ರಡ್ಡ್ ಕವುಲೆ – ಇದೊಂದು ತುಳು ಅಂಕಣ ಬರಹಗಳ ಸಂಗ್ರಹ. ಲೇಖಕಿ ರಾಜಶ್ರೀ ಟಿ ರೈಯವರು “ಟೈಮ್ಸ್ ಆಫ್ ಕುಡ್ಲ” ಅನ್ನುವ ತುಳು ಪತ್ರಿಕೆಯಲ್ಲಿ ಬರೆಯುತ್ತಿದ್ದ ಲೇಖನಗಳನ್ನೆಲ್ಲಾ ಒಟ್ಟಾಗಿಸಿ ಕೃತಿಯಾಗಿಸಿದ್ದಾರೆ. ತುಳು ಭಾಷೆ, ಸಂಸ್ಕೃತಿ, ತುಳುನಾಡಿನ ಆಚರಣೆಗಳು, ದೈವಾರಾಧನೆ, ನಾಗಾರಾಧನೆ ಇವೆಲ್ಲಾ ತುಳುನಾಡಿನ ಸಂಸ್ಕೃತಿಯೊಳಗೆ ಬರುತ್ತವೆ. ಈ ಆಚರಣೆಗಳು ಬಹಳ ವಿಶಿಷ್ಟ ಹಾಗೂ ವಿಭಿನ್ನವಾದದ್ದು. ನನಗೂ ತುಳು ಭಾಷೆಯ ಮೇಲೆ ಅಷ್ಟೊಂದು ಹಿಡಿತವೇನಿಲ್ಲ. ಆದರೂ ಸ್ವಲ್ಪ ಸಮಯ “ಟೈಮ್ಸ್ ಆಫ್ ಕುಡ್ಲ” ಪತ್ರಿಕೆಯಲ್ಲಿ ನನ್ನ ತುಳು ಭಾಷೆಯಲ್ಲಿ ಬರೆದ ಹನಿಗವನಗಳು ಪ್ರಕಟಗೊಂಡಿದ್ದವು. ಹೊಸ ಬರಹಗಾರರಿಗೆ ಈ ಪತ್ರಿಕೆ ಬಹಳಷ್ಟು ಪ್ರೋತ್ಸಾಹ ಹಾಗೂ ಅವಕಾಶಗಳನ್ನು ನೀಡುತಿತ್ತು. ನಮ್ಮ ನೆರೆಮನೆಯ ಹುಡುಗನೊಬ್ಬ ಒತ್ತಾಯ ಮಾಡಿ, ಪ್ರೋತ್ಸಾಹಿಸಿ “ಅಕ್ಕ ಈರ್ ಪನಿಗಬಿತೆ ಬರೆಲೆ, ಬರೆದ್ ಎನಟ ಕೊರ್ಲೆ, ಐನ್ ಕಡಪುಡುನ ವ್ಯವಸ್ಥೆ ಯಾನ್ ಮಲ್ಪುವೆ” ( ಅಕ್ಕ ನೀವು ಹನಿಗವನ ಬರೆಯಿರಿ, ಬರೆದು ನನ್ನ ಹತ್ತಿರ ಕೊಡಿ, ಅದನ್ನು ಪತ್ರಿಕೆಗೆ ಕಳುಹಿಸುವ ವ್ಯವಸ್ಥೆ ನಾನು ಮಾಡುತ್ತೇನೆ) ಅಂತ ಹೇಳಿ ಬರೆಸುತಿದ್ದ. ತುಳು ಸಾಹಿತ್ಯದ ಮೇಲೆ ನನಗೆ ಆಸಕ್ತಿ ಹುಟ್ಟಲು ಒಂದು ರೀತಿಯಲ್ಲಿ ಅವನೇ ಕಾರಣ. ಈ ವಿಚಾರದಲ್ಲಿ ಆ ಹುಡುಗನ ಮೇಲೆ ಕೃತಜ್ಞತೆ ಇದೆ.
