ಸೌಂದರ್ಯ ಸಾಧನಗಳು ಎಲ್ಲರಿಗೂ ಚಿರಪರಿಚಿತ. ಇದನ್ನು ಉಪಯೋಗಿಸಿ ಸುಂದರವಾಗಿ ಕಾಣಿಸಿಕೊಳ್ಳುತ್ತೇನೆಂಬ ಭ್ರಮೆಗೆ ಒಳಗಾಗುವವರಲ್ಲಿ ಕೇವಲ ಮಹಿಳೆಯರು, ಮಕ್ಕಳು ಅಷ್ಟೇ ಅಲ್ಲದೇ ಪುರುಷರು ಕೂಡಾ ಹಿಂದೆ ಇಲ್ಲ. ಸುಂದರವಾಗಿ ಕಾಣಲು ಯಾರು ತಾನೇ ಇಚ್ಚಿಸುವುದಿಲ್ಲ. ಮೈಕಾಂತಿ, ಕಣ್ಣು, ಮೂಗು, ಹುಬ್ಬು, ತುಟಿ ಎಲ್ಲದರ ಸೌಂದರ್ಯ ಹೆಚ್ಚಿಸಿಕೊಳ್ಳುವ ತರಾತುರಿಯಲ್ಲಿ ಸಿಕ್ಕ ಸಿಕ್ಕ ಸೌಂದರ್ಯ ವರ್ಧಕ ಬಳಕೆಗೆ ಶರಣಾಗುವುದು ಸರಿ ಅಲ್ಲ. ಸೌಂದರ್ಯ ಸಾಧನಗಳ ಅಗತ್ಯ ಇದೆಯೇ. ಇದ್ದರೆ ಯಾಕೆ ಬೇಕು. ಸಹಜತೆಯೇ ಸೌಂದರ್ಯ ಯಾಕಾಗಬಾರದು ಎನ್ನುವುದನ್ನು ಯೋಚಿಸಿ. ನಾನು ವೈಯಕ್ತಿಕವಾಗಿ ಯಾವುದೇ ಸೌಂದರ್ಯ ಸಾಧನಗಳನ್ನು ಬಳಸುತ್ತಿಲ್ಲ. ಬಳಸಿದವಳೂ ಅಲ್ಲ ಎಂಬ ಕಾರಣಕ್ಕೆ ಇತರರಿಗೆ ಚೌಕಟ್ಟನ್ನು ಹಾಕುವ, ಮೌಲ್ಯವನ್ನು ಹೇರುವ ಉದ್ದೇಶದಿಂದ ಈ ಲೇಖನ ಬರೆದಿಲ್ಲ. ಬದಲಿಗೆ ಸೌಂದರ್ಯ ಸಾಧನಗಳ ಬಳಕೆಯಿಂದ ಆಗುವ ಅನಾಹುತದತ್ತ ಗಮನ ಹರಿಸಿ ಎಚ್ಚೆತ್ತುಕೊಳ್ಳಲಿ ಎಂಬುದು ನನ್ನ ಭಾವನೆ ಹಾಗೂ ಈ ಲೇಖನದ ಉದ್ದೇಶ.
