ಕಾಟುಕುಕ್ಕೆ ಗ್ರಾಮದ ಅರೆಕ್ಕಾಡಿಯಲ್ಲಿ ಅಜೀರ್ಣಾವಸ್ಥೆಯಲ್ಲಿದ್ದ ಅತೀ ಪ್ರಾಚೀನ ಅರೆಕ್ಕಾಡಿ ಶ್ರೀ ಧೂಮಾವತಿ ಪರಿವಾರ ದೈವಸ್ಥಾನ ಜೀರ್ಣೋದ್ದಾರ ಕಾರ್ಯದ ವಿಜ್ಞಾಪನಾ ಪತ್ರ ಬಿಡುಗಡೆಗೊಳಿಸಲಾಯಿತು. ಏಳು ಪ್ರತಿಷ್ಠಿತ ಮನೆತನಗಳ ನೇತೃತ್ವದಲ್ಲಿ ಆರಾಧನೆ ನಡೆಸಲಾಗುತ್ತಿದ್ದ ದೈವ ಸಾನಿಧ್ಯದಲ್ಲಿ ಕಳೆದ ಮೂರು ನಾಲ್ಕು ದಶಕಗಳಿಂದ ಆರಾಧನೆ ಪರ್ವಗಳು ತಟಸ್ಥಗೊಂಡಿದ್ದು ನಾಡಿನ ಸುಭೀಕ್ಷೆಗಾಗಿ ಊರವರ ನೇತೃತ್ವದಲ್ಲಿ ದೈವಸ್ಥಾನವನ್ನು ನವೀಕರಿಸಿ ನಿರ್ಮಿಸಲು ನಿಶ್ಚಯಿಸಲಾಗಿದ್ದು ಉಚ್ಚಿಲ ಪದ್ಮನಾಭ ತಂತ್ರಿಗಳ ನೇತೃತ್ವ ಹಾಗೂ ಊರವರ ಸಹಭಾಗಿತ್ವದಲ್ಲಿ ಬಾಲಾಲಯ ಪ್ರತಿಷ್ಠಾ ಕಾರ್ಯ ಸಾನಿಧ್ಯ ಪರಿಸರದಲ್ಲಿ ನೆರವೇರಿತು.
ತಂತ್ರಿ ಸಹಾಯಕ, ಆರ್ಚಕ ಶ್ರೀಧರ ಭಟ್ ವಾರಿಕ್ಕಾಡ್ ವಿಜ್ಞಾಪನ ಪತ್ರ ಬಿಡುಗಡೆಗೊಳಿಸಿದರು. ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಳದ ಆಡಳಿತ ಮೊಕ್ತೇಸರ ತಾರಾನಾಥ ರೈ ಪಡ್ಡಂಬೈಲುಗುತ್ತು, ಜೀರ್ಣೋದ್ದಾರ ಸಮಿತಿ ಗೌರವಾಧ್ಯಕ್ಷ ಜಿ.ಕೆ.ಭಟ್ ಪೂವಾಳೆ, ಗೌರವ ಸಲಹೆಗಾರ ನಾರಾಯಣ ಮಯ್ಯ, ನಾರಾಯಣ ಮವ್ವಾರು, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ, ವಕೀಲ ಚಂದ್ರಮೋಹನ್, ಗೋಪಾಲ ಮಣಿಯಾಣಿ ಕೋಲಾಯಗುತ್ತು, ಮಹಿಳಾ ವಿಭಾಗದ ಅಧ್ಯಕ್ಷೆ ಸುಶೀಲ ವಿ.ಕೆ., ಸಾಹಿತಿ ರಾಜಶ್ರೀ ಟಿ. ರೈ ಪೆರ್ಲ, ಸುಬ್ರಹ್ಮಣ್ಯ ಭಟ್, ಆನಂದ ಆಳ್ವ ಸಾರ್ಯ ಮತ್ತಿತರರು ಉಪಸ್ಥಿತರಿದ್ದರು. ಶಿವರಾಮ ಮಾಸ್ತರ್ ಸ್ವಾಗತಿಸಿ ನಿರೂಪಿಸಿದರು. ಜಯರಾಮ ಮಾಸ್ತರ್ ವಂದಿಸಿದರು. ಸುದರ್ಶನ ಹೋಮ, ಪ್ರಾಯಶ್ಚಿತ ಹೋಮಗಳು, ಬಾಲಾಲಯ ಪ್ರತಿಷ್ಠೆ ನೆರವೇರಿತು.