ಇತ್ತೀಚೆಗೆ ಪರಿಚಯವಾದವರು ರಾಜಶ್ರೀ ಟಿ ರೈ ಪೆರ್ಲ. ಇವರನ್ನು ಕೆಲವೊಂದು ಕಡೆ ನೋಡಿದ್ದೇನಾದರೂ ಅಷ್ಟೊಂದು ಪರಿಚಯ ಇರಲಿಲ್ಲ. ಇವರೊಬ್ಬರು ಲೇಖಕಿ, ಅದ್ಭುತವಾಗಿ ಬರೆಯುತ್ತಾರೆ ಅನ್ನುವುದು ಪರಿಚಯ ಆದದ್ದು ಫೇಸ್ಬುಕ್ ಮೂಲಕ ಹಾಗೂ ಅವರ ಪುಸ್ತಕಗಳು ನನ್ನ ಕೈ ಸೇರಿದಾಗ. ತುಳು ಜನರ ಹೊರತಾಗಿ ತುಳು ಭಾಷೆಯನ್ನು ಬೇರೆಯವರು ಅರಿಯುವುದು ಕಷ್ಟ. ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡಿನ ಜನ ಈ ಭಾಷೆಯನ್ನು ಸರಾಗವಾಗಿ ಅರ್ಥಮಾಡಿಕೊಳ್ಳಬಲ್ಲರು. ಕನ್ನಡದಲ್ಲಿ ಬರೆಯುವ ತುಳು ಅಕ್ಷರಗಳನ್ನು ನಾನು ಸಲೀಸಾಗಿ ಗುರುತಿಸಿ ಓದಬಲ್ಲೆ. ಆದರೆ ಅದೇ ಮೂಲ ತುಳು ಲಿಪಿಯಲ್ಲಿರುವ ಅಕ್ಷರಗಳನ್ನು ಖಂಡಿತ ಗುರುತಿಸಲಾರೆ.
ಮೊದಲೆಲ್ಲ ಜನ ಖಾಯಿಲೆ ಬಿದ್ದಾಗ ವೈದ್ಯರು ಆಸ್ಪತ್ರೆಗಳು ಇರಲಿಲ್ಲ. ಮನೆಯಲ್ಲಿ ಹಿತ್ತಲಲ್ಲಿ ಔಷಧೀಯ ಸಸ್ಯಗಳು ಇರುತ್ತಿದ್ದವು. ಅದನ್ನೇ ಹುಡುಕಿ ತೆಗೆದು ಕೊಡುತ್ತಿದ್ದರು ಅಥವಾ ಇನ್ನೂ ಜೋರಾದರೆ ಹಳ್ಳಿಯಲ್ಲೇ ಮದ್ದು ಕೊಡುವ ಕೈ ಗುಣವಿರುವ ಆಯ್ದ ಕುಟುಂಬಗಳಿರುತ್ತಿದ್ದವು. ಅವರು ಗಿಡಮೂಲಿಕೆಗಳ ಮೂಲಕ ಖಾಯಿಲೆಯನ್ನು ಗುಣಪಡಿಸುತ್ತಿದ್ದರು. ಈಗ ಅಂತಹ ಚಿಕಿತ್ಸಾ ಪದ್ಧತಿ, ಆಯುರ್ವೇದ ಎಲ್ಲವೂ ಮೂಲೆಗುಂಪಾಗಿದೆ. ಇದ್ದ ಬದ್ಧದು ಕೂಡ ಕಾಣೆಯಾಗುತ್ತಿದೆ ಅನ್ನುವ ಖೇದ ವ್ಯಕ್ತಪಡಿಸುತ್ತಾರೆ ಲೇಖಕಿ.
ಜಾನಪದ ಪಾಡ್ದನಗಳಲ್ಲಿ ಉಲ್ಲೇಖವಾಗಿರುವ ಮನೆಮದ್ದಿನ ಕುರಿತಾದ ಮಾಹಿತಿ. ಬಹಳ ಹಿಂದಿನ ಆಚಾರ ವಿಚಾರಗಳನ್ನು ಹಾಡು, ಪಾಡ್ದನಗಳಲ್ಲಿ ಜೀವಂತವಾಗಿ ಇರಿಸಿದ್ದಾರೆ ನಮ್ಮ ಹಿರಿಯರು. ಸಂಸ್ಕೃತಿ, ಆಚರಣೆಗಳು ಬಹಳ ಶ್ರೀಮಂತವಾದದ್ದು. ಈ ಪದ್ಧತಿ, ಆಚರಣೆಗಳು ವಿಶಿಷ್ಟ ಹಾಗೂ ಸೋಜಿಗದಿಂದ ಕೂಡಿದವು. ಇಂದಿಗೂ ಇಂತಹ ಹಲವಾರು ಆಚರಣೆಗಳು ನಮ್ಮ ತುಳುನಾಡಿನಲ್ಲಿ ಜೀವಂತವಾಗಿವೆ. ಯಾವ ಖಾಯಿಲೆಗೆ ಏನನ್ನೆಲ್ಲಾ ಮದ್ದಿನಂತೆ ಉಪಯೋಗಿಸಬಹುದು ಅನ್ನುವುದನ್ನು ಹಾಡು ಹಸೆಯ ಮೂಲಕ ಜಗತ್ತಿಗೆ ಸಾರಿದ್ದಾರೆ ಹಿಂದಿನವರು. ಈಗಲೂ ಇವನ್ನೆಲ್ಲಾ ಅನುಸರಿಸುವವರು ಬಹಳ ಮಂದಿ ಇದ್ದಾರೆ ನಮ್ಮ ನಡುವೆ.
