ಪ್ರಪಂಚ ಎನ್ನುವ ಹೂಗಿಡದಿಂದ ನಾಳೆಗೆ ಅರಳುವ ಮೊಗ್ಗುಗಳನ್ನು ಮಾತ್ರ ತೋಟಗಾರರಂತೆ ಬಿಡಿಸಿಕೊಳ್ಳಬೇಕೆ ಹೊರತು, ಇದ್ದಿಲು ಮಾಡುವವನ ಹಾಗೆ ಬುಡಕ್ಕೆ ಪೆಟ್ಟು ಹಾಕಬಾರದು ಎಂದು ಉಪದೇಶ ಮಹಾಭಾರತ 21 ನೇ ಶತಮಾನದಲ್ಲಿ ಬದುಕುತ್ತಿರುವ ನಮಗೆ ಇದಕ್ಕಿಂತ ಪ್ರಸ್ತುತವಾದ ಉಪದೇಶ ಕಿವಿಮಾತು ಇನ್ನೊಂದು ಇರಲಿಕ್ಕೆ ಸಾಧ್ಯವಿಲ್ಲ. ಶಿಲಾಯುಗ, ಲೋಹಗಳ ಯುಗವನ್ನು ದಾಟಿ ಈಗ ಇಲೆಕ್ಟ್ರಾನಿಕ್ಸ್ ಯುಗದಲ್ಲಿದ್ದೇವೆ. ಕೈಗಾರಿಕಾ ಕ್ರಾಂತಿಯಿಂದ ಪಡೆದ ಲಾಭವನ್ನು ಈಗ ತೀವ್ರಗತಿಯಲ್ಲಿ ಪಡೆಯಲು ಕಾತರರಾಗಿದ್ದೇವೆ. ಇದರಿಂದಾಗಿ, ಆಧುನಿಕ ಮನುಷ್ಯನ ಆಸೆ, ದುರಾಸೆಯಾಗಿದೆ. ತಾನೂ ಒಂದು ಪ್ರಾಣಿ ಪ್ರಬೇಧ ಎಂಬುದನ್ನು ಮರೆತು ಉಳಿದ ಪ್ರಾಣಿ ವರ್ಗದ ಮೇಲೆ ಸಸ್ಯ ವರ್ಗದ ಮೇಲೆ, ಅಷ್ಟೇ ಸಾಲದು ಎಂಬಂತೆ ಗಾಳಿ, ನೀರು, ನೆಲ, ಆಕಾಶಗಳ ಮೇಲೂ ಪ್ರಭುತ್ವ ಹೊರಟಿದ್ದಾನೆ.
ಇಂದಿನ ಮಾನವನ ಆಕ್ರಮಣಕಾರಿ, ಅತಿಕ್ರಮಣಕಾರಿ, ಸ್ವಾರ್ಥ ಮನೋಭಾವ, ಪ್ರಕೃತಿಯ ಸಮತೋಲನವನ್ನು ಹಾಳುಮಾಡಿದೆ. ಕೃತಕ ಸರೋವರಗಳನ್ನು ನಿರ್ಮಿಸುವುದು, ವನ್ಯಮೃಗಗಳ ಆಹಾರ ವಿಹಾರ ವಸ್ತುಗಳಿಗೆ ಕೊಂದು, ಕಳ್ಳಸಾಗಣಿಕೆ ಮಾಡುವುದು, ನೈಸರ್ಗಿಕ ಕಾಡುಗಳನ್ನು ಹಾಳು ಮಾಡಿ ವನಗಳನ್ನು ಬೆಳೆಸುವುದು, ಭೂಗರ್ಭದಲ್ಲಿ, ಸಮುದ್ರ ತಳದಲ್ಲಿ, ಬಾಹ್ಯಾಕಾಶದಲ್ಲಿ ವೈಜ್ಞಾನಿಕ ಪ್ರಯೋಗಗಳನ್ನು ಮಾಡುವುದು, ಸಮುದ್ರ ಸಾಗರಗಳಲ್ಲಿ ಬಾರೀ ಗಾತ್ರದ ಹಡಗುಗಳನ್ನು ಚಲಿಸಿ ಎಣ್ಣೆಯಂತಹ ಕಲ್ಮಶಗಳನ್ನು ಸೋರಿಸುವುದು, ಯಾವುದೋ ರಾಜಕೀಯ ಕಾರಣಗಳಿಂದ ಎಣ್ಣೆ ಬಾವಿಗಳಿಗೆ ಬೆಂಕಿ ಹಾಕುವುದು, ಇದೇ ಮುಂತಾದ ಚಟುವಟಿಕೆಗಳಿಂದ ನಿಸರ್ಗದ ಸಮತೋಲನ ತಪ್ಪಿದೆ. ಪ್ರಸ್ತುತ ಪ್ರಪಂಚದ ಅರಣ್ಯನಾಶ ಸತತವಾಗಿ ಸಾಗಿದೆ. ವಿಶ್ವಸಂಸ್ಥೆಯ ವರದಿಯೊಂದರ ಪ್ರಕಾರ ಪ್ರತೀ ವರ್ಷ ಸರಿಸುಮಾರು 20 ಮಿಲಿಯನ್ ಅರಣ್ಯ ಕಡಿತಕ್ಕೊಳಗಾಗುತ್ತದೆ. ಭಾರತದಲ್ಲಿ ವರ್ಷಕ್ಕೆ 16 ಲಕ್ಷ ಹೆಕ್ಟೇರ್ ಅರಣ್ಯ ನಾಶವಾಗುತ್ತಿದೆ. ಅರಣ್ಯ ನಾಶದಲ್ಲಿ ಬ್ರೆಜಿಲ್ ಮೊದಲ ಸ್ಥಾನದಲ್ಲಿದ್ದರೆ ಭಾರತದ್ದು ಎರಡನೇ ಸ್ಥಾನ.1957 ರ ಅರಣ್ಯ ನೀತಿಯ ಪ್ರಕಾರ ನಮ್ಮ ದೇಶದ ಒಟ್ಟು ಭೂಭಾಗದ ಶೇಕಡಾ 33 ರಷ್ಟು ಅರಣ್ಯವಿರಬೇಕು. ಆದರೆ ನಮ್ಮ ದೇಶದಲ್ಲಿ ಶೇಕಡಾ 19 ರಷ್ಟಿದೆ. ಇದರಲ್ಲಿ ನಿಜಕ್ಕೂ ಅರಣ್ಯಚ್ಚಾದಿತ ಪ್ರದೇಶ 12ರಷ್ಟು ಮಾತ್ರ ಕೇವಲ 30-40 ವರ್ಷಗಳ ಹಿಂದೆ ನಮ್ಮ ಸುತ್ತಮುತ್ತ ಕಾಣಸಿಗುತ್ತಿದ್ದ ನೇರಳೆ, ಅತ್ತಿ, ಹೆಬ್ಬಲಸು, ರೆಂಬೆ, ಕಾಡುಮಾವು, ಇನ್ನೂ ಹತ್ತಾರು ಜಾತಿಯ ಮರಗಳು ಈಗ ಬಹುತೇಕ ಅದೃಶ್ಯವಾಗಿದೆ. ಭಾರತದಲ್ಲಿ 2020ರವರೆಗೆ ಪ್ರತಿ ವರ್ಷ ಒಂದರಿಂದ 5 ಲಕ್ಷ ಹೆಕ್ಟೇರ್ ಅರಣ್ಯವನ್ನು ಅರಣ್ಯೇತರ ಪ್ರದೇಶವನ್ನಾಗಿ ಪರಿವರ್ತಿಸಲಾಗಿದೆಯೆಂದು ಕೇಂದ್ರ ಸರಕಾರದ ಅಂಕಿ ಅಂಶಗಳು ಹೇಳುತ್ತವೆ.
ಒಂದು ವಾರ ನಾಶವಾದರೆ, ಒಂದು ಗಾಳಿಯ ಶೋಧಕ, ಒಂದು ಪುಟ್ಟ ನೀರಿನ ಕುಂಟೆ, ಔಷಧಿಗಳ ಕಪಾಟು ಇರುವ ಸಂಕೀರ್ಣವೊಂದು ನಾಶವಾದಂತೆ ಮರ ಆಮ್ಲಜನಕ ಆಗರವಾಗಿದ್ದರಿಂದ ಗಿಡ ಬೆಳೆಸುವುದರಿಂದ ನಮ್ಮ ಬದುಕಿನ ಗುಣಮಟ್ಟ ಹೆಚ್ಚುವುದು. ಪ್ರಕೃತಿ ಆರೋಗ್ಯವಾಗಿದ್ದರೆ ಮನುಷ್ಯರೊಳಗೊಂಡತೆ ಸಕಲ ಜೀವ ವೈವಿಧ್ಯಗಳೂ ಆರೋಗ್ಯವಾಗಿರುತ್ತದೆ. ಸಂಸ್ಕೃತಿಗೂ ಜೀವ ವೈವಿಧ್ಯಕ್ಕೂ ಅವಿನಾಭಾವ ನಂಟು. ಮನುಷ್ಯ ನಿರ್ವಿಘ್ನವಾಗಿ ಪರಿಸರದ ವಿದ್ಯಾಮಾನಗಳನ್ನು ಸಾಗಗೊಡುವುದರ ಮೂಲಕ ಅವುಗಳನ್ನು ಪುನರ್ ರೂಪಿಸಬೇಕಿದೆ. ಇದರಿಂದ ಪ್ರಕೃತಿ ಅಂತರ್ಜಾತ ಹಕ್ಕುಗಳ ಮರುಸ್ಥಾಪಿತವಾಗುವುದು. ನದಿಗಳು ಹರಿದು ಸಾಗರಗಳನ್ನು ಸೇರಲೇಬೇಕು. ಪರ್ವತಗಳ ಶಿಖರಗಳು ಹಿಮದಿಂದ ಆವರಿಸಲೇ ಬೇಕು. ಮೀನು, ತಿಮಿಂಗಿಲಗಳಾದಿಯಾಗಿ ಸಕಲ ಜಲಚರಗಳು ಸ್ವಚ್ಛ ಸಾಗರಗಳಲ್ಲಿ ಈಜಬೇಕು. ಪ್ರಕೃತಿಯನ್ನೇ ಒಂದು ಘನ ವ್ಯಕ್ತಿತ್ವವಾಗಿ ಪರಿಭಾವಿಸಿ ಅದಕ್ಕೆ ನ್ಯಾಯ ಒದಗಿಸುವುದು ಧ್ಯೇಯವಾಗಬೇಕಾಗಿದೆ. ಅರಣ್ಯ ನಾಶಗಳಿಂದ ಇಡೀ ಮನುಕುಲಕ್ಕೆ ನಾಶವನ್ನು ತಂದುಕೊಳ್ಳಲಾಗುತ್ತಿದೆ. ವಿಶ್ವದಲ್ಲಿ ಶೇಕಡಾ 33 ಜನರಿಗೆ ಇಂಧನವನ್ನೋ ದಗಿಸುತ್ತಿರವ ಏಕೈಕ ಆಸರೆಯೆಂದರೆ ಕಣ್ಮರೆಯಾಗುತ್ತಿರುವ ಅರಣ್ಯಗಳು, ಪ್ರಪಂಚದಲ್ಲಿ ಈಗಾಗಲೇ ಶೇಕಡ 50 ರಷ್ಟು ಅರಣ್ಯಗಳು ಕಣ್ಮರೆಯಾಗಿವೆ. ಅರಣ್ಯನಾಶ ಹವಾಮಾನ ವೈಪರೀತ್ಯಕ್ಕೆ ಪ್ರಮುಖ ಕಾರಣ, ನೂರು ವರ್ಷಗಳ ಕಾಲಾವಧಿಯ ಅಂತರದಲ್ಲಿ ವಾತಾವರಣದಲ್ಲಿ ಇಂಗಾಲದ ಡೈ ಆಕ್ಸೈಡ್ ಅನಿಲದ ಪ್ರಮಾಣವು ಹಿಂದೆ ಇದ್ದುದ್ದಕ್ಕಿಂತ ಶೇ.13 ರಷ್ಟು ಅಧಿಕಗೊಂಡಿರುವುದು.
