
ಜಯಶ್ರೀಕೃಷ್ಣ ಪರಸರ ಪ್ರೇಮಿ ಜಿಲ್ಲಾ ಸಮಿತಿಯು (NGO) ಉಡುಪಿಯ ಇಂದ್ರಾಣಿ ನದಿ ಮಾಲಿನ್ಯದ ಕುರಿತು ಮುನಿಸಿಪಲ್ ಕಮಿಷನರ್ ಮತ್ತು ಸಂಬಂಧಿತ ಅಧಿಕಾರಿಗಳಿಗೆ ತುರ್ತು ಮನವಿ ಸಲ್ಲಿಸಿ, ಇಂದ್ರಾಣಿ ನದಿಯ ಮಾಲಿನ್ಯ ನಿವಾರಣೆಗೆ ತುರ್ತು ಮನವಿ ಪತ್ರ ಸಲ್ಲಿಸಿದೆ. ಉಡುಪಿ ಮುನ್ಸಿಪಲ್ ಮಿತಿಯ ಸುಮಾರು 375 ಕ್ಕಿಂತಲೂ ಅಧಿಕ ವಸತಿ ಸಮುಚ್ಚಯದ ಎಲ್ಲಾ ತಾಜ್ಯ ಮಣಿಪಾಲ, ಮಲ್ಪೆಯ ಎಲ್ಲಾ ಅಪರಿಷ್ಕೃತ ತ್ಯಾಜ್ಯ ನೀರು ಇಂದ್ರಾಣಿ ನದಿಯನ್ನು ಸೇರಿ ಪರಿಸರದ ಹಾಗೂ ಆಸುಪಾಸಿನ ಜನರ ದೈನಂದಿನ ಬದುಕು ದುರ್ಬರವಾಗಿದೆ. ಇದರ ನಿರ್ಲಕ್ಷ್ಯದಿಂದ 500 ಕ್ಕಿಂತಲೂ ಅಧಿಕ ಕುಟುಂಬಗಳ ಆರೋಗ್ಯ (ಜ್ವರ, ಚರ್ಮರೋಗ, ಡೆಂಘಿ ಭೀತಿ) ಹದಗೆಟ್ಟಿದೆ. ಅದಲ್ಲದೇ ಅಂತರ್ಜಲ ಕೂಡಾ ಕಲುಷಿತವಾಗಿ ಮನೆಯ ಬಾವಿಯ ನೀರು ಕೂಡಾ ಕುಡಿಯಲು ಯೋಗ್ಯವಾಗಿಲ್ಲ. ಬಾವಿಯಿಂದ ದುರ್ಗಂಧ ಹಾಗೂ ಸಾಯಂಕಾಲದ ನಂತರ ಸೊಳ್ಳೆಗಳ ಕಾಟದಿಂದ ಇಡೀ ಪರಿಸರ ಹಾಳಾಗಿದೆ ಹಾಗೂ ಇಂದ್ರಾಣಿ ನದಿ ಒಂದು ಕಲುಷಿತ ಒಳಚರಂಡಿ ಕಾಲುವೆಯಾಗಿ ಪರಿವರ್ತನೆಯಾಗಿದೆ ಎಂದು ಸಂಬಂಧಪಟ್ಟವರಲ್ಲಿ ಆಗ್ರಹಿಸಿ, ಇದರ ಶೀಘ್ರ ನಿವಾರಣೆಗೆ ಒತ್ತಾಯಿಸಿದೆ.


ಪರಿಸರದ ಸಾರ್ವಜನಿಕರ ಅಹವಾಲಿನ ಮೇರೆಗೆ, ಜಯಶ್ರೀಕೃಷ್ಣ ಪರಿಸರ ಪ್ರೇಮಿ ಜಿಲ್ಲಾ ಸಮಿತಿಯು ತ್ವರಿತವಾಗಿ ಸ್ಪಂದಿಸಿ ಸ್ಥಳೀಯ ಆಡಳಿತದೊಂದಿಗೆ ಇದರ ಶೀಘ್ರ ನಿವಾರಣೆಗೆ ತುರ್ತು ಮನವಿ ಮಾಡಿದೆ. ಸಮಿತಿಯ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಎಂ ಶೆಟ್ಟಿಯವರು ಸೂಕ್ತ ದಾಖಲೆಗಳೊಂದಿಗೆ ಉಡುಪಿಯ ಮಾನ್ಯ ಜಿಲ್ಲಾಧಿಕಾರಿ ಶ್ರೀಮತಿ ಸ್ವರೂಪ ಟಿ ಕೆ, ಮುನ್ಸಿಪಲ್ ಕಮಿಷನರ್ ಶ್ರೀ ಮಹಂತೇಶ ಹಂಗರಾಗಿ, ಸ್ಥಳೀಯ ಶಾಶಕರಾದ ಶ್ರೀ ಯಶ್ಪಾಲ್ ಸುವರ್ಣ, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಉಡುಪಿ ವಿಭಾಗಕ್ಕೆ ತುರ್ತು ಮನವಿ ಸಲ್ಲಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾನ್ಯ ಜಿಲ್ಲಾಧಿಕಾರಿಗಳೊಂದಿಗೆ ಸುಧೀಘ ಚರ್ಚೆ ನಡೆಸಿದ ಮೇಲೆ ಸಂಬಂಧಪಟ್ಟ ಅಧಿಕಾರಿಗಳಿಗೆ ತ್ವರಿತವಾಗಿ ಇಂದ್ರಾಣಿ ನದಿ ಮಾಲಿನ್ಯದ ಸಮಗ್ರ ವರದಿ ಮತ್ತು ನದಿ ಶುದ್ಧೀಕರಣಕ್ಕೆ ಬೇಕಾದ ವ್ಯವಸ್ಥೆಗಳನ್ನು ಮಾಡಿ, ವರದಿ ನೀಡಲು ಆದೇಶ ಮಾಡಿದ್ದಾರೆ. ಇಂದ್ರಾಣಿ ನದಿ ಕಲುಷಿತ ಬಗ್ಗೆ ನಮ್ಮ ಸಮಿತಿಯು ಕೈಗೊಂಡ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ಸೂಚಿಸಿ, ಮುಂದಿನ ಸುತ್ತಿನ ಸಭೆಗೆ ಸಮಿತಿಯನ್ನು ಆಹ್ವಾನಿಸಿದ್ದಾರೆ.

























































































































