ದೇವಾಲಯಗಳಲ್ಲಿ ಪ್ರತಿಷ್ಠೆ ಮಾಡಿದ ವಿಗ್ರಹ ಮೂರ್ತಿ ಲಿಂಗಾದಿಗಳಿಗೆ ಪ್ರತಿ ಹನ್ನೆರಡು ವರ್ಷದಲ್ಲಿ ಒಮ್ಮೆ ಅಷ್ಠಬಂಧ ಬ್ರಹ್ಮಕಲಶ (ಕುಂಭಾಭಿಷೇಕ) ಮಾಡುತ್ತಾರೆ. ಒಮ್ಮೆ ಬ್ರಹ್ಮಕಲಶ ಮಾಡಿದರೆ ಮುಂದಿನ 12 ವರ್ಷದವರೆಗೆ ದೇವಸ್ಥಾನದ ಗುಡಿ ಗೋಪುರಗಳೆಲ್ಲಾ ಸುದೃಢವಾಗಿ ಇರಬೇಕು. ಅನಂತರ ವರ್ಷದ ಜಾತ್ರೆ ಮತ್ತು ಪರ್ವ (ಹಬ್ಬ)ಗಳ ಆಚರಣೆ ಮಾತ್ರ ನಡೆದು ಬರಬೇಕು. ಆದರೆ ತುಳುನಾಡಿನಲ್ಲಿ ಮಾತ್ರ ಕಳೆದ ಎರಡು ಮೂರು ದಶಕಗಳಿಂದೀಚೆಗೆ ಬ್ರಹ್ಮಕಲಶ ಮಾಡಿದ ದೇವಸ್ಥಾನಗಳಲ್ಲಿ ಅದರ ನೆನಪಿಗಾಗಿ ವಾರ್ಷಿಕ ಪ್ರತಿಷ್ಠಾ ಮಹೋತ್ಸವ ಎಂಬ ಹೆಸರಿನಿಂದ ಆಚರಿಸಲ್ಪಡುತ್ತದೆ. ಇಲ್ಲಿನ ದೇವಾಲಯಗಳೆಲ್ಲಾ ಆಗಮಶಾಸ್ತ್ರ ಆಧಾರದಲ್ಲಿ ನೆಲೆಯಾಗಿದೆ. ಆದರೆ ಶಾಸ್ತ್ರದಲ್ಲಿ ಪ್ರತಿಷ್ಠಾ ದಿನದ ಬಗ್ಗೆಯಾಗಲಿ, ಅದನ್ನು ಆಚರಿಸುವ ರೀತಿಯ ಬಗ್ಗೆಯಾಗಲೀ ವಿವರವೇ ಇಲ್ಲ ಎಂದು ಶಾಸ್ತ್ರ ಬಲ್ಲವರ ವಾದ. ಹೀಗಿರುವಾಗ ಅಶಾಸ್ತ್ರೀಯವಾದ ಈ ಆಚರಣೆ ಬಗ್ಗೆ ಆರೋಗ್ಯಪೂರ್ಣವಾದ ಚಿಂತನೆ ಅಗತ್ಯ ಇಲ್ಲವೇ?
ಸನಾತನ ಧರ್ಮದ ಆಚರಣೆಗಳಲ್ಲಿ ಶ್ರದ್ಧಾಭಕ್ತಿ, ನಂಬಿಕೆ, ಧರ್ಮಪ್ರಶ್ನೆ, ಜನಜಾಗೃತಿ ಮತ್ತು ಆರೋಗ್ಯದ ರಹಸ್ಯ ಅಡಕವಾಗಿದೆ ಎನ್ನುತ್ತಾರೆ ಬಲ್ಲವರು. ವರ್ಷಂಪ್ರತಿ ಜಾತ್ರೆಯ ದಿವಸ ಬೆಳಗ್ಗೆ ಕ್ಷೇತ್ರ ತಂತ್ರಿಗಳು ಆಗಮಿಸಿ ಕ್ಷೇತ್ರಕ್ಕೆ ಸಂಬಂಧಪಟ್ಟ ಅಧಿಕಾರ ವರ್ಗದವರನ್ನು ಹಾಗೂ ಭಕ್ತರನ್ನು ಕರೆದು ತೀರ್ಥ ಮಂಟಪದಲ್ಲಿ ನವಕ ಪೂಜೆ ಮಾಡುತ್ತಾರೆ. ಕ್ಷೇತ್ರ ಪ್ರಧಾನ ದೇವರು, ಉಪ ದೇವತೆಗಳಿಗೆ, ಧರ್ಮ ದೈವಗಳಿಗೆ ಹಾಗೂ ವನದಲ್ಲಿರುವ ನಾಗ ಮತ್ತು ದೈವದ ಸಾನಿಧ್ಯಗಳಿಗೆ ಪ್ರತ್ಯೇಕ ಕಲಶ ಎರೆದು ಪುನಃ ಚೈತನ್ಯ ತುಂಬಿದರೆ ಕ್ಷೇತ್ರ ಮತ್ತು ನಾಡಿನ ಸಮಸ್ತ ಜನರ ಇಷ್ಟಾ ಸಿದ್ಧಿ ಆಗಬಹುದು ಎಂದು ತಂತ್ರಿಗಳು ನವಕ ಪೂಜೆ ಮಾಡಿ ಆಶೀರ್ವದಿಸುತ್ತಾರೆ.