ನುಡಿ ಕಟ್ಟು, ಗಾದೆಗಳಲ್ಲೂ ಹಲವಾರು ಮನೆ ಮದ್ದಿನ ಉಲ್ಲೇಖ ಆಗಿದೆ. ನಾವು ಗಾದೆ ಮಾತುಗಳನ್ನು ಬಾಯಿಯಿಂದ ಬಾಯಿಗೆ ಹೇಳುತ್ತಾ ಹೋಗುತ್ತೇವೆ. ಆದರೆ ಸರಿಯಾಗಿ ಗಮನಿಸಿದರೆ, ಅವುಗಳ ಅರ್ಥದ ಕಡೆ ಗಮನ ನೀಡಿದರೆ ಅದರೊಳಗವಿತಿರುವ ತಿರುಳು ಅರ್ಥವಾಗುತ್ತದೆ. ಇಂತಹ ಮನೆ ಮದ್ದು, ವೈದ್ಯಕೀಯ ಪದ್ಧತಿಯಲ್ಲಿ ಮದ್ದು ನೀಡುವ ಕೈಗುಣ ಕೆಲವೇ ಕೆಲವು ಮನೆತನಗಳಿಗೆ ಇದ್ದವು. ಅಲ್ಲಿ ಹಿರಿಯರು ಅದನ್ನು ಕಿರಿಯರಿಗೆ ವರ್ಗಾಯಿಸುವ ಕ್ರಮವೂ ಇತ್ತು. ಇಲ್ಲಿ ಮುಖ್ಯವಾಗಿ ಕೆಲಸ ಮಾಡುತ್ತಿದ್ದುದು ನಂಬಿಕೆ. ಇವತ್ತಿಗೂ ಕೆಲವೊಂದು ಖಾಯಿಲೆಗಳು ಯಾವುದೇ ವೈದ್ಯರು ಆಸ್ಪತ್ರೆಗೆ ಬಗ್ಗದೆ ಮನೆ ಮದ್ದು ನೀಡುವವರ ಬಳಿ ಹೋದಾಗ ಗುಣವಾದ ಉದಾಹರಣೆಗಳು ಇವೆ. ಕೇರಳದಲ್ಲಿ ಇಂತಹ ಪುರಾತನ ಚಿಕಿತ್ಸಾ ಪದ್ಧತಿ ಇವತ್ತಿಗೂ ಚಾಲ್ತಿಯಲ್ಲಿದೆ.
ಹಳ್ಳಿಮನೆ ಎಂದರೆ ಅಲ್ಲಿ ದನಕರುಗಳು, ಗದ್ದೆ ಉಳುವ ಎತ್ತು, ಕೋಣಗಳೆಲ್ಲ ಇದ್ದರಷ್ಟೇ ಅದೊಂದು ಹಳ್ಳಿ ಮನೆ. ಇದೆಲ್ಲ ಹಿಂದಿನ ಕಥೆ. ಇವತ್ತು ಹಳ್ಳಿಗಳೇ ಮಾಯವಾಗುತ್ತಿದೆ ಇನ್ನು ದನ ಕರುಗಳನ್ನು ಎಲ್ಲಿಂದ ಹುಡುಕೋಣ? ಒಂದು ಕಾಲದಲ್ಲಿ ಮನೆ ತುಂಬಾ ದನ ಕರುಗಳು ಇರುತ್ತಿದ್ದವು. ಆಗ ಅವುಗಳಿಗೆ ಹುಷಾರು ತಪ್ಪಿದರೂ ಈಗಿನಂತೆ ಪಟ್ಟಣದ ಡಾಕ್ಟರ್ ಇರುತ್ತಿರಲಿಲ್ಲ. ಹಳ್ಳಿಯಲ್ಲೇ ಮದ್ದು ಕೊಡುವ ಕೈ ಗುಣದವರು ಇರುತ್ತಿದ್ದರು. ಇವತ್ತು ಈ ಎಲ್ಲಾ ಪದ್ಧತಿಗಳು ಕಾಣೆಯಾಗಿವೆ. ಹಲವಾರು ಹಳೆಯ ವಿಚಾರಗಳನ್ನು ಕಣ್ಣ ಮುಂದೆ ತಂದು ಮನಸ್ಸಿಗೆ ಉಲ್ಲಾಸ ನೀಡುತ್ತಿರುವ ಬರಹಗಳ ಗುಚ್ಛ. ನಾವು ಇಲ್ಲಿ ಬೇರೆ ಬೇರೆ ರೀತಿಯ ಆಯುರ್ವೇದ ಮೂಲದ ನಾಟಿ ವೈದ್ಯ ಅಥವಾ ಹಳ್ಳಿ ಮದ್ದುಗಳ ಕುರಿತು ವಿವರಗಳನ್ನು ಕಾಣಬಹುದು. ಬೇಸರದ ಸಂಗತಿ ಎಂದರೆ ಇಂತಹ ಚಿಕಿತ್ಸಾ ಪದ್ಧತಿ ಅಳಿವಿನಂಚನ್ನು ತಲುಪಿರುವುದು. ಕೆಲವೆಲ್ಲ ತಾಳೆ ಗರಿಗಳಲ್ಲಿ ಬರೆದಿಟ್ಟು ವಂಶದಿಂದ ವಂಶಕ್ಕೆ ಈ ಚಿಕಿತ್ಸಾ ಪದ್ಧತಿ ಮುಂದುವರಿಯುತ್ತಿತ್ತು. ಆದರೆ ಇವತ್ತು ಹೆಚ್ಚಿನ ಭಾಗ ಅಳಿವಿನಂಚನ್ನು ತಲುಪಿದೆ.
ಹಿಂದಿನ ಕಾಲದಲ್ಲಿ ಮಳೆಗಾಲಕ್ಕೆ ಆಹಾರವನ್ನು ಸಂರಕ್ಷಿಸಿ ಇಡುತ್ತಿದ್ದ ರೀತಿ ಇವತ್ತು ಹೊಸದಾಗಿ ಕಾಣುತ್ತದೆ. ಬೆಳೆದ ಹಣ್ಣುಗಳನ್ನು ಹಣ್ಣಾಗಿಸುತ್ತಿದ್ದ ರೀತಿ, ಸೌತೆಕಾಯಿಯನ್ನು ತೆಂಗಿನ ಒಲಿಯಲ್ಲಿ ಕಟ್ಟಿ ಮನೆಯ ಮಾಡಿಗೆ ಹೊಡೆದ ಮರದ ಪಟ್ಟಿಗೆ ಕಟ್ಟುತಿದ್ದ ರೀತಿ ಹೀಗೆ ಹಲವಾರು ಪದ್ಧತಿಗಳು ವಿಶಿಷ್ಟವಾಗಿದ್ದವು. ಕೆಲವು ಮನೆ ಮದ್ದಿಗೆ ಬೇಕಾದ ವಸ್ತುಗಳನ್ನು ಕೂಡ ಕಾಪಿಟ್ಟುಕೊಳ್ಳುವ ಸಲುವಾಗಿ ಜಾಗ್ರತೆಯಿಂದ ಸಂರಕ್ಷಿಸುತ್ತಿದ್ದ ರೀತಿ ಹೀಗೆ ಮೊದಲಿನ ಕಾಲದ ವೈಭವ, ನಮ್ಮ ಹಿರಿಯರ ರೀತಿ ನೀತಿಗಳನ್ನು ತಿಳಿಸಿಕೊಡುವ ಸುಂದರ ಲೇಖನ.
ಮನೆ ಮದ್ದು ನೀಡುವ ಪಂಡಿತರ ಸೇವಾ ಮನೋಭಾವದ ಕುರಿತ ಲೇಖನ. ಇವತ್ತು ಬದಲಾದ ಕಾಲದಲ್ಲಿ ಮನೆ ಮದ್ದು, ಆಯುರ್ವೇದ ಚಿಕಿತ್ಸಾ ಪದ್ಧತಿಯನ್ನು ಜನ ನೂರಾರು ಆಸ್ಪತ್ರೆಗಳನ್ನು ಸುತ್ತಿ ಬಂದ ಮೇಲೂ ಕಾಯಿಲೆ ಗುಣ ಆಗದೆ ಇದ್ದಾಗ ಮಾತ್ರ ಅವಲಂಬಿಸುತ್ತಾರೆ ಮತ್ತು ದೊಡ್ಡ ದೊಡ್ಡ ಆಸ್ಪತ್ರೆಗೆ ಹಣ ಸುರಿಯುವ ತಾಕತ್ತು ಇಲ್ಲದವರು ಮಾತ್ರ ಹಳ್ಳಿ ವೈದ್ಯರನ್ನು ಸಂಪರ್ಕಿಸುತ್ತಾರೆ. ದೊಡ್ಡ ದೊಡ್ಡ ಆಸ್ಪತ್ರೆಗಳು ಬಂದ ಮೇಲೆ ಈ ಹಳ್ಳಿಯ ನಾಟಿ ವೈದ್ಯಕೀಯ ಪದ್ಧತಿ ಮೂಲೆಗುಂಪಾಗಿದೆ ಹಾಗೂ ಬಹುಪಾಲು ಕಾಣೆಯಾಗುತ್ತಾ ಬಂದಿದೆ. ಹಳ್ಳಿ ಮದ್ದು ನೀಡುವವರಲ್ಲಿ ಒಂದು ಸೇವಾ ಮನೋಭಾವ ಇರುತ್ತದೆ. ಅವರು ಹಣಕ್ಕಾಗಿ ಈ ಕೆಲಸ ಮಾಡುವುದಿಲ್ಲ. ಅದುವೇ ಆಧುನಿಕ ಆರೋಗ್ಯ ಕೇಂದ್ರಗಳು ಜನರ ಹಣ ದೋಚುತ್ತಾ ಆರ್ಥಿಕವಾಗಿ ದುರ್ಬಲರನ್ನಾಗಿಸುವ, ಹಿಂಡಿ ಹಿಪ್ಪೆ ಮಾಡುವ ಸಂಸ್ಥೆಗಳಾಗಿವೆ. ಸಣ್ಣ ಒಂದು ಸಮಸ್ಯೆ ತಗೊಂಡು ಅಲ್ಲಿಗೆ ಹೋದರೆ ದೊಡ್ಡ ದೊಡ್ಡ ಖಾಯಿಲೆಗಳ ಹೆಸರು ಹೇಳಿ ನೂರಾರು ಪರೀಕ್ಷೆಗಳನ್ನು ಮಾಡಿಸದೆ ಜನರನ್ನು ಅಲ್ಲಿಂದ ಹೊರ ಬಿಡುವುದಿಲ್ಲ. ಇಷ್ಟಾದರೂ ಜನಕ್ಕೆ ಬುದ್ಧಿ ಬರುವುದಿಲ್ಲ. ಹಳ್ಳಿ ವೈದ್ಯ ಪದ್ಧತಿಯಲ್ಲಿ ಗಿಡ ಮರಗಳು (ಮದ್ದಿಗೆ ಉಪಯೋಗಿಸುವ), ಸಸ್ಯಗಳು ಇವುಗಳನ್ನು ಪ್ರಕೃತಿಗೆ ಹಾನಿಯಾಗದಂತೆ ವೈದ್ಯರು ಬಳಸುತ್ತಾರೆ. ಹೀಗೆ ಅದ್ಭುತ ಮಾಹಿತಿಗಳನ್ನು ಒಳಗೊಂಡ ಲೇಖನ.
ಇಂದಿನ ವೈದ್ಯಕೀಯ ಪದ್ಧತಿಯಲ್ಲಿ ಮದ್ದು ನೀಡುವವರಿಗೆ ಸರ್ಟಿಫಿಕೇಟ್ಗಳು ಇವೆ. ಆದರೆ ಹಳ್ಳಿ ಮದ್ದಿಗೆ ಯಾವುದೇ ಸರ್ಟಿಫಿಕೇಟ್ಗಳ ಆಧಾರ ಇಲ್ಲ. ಇದು ಪಂಡಿತರ ಜ್ಞಾನಕ್ಕೆ ಸಂಬಂಧಪಟ್ಟದ್ದು. ವಂಶದಿಂದ ವಂಶಕ್ಕೆ ಹೇಳಿಕೊಟ್ಟು, ನೋಡಿಯೇ ಮುಂದುವರೆಯುತ್ತದೆ. ಯಾವುದೇ ಆಧಾರವಿಲ್ಲದ ಕಾರಣ ಇಂದಿನ ಪೀಳಿಗೆ ಇದನ್ನು ಅನುಮಾನದ ದೃಷ್ಟಿಯಲ್ಲಿ ನೋಡುತ್ತದೆ. ಇವತ್ತಿನ ಆಧುನಿಕ ಯುಗದಲ್ಲಿ ಮನೆ ಮದ್ದಿಗೆ ಸವಾಲುಗಳು ಹೆಚ್ಚು. ಮದ್ದಿನ ಸೊಪ್ಪು, ಗಿಡ ಮರಗಳನ್ನು ಗುರುತಿಸುವುದೇ ಒಂದು ಸವಾಲು ಎನ್ನುತ್ತಾರೆ ಲೇಖಕಿ.
