ವ್ಯಕ್ತಿಯ ಬದುಕು ಮತ್ತು ಸಾಧನೆಗಳನ್ನು ವಿವರಿಸುವ ಕೃತಿಗಳಲ್ಲಿ ಎರಡು ವಿಧಗಳಿವೆ. ೧. ಆತ್ಮ ಕಥನ ೨. ಜೀವನ ಚರಿತ್ರೆ. ಲೇಖಕನೇ ತನ್ನ ಹುಟ್ಟು ಶಿಕ್ಷಣ ಉದ್ಯೋಗ ಸಾಧನೆಗಳನ್ನು ನಾನು, ನನ್ನದು ಎಂದು ಮಂಡಿಸುತ್ತಾ ಬರೆದರೆ ಅದು ಆತ್ಮಕಥನವಾಗುತ್ತದೆ. ಒಬ್ಬ ಸಾಧಕನ ಬಗ್ಗೆ ಮತ್ತೊಬ್ಬ ಲೇಖಕ ಬರೆದರೆ ಅದು ಜೀವನ ಚರಿತ್ರೆಯಾಗುತ್ತದೆ. ಈ ಬಗೆಯ ರಚನೆಗಳ ತುಲನೆಗೆ ನಾನಿಲ್ಲಿ ಹೋಗುವುದಿಲ್ಲ. ನಾವು ಗಮನಿಸಬೇಕಾದ ಒಂದು ಮುಖ್ಯ ಅಂಶವನ್ನು ಹೇಳುತ್ತೇನೆ. ಆತ್ಮ ಕಥನ ಪದವನ್ನು ಗಮನಿಸಿ. ದೇಹದ ಕಥನ ಎಂದು ಕರೆಯುವುದಿಲ್ಲ, ಬದುಕಿನ ಕಥನ ಎಂದು ಹೇಳುವುದಿಲ್ಲ, ದೇಹ ಬದುಕಿನ ವಿವರಗಳೆಲ್ಲವನ್ನು ಒಳಗೊಂಡಿದ್ದರೂ ಕೂಡ . ಆತ್ಮ ಕಥನಗಳಲ್ಲಿ ಆತ್ಮ ಸಾಕ್ಷಿ ಮುಖ್ಯವಾಗಿರುತ್ತದೆ ಎಂಬ ಕಾರಣಕ್ಕೆ. ಲೇಖಕ ಹೇಳಿದ್ದಕ್ಕೆ ಅವನ ಆತ್ಮವೇ ಸಾಕ್ಷಿ, ಬೇರೆ ಸಾಕ್ಷಿ ಇಲ್ಲ, ಕೇಳಬೇಕಾಗಿಲ್ಲ. ಜೀವನ ಚರಿತ್ರೆ ಧ್ವನಿಸುವ ಅರ್ಥ ತುಸು ಬೇರೆ ಇರುತ್ತದೆ. ಆತ್ಮಕ್ಕೆ ನಾಶ ಇಲ್ಲ, ಸತ್ಯವನ್ನಲ್ಲದೆ ಸುಳ್ಳು ಹೇಳುವುದಿಲ್ಲ. ಎದೆ ಮುಟ್ಟಿ ಹೇಳುವ ಸತ್ಯ ಅದು. ಅದಕ್ಕೆ ಹೃದಯವೇ ಸಾಕ್ಷಿ ಮತ್ತು ಸಂಬಂಧ. ಹಾಗಾಗಿ ಆತ್ಮಕಥನದಲ್ಲಿ ಲೇಖಕನ ಪ್ರಾಮಾಣಿಕತೆಯನ್ನು, ಅನುಭವ ಬದ್ಧತೆಯನ್ನು