ವಿದ್ಯಾಗಿರಿ: ‘ವೈಯಕ್ತಿಕ ಬದುಕನ್ನು ಸಮಾಜದಲ್ಲಿ ಅತ್ಯುತ್ತಮವಾಗಿ ಕಟ್ಟುಕೊಳ್ಳುವುದೇ ದೇಶ ಕಟ್ಟುವ ಕಾರ್ಯ’ ಎಂದು ಐಪಿಎಸ್ ಅಧಿಕಾರಿ, ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತ ಎನ್. ಶಶಿಕುಮಾರ್ ಹೇಳಿದರು. ಆಳ್ವಾಸ್ ಪದವಿ ಕಾಲೇಜು ಡಾ.ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡ ವಿವಿಧ ವಿದ್ಯಾರ್ಥಿ ಘಟಕಗಳ ದಿನಾಚರಣೆ ‘ಇನಾಮು – 2024’ ಉದ್ಘಾಟಿಸಿ ಅವರು ಮಾತನಾಡಿದರು.
ಹಲವು ಯುವಕರು ನಾವು ದೇಶ ಕಟ್ಟುತ್ತೇವೆ.. ಎಂಬಿತ್ಯಾದಿಯಾಗಿ ಉತ್ಪ್ರೇಕ್ಷೆಯಿಂದ ಹೇಳುತ್ತಾರೆ. ಒಂದೇ ಬಾರಿಗೆ ಭಾರಿ ಭಾರ ಹೊರಬೇಡಿ. ನಮ್ಮ ಬದುಕು, ಮನೆಯವರ ಬದುಕು, ಊರು- ಸಮಾಜಕ್ಕೆ ಕೊಡುಗೆ ನೀಡುವ ಮೂಲಕ ಮಾತ್ರ ದೇಶ ಕಟ್ಟಲು ಸಾಧ್ಯ. ಅದಕ್ಕೆ ಮೌಲ್ಯಾಧಾರಿತ ಬದುಕು ಕಟ್ಟಿಕೊಳ್ಳಿ ಎಂದರು. ವ್ಯಕ್ತಿತ್ವ ವಿಕಸನದಲ್ಲಿ ತರಗತಿ ಶಿಕ್ಷಣ ಎನ್ನುವುದು ಒಂದು ಭಾಗವಷ್ಟೇ. ಅದನ್ನು ಹೊರತುಪಡಿಸಿ ಪಠ್ಯೇತರ ಚಟುವಟಿಕೆಗಳು ಸಾಕಷ್ಟಿವೆ. ಇವುಗಳಲ್ಲಿ ತೊಡಗಿಸಿಕೊಳ್ಳುವ ಬಹುದೊಡ್ಡ ಜವಾಬ್ದಾರಿಯುತ ಕಾರ್ಯವನ್ನು ಆಳ್ವಾಸ್ ಮಾಡುತ್ತಿದೆ ಎಂದು ಶ್ಲಾಘಿಸಿದರು.
ಗುರಿ ಸ್ಪಷ್ಟವಿದ್ದಾಗ ಮಾತ್ರ ಆ ಗುರಿಯನ್ನು ತಲುಪುವ ಮಾರ್ಗದರ್ಶನ ಗುರುವಾಗಲು ಸಾಧ್ಯ ಎಂದು ಹೇಳಿದರು. ಜೀವನದಲ್ಲಿ ಸಮಯ ಪ್ರಜ್ಞೆ ಹೆಚ್ಚು ಮುಖ್ಯವಾಗುತ್ತದೆ. ಸರಿಯಾದ ಸಮಯದಲ್ಲಿ ಸರಿಯಾದ ತಯಾರಿ , ಸಿದ್ಧತೆಯನ್ನು ಮಾಡಿದಾಗ ಮಾತ್ರ ಅಂದುಕೊಂಡ ಗುರಿಯನ್ನು ಪರಿಪೂರ್ಣವಾಗಿ ತಲುಪಲು ಸಾಧ್ಯ ಎಂದರು. ಯಾವುದೇ ಉಡಾಫೆಗಳಿಗೆ ಕಿವಿ ಕೊಡಬೇಡಿ. ತಾಳ್ಮೆ, ಪರಿಶ್ರಮ, ಪರಿಪೂರ್ಣತೆ, ಜ್ಞಾನ ಜೊತೆಗೆ ಸೋಲಿನ ಕಾರಣವನ್ನು ಅರಿತರೆ ವೈಫಲ್ಯದ ಭಯ ನಮ್ಮನ್ನು ಕಾಡುವುದಿಲ್ಲ ಎಂದು ಕಿವಿಮಾತು ಹೇಳಿದರು.
ದೈನಂದಿನ ಜೀವನದಲ್ಲಿ ಸಮಗ್ರ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಪರಿರ್ಪೂರ್ಣತೆಯೊಂದಿಗೆ ಪರಿಶ್ರಮವಹಿಸಿ ಎಂದು ತಿಳಿಹೇಳಿದರು. ನಮ್ಮ ಕೆಲಸ, ನಮಗೆ ನೆರವಾದವರ ಬಗ್ಗೆ ಕೃತಜ್ಞತಾ ಮನೋಭಾವ ಇರಬೇಕು ಎಂದರು. ಗ್ರಾಮೀಣ ಭಾಗದಲ್ಲಿ ರಾಷ್ಟ್ರ ರಾಜಧಾನಿಯ ಮಾದರಿಯ ಸಮಗ್ರ ದೃಷ್ಟಿಕೋನ ಹೊಂದಿದ ಶಿಕ್ಷಣವನ್ನು ನೀಡುತ್ತಿರುವ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಅವರ ಕಾರ್ಯಕ್ಕೆ ಪದ್ಮಶ್ರೀ ದೊರೆಯಬೇಕು ಎಂದರು.
ಚಲನಚಿತ್ರ ನಟ ರೂಪೇಶ್ ಶೆಟ್ಟಿ ಮಾತನಾಡಿ, ಶಿಸ್ತಿಗೆ ಇನ್ನೊಂದು ಹೆಸರೇ ಆಳ್ವಾಸ್. ಶಿಕ್ಷಣ ಕೇವಲ ನಾಲ್ಕು ಗೋಡೆಗೆ ಮಾತ್ರ ಸೀಮಿತವಾಗಿರದೇ ಜೀವನ ಪಾಠ ಮತ್ತು ಕನಸು ಕಾಣುವುದಕ್ಕೂ ಪ್ರಮುಖ ಶಕ್ತಿ ಎಂದರು. ಪರಿಶ್ರಮ, ಶ್ರದ್ಧೆಯಿಂದ ಕಾರ್ಯ ನಿರ್ವಹಿಸಿದರೆ, ಅವಕಾಶದ ಜೊತೆಗೆ ವೇದಿಕೆಗಳು ನಮ್ಮ ಪಾಲಿಗೆ ಬರುತ್ತವೆ ಎಂದರು. ಸೋಮಾರಿತನ ಮತ್ತು ಆರಾಮ ವಲಯಗಳು ಯಶಸ್ಸಿನ ಮೂಲ ಶತ್ರುಗಳು. ಆರಾಮ ವಲಯದಿಂದ ಹೊರಬಂದು ಮತ್ತು ನಮ್ಮನ್ನು ನಾವು ಅನ್ವೇಷಿಸಿದಾಗ ಮಾತ್ರ ಯಶಸ್ಸು ಖಂಡಿತ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ವಿದ್ಯಾರ್ಥಿಗಳಿಂದ, ವಿದ್ಯಾರ್ಥಿಗಳಿಗಾಗಿ ನಡೆಯುವ ಅದ್ಭುತ ಕಾರ್ಯಕ್ರಮ ಇನಾಮು. ಶೈಕ್ಷಣಿಕ ವರ್ಷದ ನೆಚ್ಚಿನ ಕಾರ್ಯಕ್ರಮವಿದು ಎಂದರು. ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್, ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ , ಇನಾಮು ಸಂಯೋಜಕರಾದ ಡಾ ಯೋಗೀಶ್ ಕೈರೋಡಿ ಮತ್ತು ಮನು ಡಿ.ಎಲ್. ಇದ್ದರು. ನಂತರ ನಡೆದ ಸಮರೋಪ ಸಮಾರಂಭದಲ್ಲಿ ಕಾರ್ಕಳ ಭುವನೇಂದ್ರ ಕಾಲೇಜಿನ ಪ್ರಾಚಾರ್ಯ ಡಾ ಮಂಜುನಾಥ್ ಕೋಟ್ಯಾನ್ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಸಾಫ್ಟ್ ಸ್ಕಿಲ್ಸ್ (ಮೃದು ಕೌಶಲ)ಗಳನ್ನು ಸುಧಾರಿಸಲು ಮತ್ತು ನಾಯಕತ್ವ ಗುಣವನ್ನು ಬೆಳೆಸಿಕೊಳ್ಳಲು ಇಂತಹ ಕಾರ್ಯಕ್ರಮಗಳು ಉತ್ತಮ ವೇದಿಕೆಯಾಗಬಲ್ಲವು ಎಂದರು.
ಇನಾಮು – 2024 ಕಾರ್ಯಕ್ರಮದ ಪ್ರಯುಕ್ತ ನಡೆದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ದ್ವಿತೀಯ ರನ್ನರ್ ಕಾಮರ್ಸ್ ಫೆÇೀರಂ ತಂಡ, ಪ್ರಥಮ ರನ್ನರ್ ಎನ್ ಎಸ್ ಎಸ್ ತಂಡ ಮತ್ತು ಸಮಗ್ರ ಪ್ರಶಸ್ತಿಯನ್ನು ಎನ್ಸಿಸಿ (ವಾಯು ದಳ) ತನ್ನ ಮುಡಿಗೇರಿಸಿಕೊಂಡಿತು. ವಿದ್ಯಾರ್ಥಿನಿ ಸಾದ್ವಿತಾ ದೇವೇಂದ್ರ ಹಾಗೂ ಸ್ಪರ್ಶ ಪದ್ಮನಾಭ ನಿರೂಪಿಸಿ, ಸಾರಾ ಹುದ ಹಕೀಂ ಸ್ವಾಗತಿಸಿದರು. ಅಲಕ, ಸುಜನ್ ಶೆಟ್ಟಿ ವಂದಿಸಿದರು. ನಂತರ ಇನಾಮು ಕಾರ್ಯಕ್ರಮದ ಪ್ರಯುಕ್ತ ನಡೆದ ಹಲವು ಸ್ಪರ್ಧೆಗಳ ವಿಜೇತರ ಪ್ರತಿಭಾ ಪ್ರದರ್ಶನ ನಡೆಯಿತು.