ಸಮಸ್ತ ಜೀವಿಗಳ ಅಸ್ತಿತ್ವಕ್ಕೆ ಅರಣ್ಯಗಳೇ ಮೂಲ ಆಧಾರಗಳಾಗಿವೆ. ನಗರಗಳಲ್ಲಿ ಹೆಚ್ಚು ಜನರು ವಾಸಿಸುತ್ತಿದ್ದಾರೆ. ಕಡಿಮೆ ಸಂಖ್ಯೆಯ ಗಿಡಮರಗಳಿರುತ್ತವೆ. ಆಮ್ಲಜನಕ ಅನಿಲದ ಪೂರೈಕೆ ಕಡಿಮೆ. ಇಂಗಾಲದ ಡೈ ಆಕ್ಸೈಡ್ ಅನಿಲದ ಪೂರೈಕೆ ಹೆಚ್ಚು. ಗಗನಚುಂಬಿ ಕಟ್ಟಡಗಳು, ಹಗಲು ವೇಳೆಯಲ್ಲಿ ಸೂರ್ಯನ ಶಾಖವನ್ನು ಹಿರಿಕೊಂಡು ರಾತ್ರಿ ವೇಳೆಯಲ್ಲಿ ಬಿಡುತ್ತವೆ. ತತ್ ಪರಿಣಾಮವಾಗಿ ಆಹ್ಲಾದಕರ ಹವಾಮಾನವಿರುವುದಿಲ್ಲ. ವಾಹನಗಳು ಹಾಗೂ ಕೈಗಾರಿಕೆಗಳು ಹೊಗೆಯನ್ನು ಉಗುಳುತ್ತಿರುತ್ತವೆ. ಅದರಲ್ಲಿ ಆರೋಗ್ಯಕ್ಕೆ ಹಾನಿಕರವಾದ ಇಂಗಾಲದ ಕಣಗಳು, ಇಂಗಾಲದ ಡೈ ಆಕ್ಸೈಡ್, ಇಂಗಾಲದ ಮೊನೋಕ್ಸೈಡ್ ಮತ್ತು ಇತರ ವಿಷಕಾರಿ ಅನಿಲಗಳು ಇರುತ್ತವೆ. ವಿವಿಧ ರಾಸಾಯನಿಕ ಪದಾರ್ಥಗಳನ್ನು ಉತ್ಪಾದಿಸುವ ಕೈಗಾರಿಕೆಗಳು ಅಪಾಯಕಾರಿ ಅನಿಲಗಳನ್ನು ಬಿಡುತ್ತಿರುತ್ತವೆ. ಭಾರತದಲ್ಲಿ ಜನರ ಜೀವಿತಾವಧಿಯ ಮೇಲೆ ಧೂಮಪಾನ, ಭಯೋತ್ಪದಾನೆ, ಏಡ್ಸ್ ಗಿಂತ ಹೆಚ್ಚು ದುಷ್ಪರಿಣಾಮ ಪರಿಸರ ಮಾಲಿನ್ಯದಿಂದುಂಟಾಗುತ್ತದೆ. ವಿಶ್ವದ ಜನಸಂಖ್ಯೆಯಲ್ಲಿ ಭಾರತದ ಪಾಲು ಶೇ.18ರಷ್ಟಿದೆ. ಇಂಗಾಲದ ಡೈ ಆಕ್ಸೈಡ್ ಮತ್ತು ಪರಿಸರ ಮಾಲಿನ್ಯದಿಂದಾಗಿ ಸಾವನ್ನಪ್ಪುತ್ತಿರುವವರು ಭಾರತದಲ್ಲಿ ಅತ್ಯಧಿಕ. ವಿಶ್ವದಲ್ಲಿ ಬರೇ ವಾಯುಮಾಲಿನ್ಯದ ಸಾವುಗಳಲ್ಲಿ ಭಾರತದ ಪಾಲು ಶೇ.25ರಷ್ಟಿದೆ. ಇದೀಗ ಭಾರತೀಯರ ಜೀವಿತಾವಧಿ ಅಸುಪಾಸು 70 ವರ್ಷವಿದೆ. ಪರಿಸರವನ್ನು ಸಂರಕ್ಷಿಸಿದಿದ್ದರೆ ಸರಿಸುಮಾರು 75 ವರ್ಷಕ್ಕೆ ಸಮೀಪಿಸುತ್ತಿತ್ತು.