ಆಯುರ್ವೇದ ಅಥವಾ ಹಳ್ಳಿ ಮದ್ದಿನ ಚಿಕಿತ್ಸಾ ಪದ್ಧತಿಯನ್ನು ಉಳಿಸಿ ಪೀಳಿಗೆಯಿಂದ ಪೀಳಿಗೆಗೆ ಆ ವಿದ್ಯೆಯನ್ನು ಹಸ್ತಾಂತರಿಸುವ, ಬೆಳೆಸುವ ಜವಾಬ್ದಾರಿಯನ್ನು ಪ್ರತಿಯೊಬ್ಬರೂ ಅರಿತು ನಿಭಾಯಿಸಬೇಕು ಅನ್ನುವುದು ಲೇಖಕಿಯ ಅಭಿಪ್ರಾಯ. ಹೌದು ಮನೆಮದ್ದುಗಳ ಮಹತ್ವ ತಿಳಿಯದೆ ಈ ಜ್ಞಾನವನ್ನು ಮೂಲೆಗುಂಪು ಮಾಡಿದರೆ ಈ ವೈದ್ಯ ಪದ್ಧತಿಯೇ ಸರ್ವ ನಾಶವಾಗುವುದು. ಹಾಗೆ ಆಗದಂತೆ ಎಚ್ಚರಿಕೆ ವಹಿಸುವುದು ಕೂಡಾ ನಮ್ಮೆಲ್ಲರ ಕರ್ತವ್ಯ.
ತುಳುನಾಡ ಜನರ ಇನ್ನೊಂದು ವೈಶಿಷ್ಟ್ಯವೆಂದರೆ ಪ್ರಕೃತಿಯನ್ನು ಪ್ರೀತಿಸುವುದು. ಇದರ ಪ್ರತೀಕವೇ ಮನೆ ಕಟ್ಟುವಾಗ ಬಳಸಲ್ಪಡುತ್ತಿದ್ದ ಮಣ್ಣಿನ ಗೋಡೆಗಳು. ಮಣ್ಣನ್ನು ಕಲಸಿ ನೆನೆಸಿ ಅದರಿಂದಲೇ ಮನೆಯ ಗೋಡೆಗಳನ್ನು ಕಟ್ಟುತ್ತಿದ್ದರು. ಇಂತಹ ಮಣ್ಣಿನ ಗೋಡೆಯ ಮನೆಗಳು ಕಾಲ ಬದಲಾದಂತೆ ಕಣ್ಮರೆಯಾಗುತ್ತಾ ಬಂದಿದೆ. ಎಲ್ಲಾ ಕಡೆ ಇವತ್ತು ಸಿಮೆಂಟ್ ನ ಕಟ್ಟಡಗಳೇ ಕಾಣ ಸಿಗುತ್ತಿವೆ. ಮೊದಲೆಲ್ಲಾ ಜನ ಬಡವರಿದ್ದರು. ಹಾಗಾಗಿ ಕಲ್ಲು ಮಣ್ಣಿನಿಂದಲೇ ಮನೆಗಳನ್ನು ಕಟ್ಟುತ್ತಿದ್ದರು ಹಾಗೂ ಮಾಡಿಗೆ ಮುಳಿ, ಸೋಗೆಗಳನ್ನು ಬಳಸುತ್ತಿದ್ದರು. ಕ್ರಮೇಣ ಹಂಚಿನ ಮಾಡು ಬಂತು. ಇವತ್ತು ಎಲ್ಲೆಲ್ಲೂ ಸಿಮೆಂಟಿನ ತಾರಸಿ ಮನೆಗಳದ್ದೇ ಸಾಮ್ರಾಜ್ಯ. ದೈವಗಳಿಗೆ ಸ್ಥಾನ, ದನ ಕರುಗಳಿಗಾಗಿ ಹಟ್ಟಿ ಅಥವಾ ಕೊಟ್ಟಿಗೆ ಹೀಗೆ ಮನೆಯ ಆಸುಪಾಸಿನಲ್ಲೇ ನೆಲೆ ಕಲ್ಪಿಸಿ ಆರಾಧಿಸುವುದು ತುಳುನಾಡಿನ ಸಂಸ್ಕೃತಿಗಳಲ್ಲಿ ಒಂದು. ಇಲ್ಲಿನ ಹೆಚ್ಚಿನ ಮನೆಗಳಲ್ಲಿ ದನ ಕರುಗಳು ಇರುತ್ತಿದ್ದವು. ಇವತ್ತು ಮಾತ್ರ ಮನುಷ್ಯನ ರಾಕ್ಷಸ ಗುಣದಿಂದಾಗಿ ಅವುಗಳ ಸಂಖ್ಯೆಯೂ ಕಡಿಮೆಯಾಗುತ್ತಾ ಬಂದಿದೆ. ಅನುಕೂಲ ಹೆಚ್ಚಾದಂತೆ ಸೋಮಾರಿತನ ಮನುಷ್ಯನನ್ನು ಆವರಿಸಿಕೊಳ್ಳತೊಡಗಿದೆ. ಹಾಗಾಗಿ ಕಷ್ಟಪಡಲು ಯಾರೂ ತಯಾರಿಲ್ಲ. ನಮ್ಮಲ್ಲಿ ಬಡವ ಶ್ರೀಮಂತನೆಂಬ ಭೇದ ಭಾವ ತುಂಬಾ ಇತ್ತು ಅನ್ನುವ ವಿಚಾರವನ್ನು ಲೇಖಕರು ಬಹಳ ನೋವಿನಿಂದ ಹೇಳಿಕೊಳ್ಳುತ್ತಾರೆ.
