ವಿದ್ಯಾಗಿರಿ: ‘ಮನಸ್ಸಿನೊಳಗೆ ಮಗುತನ ಇದ್ದರೆ ಮಾತ್ರ ದೊಡ್ಡ ಮನುಷ್ಯನಾಗಲು ಸಾಧ್ಯ. ನಾವೆಲ್ಲ ಮನುಷ್ಯರಾಗೋಣ. ಮನುಷ್ಯತ್ವದ ಮಹಲು ಕಟ್ಟುತ್ತಿರುವ ಮೋಹನ ಆಳ್ವರ ಜೊತೆಯಾಗೋಣ’ ಎಂದು ನಟ, ರಂಗಕರ್ಮಿ ಅರುಣ್ ಸಾಗರ್ ಹೇಳಿದರು. ವಿದ್ಯಾಗಿರಿಯ ಮುಂಡ್ರೆದಗುತ್ತು ಕೆ. ಅಮರನಾಥ ಶೆಟ್ಟಿ (ಕೃಷಿ ಸಿರಿ) ವೇದಿಕೆಯಲ್ಲಿ ಮಂಗಳವಾರ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ‘ಆಳ್ವಾಸ್ ಸಂಪ್ರದಾಯ ದಿನ- 2024′ ವನ್ನು ಉದ್ಘಾಟಿಸಿ ಅವರು ಮಾತನಾಡಿದರು ತಮ್ಮ ಕಂಚಿನ ಕಂಠದಲ್ಲಿ ‘ವಿದ್ಯಾ ಬುದ್ಧಿ ಕಲಿಸಿದ ಗುರುವೇ ಕೊಡು ನಮಗೆ ಮತಿಯ..’ ಸಾಲುಗಳನ್ನು ಹಾಡುತ್ತಲೇ ತಮ್ಮ ಮಾತಿಗೆ ಚಾಲನೆ ನೀಡಿದ ಅವರು, ‘ಆಳ್ವಾಸ್ನಲ್ಲೇ ಒಂದು ನಾಡು, ಒಂದು ದೇಶ ಇದೆ. ದೇಶದ ಬೇರೆಡೆ ಇಲ್ಲದ ಗುರುಕುಲ ಆಳ್ವಾಸ್’ ಎಂದು ಬಣ್ಣಿಸಿದರು. ಆಳ್ವಾಸ್ ವಿದ್ಯಾರ್ಥಿ ಶಿಲ್ಪಗಳನ್ನು ಕೆತ್ತುವ ತಾಣವಾಗಿದೆ. ಇಲ್ಲಿ ಆಳ್ವರು ಮನುಷ್ಯತ್ವ ತುಂಬುವ ಕೆಲಸ ಮಾಡುತ್ತಿದ್ದಾರೆ.
ಹೀಗಾಗಿ ಇದು ಊರು ಚಿಕ್ಕದಾದರು ದೊಡ್ಡ ಮನಸ್ಸಿನ ಪ್ರಪಂಚ. ಸಾಹಿತ್ಯ, ಕಲೆ, ಕ್ರೀಡೆ, ಶಿಕ್ಷಣಗಳಿಗೆ ಪ್ರೋತ್ಸಹಿಸುವ ಆಳ್ವರು ಹಿರೋಗಿಂತ ದೊಡ್ಡ ಹೀರೋ ಎಂದರು. ರಾಷ್ಟ್ರಕವಿ ಕುವೆಂಪು ಹೇಳಿದಂತೆ ‘ಮನುಷ್ಯ ತಾನೊಂದು ಕುಲಂ’ ಎಂಬ ಸಾರ್ಥಕತೆ ನಮ್ಮಲ್ಲಿ ಮೂಡಬೇಕು. ಬಸವಣ್ಣನವರು ಹೇಳಿದಂತೆ ‘ಇವನಾರವ ಇವನಾರವನೆಂದೆನಿಸದಿರಯ್ಯಾ..’ ಎಂದು ಬಾಳಬೇಕು ಎಂದರು. ಆಳ್ವರ ಸಮಯ ಪ್ರಜ್ಞೆ ಬಗ್ಗೆ ಗೌರವವಿದೆ. ಅವರದ್ದು ಅನುಭವ ಅನುಭಾವವಾಗಿಸಿದ ವ್ಯಕ್ತಿತ್ವ. ಕಲಿಕೆ, ಕನಸು, ನನಸು ಅವರ ಹಾದಿ. ನಾವೆಲ್ಲ ಒಳ್ಳೆ ಮನುಷ್ಯರಾಗಲು ಕಲಿಯೋಣ ಎಂದರು. ಆಳ್ವರು ಸಾಮ್ರಾಜ್ಯ ಸ್ಥಾಪಿಸುವ ಬದಲಾಗಿ, ಹೃದಯ ಆಳಿದರು. ಅವರದ್ದು, ಹೃದಯದ ರಿಯಲ್ ಎಸ್ಟೇಟ್ ಎಂದು ಬಣ್ಣಿಸಿದರು. ಮಗುವಿಗೆ ಜ್ಞಾನ ನೀಡಿ ಹೃದಯ ಭಾವನೆ ಅರಳಿಸುವುದು ಶಿಕ್ಷಣ. ಒಳ್ಳೆಯವರಾಗಿ ಬದುಕುವುದೇ ಸಂಸ್ಕøತಿ. ಜೀವನದಲ್ಲಿ ಪಾಸು ಫೇಲ್ ಇಲ್ಲ, ಪ್ರತಿ ಕ್ಷಣವೂ ಪರೀಕ್ಷೆ ಎಂದರು. ನಿಮ್ಮ ಊರಿಗೆ ನೀವು ಆಳ್ವರಾಗಿ. ದಾರಿ ತಪ್ಪಿಸಿ ಆಳುವ ಮಂದಿಯ ಅನುಯಾಯಿ ಆಗಬೇಡಿ. ನಿಮ್ಮನ್ನು ನೀವು ಆಳುವವರಾಗಿ ಎಂದರು.
