸಂಬಳಕ್ಕಾಗಿ ನಮಗೆ ಕಲಿಸಿದರು. ಅವರ ನೆನಪಿಟ್ಟು ನಮಗೇನಾಗಬೇಕಾಗಿದೆ. ಒಂದಂತೂ ಗಮನಿಸಬೇಕು ಈಗಿನ ಶಾಲೆಗಳೂ ವರ್ಷ ವರ್ಷ ಟೀಚರ್ ಮಾಸ್ಟರ್ ಗಳನ್ನು ಬದಲಾಯಿಸುತ್ತಾ ಇರ್ತಾರೆ. ಒಂದು ವರ್ಷ ಇದ್ದ ಟೀಚರ್ ಮುಂದಿನ ವರ್ಷ ಇರುವುದಿಲ್ಲ. ಇದು ಈಗಿನ ಗುಣವೇ ಬರಿಸದ ವಿದ್ಯೆ ಮತ್ತು ಅಭ್ಯಾಸದ ಗುಣಮಟ್ಟ. ಅಂದ್ರೆ ಈಗಿನ ಮಕ್ಕಳಿಗೆ ಗುರುಹಿರಿಯರ ಬಗ್ಗೆ ಮರ್ಯಾದೆ ಕೊಡುವ, ಸಂಸ್ಕಾರ ಕೊಡುವ ವಿದ್ಯಾದೇಗುಲಗಳು ವ್ಯವಹಾರ ಕೇಂದ್ರಗಳಾಗಿವೆ. ಇದಕ್ಕೆ ಕಾರಣವೂ ನಮ್ಮಂತಹ ತಂದೆ ತಾಯಿಗಳೇ!. ಯಾಕೆಂದರೆ ನಾವೂ ನಮ್ಮ ಮಕ್ಕಳಿಗೆ ಜೀವನದ ಅನುಭವ ಕೊಡುವ ಯಾವ ಕೆಲಸಗಳನ್ನೂ ಕೊಡದೆ ಯಾವುದೇ ಜವಾಬ್ದಾರಿ ಕಲಿಸದಾದೆವು. ಬಾಲ್ಯದ ಆಟಕ್ಕೆ ಕೇಳಿದ ಸಾಮಾನು, ಆಟಿಕೆ, ಸೈಕಲ್ ಇತ್ಯಾದಿಗಳನ್ನು ಕೊಡಿಸಿದೆವು. ಶಾಲೆಗೂ ತುಟಿಕ್ ಪಿಟಿಕ್ ಎನ್ನದೆ ಕೇಳಿದ್ದೆಲ್ಲವನ್ನೂ ಕೊಟ್ಟೆವು. ನಮ್ಮ ಮಕ್ಕಳು ಗರಿಗರಿ ಇಸ್ತ್ರಿ ಹಾಕಿದ ಯೂನಿಫಾರ್ಮ ಹಾಕಿದ ಸಮವಸ್ತ್ರ ಧರಿಸಿ ಹೋಗುವುದನ್ನು ಕಂಡು ಸಂಭ್ರಮಿಸಿದೆವು. ಬೇಗನೇ ಎದ್ದು ಬಗೆ ಬಗೆಯ ಬ್ರೇಕ್ ಫಾಸ್ಟ್ ಮಾಡಿಕೊಟ್ಟು, ಗೀಸರ್ ಹಾಕಿ ಬಿಸಿ ನೀರ ಸ್ನಾನ ಮಾಡಿಸಿ ಅವರ ಬ್ಯಾಗನ್ನು ಬಸ್ಸು ಬರುವ ಜಾಗದವರೆಗೆ ನಾವೇ ಹೊತ್ತು ನಡೆದು ಅವರ ಎಲ್ಲಾ ಭಾರವನ್ನು ನಾವು ಹೊತ್ತೆವು. ಅವರ ಆಸೆಗಾಗಿ ವಾರಕ್ಕೊಮ್ಮೆ ಹೋಟೇಲ್ ಊಟ, ಸಂಜೆ ನೂಡಲ್ಸ್, ಪಾನೀಪೂರೀ, ಪ್ರೈಡ್ ರೈಸ್, ಮೋಮೋಸ್, ಚಿಕನ್ ರೋಲ್, ಬರ್ಗರ್, ಪ್ರೈಡ್ ಚಿಕನ್, ಕಬಾಬ್, ಐಸ್ ಕ್ರೀಮ್, ಇನ್ನು ಏನೇನೋ ಹೊಟ್ಟೆಗೆ ಬೇಡವಾದ ಅರೋಗ್ಯ ಸಮಸ್ಯೆಗೆ ಕಾರಣವಾಗುವ ತಟ್ಟೆ ತುಂಬ ಜಂಕ್ ಫುಡ್ ಕೊಟ್ಟೆವು. ಆದರೆ ಅದು ನಾವು ಅವರಿಗೆ ಮಾಡಿದ ಅನುಪಾನವೇ ಹೊರತು ಮುಂದಿನ ಜೀವನಕ್ಕೆ ಬೇಕಾದ ಅನುಭವವಲ್ಲ. ಅವರನ್ನು ಅದರಿಂದ ವಂಚಿತರನ್ನಾಗಿ ಮಾಡಿದವರು ನಾವೇ. ಈ ಅನುಪಾನದಿಂದ ಕಲಿತ ನಮ್ಮ ಮಕ್ಕಳಿಗೆ ಓದು, ಶಿಕ್ಷಕರು, ಶಾಲೆ, ಪರೀಕ್ಷೆ, ಮಾರ್ಕ್ ಈ ಜವಾಬ್ದಾರಿಯೇ ಬರದಾಯ್ತು. ಗೌರವವೇ ಇಲ್ಲದಾಯ್ತು. ಪಾಸಾದ ಮೇಲಿನ ಗೌರವ ಅಥವಾ ಫೇಲ್ ಆದಾಗಿನ ಅವಮಾನ ಇದರ ವ್ಯತ್ಯಾಸವೇ ತಿಳಿಯದ ಪಾಡು ಕೆಲವರದ್ದು!. ಹೆಚ್ಚಿನ ಮನೆಯ ಮಕ್ಕಳೆಲ್ಲರೂ ಇಂಜಿನೀಯರ್ ಗಳೇ. ಅದೂ ಪಾಸಾಗಿ ಈಗಿನ ಕ್ಯಾಂಪಸ್ ಸಿಲೆಕ್ಷನ್ ನಲ್ಲಿ ಏನೋ ಒಂದು ಕೆಲಸ ಸಿಕ್ಕರೂ ಬರುವ ಸಂಬಳ ಹೆಚ್ಚೆಂದರೆ ಮೂವತ್ತೈದು ನಲವತ್ತು ಸಾವಿರದ್ದು. ಈ ಸಂಬಳದಲ್ಲಿ ಏನೆಲ್ಲ ಮಾಡಲು ಸಾಧ್ಯ? ಕೇಳಿದ್ದನ್ನು ಪಡೆದ ಕಾಮಧೇನುವಿನಂತಹ ತಂದೆ ತಾಯಿಯಿಂದ ಬ್ರಾಂಡೆಡ್ ಬಟ್ಟೆ, ಶೂ, ಮೊಬೈಲ್, ಲ್ಯಾಪ್ ಟಾಪ್, ಟ್ಯಾಬ್, ದೊಡ್ಡವರಾದ ಮೇಲೆ ಬಯಸಿದ ಕಾರು ಇತ್ಯಾದಿಗಳ ಬೆಲೆ ತಿಳಿಯದೆ ಪಡೆದ. ಆ ಶೋಕಿಯಲ್ಲೇ ಬೆಳೆದ ಈ ಮಕ್ಕಳು ಆ ಸಂಬಳದಲ್ಲಿ ಅವರ ಬೇಡಿಕೆಗಳನ್ನು ಪೂರೈಸಿಯಾರೋ ಅಥವಾ ತಮ್ಮನ್ನೇ ನಂಬಿದ ತನ್ನ ತಂದೆ ತಾಯಿಗಳ ಆಸೆಗಳನ್ನು ಪೂರೈಸಿಯಾರೇ!?. ನಾನೆಣಿಸುತ್ತೇನೆ ಇದು ಎಲ್ಲಾ ತಂದೆ ತಾಯಿಗಳ ಮನದ ಯಕ್ಷ ಪ್ರಶ್ನೆ!. ಸಣ್ಣಂದಿನಿಂದ ಯೌವ್ವನದ ಹೊಸ್ತಿಲವರೆಗೆ ಸಾಕಿ ಸಲಹಿದ ತಂದೆ ತಾಯಿಗಳು ತಮ್ಮ ಮಕ್ಕಳು ಚೆನ್ನಾಗಿ ಕಲಿತು ಒಳ್ಳೆಯ ಮಾರ್ಕ್ ಗಳಿಸಿ ಒಳ್ಳೆಯ ಕೆಲಸಕ್ಕೆ ಸೇರಿ ರಿಮಾರ್ಕ್ ಇಲ್ಲದೆ ಬದುಕು ಸಾಗಿಸಬೇಕು ಎನ್ನುವುದು ತಪ್ಪೇ?. ಪಿಯುಸಿ ನಂತರ ನಾವು ಹೇಳಿದ್ದೇ ಕಲಿಯಬೇಕು ಎಂಬ ಹಟಕ್ಕೆ ಬೀಳದೆ ಮಕ್ಕಳ ಇಚ್ಚಾನುಸಾರ ಯಾವುದನ್ನು ಕಲಿಯಲು ಅವರಿಗೆ ಆಸಕ್ತಿ ಇದೆಯೋ ಅದನ್ನೇ ಕಲಿಯಿರಿ, ಆದರೆ ಗಮನವಿಟ್ಟು ಗುರಿ ಮುಟ್ಟುವವರೆಗೆ ಹಟ ಹಿಡಿದು ಕಲಿಯಿರಿ ಎಂಬ ಕಿವಿಮಾತು ಹೇಳಿ ಅವರನ್ನು ಹರಸಿ ಕಳಿಸಿದ್ದು ಇದೇ ಅಪ್ಪ ಅಮ್ಮ. ಅದರಲ್ಲೂ ನಮ್ಮ ಸ್ವಾರ್ಥ ಆಸೆ ನೋಡದೆ ಅವರು ಸುಲಭವಾಗಿ ಯಾವುದನ್ನು ಕಲಿಯುತ್ತಾರೋ ಅದನ್ನೇ ಒಪ್ಪಿದ್ದು. ಯಾಕೆಂದರೆ ವಿದ್ಯೆ ಅವರಿಗೆ ಹೇರಿಕೆಯಾಗಬಾರದು ಎಂಬುದು ತಂದೆ ತಾಯಿಯ ಆಸೆ. ಇದು ಸಹಜವಾಗಿಯೇ ಎಲ್ಲಾ ತಂದೆ ತಾಯಿಗಳ ಆಸೆಯೂ ಆಗಿದೆ. ಆದರೆ ಈ ಆಸೆಯೇ ಕೆಲವೊಮ್ಮೆ ದುರಾಸೆಯಾಗಿ ಪರಿವರ್ತನೆಯಾಗಿ ಮುದ್ದು ಮಾಡಿ ಸಾಕಿದ ಮಕ್ಕಳು ತಮ್ಮ ತಂದೆತಾಯಿಯ ತ್ಯಾಗವನ್ನು ತಿಳಿಯದೆ ಸರಿಯಾಗಿ ಓದದೆ, ಪರೀಕ್ಷೆಗೆ ಗಮನ ಕೊಡದೆ, ತಂದೆ ತಾಯಿಯ ಎದುರು ನಾನು ಕಲಿತು ಹಾಗಾಗುತ್ತೇನೆ ಹೀಗಾಗುತ್ತೇನೆ ನನ್ನ ಮನೆಯ ಮುಂದೆ ರಾಲ್ಸ್ ರಾಯಲ್ಸ್ ಕಾರು ನಿಲ್ಲಿಸುತ್ತೇನೆ. ನಂತರ ಮದುವೆ ಗಿದುವೆ ಎಂದು ಬಂಡಲ್ ಬಿಟ್ಟು ಕೇವಲ ಬಾಯಿಯಲ್ಲೇ ಮಡಿಗೆ ಮೆದ್ದು , ಬೊಗಳೆ ಬಿಟ್ಟು ಶ್ರಮವೇ ಪಡದೆ ಎಕ್ಸಾಮ್ ಬರೆದರೆ ಈ ಆಸೆಗಳು ನೆರವೇರುವುದಾದರೂ ಹೇಗೆ? ಬೇಕಾದಷ್ಟು ಅಂಕ ಪಡೆಯದಿದ್ದಾಗ, ನಾಪಾಸ್ ಆದಾಗ, ಕೊನೆಗೆ ಆಗಬೇಕಾದ ಕಾಲೇಜ್ ಕ್ಯಾಂಪಸ್ ಸೆಲೆಕ್ಷನ್ನೇ ಮಿಸ್ ಆದರೆ ಆ ತಂದೆ ತಾಯಿಗಳಿಗೆ ಆಗುವ ಆಘಾತ ಅದನ್ನು ಹೇಗೆ ವರ್ಣಿಸುವುದು. ಆದರೆ ಮನೆಯಲ್ಲಿ ಸಾಕಷ್ಟು ಸಂಪತ್ತು ತುಂಬಿದ ಯಾವುದೇ ತಲೆ ಬಿಸಿಯೇ ಮಾಡದ ಉಂಡಾಡಿ ಗುಂಡರ ಸಹವಾಸ ಮಾಡಿದ ಈ ಮದ್ಯಮವರ್ಗದ ಮಕ್ಕಳಿಗೆ ಅದೊಂದು