ಮುಂಗಾರು ಪೂರ್ವ ಮಳೆ ಕೈ ಕೊಟ್ಟರೂ ಮುಂಗಾರು ಶುಭಾರಂಭಗೊಂಡಿದೆ. ಮಳೆಗಾಲವೆಂದರೆ ಇಳೆ ತಂಪಾಗಿ ಜೀವ ಜಲ ಸಮೃದ್ದವಾಗುವ ಕಾಲ. ಗುಡುಗು ಸಿಡಿಲುಗಳ ಆರ್ಭಟದ ಜೊತೆಗೆ ನೆರೆಯ ಭೀತಿಯೂ ಮಳೆಗಾಲದಿಂದ ಹೊರತಾಗಿಲ್ಲ. ಮುಖ್ಯವಾಗಿ ಮಳೆಗಾಲದಲ್ಲಿ ಎಚ್ಚರಿಕೆಯಲ್ಲಿರಬೇಕಾದವರು ವಾಹನ ಸವಾರರು. ಅದರಲ್ಲಿಯೂ ಬೈಕ್ ಸವಾರರು. ನಿಮ್ಮ ಮನೆಯಲ್ಲಿ ಬೈಕ್ ಕ್ರೇಝ್ ಇರುವ ಮಕ್ಕಳಿದ್ದರೆ ಅವರನ್ನ ಕರೆದು ಇಂದೇ ತಿಳಿಹೇಳಿರಿ, ಮಳೆಗಾಲದಲ್ಲಿ ರಸ್ತೆ ಜಾರುತ್ತಿರುತ್ತದೆ. ವಾಹನಗಳ ಓಡಾಟದಿಂದಾಗಿ ಲೀಕೇಜ್ ಆಗುವ ಪ್ಯೂಯಲ್, ವಾಹನಗಳು ಹೊರಬಿಡುವ ಹೊಗೆಯ ಕಾರಣಕ್ಕೆ ಎಣ್ಣೆಯಂತೆ ಜಾರುವ ಅಂಶಗಳು ರಸ್ತೆಯಲ್ಲಿರುತ್ತವೆ. ಹಾಗಾಗಿ ಮಳೆಗಾಲದಲ್ಲಿ ಬೈಕ್ ಸ್ಕಿಡ್ ಆಗಿ ಅಪಘಾತಗಳಾಗುವ ಸಂಭವ ಅತೀ ಹೆಚ್ಚು. ವಾಹನಗಳ ಬ್ರೇಕ್ ನಿರೀಕ್ಷೆಯಂತೆ ಕೆಲಸ ಮಾಡುವುದಿಲ್ಲ! ಕೆಲವು ರಸ್ತೆಗಳು ಹೊಂಡಗಳಿಂದ ಕೂಡಿರುತ್ತವೆ ಎಲ್ಲೆಲ್ಲಿ ಹೊಂಡಗಳಿವೆ, ಮ್ಯಾನ್ ಹೋಲುಗಳಿವೆ? ಚರಂಡಿ ಓಪನ್ ಆಗಿದೆ ಎನ್ನುವುದನ್ನ ಊಹಿಸುವುದೂ ಸಾಧ್ಯವಿಲ್ಲ. ಹಾಗಾಗಿ ಎಚ್ಚರಿಕೆಯ ಕಣ್ಣೊಂದು ಆ ಕಡೆಗಿದ್ದರೆ ಉತ್ತಮ.
ಸರ್ಕಸ್ ಮಾಡಲೇ ಬೇಡಿ : ಕೆಲವು ಸವಾರರಿಗೆ ಒಂದು ಛೇಷ್ಠೆ ಇದ್ದೇ ಇರುತ್ತದೆ. ರಸ್ತೆಯ ಮಗ್ಗುಲಲ್ಲಿ ನೀರು ಹೆಚ್ಚಿಗೆ ಇದ್ದಲ್ಲಿ ಅದರ ಮೇಲೇ ವಾಹನವನ್ನ ವೇಗವಾಗಿ ಚಲಾಯಿಸುವುದು! ಇದು ಖಂಡಿತಾ ತಪ್ಪು. ಹೆಚ್ಚಿನ ಸಲ ನಿಮ್ಮ ವಾಹನದ ಬ್ಯಾಲೆನ್ಸ್ ತಪ್ಪಿ ಕಾರುಗಳು ಪಲ್ಟಿಯಾಗಿ ದುರಂತ ಸಂಭವಿಸಿದ ಉದಾಹರಣೆಗಳಿವೆ. ಹಾಗಾಗಿ ಈ ಸರ್ಕಸ್ ಮಾಡೋಕೆ ಹೋಗಲೇ ಬೇಡಿ. ಮಳೆಗಾಲದಲ್ಲಿ ಬೈಕ್ ಚಲಾಯಿಸುವಾಗ ಹೆಲ್ಮೆಟ್ ಕಡ್ಡಾಯವಾಗಿ ಧರಿಸುವುದನ್ನ ಮರೆಯಲೇ ಬೇಡಿ. ಬೈಕಿನಲ್ಲಿ ಕೊಡೆ ಹಿಡಿದುಕೊಂಡೋ, ಹಿಂದಿನವರ ಬಳಿ ಕೊಡೆ ಹಿಡಿಯಲು ಹೇಳಿಯೋ ಬೈಕ್ ಚಾಲನೆ ಮಾಡಲೇ ಬೇಡಿ.! ಈ ಕಾರಣಕ್ಕಾಗಿಯೇ ಹಲವಾರು ಅಪಘಾತಗಳಾಗಿರುವುದನ್ನ ಮರೆಯಬೆಡಿ. ನಿಮ್ಮನ್ನ ಕಾಯುವವರು ಅಥವ ನಿಮ್ಮನ್ನೇ ಅವಲಂಬಿಸಿಕೊಂಡವರು ಮನೆಯಲ್ಲಿದ್ದಾರೆ ಎನ್ನುವುದ ಮರೆಯದಿರಿ.