ಪ್ರಶ್ನಿಸುವ ಮತ್ತು ಸಂಶಯಪಡುವ ಪ್ರಮೇಯ ಇರಲಾರದು , ಬರಬಾರದು. ಸದ್ಯ ನಮ್ಮ ಮುಂದಿರುವುದು ” ಹಳ್ಳಿಯ ಆತ್ಮಕಥೆ”. ಬರೆದದ್ದು ಹಳ್ಳಿ ಎಂದು ಹೇಳಿಲ್ಲ . ಲೇಖಕ ಎಂಬ ನೆಲೆಯಲ್ಲಿ ಬರೆದದ್ದು ನರೇಂದ್ರ ರೈ ದೇರ್ಲ. ಹಾಗಂತ ಇದನ್ನು ಹಳ್ಳಿಯ ಚರಿತ್ರೆ ಎಂದು ಕರೆದಿಲ್ಲ. ಅಂದರೆ ಇಲ್ಲಿ ಹಳ್ಳಿಯೇ ಲೇಖಕ ನರೇಂದ್ರನಾಗಿ ಅಥವಾ ನರೇಂದ್ರನೇ ಹಳ್ಳಿಯಾಗಿ ಆತ್ಮಕತೆಯನ್ನು ರಚಿಸಿರುವುದನ್ನು/ ಹೇಳಿರುವುದನ್ನು ಗಮನಿಸಬೇಕು. ಇದರಲ್ಲಿ ದೇರ್ಲರ ಆತ್ಮಕಥೆಯ ಕೆಲವು ಪುಟಗಳು ಸೇರಿವೆ ಎಂಬುದನ್ನು ಗಮನಿಸಬೇಕು. ಡಾ.ದೇರ್ಲರು ಬರೆದಿರುವ ಸಾವಯವ ಕೃಷಿ, ಹಸಿರು ಉಸಿರು, ನೆಲಮುಖಿ, ಬೀಜಧ್ಯಾನ, ಬೇರು ಬದುಕು, ಬೇಟೆ– ಪ್ರಭುತ್ವದಿಂದ ಪ್ರಜಾಪ್ರಭುತ್ವದೆಡೆಗೆ , ಕೃಷಿ ಯಾಕೆ ಖುಷಿ ಮೊದಲಾದ ಕೃತಿಗಳಲ್ಲಿ ಮಾತ್ರವಲ್ಲದೆ ಕೃಷಿಕೇಂದ್ರಿತ ಸಾಧಕರ ಕುರಿತ ಸರಣಿ ಕೃತಿಗಳಲ್ಲಿಯೂ ಹಳ್ಳಿ ಮತ್ತು ದೇರ್ಲರ ಆತ್ಮಕಥೆ ಅನಾವರಣಗೊಂಡಿದೆ. ಹಳ್ಳಿ ದೇರ್ಲ ಮತ್ತು ಲೇಖಕ ನರೇಂದ್ರ ರೈ ಇದರ ನಡುವೆ ಅಭೇದ ಇದೆ, ಅದು ಬೇರೆ ಬೇರೆ ಅಲ್ಲ. ಈ ತಾತ್ವಿಕತೆಯಲ್ಲಿ ಈ ಕೃತಿಯನ್ನು ಗಮನಿಸಿದರೆ ಆತ್ಮ, ಆತ್ಮಕಥೆ ಮತ್ತು ಲೇಖಕ ಈ ನೆಲೆಗಳಿಗೆ ಹೊಸ ಭಾಷ್ಯವನ್ನು ಈ ಕೃತಿ ಬರೆದಿದೆ ಎಂಬುದು ಮುಖ್ಯವಾದ ಮಾತು.