ತುಳುನಾಡಿನಲ್ಲಿ ಬ್ರಹ್ಮಕಲಶ, ಉತ್ಸವ ವಿವಾಹಾದಿ ಶುಭ ಕಾರ್ಯಗಳು ಸೌರಮಾನ ಪದ್ಧತಿ ಪ್ರಕಾರ ತಿಥಿ ಲಗ್ನ, ನಕ್ಷತ್ರಾದಿಗಳ ಲೆಕ್ಕಾಚಾರದಲ್ಲಿ ನಡೆಸಲ್ಪಡುತ್ತದೆ. ವಿಪರ್ಯಾಸವೆಂದರೆ ಪ್ರತಿಷ್ಠಾ ದಿನಾಚರಣೆ ಮಾತ್ರ ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರ, ಅಂದರೆ ಬ್ರಹ್ಮಕಲಶ ನಡೆದ ತಾರೀಕಿನಂದೇ ಮುಂದಿನ ವರ್ಷ ಪ್ರತಿಷ್ಠಾ ದಿನಾಚರಣೆ ಮಾಡುತ್ತಾರೆ. ಇದು ಯಾವ ಪುರುಷಾರ್ಥಕ್ಕೆ? ಉದಾ : ಈ ವರ್ಷ ಎಪ್ರಿಲ್ 6 ರಂದು ರೋಹಿಣಿ ನಕ್ಷತ್ರ ಬಂದರೆ ಮುಂದಿನ ಎಪ್ರಿಲ್ 6 ರಂದು ಆ ನಕ್ಷತ್ರ ಬರಲು ಸಾಧ್ಯವೇ? ಮಾತ್ರವಲ್ಲ, ಕೆಲವು ದೇವಸ್ಥಾನಗಳು ಜಾತ್ರೆ ಮತ್ತು ಪ್ರತಿಷ್ಠಾ ದಿನಾಚರಣೆ ಕೇವಲ ಎರಡು ವಾರಗಳ ಅಂತರದಲ್ಲಿ ಬರುವುದಿದೆ. ಹೀಗಿರುವಾಗ ಜಾತ್ರೆ ಹಾಗೂ ಪ್ರತಿಷ್ಠಾ ದಿನಗಳಲ್ಲಿ ಪ್ರಧಾನ ಕರ್ಮವೇ ನವ ಕುಂಭಾಭಿಷೇಕ. ಒಮ್ಮೆ ನವಕ ಮಾಡಿ ಕಲಶ ಎರೆದರೆ ಅದರ ಚೈತನ್ಯ ಒಂದು ವರ್ಷದವರೆಗೆ ನೆಲೆ ನಿಲ್ಲುತ್ತದೆ ಎನ್ನುತ್ತಾರೆ. ಆದರೆ ಇಲ್ಲಿ ಎರಡು ವಾರದ ಅಂತರದಲ್ಲಿ ಚೈತನ್ಯ ಮಾಯವಾಯಿತೆಂದು ಭಾವಿಸಬೇಕೆ?