ರೈನ್ ಕೋಟ್ ಆಯ್ಕೆ : ಮಳೆಗಾಲಕ್ಕೆ ಬೈಕ್ ಸವಾರರು ಮಳೆ ಅಂಗಿ ಖರೀಧಿಸುವಾಗ ಕೊಂಚ ಎಚ್ಚರಿಕೆ ಇರಲಿ. ಪ್ಯಾಂಟ್ ಹಾಗೆ ಧರಿಸುವ ರೈನ್ ಕೋಟ್ ಆದರೇ ಹೆಚ್ಚು ಉತ್ತಮ. ಕೆಲವೊಮ್ಮೆ ವೇಗವಾಗಿ ಹೋಗುವಾಗ ನಿಮ್ಮ ರೈನ್ ಕೋಟ್ ನಿಮ್ಮದೇ ಚಕ್ರಗಳಿಗೆ ಸಿಲುಕುವ ಅಪಾಯವಿದೆ. ಇನ್ನು ಕೆಲವರು ರೈನ್ ಕೋಟಿನ ಹ್ಯಾಟನ್ನೂ ಸೇರಿಸಿ ಹೆಲ್ಮೆಟ್ ಹಾಕಿಕೊಳ್ಳುವವರಿದ್ದಾರೆ! ಇದು ಎಷ್ಟು ಅಪಾಯಕಾರಿ ಎಂದರೆ ಕೆಲವೊಮ್ಮೆ ಗಾಳಿಗೆ ಅದು ಕಣ್ಣಿಗೆ ಅಡ್ಡಲಾಗಿ ಬಂದಾಗ ಅಪಾಯ ಕಟ್ಟಿಟ್ಟ ಬುತ್ತಿ!
ನಿಮ್ಮಂತೆಯೇ ಅವರೂ ಎನ್ನುವ ಎಚ್ಚರಿಕೆ ಇರಲಿ : ಮಳೆಗಾಲದಲ್ಲಿ ವಾಹನಗಳು ವೇಗವಾಗಿ ಚಲಾಯಿಸಿದಾಗ ರಸ್ತೆಯ ಇಕ್ಕೆಲದಲ್ಲಿ ಕೊಡೆ ಹಿಡಿದು ನಡೆದು ಹೋಗುವ ವಿಧ್ಯಾರ್ಥಿಗಳಿರುತ್ತಾರೆ, ಪಾದಾಚಾರಿಗಳಿರುತ್ತಾರೆ ಅವರ ಕುರಿತು ಕಾಳಜಿ ಇರಲಿ. ನಿಮ್ಮ ವೇಗದ ಮತ್ತು ಅನೀತಿಯುತ ಚಾಲನೆಯಿಂದ ಅವರ ಮೈಗೆ ಗಲೀಜು ನೀರು ಸಿಡಿಯುತ್ತದೆ! ಅದು ಎಷ್ಟು ಕಷ್ಟಕರವಲ್ಲವೇ? ಅವರ ಸ್ಥಾನದಲ್ಲಿ ನಿಮ್ಮನ್ನೇ ಊಹಿಸಿಕೊಂಡು ವಾಹನ ಚಲಾವಣೆ ನಡೆಸಿ.. ಮಳೆಗಾಲದಲ್ಲಿ ಮಕ್ಕಳನ್ನ ಬೈಕಿನಲ್ಲಿ ಕೂರಿಸಿಕೊಂಡಿದ್ದರೆ ಎಂದಿಗಿಂತಲೂ ಹೆಚ್ಚು ಎಚ್ಚರಿಕೆ ಅಗತ್ಯ. ನೀವು ರೈನ್ ಕೋಟ್ ಹಾಕಿಕೊಂಡಿದ್ದರೂ ಮಕ್ಕಳೂ ಕೊಡೆ ಬಿಡಿಸಿಕೊಂಡು ಕುಳಿತರೆ ಅಪಾಯ ಕಟ್ಟಿಟ್ಟ ಬುತ್ತಿ! “ಇದು ನಿಮ್ಮ ಅಭಿಮತ ಕಾಳಜಿ” ಈ ಮಾಹಿತಿಯನ್ನ ನಿಮ್ಮ ಗೆಳೆಯರಿಗೂ ರವಾನಿಸಿ, ಅಪಾಯ ಬರುವುದಕ್ಕೂ ಮೊದಲೇ ಎಚ್ಚೆತ್ತುಕೊಂಡರೆ ಉತ್ತಮವಲ್ಲವೆ?
ವಸಂತ್ ಶೆಟ್ಟಿ ಗಿಳಿಯಾರ್