ಚಿರಸೌಂದರ್ಯ ಹೆಚ್ಚಿಸಿಕೊಳ್ಳಲು ಹಲವಾರು ಉಪಾಯಗಳನ್ನು ಹುಡುಕುವುದರಲ್ಲಿ ನಿರತರಾಗಿ ತನಗೆ ವಿವೇಚನಾ ಶಕ್ತಿ ಇದೆ ಎಂಬುದನ್ನು ಕೊಚ್ಚಿಕೊಳ್ಳುವ ಮನುಷ್ಯ ಜಾಹೀರಾತುಗಳ ಮಾಯಾ ಜಾಲಕ್ಕೆ ಸಿಲುಕಿ ಫ್ಯಾಷನ್ ಹೆಸರಿನಲ್ಲಿ ತನ್ನ ಅಭಿರುಚಿಗಳನ್ನು ಕೆಡಿಸಿಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ದಿನಪತ್ರಿಕೆಯೊಂದರ ವರದಿ ಓದಿ ಬೆರಗಾದೆ. ಕೊಪ್ಪಳ ತಾಲೂಕಿನ ಕಾತರಕಿ ಗ್ರಾಮದ ವಿದ್ಯಾರ್ಥಿನಿಗೆ ಪ್ರತಿಭಾ ಕಾರಂಜಿಯ ನೃತ್ಯದಲ್ಲಿ ಭಾಗವಹಿಸಲು ಮೇಕಪ್ ಮಾಡಲಾಗಿತ್ತು. ಅಂದಕ್ಕಾಗಿ ಹಚ್ಚಿಕೊಂಡ ಲಿಪ್ಪ್ ಸ್ಟಿಕ್ ಆಕೆಯ ಬದುಕಿನ ಅಂದ ಕೆಡಿಸಿತು. 10 ವರ್ಷದ ಹುಡುಗಿ 70 ವರ್ಷದ ಮುದುಕಿಯಂತಾದಳು. ತಾಳಲಾರದ ನೋವು, ನರಳಾಟಕ್ಕೆ ಅವಧಿ ಮುಗಿದ ಲಿಪ್ ಸ್ಟಿಕ್ ನಲ್ಲಿ ತೀವ್ರ ತರದ ರಾಸಾಯನಿಕ ಒಳಗೊಂಡಿರುವುದರ ಅಡ್ಡ ಪರಿಣಾಮವಾಗಿದೆ. ತುಟಿಗೆ ಹಚ್ಚಿದ್ದರಿಂದ ಬೇಗನೆ ರಕ್ತದಲ್ಲಿ ಪರಿಣಾಮ ಬೀರಿದೆ ಎನ್ನುತ್ತಾರೆ ವೈದ್ಯರು. ತುಟಿಗೆ ರಂಗು ಹಚ್ಚುವುದರಿಂದ ತಮ್ಮ ಸೌಂದರ್ಯ ವರ್ಧಿಸುತ್ತದೆ ಎನ್ನುವುದೂ ಭ್ರಮೆ. ಅತಿಯಾಗಿ ಲಿಪ್ಸ್ ಸ್ಟಿಕ್ ಬಳಸುವುದರಿಂದ ತುಟಿಗಳ ಅಲರ್ಜಿ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ತುಟಿಗಳಿಗೆ ಬಣ್ಣ ಹಚ್ಚುವ ಬದಲು ತುಟಿಗಳಲ್ಲಿ ನಗು ಇದ್ದರೆ ಸಾಲದೆ?
ಸೌಂದರ್ಯದ ಬಗ್ಗೆ ಹೆಚ್ಚಿನ ಕಾಳಜಿ ಹೊಂದಲು ಹೋಗಿ ಸ್ಕಿನ್ ಕೇರ್ ಉತ್ಪನ್ನಗಳು ಮತ್ತು ಕಾಸ್ಮೆಟಿಕ್ ಗಳನ್ನು ಅತಿಯಾಗಿ ಬಳಸಿ ಅಪಾಯಕ್ಕೆ ಒಳಗಾದವರು ಅನೇಕರು. ಚಾಣಾಕ್ಷ ಹಾಗೂ ಪ್ರಚಾರ ತಂತ್ರಗಳು ತಮ್ಮನ್ನು ಸುಂದರವಾಗಿರಿಸುವುದಾಗಿ ಡಂಗುರ ಸಾರಿ ಆಕರ್ಷಕ ಪ್ಯಾಕಿಂಗ್ ಹಾಗೂ ಚಿತ್ರಣದೊಂದಿಗೆ ಪರಿಚಯಿಸುವ ಈ ಸಾಧನಗಳ ನಿಜಾಂಶ ಅರಿಯಲು ಮನಸ್ಸು ಮಾಡದೇ ಇರುವುದೊಂದು ವಿಪರ್ಯಾಸ. ಸೌಂದರ್ಯವಿರುವುದು ವ್ಯಕ್ತಿತ್ವದಲ್ಲಿ ಚರ್ಮದ ಬಣ್ಣದಿಂದ ಅಲ್ಲ. ಇಂತಹ ಮನಸ್ಥಿತಿ ಹುಟ್ಟಿಕೊಂಡಿದ್ದಾದರೂ ಏಕೆ ಏಲ್ಲಿಂದ. ಸ್ವಲ್ಪ ಆಳವಾಗಿ ಯೋಚಿಸಿದರೆ ಎಷ್ಟೋ ನಿರ್ಬಂಧಿತ ಸೌಂದರ್ಯ ಸಾಧನಗಳು ಹೆಚ್ಚು ಬಳಕೆಯಲ್ಲಿರುವುದು ತಿಳಿಯುತ್ತದೆ. ಲಾಭಿಕೋರ ವ್ಯಾಪಾರಿಗಳು ಹಾಗೂ ಕಂಪೆನಿಗಳ ಮೋಡಿ ಮಾಡುವ ಜಾಹೀರಾತುಗಳು ಮತ್ತು ಪ್ರಾಯೋಜಿತ ವರದಿಗಳ ಮೂಲಕ ಸೌಂದರ್ಯ ಸಾಧನಗಳ ಅನೇಕ ಲಾಭಗಳನ್ನು ಹೇಳಿ ಜನರನ್ನು ಜಾಲಕ್ಕೆ ಬೀಳಿಸುವುದರಲ್ಲಿ ಸಫಲರಾಗುತ್ತಿರುವುದು ಕಂಡು ಬರುತ್ತದೆ. ಸೌಂದರ್ಯ ವರ್ಧಕ ಉತ್ಪನ್ನಗಳನ್ನು ತಯಾರಿಸುವ ಕಂಪನಿ ಪಾರ್ಲರ್ ಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ರಾಸಾಯನಿಕಯುಕ್ತ ಕಾಸ್ಮೆಟಿಕ್ ಗಳನ್ನು ಮರಳು ಮಾಡುವ ಜಾಹೀರಾತುಗಳ ಮೂಲಕ ರವಾನಿಸುತ್ತಾರೆ. ಶೃಂಗರಿಸಿಕೊಳ್ಳುವುದು ತಪ್ಪಲ್ಲ. ಕೆಲ ದಶಕಗಳ ಹಿಂದೆ ಶೃಂಗರಿಸಿಕೊಳ್ಳುವುದರಲ್ಲಿ ವೈಜ್ಞಾನಿಕ ನೋಟವಿದ್ದು ಆರೋಗ್ಯದ ಕಾಳಜಿ ಇತ್ತು. ಆದರೆ ಇಂದು ಕಿರುತೆರೆ, ಬೆಳ್ಳಿತೆರೆ ತಾರೆಯರನ್ನು ಅನುಕರಿಸಲು ಹೋಗಿ ಸರಳ ಬದುಕನ್ನು ಬಿಟ್ಟು ಜಾಹೀರಾತು ಹೇಳುವ ಸುಳ್ಳುಗಳಿಗೆ ವಿದ್ಯಾವಂತರು ಬಲಿಯಾಗುವುದು ದುರಂತ. ಕೃತಕ ಸೌಂದರ್ಯ ಸಾಧನಗಳ ನಿರಂತರ ಬಳಕೆಯಿಂದ ಅಲರ್ಜಿ, ಚರ್ಮ ರೋಗ ಸಂಭವ ಹೆಚ್ಚು.