ನಿರ್ದೇಶಕ ಇಂದ್ರಜಿತ್ ಲಂಕೇಶ್ ಮಾತನಾಡಿ, ‘ಇಲ್ಲಿ ನಡೆಯುವ ಪ್ರತಿ ಕಾರ್ಯವೂ ಅನನ್ಯ. ನಾನು 8 ವರ್ಷಗಳ ಹಿಂದೆ ಆಳ್ವಾಸ್ಗೆ ಬಂದಿದ್ದೇನೆ. ಈಗ ಬೃಹತ್ ಆಗಿ ಬೆಳೆದು ನಿಂತಿದೆ. ದೇಶದ ವಿದ್ಯಾರ್ಥಿಗಳನ್ನು ತನ್ನತ್ತ ಸೆಳೆಯುತ್ತಿದೆ’ ಎಂದರು. ರೇಸರ್ ಅರವಿಂದ ಕೆ.ಪಿ., ನಟಿ ಚೈತ್ರಾ ಶೆಟ್ಟಿ, ನಟಿ ವಿಜೇತಾ ಪೂಜಾರಿ, ನಟ ಮೈಮ್ ರಾಮದಾಸ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ, ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಇದ್ದರು. ಮಹಾರಾಷ್ಟ್ರ- ಗುಜರಾತ್, ಈಶಾನ್ಯ ಭಾರತ, ಕೇರಳ, ಕರಾವಳಿ ಕರ್ನಾಟಕ, ಇತರೆ ಭಾರತ ಸೇರಿದಂತೆ ಆರು ತಂಡಗಳು ತಮ್ಮ ತವರೂರಿನ ಕಲಾ ಪ್ರಕಾರವನ್ನು ಪ್ರದರ್ಶಿಸಿದರು. ಪಿಲಿ ನಲಿಕೆ, ನಿಹಾಲ್ ತಾವ್ರೋರಿಂದ ಹಾಡುಗಳ ಕಾರ್ಯಕ್ರಮ, ಬೀದಿ ಪ್ರದರ್ಶನ, ಫೈರ್ಡ್ಯಾ ನ್ಸ್, ಕನ್ನಡ ಕಾಮೆಡಿ, ಬೀಟ್ ಗುರು ತಂಡದ ಕಾರ್ಯಕ್ರಮ, ಆಹಾರ ಮೇಳ, ಕಲಾ ಪ್ರದರ್ಶನಗಳಿಂದ ಕಾರ್ಯಕ್ರಮ ಕಂಗೊಳಿಸಿತು. ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು. ಇಂದ್ರಜಿತ್ ಲಂಕೇಶ್ ನಿರ್ದೇಶನದ ‘ಗೌರಿ’ ಸಿನಿಮಾದ ಪರಿಚಯ ಕಾರ್ಯಕ್ರಮ ನಡೆಯಿತು. ನಾಯಕ ನಟ ಸಮರ್ಜಿತ್ ಲಂಕೇಶ್ ಹಾಗೂ ನಾಯಕಿ ಸಾನಿಯಾ ಅಯ್ಯರ್, ನಟಿ ಮಾನಸಿ ಸುಧೀರ್, ಸೃಜನಾ ಇದ್ದರು. ಗಾಯಕ ನಿಹಾಲ್ ತಾವ್ರೋ ಹಾಡಿ ರಂಜಿಸಿದರು. ಸಭಾ ಕಾರ್ಯಕ್ರಮವನ್ನು ನಿತೇಶ್ ಮಾರ್ನಾಡ್ ನಂತರದ ಸಾಂಸ್ಕøತಿಕ ಕಾರ್ಯಕ್ರಮವನ್ನು ಅವಿನಾಶ್ ಕಟೀಲ್ ನಿರೂಪಿಸಿದರು.