ಇದು ಹಳ್ಳಿಯ ಆತ್ಮಕಥೆ. ವ್ಯಕ್ತಿಯ ಕಥೆಗಿಂತ ಹಳ್ಳಿಯ ಕಥೆ ಹೆಚ್ಚು ಸಂಕೀರ್ಣವಾದುದು. ದೇರ್ಲರು ಕೃಷಿ ಲೇಖಕ ಮಾತ್ರ ಅಲ್ಲ ಕೃಷಿಕ ಲೇಖಕ. ಹಳ್ಳಿನೆಲದಲ್ಲಿ ಉಳಿದು, ಅಲ್ಲೇ ನೆಲೆನಿಂತು ಕೃಷಿಯ ಬಗ್ಗೆ ಕೃಷಿಕರ ಬಗ್ಗೆ, ನೆಲ ನೆಲೆ ಅನ್ನ ಆಹಾರಕ್ಕಾಗಿ ನಿತ್ಯ ನಡೆಸುವ ಹೋರಾಟ ಮತ್ತು ಒಟ್ಟು ಪರಿಸರದ ಬಗ್ಗೆ , ಹಳ್ಳಿ ಬದುಕಿನ ಸಡಗರ ಸಂಭ್ರಮಗಳ ಬಗ್ಗೆ ಬರೆದವರು. ಹಳ್ಳಿಯ ಆತ್ಮಕ್ಕೆ ಬಹು ಆಯಾಮಗಳಿವೆ. ಸಾಂಪ್ರದಾಯಿಕ ಭತ್ತದ ಬೇಸಾಯ, ತೆಂಗು ಹಲಸು ಬಾಳೆ ತರಕಾರಿ ಗೇರು ಇತ್ಯಾದಿ ಅಲಫಲ ಬೆಳೆಗಳು, ಮೀನು ಏಡಿ ಹಕ್ಕಿ ಪ್ರಾಣಿ ಬೇಟೆಗಳು, ಚಾಪೆ ಬುಟ್ಟಿ ಕದಿಕೆ ಮಡಕೆ ಇತ್ಯಾದಿ ಕೈಕಸುಬುಗಳು, ಶೇಂದಿ ಶರಾಬು ಇತ್ಯಾದಿ ತಯಾರಿಕೆಗಳು, ಅಡಿಕೆ ರಬ್ಬರು ಮೊದಲಾದ ವಾಣಿಜ್ಯ ಬೆಳೆಗಳು ಹೀಗೆ ಹಳ್ಳಿಯ ಉತ್ಪಾದನಾ ರಂಗದ ಚಟುವಟಿಕೆಗಳದ್ದು ಒಂದು ಆಯಾಮ. ಜೀವನಾವರ್ತನ ಮತ್ತು ವಾರ್ಷಿಕಾವರ್ತನ ಹಬ್ಬ ಆಚರಣೆಗಳು ಇನ್ನೊಂದು ಆಯಾಮ. ಮಿತಸೌಕರ್ಯಗಳನ್ನು ಹೊಂದಿದ್ದ ಸವಾಲುಗಳ ನಡುವೆ ಬದುಕನ್ನು ರೂಪಿಸಿಕೊಳ್ಳಬೇಕಾಗಿದ್ದ ಗ್ರಾಮೀಣ ಬದುಕು ಕಾಲಕಳೆದಂತೆ ನಗರದ ಆಕರ್ಷಣೆಗಳಿಗೆ ಒಳಗಾದ ಪಲ್ಲಟಗಳ ಕಾಲಘಟ್ಟದ ಮತ್ತೊಂದು ಆಯಾಮ. ಪಲ್ಲಟಗಳು ತರುವ ಸಂಭ್ರಮ ಮತ್ತು ಆತಂಕಗಳ ಮಗದೊಂದು ಆಯಾಮ ಹೀಗೆ ಹತ್ತಾರು ಛಾಯೆಗಳಿರುವ ಹಳ್ಳಿಯ ಆತ್ಮವನ್ನು ನಿರೂಪಿಸುವ ಹದಿನೆಂಟು ಪ್ರಬಂಧಗಳು ಹಳ್ಳಿಯ ಜೀವಜೀವನದ ಸಂಕೇತವಾದ ಆತ್ಮದ ಕಥೆಯನ್ನು ನಿರೂಪಿಸಿವೆ. ಇದರಲ್ಲಿ ಹಳ್ಳಿಯ ಆತ್ಮವಿಕಾಸದ ಶೋಧ ಇದೆ. ಗ್ರಾಮ ಭಾರತದ ಸಾಂಸ್ಕೃತಿಕ ಚರಿತ್ರೆ ಇದೆ, ಆಧುನಿಕ ಶಿಕ್ಷಣ ಪಡೆದ ಪ್ರಜ್ಞಾವಂತ ಮನಸ್ಸೊಂದು ಹಳ್ಳಿಯ ಬದುಕಿಗೆ ಸ್ಪಂದಿಸಿದ ಸೊಗಸಾದ ಚಿತ್ರಣ ಇದೆ. ಆತ್ಮದ ಘಟಕಗಳಂತಿರುವ ಇಲ್ಲಿಯ ಹಲವು ಪಾತ್ರಗಳು ಕಪ್ಪು ಬಿಳುಪು ಪಾತ್ರಗಳಲ್ಲ. ಒಳಿತು ಕೆಡುಕು, ಸದ್ಗುಣ ದೌರ್ಬಲ್ಯ, ವಾಸ್ತವ ಮತ್ತು ಆದರ್ಶಗಳ ಒಂದು ಸಂಘರ್ಷ ಇವು ಇಡಿಯ ಆತ್ಮ ಕಥೆಗೆ ಸಹಜತೆಯನ್ನು ತಂದಿವೆ. ಇದು ಹಳ್ಳಿಯ ಗುಣವೂ ಹೌದು, ಲೇಖಕನ ಬರವಣಿಗೆಯ ಶಕ್ತಿಯೂ ಹೌದು.