ಚಂದ ಅಥವಾ ಸೌಂದರ್ಯ ಎನ್ನುವುದರ ಅರ್ಥವೇ ಈಗ ಬದಲಾಗಿ ಹೋಗಿದೆ. ಸಹಜತೆಯೊಂದಿಗೆ ಆರೋಗ್ಯವಾಗಿರುವುದೇ ಸೌಂದರ್ಯವಾಗಿರುವ ಕಾಲ ಬದಲಾಗಿ ಊಟ, ತಿಂಡಿ ಬಿಟ್ಟು ಸಣಕಲು ಶರೀರ ಹೊಂದಿರುವುದೇ ಸೌಂದರ್ಯ ಎನ್ನುವ ಭ್ರಮೆ ಜನರಲ್ಲಿ ಮೂಡಿದೆ. ಆರೋಗ್ಯ ಮತ್ತು ಪ್ಯಾಶನ್ ಸಮ್ಮಿಶ್ರ ಸಂತುಲನ ತಪ್ಪದಂತೆ ಎಚ್ಚರ ವಹಿಸುವವರೇ ಕಡಿಮೆ. ಅನೇಕ ವಿಧವಾದ ರಾಸಾಯನಿಕ, ಪ್ರಾಣಿಗಳ ಕೊಬ್ಬು, ಪೆಟ್ರೊ ಕೆಮಿಕಲ್ ಕೃತಕ ಪರಿಮಳಗಳನ್ನು ಸೇರಿಸಿ ತಯಾರಿಸುವ ಸೌಂದರ್ಯ ಸಾಧನಗಳು ಆರೋಗ್ಯ ದೃಷ್ಟಿಯಿಂದ ಎಷ್ಟು ಹಾನಿಕಾರಕ ಎಂಬ ಅರಿವಿನ ಸತ್ಯ ತಿಳಿಯುವ ಅಗತ್ಯವಿದೆ. ದೈಹಿಕ ಮಾನಸಿಕ, ಭಾವನಾತ್ಮಕವಾಗಿ ಸಮತೋಲನವನ್ನು ಸಾಧಿಸಿದಲ್ಲಿ ಸಂಪೂರ್ಣ ಸೌಂದರ್ಯವಂತರಾಗಬಹುದು
ಹಾಗಾದರೆ ಸೌಂದರ್ಯ ಸಾಧನಗಳು, ಬ್ಯೂಟಿ ಪಾರ್ಲರ್ ಗಳ ಅಗತ್ಯ ನಿಮಗಿದೆಯೆ? ಸುಂದರವಾಗಿ ಕಾಣುವಂತೆ ಮಾಡುತ್ತದೆ ಎಂದು ಘೋಷಣೆ ಮಾಡುವ ಸೌಂದರ್ಯ ವರ್ಧಕಗಳಿಗೆ ಮಾರುಕಟ್ಟೆಯಲ್ಲಿ ಇನ್ನಿಲ್ಲದ ಬೇಡಿಕೆ. ಕಳಪೆ ಗುಣಮಟ್ಟದ ರಾಸಾಯನಿಕಗಳಿಂದ ಕೂಡಿದ ಸೌಂದರ್ಯ ಸಾಧನಗಳ ಅಡ್ಡ ಪರಿಣಾಮಗಳು ಹೆಚ್ಚು. ಚಂದ ಅಥವಾ ಸೌಂದರ್ಯ ಅರ್ಥವೇ ಬದಲಾಗಿದೆ. ತೆಳ್ಳಗೆ ಬೆಳ್ಳಗೆ ಕಾಣುವುದು ಮಾತ್ರ ಸೌಂದರ್ಯವಲ್ಲ. ಸೌಂದರ್ಯ ಸ್ಪರ್ಧೆಯಲ್ಲಿಯೂ ಸೌಂದರ್ಯದೊಂದಿಗೆ ಕೇಳಿದ ಪ್ರಶ್ನೆಗೆ ನೀಡಿದ ಉತ್ತರಕ್ಕೆ ತಕ್ಕಂತೆ ಆಯ್ಕೆ ಆಗುತ್ತದೆ.
ಚೆನ್ನಾಗಿ ಕಾಣಬೇಕೆನ್ನುವ ತುಡಿತ ಇಟ್ಟುಕೊಂಡವರ ಅಡಿಯಿಂದ ಮುಡಿ ತನಕವೂ ಕೃತಕ ಸೌಂದರ್ಯ ಸಾಧನಗಳಿಂದ ಶೃಂಗಾರವೇ ತುಂಬಿರುತ್ತದೆ. ಪಾದರಕ್ಷೆಯಿಂದ ಕೇಶ ರಾಶಿಯವರೆಗೂ ಆಧುನಿಕತೆ ತುಂಬಿಕೊಂಡು ಸುಂದರವಾಗಿ ಕಾಣುತ್ತೇನೆ ಎನ್ನುವ ಹುಚ್ಚು ಭ್ರಮೆಯೋ ಒಟ್ಟಿನಲ್ಲಿ ಚೆನ್ನಾಗಿ ಕಾಣುವ ಉದ್ದೇಶವೋ, ಆಧುನಿಕ ಜೀವನ ಶೈಲಿಯೋ?