ದೊಡ್ಡ ಸಂಗತಿಯೇ ಅಲ್ಲ. ಅದೆಲ್ಲವನ್ನೂ ಕ್ಯಾರೇ ಅನ್ನದೆ, ನನಗೆ ಅಷ್ಟೇ ಸಾಧ್ಯ ಎಂದು ಉಡಾಫೆ ಮಾತಾಡುವ ಮಕ್ಕಳ ಮಾತಾಪಿತರು ತಮ್ಮ ಎಲ್ಲಾ ಆಶಾಗೋಪುರವೇ ಕುಸಿದಂತೆ ಆಗಿ ಅದನ್ನು ತಮ್ಮ ಪ್ರಾರಾಭ್ದ ಎಂದೆ ತಿಳಿಯಬೇಕು ಹೊರತು ಬೇರೆ ದಾರಿಯೇ ಇಲ್ಲ.ತಮ್ಮ ಮಿತವಾದ ಸಂಪಾದನೆಯಲ್ಲಿ ತಮ್ಮ ಸ್ವಂತ ಸುಖದ ಬಗ್ಗೆ ಸ್ವಾರ್ಥಿಯಾಗಿ ಯೋಚಿಸದೆ, ತನ್ನ ವ್ರಧ್ದಾಪ್ಯದ ಯಾವುದೇ ಉಳಿತಾಯಕ್ಕೂ ಮನ ಮಾಡದೆ, ಮಕ್ಕಳೇ ತಮ್ಮ ಆಸ್ತಿ, ಅವರ ಭವಿಷ್ಯವೇ ಅದು ತನ್ನ ಮೊದಲ ಕರ್ತವ್ಯ ಎಂದು ತಿಳಿವ ತಂದೆ ತಾಯಿ ಇಂತಹ ಮಕ್ಕಳಿಂದ ಏನು ನಿರೀಕ್ಷಿಸಲು ಸಾಧ್ಯ?.ಅವರ ಆಸೆ ನಿರೀಕ್ಷೆಗಳೆಲ್ಲವೂ ಹಗಲುಗನಸು ಅಷ್ಟೇ. ನಮಗಿರುವ ಕರ್ತವ್ಯದಂತೆ ನಮ್ಮ ಮಕ್ಕಳಿಗೆ ತಂದೆ ತಾಯಿಯಿಂದ ಎಲ್ಲವನ್ನೂ ಕೇಳಿ ಪಡೆಯುವ ಹಕ್ಕು ಮಾತ್ರವೇ ಇರುವುದೇ?ಜೊತೆಗೆ ಯಾವುದೇ ಕರ್ತವ್ಯ ಇಲ್ಲವೇ? !
ಇದನ್ನು ಅರಿತು ನಡೆವ ಮಕ್ಕಳು ನಿಜಾರ್ಥದಲ್ಲಿ ಯೋಗ್ಯತಾವಂತರು ಮತ್ತು ತಂದೆ ತಾಯಿಗಳು ನಿಜಕ್ಕೂ ಭಾಗ್ಯವಂತರು ಪುಣ್ಯಾತ್ಮರು. ಈ ಜಿಜ್ಞಾಸೆ ತುಡಿತದಿಂದಿಗೆ ಭಗವಂತನಲ್ಲಿ ಒಂದು ಬೇಡಿಕೆ. ಹೀಗೆ ಯಾರಿಗೂ ಭ್ರಮನಿರಸನವಾಗದೆ ಹೊಟ್ಟೆ ಬಟ್ಟೆ ಕಟ್ಟಿ ಬೆಳೆಸಿದ ತಂದೆ ತಾಯಿಗಳ ಆಸ್ತಿ ಬದುಕಿಗೆ ಮಾತ್ರ ವಾರಸುದಾರರಾಗದೆ ನಿಜ ಅರ್ಥದಲ್ಲಿ ತಮ್ಮ ಬದುಕಿನ ಉದ್ದೀಪನಕ್ಕೆ ಪಣ ಕಟ್ಟಿ ದುಡಿದ ತಮ್ಮ ತಂದೆ ತಾಯಿಗಳ ಬದುಕಿನ ಮಪ್ಪಿನ ಸಮಯದ ಆಸೆರೆಗಳಾಗುವಂತಹ ಬುದ್ದಿಯನ್ನು ಆರ್ಥಿಕ ಸಾಮರ್ಥ್ಯವನ್ನು ಅವರ ಮಕ್ಕಳು ಒದಗಿಸಿಕೊಡುವಂತಾಗಲಿ ಎಂಬುದು ನನ್ನ ಬರಹದ ಆಶಯ.
ಶರತ್ ಶೆಟ್ಟಿ ಪಡುಪಳ್ಳಿ*