ಈ ಮೇಲಿನ ವಿವರಗಳು ಮತ್ತು ವ್ಯಾಖ್ಯಾನ ಮನವರಿಕೆಯಾಗಬೇಕಾದರೆ ಹಳ್ಳಿಯ ಆತ್ಮಕಥೆ ಕೃತಿಯ ಪ್ರಬಂಧಶೈಲಿಯ ಲೇಖನಗಳನ್ನು ಓದಬೇಕು. ಕೆಲವನ್ನು ಹೆಸರಿಸುತ್ತೇನೆ. ಜಾನಕಿ ಮತ್ತು ಜನರೇಟರ್ , ನನ್ನ ಭೂತ ಬಿಡಿಸಿದ ಅಮ್ಮ, ಊರಿಗೆ ಬಂದ ಪುಷ್ಪಕ ವಿಮಾನ, ಭೂತದ ಮನೆಯ ಅಂಗಳದಲ್ಲಿ, ಬುಟ್ಟಿಯ ನಂಟಿನ ಕೊನೆಬಲ್ಲವರಾರು, ನನ್ನೊಳಗೆ ಗಾಂಧಿಯನ್ನು ತುಂಬಿದವರು, ಹಸಿರು ಕಟ್ಟಿದವರ ಕತೆ, ಹಳ್ಳಿ ಟಿ.ವಿ.ಯ ಮೊದಲ ದೃಶ್ಯಗಳು, ಸಂಚಾರಿ ಅಂಗಡಿಯ ಸರಳ ಕತೆ, ಹಟ್ಟಿಯ ಸುಣ್ಣದ ಗೆರೆ ಮತ್ತು ಸಾಂಬಕ್ಕ, ರಬ್ಬರ್ ತೋಟದಲ್ಲಿ ರಣ ಪಿಶಾಚಿ, ಸುಬ್ಬಜ್ಜನ ಗೋಡೆ, ಮುಡಿ ಮತ್ತು ಮಾಡು ಮೊದಲಾದ ಬರಹಗಳಲ್ಲಿ ಪ್ರಬಂಧದ ಅತ್ಯುತ್ತಮ ಲಕ್ಷಣಗಳಿವೆ. ಹಳ್ಳಿ ಶಾಲೆಯ ಶಿಥಿಲ ಭೌತಿಕ ಸ್ಥಿತಿಗತಿ, ಕೌಟುಂಬಿಕ ಸಂಬಂಧಗಳು, ಬಡತನ ಹಸಿವು ಇದ್ದರೂ ಪುಟಿಯುವ ಜೀವನೋತ್ಸಾಹ, ಮಕ್ಕಳನ್ನು ಪೊರೆವ ತಾಯ್ತನ, ಹಳ್ಳಿಗೆ ಪುರಾಣ ಜ್ಞಾನವನ್ನು ಹಂಚುವ ಯಕ್ಷಗಾನ ಬಯಲಾಟ ಪ್ರದರ್ಶನದ ಅವಾಂತರಗಳು ಇವುಗಳ ನಿರೂಪಣೆ ಒಂದು ಕಾಲದ ಹಳ್ಳಿಯ ಬದುಕನ್ನು ಕಟ್ಟಿಕೊಡುತ್ತವೆ. ಮಕ್ಕಳ ಅಣಕು ಭೂತ ದರ್ಶನದ ಒಂದು ಚಿತ್ರಣ “ನನ್ನ ಭೂತ ಬಿಡಿಸಿದ ಅಮ್ಮ” ಪ್ರಬಂಧದಲ್ಲಿದೆ. ಬಾಲಕನಾಗಿದ್ದಾಗಿನ ದೇರ್ಲರ ಭಾವಪ್ರಪಂಚಕ್ಕೆ ಜೀವ ಚೈತನ್ಯ ತುಂಬಿ ಸಂವರ್ಧಿಸಿದ ಅನೇಕ ಸನ್ನಿವೇಶಗಳು ಇಲ್ಲಿನ ಪ್ರಬಂಧಗಳಲ್ಲಿವೆ. ಹಸಿರು ಕಾಡು ನಾಶವಾಗಿ ರಬ್ಬರ್ ತೋಟ ಬಂದದ್ದರಿಂದ ಹಳ್ಳಿಯ ಆತ್ಮ ಒಳಗಾದ ಸಂಕಟ ಆತಂಕಗಳನ್ನು ” ರಬ್ಬರ್ ನೆನಪು” ಪ್ರಬಂಧ ದಾಖಲಿಸುತ್ತದೆ. ಊರಿಗೆ ಬಂದ ಪುಷ್ಪಕ ವಿಮಾನ ಬೇರೆ ಯಾವುದೂ ಅಲ್ಲ ರಬ್ಬರ್ ಗಿಡಗಳಿಗೆ ಮದ್ದು ಸಿಂಪಡಿಸಲು ಹಳ್ಳಿಗೆ ಬಂದ ಹೆಲಿಕಾಫ್ಟರ್! ಪರಿವರ್ತನೆಯ ಪ್ರಕ್ರಿಯೆಯಲ್ಲಿ ಮರೆಯಾಗಿ ಹುದುಗಿರುವ ನಾಶದ ಕಲ್ಪನೆ ಅಭಿವೃದ್ಧಿ ಚಿಂತಕರಿಗೆ ಇರುವುದಿಲ್ಲ. ಕಳೆದುಹೋಗುತ್ತಿರುವುದು ನಮ್ಮ ಅರಿವಿಗೆ ಬಂದಾಗ ಮಾತ್ರ ವಿಷಾದ ಕಾಡುತ್ತದೆ. ಇಂತಹ ವಿಷಾದವನ್ನು ಇಲ್ಲಿಯ ಹಲವು ಪ್ರಬಂಧಗಳಲ್ಲಿ ಗುರುತಿಸಬಹುದು. ಹಳ್ಳಿಯ ಜನರು ವಿಕಲರಲ್ಲ, ಹಳ್ಳಿ ಸಂಸ್ಕೃತಿ ವಿಕೃತವಲ್ಲ. ಅವರಲ್ಲಿ ಅದ್ಭುತವಾದ ಸೃಜನಶೀಲತೆ ಇದೆ, ಬುದ್ಧಿವಂತಿಕೆ ಇದೆ , ಮುರಿದು ಕಟ್ಟುವ ಮನೋಧರ್ಮ ಇದೆ ಎಂಬ ಧನಾತ್ಮಕ ಚಿಂತನೆಯನ್ನು ಬುಟ್ಟಿನ ನಂಟಿನ ಕೊನೆ ಬಲ್ಲವರಾರು? , ಹಸಿರು ಕಟ್ಟಿದವರ ಕಥೆ, ಹಟ್ಟಿಯ ಸುಣ್ಣದ ಗೆರೆ ಮತ್ತು ಸಾಂಬಕ್ಕ , ಸುಬ್ಬಜ್ಜನ ಗೋಡೆ, ಮುಡಿ, ಮಾಡು ಪ್ರಬಂಧಗಳು ಹೊಂದಿವೆ. ಆಧುನಿಕತೆಗೆ ಹಳ್ಳಿ ತೆರೆದುಕೊಳ್ಳುವಾಗಿನ ಸಡಗರ ಮತ್ತು ಸಂಕಟಗಳನ್ನು ಹಳ್ಳಿ ಟಿ.ವಿ.ಯ ಮೊದಲ ದೃಶ್ಯಗಳು ತಿಳಿಸುತ್ತವೆ. ಆಧುನಿಕತೆಯ ಪ್ರವೇಶವನ್ನು ದೇರ್ಲರು ನಿರಾಕರಿಸುವುದಿಲ್ಲ. ಆದರೆ ಹಳ್ಳಿಯ ಸ್ವಾಯತ್ತತೆಯನ್ನು ಕಬಳಿಸುವ ಅದರ ವೇಗ , ವಿವೇಕ ಇಲ್ಲದ ಅದರ ಅಟ್ಟಹಾಸದ ಬಗೆಗೆ ಎಚ್ಚರ ಇರಲಿ ಎಂದು ಸೂಚಿಸುತ್ತಾರೆ.