ಅರ್ಧ ಶತಮಾನದಿಂದೀಚೆಗೆ ಊರು ಬಿಟ್ಟವರು ನಗರ ಸೇರಿ ನಾನಾ ಉದ್ಯಮ ಕ್ಷೇತ್ರದಲ್ಲಿ ಕಷ್ಟಪಟ್ಟು ದುಡಿದು ಸಂಪಾದಿಸಿದ ಹಣದಲ್ಲಿ ನಾಡಿನ ದೈವ ದೇವರ ಗುಡಿಗಳು ಉದ್ಧಾರ ಆಗಿರುವುದರಲ್ಲಿ ಸಂಶಯವಿಲ್ಲ. ಅವರ ಮನಸ್ಥಿತಿಗೆ ಮೆಚ್ಚಲೇಬೇಕು. ಧಾರ್ಮಿಕ ಮುಖಂಡರು, ಜ್ಞಾನವಂತರು, ಆಚಾರ್ಯ ವರ್ಗದವರು ಹಾಗೂ ಮಠಾಧೀಶರು ಆ ಧನವಂತರ ಸಂಪತ್ತನ್ನು ಸರಿಯಾದ ಹಾದಿಯಲ್ಲಿ ಉಪಯೋಗಿಸಲಿಲ್ಲ ಎಂಬುದಕ್ಕೆ ಇದೊಂದು ನಿದರ್ಶನ. ವ್ಯಾಪಾರ ವ್ಯವಹಾರದಿಂದ ಒಮ್ಮೆಲೇ ಬಂದ ಸಂಪತ್ತನ್ನು ನೋಡಿ ದೈವ ದೇವರಿಗೆ ಪೂರ್ವ ಪದ್ಧತಿಗೆ ವಿರುದ್ಧವಾಗಿ ಅತಿಯಾದ ಆಡಂಬರದಲ್ಲಿ ನಭೂತೋ ನ ಭವಿಷ್ಯತಿ ಎಂಬಂತೆ ಮಾಡಿದ್ದನ್ನು ದೈವ ದೇವರು ಸ್ವೀಕರಿಸುವುದಿಲ್ಲವಂತೆ. ಮಾತ್ರವಲ್ಲ ಧರ್ಮ ಕಾರ್ಯದಲ್ಲಿ ಆರಂಭ ಶೂರತನ ಮೆರೆಯಲೇಬಾರದು. ಆಚಾರ ವಿಚಾರ ಸಂಸ್ಕಾರಗಳು ಮುಂದಿನವರಿಗೆ ಹೊರೆಯಾಗಬಾರದು. ನಮ್ಮ ಅನುಭವವನ್ನು ಹೇಳುವುದಾದರೆ ಗ್ರಾಮ ದೇವಸ್ಥಾನಗಳಲ್ಲಿ ಪ್ರತಿಷ್ಠಾ ದಿನವನ್ನು ಆಚರಿಸಲು ಪ್ರಾರಂಭಿಸಿದ ಹೆಚ್ಚಿನ ಸ್ಥಳಗಳಲ್ಲಿ ಆರಂಭದ ಒಂದೆರಡು ವರ್ಷ ಮಾತ್ರ ಕ್ಷೇತ್ರಕ್ಕೆ ಸಂಬಂಧಪಟ್ಟವರು ಒತ್ತಾಯಕ್ಕೆ ಬಂದಂತೆ ಬರುತ್ತಾರೆ. ವರ್ಷ ಕಳೆದಂತೆ ತಂತ್ರಿಗಳು ಮತ್ತು ಕ್ಷೇತ್ರದ ನಾಲ್ಕೈದು ಜನರು ಮಾತ್ರ ನವಕ ಪೂಜೆಗೆ ಹಾಜರಿರುತ್ತಾರೆ. ಹೀಗಿರುವಾಗ ಈ ಪ್ರತಿಷ್ಠಾ ದಿನ ಯಾರ ಪ್ರತಿಷ್ಠೆಗಾಗಿ ಎಂಬ ಪ್ರಶ್ನೆ ಬರುವುದಿಲ್ಲವೇ? ಇದರ ಅರ್ಥ ಊರ ಜನರಿಗೆ ಭಕ್ತಿ ಇಲ್ಲವೆಂದಲ್ಲ. ಹಳ್ಳಿಯ ಪ್ರತಿ ಮನೆಯಲ್ಲಿ ಕೇವಲ ಒಂದೆರಡು ಜನರು ವಾಸವಾಗಿರುತ್ತಾರೆ. ಉಳಿದವರು ನಗರದಲ್ಲಿ ತಮ್ಮ ಬದುಕು ಕಟ್ಟಿಕೊಂಡಿರುತ್ತಾರೆ. ಅವರು ವರ್ಷ ಜಾತ್ರೆ ಮತ್ತು ತಮ್ಮ ತರವಾಡಿನ ದೈವಕೋಲಕ್ಕೆ ಬರುತ್ತಾರೆ.