ದುರಾದೃಷ್ಟವೆಂದರೆ ಇಂದು ಬಹುತೇಕ ಮಹಿಳೆಯರು ಪಾಶ್ಚಾತ್ಯ ಜೀವನ ಶೈಲಿ ಆಕರ್ಷಣೆಯ ಸೊಬಗಿಗೆ ಮಾರು ಹೋಗಿ ರಾಸಾಯನಿಕ ಕಲಬೆರಕೆಯ ಸೌಂದರ್ಯ ಸಾಧನಗಳನ್ನು ಇತಿಮಿತಿ ಇಲ್ಲದೆ ಬಳಸುವುದು ಸಮಂಜಸವಲ್ಲ. ಮಣ್ಣಿನಿಂದ ಹೊನ್ನಿನವರೆಗಿನ ವಿವಿಧ ವಸ್ತುಗಳನ್ನು ಬಳಸಿ ತಯಾರಿಸಲಾಗಿದೆ ಎನ್ನುವ ಕೆಲ ಸೌಂದರ್ಯ ಸಾಧನಗಳ ತಯಾರಿಕೆಯಲ್ಲಿ ಬಳಸಿರುವ ಮೂಲ ವಸ್ತುಗಳ ವಿವರ ಹಾಗೂ ಯಾವುದೇ ತರದ ಎಚ್ಚರಿಕೆಗಳಿರುವುದಿಲ್ಲ. ತ್ವಚೆಯ ಆರೋಗ್ಯಪೂರ್ಣ ನಿರ್ವಹಣೆ ಮತ್ತು ಸೌಂದರ್ಯವನ್ನು ಅತ್ಯುತ್ತಮವಾಗಿ ಉಪಚಾರ ಮಾಡುತ್ತೇವೆಂಬ ಘೋಷಣೆ ಮಾಡುವ ಎಲ್ಲಾ ತರಹದ ಸೌಂದರ್ಯ ಸಾಧನಗಳ ಆಕರ್ಷಕ ಜಾಹೀರಾತುಗಳು ಕೇವಲ ಸುಳ್ಳು ಪ್ರಚಾರಗಳಿಗೆ ಮರುಳಾಗದೆ ನೈಸರ್ಗಿಕ ಉಪಚಾರ ಮಾಡಿದಾಗ ಉತ್ತಮ ಪರಿಣಾಮ ಸಿಗಲಿದೆ.
ಪಾಶ್ಚಾತ್ಯ ದೇಶದಲ್ಲಿ ಇದ್ದ ಮುಖ ಬೆಳ್ಳಗಾಗಿಸುವ, ತಾರುಣ್ಯ ಹೆಚ್ಚಿಸುವ, ಸುಕ್ಕುಗಳನ್ನು ಅಳಿಸಲು ಬಳಸುವ ಆಧುನಿಕ ಸೌಂದರ್ಯ ವರ್ಧಕಗಳು ಮತ್ತು ಇಂಜೆಕ್ಷನ್ ಗಳ ಪರಿಣಾಮಕಾರಿ ಚಿಕಿತ್ಸೆಗಳಿಗೆ ಈಗ ಭಾರತೀಯರು ಮುಗಿ ಬೀಳುತ್ತಿದ್ದಾರೆ. ಆದರೆ ವಿದೇಶಿಯರು ನಮ್ಮ ದೇಶಿ ಪ್ರಕಾರಗಳನ್ನು ಅನುಸರಿಸಲು ಪ್ರಾರಂಭಿಸಿದ್ದಾರೆ. ಮಹಾತ್ಮ ಗಾಂಧೀಜಿ ಒಂದೆಡೆ “ಹೃದಯ ಸೌಂದರ್ಯದ ಮುಂದೆ ಶರೀರ ಸೌಂದರ್ಯ ವ್ಯರ್ಥ ಎಂದು ಹೇಳಿದ್ದಾರೆ. ಬಾಹ್ಯ ಸೌಂದರ್ಯ ಕಾಲಮಾನಕ್ಕನುಸಾರವಾಗಿ ಮಾಸಬಹುದು. ಬಾಹ್ಯ ಸೌಂದರ್ಯಕ್ಕಿಂತ ಹೃದಯ ಸೌಂದರ್ಯ ಮತ್ತು ಆರೋಗ್ಯ ಅತೀ ಮುಖ್ಯ ನೆನಪಿರಲಿ. ಅತಿಯಾದ ಮೇಕಪ್ ನಿಂದ ಆಗುವ ಅನಾಹುತಗಳಿಂದ ಎಚ್ಚರವಹಿಸಿ.
ಲತಾ ಸಂತೋಷ್ ಶೆಟ್ಟಿ ಮುದ್ದುಮನೆ