ಹಳ್ಳಿಯ ಹಸಿರು ದಾರಿಯಲ್ಲಿ ಧೂಳೆಬ್ಬಿಸುತ್ತಿರುವ ಅಭಿವೃದ್ಧಿಯ ಬಗೆಗೆ ದೇರ್ಲರಿಗೆ ಆತಂಕ ಇದೆ. ” ಬಡತನ , ಹಸಿವು, ಅಜ್ಞಾನ, ಮೂಢನಂಬಿಕೆಗಳು ಮೈತುಂಬಿಕೊಂಡಿದ್ದರೂ ಸ್ವಾವಲಂಬನೆ, ಸುಸ್ಥಿರ ಬದುಕಿನ ಹತ್ತಾರು ದಾರಿಗಳು, ನಿಸರ್ಗವನ್ನು ಪೂರ್ಣವಾಗಿ ಬಗೆಯದೆ ಹೊಂದಾಣಿಕೆಯ ಜೀವಪರ ಮನಃಸ್ಥಿತಿ ಹಳ್ಳಿಯಲ್ಲಿರುವುದು ಸತ್ಯ…. ಹಸಿಹಸಿ ಬಡತನ, ಹಸಿವಿನ ಅನುಭವ ನನ್ನೊಳಗೆ ಇನ್ನೂ ಸ್ಥಾಯಿಯಾಗಿರುವುದರಿಂದಲೇ ನನಗಿಂದು ಇಂಥ ಪ್ರಬಂಧಗಳನ್ನು ಬರೆಯಲು ಸಾಧ್ಯವಾದುದು” ದೇರ್ಲರ ಈ ಮಾತುಗಳು ಅವರ ಬರಹಗಳ ಹಿಂದಿರುವ ಅವರ ಲೋಕದೃಷ್ಟಿಯನ್ನು ಸ್ಪಷ್ಟಪಡಿಸುತ್ತವೆ. ಡಾ. ಚೇತನ ಸೋಮೇಶ್ವರ ಅವರು ಓದಿಗೆ ಪ್ರವೇಶಿಕೆಯಾಗಿ ಬರೆದಿರುವ ವಿಸ್ತಾರವಾದ ಮುನ್ನುಡಿ ಪ್ರಬುದ್ಧವಾಗಿದೆ. ಹಳ್ಳಿಯ ಬದುಕಿನ ಬಗ್ಗೆ ಕೆಲವು ಪ್ರಶ್ನೆಗಳನ್ನು ಎತ್ತಿ, ಪ್ರಜ್ಞಾವಂತ ಓದುಗರ ಜಿಜ್ಞಾಸೆಗೆ ಈ ಪ್ರಬಂಧ ಸಂಕಲನದಲ್ಲಿ ಅವಕಾಶ ಇರುವುದರಿಂದ ಇದೊಂದು ಮಹತ್ವ ಕೃತಿ ಎಂದು ಅಭಿಪ್ರಾಯಪಟ್ಟಿದ್ದಾರೆ.
ಹಳ್ಳಿಯಲ್ಲಿ ಹುಟ್ಟಿಬೆಳೆದ ನನ್ನ ಆತ್ಮಕತೆಯ ಹಲವು ಸಂಗತಿಗಳು ದೇರ್ಲರ ” ಹಳ್ಳಿಯ ಆತ್ಮಕಥೆ”ಯಲ್ಲಿ ಇರುವುದು ಆಕಸ್ಮಿಕವೇನಲ್ಲ! ಕೃತಿ ಸಾರ್ವತ್ರಿಕ ಆಗುವುದು ಎಂದರೆ ಇದುವೇ.
ಕೆ. ಚಿನ್ನಪ್ಪ ಗೌಡ