ಪ್ರತಿಯೊಬ್ಬರೂ ಯೋಧರಂತೆ ಜೀವನದಲ್ಲಿ ಶಿಸ್ತು, ಯೋಧನ ಮನಃಸ್ಥಿತಿಯನ್ನು ಬೆಳೆಸಿಕೊಂಡು ದೇಶಕ್ಕಾಗಿ ರಾಷ್ಟ್ರೀಯತೆಯನ್ನು ಮೈಗೂಡಿಸಿಕೊಂಡು ಅಭಿವೃದ್ಧಿಯಲ್ಲಿ ಕೈ ಜೋಡಿಸುವುದು ಯೋಗ ವಿತ್ ಯೋಧ ಪರಿಕಲ್ಪನೆಯ ಉದ್ದೇಶವಾಗಿದೆ ಎಂದು ದ.ಕ. ಸಂಸದ ಬ್ರಿಜೇಶ್ ಚೌಟ ಹೇಳಿದರು. ಸಸಿಹಿತ್ಲುವಿನಲ್ಲಿ ಆಯೋಜಿಸಲಾದ ಯೋಗ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು,
ಕೇಂದ್ರ ಸರಕಾರದ ಸಹಕಾರದಲ್ಲಿ ಹಂತ ಹಂತವಾಗಿ ಬೀಚ್ ಅಭಿವೃದ್ಧಿಯ ನೀಲಿ ನಕಾಶೆ ರೂಪಿಸಲಾಗುವುದು. ನವಯುಗ ನವಪಥ ಪರಿಕಲ್ಪನೆಯೊಂದಿಗೆ ಮುಂದಿನ ದಿನದಲ್ಲಿ ದ.ಕ. ಜಿಲ್ಲೆಯ ಅಭಿವೃದ್ಧಿಯ ಪರಿಕಲ್ಪನೆ ನನ್ನದಾಗಿದೆ. ಪ್ರಥಮ ಅಂಗವಾಗಿ ಅಂತಾರಾಷ್ಟ್ರೀಯ ಪ್ರವಾಸೋದ್ಯಮ ಕೇಂದ್ರವಾಗಿ ಸಸಿಹಿತ್ಲು ಬೀಚ್ ಅನ್ನು ರೂಪಿಸುವ ನಿಟ್ಟಿನಲ್ಲಿ “ಯೋಗ ವಿದ್ ಯೋಧ’ ಹೆಸರಲ್ಲಿ ಯೋಗ ದಿನವನ್ನು ಇಲ್ಲಿ ಆಚರಿಸಲಾಗಿದೆ ಎಂದರು.
ನಿವೃತ್ತ ಯೋಧರ ತಂಡ ಹಾಗೂ ಆಳ್ವಾಸ್ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳು, ಎನ್ನೆಸ್ಸೆಸ್ ತಂಡ, ಕಂಬಳ ಓಟದ ಸುದರ್ಶನ್ ದೋಟ, ವಂದಿತ್ ಶೆಟ್ಟಿ ಬಂಬ್ರಾಣ, ಯೋಗ ಪಟು ಮೈತ್ರಿ ಮಲ್ಲಿ, ಅತ್ಲೆಟ್ ವಿಕಾಸ್ ಪುತ್ರನ್, ಸರ್ಫಿಂಗ್ ಫೌಂಡೇಷನ್ನ ಗೌರವ್ ಹೆಗ್ಡೆ, ಪ್ರವಾಸೋದ್ಯಮ ಇಲಾಖೆಯ ಮಾಣಿಕ್ಯ ಮತ್ತಿತರರಿದ್ದರು.