ಅದೇ ರೀತಿ ತುಳುನಾಡಿನ ಹೆಚ್ಚಿನ ಕುಟುಂಬದ ತರವಾಡು ಮನೆ, ದೈವಸ್ಥಾನ, ನಾಗವನ ಹಾಗೂ ದೈವವನಗಳೆಲ್ಲಾ ಆಧುನಿಕ ರೀತಿಯಲ್ಲಿ ಪುನಃ ನಿರ್ಮಾಣಗೊಂಡಿರುತ್ತದೆ. ದೇವಸ್ಥಾನ ಬ್ರಹ್ಮಕಲಶದಂತೆ ವಿಜೃಂಭಣೆಯ ನಾಲ್ಕೈದು ದಿವಸದ ಕುಂಭಾಭಿಷೇಕ ಮಾಡಿ ಉತ್ಸವ ಕೋಲಗಳು ನಡೆದುಕೊಂಡು ಬರುತ್ತಿರುವುದು ಸ್ವಾಗತಾರ್ಹ. ಆದರೆ ಇಲ್ಲಿಯೂ ಪ್ರತಿಷ್ಠಾ ದಿನಾಚರಣೆ ಮಾಡಲು ಅಪ್ಪಣೆಯಾಗಿರುವುದು ಆಶ್ಚರ್ಯ. ಇಲ್ಲಿ ಚಿಂತಿಸಬೇಕಾದ ಅಂಶವೆಂದರೆ, ಭಗ್ನಗೊಂಡ (ಪಾಳು ಬಿದ್ದ) ದೈವಸ್ಥಾನ, ಪೀಠ, ಭಂಜರಾದಿಗಳನ್ನು ಮತ್ತು ವನದಲ್ಲಿರುವ ನಾಗ ಹಾಗೂ ದೈವದ ಕಲ್ಲುಗಳಿಗೆ ತಂತ್ರಿಗಳು ಬಂದು ಕುಂಭಾಭಿಷೇಕ ಮಾಡಿ ಹೊಸ ಚೈತನ್ಯ (ಶಕ್ತಿ) ಕೊಡುವುದು ವಾಡಿಕೆಯಾಗಿದೆ. ಅನಂತರ ನಾಗನಿಗೆ ಹೊರತು ಉಳಿದ ಮಧು ಮಾಂಸ ಸೇವಿಸುವ ದೈವಗಳಿಗೆ ಕುಟುಂಬಸ್ಥರೇ ವಿಶೇಷ ಪರ್ವ (ಹಬ್ಬ)ಗಳ ದಿವಸ ಅಗೇಲು, ತಂಬಿಲಗಳನ್ನು ಮಾಡುತ್ತಾರೆ. ಹೀಗಿರುವಾಗ ಪುನಃ ಇಲ್ಲಿ ವರ್ಷದ ಪ್ರತಿಷ್ಠಾ ದಿನಾಚರಣೆಯ ಔಚಿತ್ಯವೇನು ಈ ನಿಟ್ಟಿನಲ್ಲಿ ಪ್ರಜ್ಞಾವಂತ ತುಳುನಾಡಿನ ವಿಶ್ವಾಸಿಗಳೆಲ್ಲಾ ಚಿಂತಿಸಿ ಒಂದು ಒಮ್ಮತದ ತೀರ್ಮಾನಕ್ಕೆ ಬಂದು ಮುಂದಿನ ಸಮಾಜಕ್ಕೆ ಹೊರೆಯಾಗದಂತೆ ಸರಳ ರೀತಿಯಲ್ಲಿ ಆಚಾರ, ಸಂಸ್ಕಾರ ನಂಬಿಕೆಗಳಿಗೆ ಚ್ಯುತಿಯಾಗದಂತೆ ಅನುಸರಿಸಬೇಕಾದ ಹಾದಿಯಲ್ಲಿ ಒಂದು ಸಮಗ್ರ ಚಿಂತನ ಮಂಥನ ಮೂಡಿ ಬರಲೆಂದು ಆಶೀಸೋಣ.
ಕಡಾರು ವಿಶ್ವನಾಥ್ ರೈ