ಮನೆ ಎಂದರೆ ಬರೀ ಕಟ್ಟಡವಲ್ಲ. ಮನೆಯಲ್ಲಿ ನೆಲೆಸುವ ಮಂದಿಯಿಂದ ಅದಕ್ಕೂ ಜೀವಂತಿಕೆ ಬರುತ್ತದೆ. ಹಾಗಾಗಿಯೇ ಹಿರಿಯರ ಕಾಲದ ಮನೆಗಳೆಂದರೆ ವಿಶೇಷ ಗೌರವ. ಅದನ್ನು ಕಾಪಾಡಿಕೊಳ್ಳುವ ಹಂಬಲ, ಮನಸ್ಸು ಇತ್ತೀಚೆಗಿನ ಪೀಳಿಗೆಯವರಲ್ಲಿ ಹೆಚ್ಚಾಗಿ ಕಂಡು ಬರುತ್ತಿರುವುದು ಉತ್ತಮ ಬೆಳವಣಿಗೆ. ಮನೆ ಕಟ್ಟುವಾಗಲು ಹಲವಾರು ಕ್ರಮ, ಪದ್ಧತಿಗಳಿವೆ. ಎಲ್ಲವನ್ನು ರಾಜಶ್ರೀಯವರು ಸೊಗಸಾಗಿ ಅಧ್ಯಯನ ಮಾಡಿ ಬಹುಷಃ ಬಲ್ಲವರನ್ನು ಹುಡುಕಿ ಅವರಿಂದ ಅರಿತು ನಮ್ಮ ಮುಂದೆ ತೆರೆದಿಟ್ಟಿರುವ ಪರಿ ಅದ್ಭುತವಾಗಿದೆ. ತುಳುನಾಡಿನಲ್ಲಿ ಮನೆಗೊಂದು ಬಾವಿ ಇದ್ದೇ ಇದೆ. ಈ ಬಾವಿ ತೋಡುವ ಹಿಂದೆಯೂ ಹಲವಾರು ಆಚಾರ ವಿಚಾರಗಳು, ಸಂಪ್ರದಾಯ ಇದೆ. ಹುಟ್ಟಿನಿಂದ ಸಾವಿನವರೆಗೂ ಹೇಗೆ ಬಾವಿಯ ನಂಟು ಮನುಷ್ಯನೊಂದಿಗೆ ಬೆಸೆದಿದೆ ಅನ್ನುವುದನ್ನೂ ವಿವರವಾಗಿ ನಾವು ಇಲ್ಲಿ ಕಾಣಬಹುದು.
ಕೊನೆಯಲ್ಲಿ ಮನೆಯ ಮಹತ್ವವನ್ನು ಬಹಳ ಚೆನ್ನಾಗಿ ಹೇಳಿದ್ದಾರೆ ಲೇಖಕಿ. ಮನೆ ಎಂದರೆ ಅದು ಬರೀ ಕಲ್ಲು ಮಣ್ಣಿನ ಕಟ್ಟಡವಲ್ಲ. ಮನುಷ್ಯ ತನ್ನ ಇಡೀ ಬದುಕನ್ನು ಅಲ್ಲಿ ನೆಮ್ಮದಿಯಿಂದ ಕಳೆಯಬೇಕಾದ ತಾಣ, ದೇವಾಲಯಕ್ಕೆ ಸಮಾನ. ಮನೆಗಳು ನಮ್ಮ ದೊಡ್ಡಸ್ತಿಕೆಯ ಪ್ರದರ್ಶನದ ಪ್ರತೀಕವಾಗದೆ ಶಾಂತಿ ನೆಮ್ಮದಿಯಿಂದ ಅದರಲ್ಲಿ ಬದುಕುವಂತಹ ವಾತಾವರಣ ಹೊಂದಿರುವಂತಿರಬೇಕು ಅನ್ನುವುದನ್ನು ಸೊಗಸಾಗಿ ವಿವರಿಸಿದ್ದಾರೆ ಲೇಖಕಿ. ಒಟ್ಟು 50 ಸುಂದರ ಬರಹಗಳನ್ನೊಳಗೊಂಡ ಕೃತಿ “ರಡ್ಡ್ ಕವುಲೆ”. ಓದಿ ಮುಗಿಸುವ ಹೊತ್ತಿಗೆ ಹಲವಾರು ವಿಚಾರಗಳನ್ನು ತಿಳಿದುಕೊಂಡ ನೆಮ್ಮದಿ ಮನಸ್ಸಿಗೆ. ನಮ್ಮ ತುಳುನಾಡಿನ ಸಂಸ್ಕೃತಿ, ಆಚಾರ ವಿಚಾರಗಳ ಪ್ರತಿ ಲೇಖಕಿಗೆ ಇರುವ ಆಸಕ್ತಿ, ತುಡಿತವನ್ನು ತೆರೆದಿಡುತ್ತದೆ ಈ ಕೃತಿ. ವಿಷಯ ಸಂಗ್ರಹಕ್ಕೆ ಪಟ್ಟ ಪರಿಶ್ರಮ ಎದ್ದು ಕಾಣುತ್ತದೆ ಇಲ್ಲಿ.