ಪ್ರಸಕ್ತ ಸನ್ನಿವೇಶದ ಅತಿಯಾದ ಉಷ್ಣಾಂಶ ಮತ್ತು ಕಲಾವಧಿಗೆ ಸರಿಯಾಗಿ ಮಳೆ ಬೀಳದಿರುವುದು ಮತ್ತು ಹವಾಮಾನ ವೈಪರೀತ್ಯಗಳಿಗೆ ಇಂಗಾಲದ ಪ್ರಮಾಣವನ್ನು ನಿಯಂತ್ರಿಸದಿರುವುದೇ ಕಾರಣವಾಗಿದೆ. ಜಾಗಿತಕ ಉಷ್ಣಾಂಶ ನಿಯಂತ್ರಣದಲ್ಲಿರಬೇಕೆಂಬ ಚರ್ಚೆಗಳಾಗುತ್ತಿವೆ. ಪ್ಯಾರಿಸ್ ನಲ್ಲಿ ನಡೆದ ಒಪ್ಪಂದದಲ್ಲಿ ಎಲ್ಲಾ ದೇಶಗಳು ಇಂಗಾಲದ ಬಳಕೆಯನ್ನು ಕಡಿಮೆ ಮಾಡಬೇಕೆಂದು ಮತ್ತು ಇಂಗಾಲ ಹೊರ ಹೋಗುವುದನ್ನು ನಿಯಂತ್ರಿಸಲು ಕ್ರಮಕೈ ಗೊಳ್ಳಬೇಕೆಂದು ಸೂಚಿಸಲಾಯಿತು. ಆದರೆ ಅದು ಸಂಪೂರ್ಣ ನೆರವೇರುತ್ತಿಲ್ಲ. ಮನುಷ್ಯನ ಅನುಕೂಲಕ್ಕೆಂದು ನಿಸರ್ಗ ಎಲ್ಲವನ್ನೂ ಒದಗಿಸಿದೆ. ನೀರು, ಗಾಳಿ, ಆಹಾರ, ಆಶ್ರಯ ಇವೆಲ್ಲಾ ನಿಸರ್ಗದ ಠೇವಣಿಗಳು ಮಾನವ ತನ್ನ ಉಳಿವಿಗಾಗಿ ನಡೆಸಿದ ಹೋರಾಟದಲ್ಲಿ ನಿಸರ್ಗದ ಸಂಪನ್ಮೂಲಗಳನ್ನು ಬಳಸಿದ್ದಾನೆಯಲ್ಲದೆ ಎಷ್ಟೋ ಬಾರಿ ತನ್ನ ಸ್ವಾರ್ಥ, ವ್ಯಾಮೋಹ ಮತ್ತು ಲಾಭಕ್ಕಾಗಿ ನಿಸರ್ಗದ ವಿರುದ್ಧ ಹೋಗಿದ್ದಾನೆ. ಪ್ರಕೃತಿ ಮಾನವನಿಗೆ ಒಂದು ವರ. ಅದ್ನೇದುರಿಸಿ ಅವನು ಬದುಕಲು ಪ್ರಯತ್ನಿಸಿದರೆ ಪ್ರಕೃತಿ ವಿಕೋಪಗೊಳ್ಳುವುದರಲ್ಲಿ ಎರಡು ಮಾತಿಲ್ಲ. ಪ್ರಕೃತಿ ನಮಗೆದುರಾದರೆ ಅದು ನಮಗೆ ಶಾಪವಾಗಿ ಪರಿಣಮಿಸುತ್ತದೆ. ಮಾನವನ ದುಷ್ಕೃತ್ಯಗಳಿಗೆ ಪ್ರಕೃತಿ, ಬಿರುಗಾಳಿ, ಚಂಡಮಾರುತ, ಅತಿವೃಷ್ಟಿ, ಪ್ರವಾಹ ಇವೆಲ್ಲವೂ ತನ್ನ ಸಮತೋಲನವನ್ನು ಕಾಪಾಡುವುದರಲ್ಲಿ ವಿಫಲವಾಗುತ್ತದೆ. ಸದ್ಯ ಕರ್ನಾಟಕದಲ್ಲೇ 48 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಟಲು, ಬರಗಾಲ, ಇವೆಲ್ಲಕ್ಕೂ ಪ್ರಕೃತಿ ಮುನಿಸೇ ಕಾರಣವೆಂದರೆ ತಪ್ಪಿಲ್ಲ.
ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