ಬೆಂಗಳೂರಿನ ಆರ್ಯಭಟ ಸಾಂಸ್ಕೃತಿಕ ಸಂಸ್ಥೆಯು 6 ವಿದೇಶ ಗಣ್ಯರು ಸೇರಿದಂತೆ 60 ಸಾಧಕರಿಗೆ 2024 ರ ಸಾಲಿನ 49 ನೇಯ ವಾರ್ಷಿಕ ‘ಆರ್ಯಭಟ ಅಂತರ್ ರಾಷ್ಟ್ರೀಯ ಪ್ರಶಸ್ತಿ’ಯನ್ನು ಪ್ರಕಟಿಸಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ಉಚ್ಚನ್ಯಾಯಾಲಯದ ಗೌರವಾನ್ವಿತ ನಿವೃತ್ತ ನ್ಯಾಯಮೂರ್ತಿಗಳಾದ ಡಾ| ಹೆಚ್.ಬಿ.ಪ್ರಭಾಕರ ಶಾಸ್ತ್ರಿಯವರು ನೆರವೇರಿಸಲಿದ್ದು, ಮುಖ್ಯ ಅಥಿತಿಗಳಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ| ಮಹೇಶ್ ಜೋಶಿಯವರು, ಖ್ಯಾತ ಚಲನಚಿತ್ರ ನಿರ್ದೇಶಕರಾದ ಡಾ. ಎಸ್.ನಾರಾಯಣ್ ರವರು ಭಾಗವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಆರ್ಯಭಟ ಸಂಸ್ಥೆಯ ಸಂಸ್ಥಾಪಕರಾದ ಡಾ. ಹೆಚ್.ಎಲ್.ಎನ್.ರಾವ್ ರವರು ವಹಿಸಲಿದ್ದಾರೆ.
ಕಾನೂನು ಮತ್ತು ನ್ಯಾಯಾಂಗ ವಿಭಾಗದಿಂದ ಸಿ.ಕೆ. ವಿರೇಶ್ಕುಮಾರ್, ಕನ್ನಡ ಚಿತ್ರರಂಗದ ನಿರ್ದೇಶಕ, ನಿರ್ಮಾಪಕ, ನಟ ರಕ್ಷಿತ್ ಶೆಟ್ಟಿ, ಪತ್ರಕರ್ತರಾದ ವೈ.ಎಸ್.ಎಲ್.ಸ್ವಾಮಿ. ಸರ್ಕಲ್ ಇನ್ಸ್ಪೆಕ್ಟರ್ ಆರ್.ಪಿ.ಅನಿಲ್, ಅಬುಧಾಬಿಯಿಂದ ದಕ್ಷಿಣ ಕನ್ನಡ ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಿತ್ರಂಪಾಡಿ ಜಯರಾಂ ರೈ, ಕತಾರ್ನಿಂದ ಅನಿಲ್ ಚಂದ್ರಶೇಖರ್ ಬಾಸಗಿ, ಲಂಡನ್ನಿಂದ ಡಾ. ಸತ್ಯವತಿ ಮೂರ್ತಿ, ಅಮೇರಿಕಾದಿಂದ ಪ್ರದ್ಯುಮ್ನ ಕಶ್ಯಪ್, ಕೃಷ್ಣ ಆದೋನಿ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಸಾಧನೆಗೈದಿರುವ 60 ಸಾಧಕರಿಗೆ ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿಯನ್ನು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ದಿನಾಂಕ 23/06/2024 ರ ಸಂಜೆ 6 ಗಂಟೆಗೆ ವಿತರಿಸಲಾಗುವುದೆಂದು ಸಂಸ್ಥೆಯ ಅಧ್ಯಕ್ಷರಾದ ಡಾ.ಹೆಚ್.ಎಲ್.ಎನ್.ರಾವ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರಾವಳಿಯ ಸಾಧಕರು: ಕರಾವಳಿ ಭಾಗದಿಂದ ರಾಜ್ಯ ಅಲೆಮಾರಿ ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ನಿಕಟಪೂರ್ವ ಅಧ್ಯಕ್ಷ, ದೇರಳಕಟ್ಟೆ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷ ಕೆ ರವೀಂದ್ರ ಶೆಟ್ಟಿ ಉಳಿದೊಟ್ಟು, ಪುಣೆ ಅಹ್ಮದ್ ನಗರದ ಉದ್ಯಮಿ, ಧಾರ್ಮಿಕ ಸೇವಾಕರ್ತ ಕೆ.ಕೆ.ಶೆಟ್ಟಿ, ತುಳು ಸಾಹಿತಿ ಯೋಗೀಶ್ ಕಾಂಚನ್,
ಯಕ್ಷಾಂಗಣ ಮಂಗಳೂರು ಉಪಾಧ್ಯಕ್ಷ ಎಂ.ಸುಂದರ ಶೆಟ್ಟಿ ಬೆಟ್ಟಂಪಾಡಿ, ಜ್ಯೋತಿಷಿ ಹರಿಶ್ಚಂದ್ರ ಪಿ. ಸಾಲಿಯಾನ್, ಯಕ್ಷಗಾನ ಕಲಾವಿದ ದಿನೇಶ್ ಕೋಡಪದವು ಸಾಧಕರ ಪಟ್ಟಿಯಲ್ಲಿದ್ದಾರೆ ಎಂದು 2006 ರಲ್ಲಿ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ಪುರಸ್ಕೃತರಾದ ಸಾಹಿತಿ, ಯಕ್ಷಗಾನ ವಿದ್ವಾಂಸ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ತಿಳಿಸಿದ್ದಾರೆ.
ಸಾಂಸ್ಕೃತಿಕ ರಂಜನೆ : ಪ್ರಶಸ್ತಿ ಪ್ರದಾನ ಸಮಾರಂಭದ ಅಂಗವಾಗಿ ಸಂಜೆ ಗಂಟೆ 4 ರಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಸಾಂಸ್ಕೃತಿಕ ನೃತ್ಯೋತ್ಸವದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಕಾವಳಕಟ್ಟೆ ಬಂಟ್ವಾಳದ ಶೃತಿ ಆರ್ಟ್ಸ್ ತಂಡದವರಿಂದ ಜಾನಪದ ಗೊಂಬೆ ಪ್ರದರ್ಶನ, ಪಿ.ಕೆ. ಸತೀಶ್ಬಾಬು ತಂಡದವರಿಂದ ‘ಬೊಂಬೆ ವೈಭವ’ ಕಾರ್ಯಕ್ರಮ, ಸುಧೀಂದ್ರ ನೃತ್ಯ ಕಲಾನಿಕೇತನ ಮಹಾನಟ ನೃತ್ಯ ಮಂದಿರ ತಂಡ ಮಾರ್ಗಂ ಸ್ಕೂಲ್ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ ತಂಡದವರಿಂದ ಭರತನಾಟ್ಯ, ಮಾಸ್ಟರ್ ತ್ರಿಧಾತ್ ತಂಡದವರಿಂದ ಸ್ಯಾಕ್ಸೋಫೋನ್, ನಾದತರಂಗ ತಂಡದವರಿಂದ ಚೆಂಡೆವಾದನ, ಚಂದ್ರಿಕ ಪೆರ್ಡೂರುರವರಿಂದ ಯಕ್ಷಗಾನ ಏರ್ಪಡಿಸಲಾಗಿದೆ.