ರಾಜಶ್ರೀ. ಟಿ. ರೈ ಯವರು ನನ್ನ ಪಾಲಿಗೆ ಒಂದು ಅಚ್ಚರಿ. ಸಿಕ್ಕಾಗ ಎಲ್ಲರೊಡನೆ ಬೆರೆಯುವ ಇವರು ತಾನು ಸಾಹಿತಿ ಅನ್ನುವ ಚಿಕ್ಕ ಸುಳಿವನ್ನೂ ಕೂಡಾ ಬಿಟ್ಟು ಕೊಡುವುದಿಲ್ಲ. ಇವರು ಬರೆದ ಕೃತಿಗಳು ಒಂದೆರಡಲ್ಲ. 4-5 ಕಾದಂಬರಿಗಳು, ಕಥಾ ಸಂಕಲನಗಳು, ಕವನ ಸಂಕಲನ, ಅಧ್ಯಯನ ಕೃತಿ, ಸಂಶೋಧನಾ ಗ್ರಂಥ ಹಾಗೂ ಈ ಅಂಕಣ ಬರಹಗಳ ಸಂಗ್ರಹ. ಇವರ ಇತ್ತೀಚೆಗೆ ಬಿಡುಗಡೆಯಾದ ಇನ್ನೊಂದು ಹೊಸ ತುಳು ಕಾದಂಬರಿ “ಮೊಸ್ರಾಲೋ ಪಟ್ಟೋ”. ಹಾಗೆಯೇ ಸುಮ್ಮನೆ ಕಣ್ಣಾಡಿಸಿದಾಗ ಈ ಕಾದಂಬರಿ ದೈವರಾದನೆಯ ವಿಷಯವನ್ನು ಒಳಗೊಂಡಿದೆ ಹಾಗೂ ಕುತೂಹಲಕಾರಿಯಾಗಿದೆ ಅನ್ನುವುದು ಅರ್ಥವಾಯಿತು. ನಾನು ಅರಿತಿರುವ ಬೆರಳೆಣಿಕೆಯಷ್ಟು ಮಂದಿ ತುಳು ಸಾಹಿತಿಗಳ ಸಾಲಿಗೆ ಈಗ ರಾಜಶ್ರೀ ಅವರು ಸೇರ್ಪಡೆ. ಇವರ ಬರಹಗಳಲ್ಲಿ ಸ್ಪಷ್ಟತೆ ಹಾಗೂ ಸೆಳೆತ ಇದೆ, ಮನಸ್ಸನ್ನು ಆವರಿಸುವ ಗಟ್ಟಿತನ ಇದೆ. ತುಳು ಭಾಷೆ ಹಾಗೂ ಸಂಸ್ಕೃತಿಯೇ ಹಾಗೆ ವಿಶೇಷವಾದದ್ದು. ಒಂದು ಒಳ್ಳೆಯ ಓದನ್ನು ಕೊಟ್ಟ ರಾಜಶ್ರೀ ಟಿ. ರೈ ಯವರಿಗೆ ಧನ್ಯವಾದಗಳು. ಇನ್ನಷ್ಟು ಕೃತಿಗಳು ಇವರಿಂದ ಮೂಡಿ ಬರಲಿ ಎನ್ನುವ ಹಾರೈಕೆಗಳೊಂದಿಗೆ.
ನಯನ ಬಜಕೂಡ್ಲು.