ಕರಾವಳಿಯ ಬಹುತೇಕ ದೈವಜ್ಞರು, ಜ್ಯೋತಿಷಿಗಳಿಗೆ ಗುರುಗಳಾಗಿ ಪ್ರಸಿದ್ಧರಾಗಿರುವ ಕೇರಳ ಕೈಮುಕ್ಕು ನಾರಾಯಣನ್ ನಂಬೂದರಿ ಅವರು ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿ, ದೇಗುಲದ ಜೀರ್ಣೋದ್ಧಾರ ಕಾಮಗಾರಿಯನ್ನು ವೀಕ್ಷಿಸಿದರು.
ಈ ಸಂದರ್ಭ ಮಾತನಾಡಿದ ಅವರು, ಕಾಪು ಶ್ರೀ ಮಾರಿಯಮ್ಮ ದೇವಿಯ ಸನ್ನಿಧಾನವು ಅತ್ಯಂತ ಜಾಗೃತ ಸಾನಿಧ್ಯವಾಗಿದ್ದು ಕ್ಷೇತ್ರ ವೈಭವೋಪೇತವಾಗಿ ಬೆಳಗುತ್ತಿದೆ. ಪ್ರಪಂಚದಾದ್ಯಂತ ನೆಲೆಸಿರುವ ಭಕ್ತರಿಗೆ ರಕ್ಷಣಾಪುರ ಕಾಪುವಿನಲ್ಲಿ ನೆಲೆಸಿರುವ ಮಾರಿಯಮ್ಮ ರಕ್ಷೆಯಾಗಿದ್ದಾಳೆ ಎಂದು ಹೇಳಿದರು. ಕಾಪು ಮಾರಿಗುಡಿ ಅತ್ಯುತ್ತಮ ರೀತಿಯಲ್ಲಿ ಜೀರ್ಣೋದ್ಧಾರಗೊಳ್ಳುತ್ತಿದೆ. ಕೆಂಪು ಇಳಕಲ್ ಶಿಲೆಯೊಂದಿಗೆ ನಿರ್ಮಾಣಗೊಳ್ಳುತ್ತಿರುವ ದೇವಸ್ಥಾನವು ದೇಶ ವಿದೇಶಗಳ ಭಕ್ತರನ್ನು ತನ್ನತ್ತ ಸೆಳೆಯುತ್ತಿದ್ದು ಕೊಲ್ಲೂರು ಮೂಕಾಂಬಿಕಾ ಕ್ಷೇತ್ರ, ಉಡುಪಿ ಕ್ಷೇತ್ರ ವನ್ನು ಸಂದರ್ಶಿಸುವ ಭಕ್ತರು ಕಾಪು ಮಾರಿಯಮ್ಮನ ಸನ್ನಿದಿಗೂ ಭೇಟಿ ನೀಡುವ ಪುಣ್ಯಕಾಲ ನಮ್ಮ ಮುಂದಿದೆ ಎಂದರು.
ಕಾಪು ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ಕ್ಷೇತ್ರದ ಪ್ರಧಾನ ತಂತ್ರಿ ವಿದ್ವಾನ್ ಕೆ. ಪಿ. ಕುಮಾರಗುರು ತಂತ್ರಿ ಜೀರ್ಣೋದ್ಧಾರ ಕಾಮಗಾರಿ ನಡೆದು ಬಂದ ದಾರಿಯ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭ ಅಭಿವೃದ್ಧಿ ಸಮಿತಿಯ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯಾ, ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ, ಅಭಿವೃದ್ಧಿ ಸಮಿತಿಯ ಗೌರವ ಸಲಹೆಗಾರ ಮತ್ತು ಸ್ವರ್ಣ ಗದ್ದುಗೆ ಸಮರ್ಪಣಾ ಸಮಿತಿಯ ಕಾರ್ಯಾಧ್ಯಕ್ಷ ರತ್ನಾಕರ ಶೆಟ್ಟಿ ನಡಿಕೆರೆ, ಉಪಾಧ್ಯಕ್ಷ ಮಾಧವ ಆರ್. ಪಾಲನ್, ಪ್ರಚಾರ ಸಮಿತಿಯ ಪ್ರಧಾನ ಸಂಚಾಲಕ ಯೋಗೀಶ್ ವಿ. ಶೆಟ್ಟಿ ಬಾಲಾಜಿ, ಪ್ರಚಾರ ಸಮಿತಿಯ ಸಂಚಾಲಕ ಮತ್ತು ಸ್ವರ್ಣ ಗದ್ದುಗೆ ಸಮರ್ಪಣಾ ಸಮಿತಿಯ ಕಚೇರಿ ನಿರ್ವಾಹಕ ಜಯರಾಮ್ ಆಚಾರ್ಯ, ಆರ್ಥಿಕ ಸಮಿತಿಯ ಶೈಲಪುತ್ರಿ ತಂಡದ ಸಂಚಾಲಕ ರಾಧಾರಮಣ ಶಾಸ್ತ್ರೀ, ಪ್ರಬಂಧಕ ಗೋವರ್ಧನ್ ಸೇರಿಗಾರ್ ಮತ್ತು ಸಿಬ್ಬಂದಿ ಲಕ್ಷ್ಮಣ್ ಶೆಟ್ಟಿ ಮಂಡೇಡಿ ಉಪಸ್ಥಿತರಿದ್ದರು.