ಆಧುನಿಕ ಸಮಾಜದ ಇಂದಿನ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ನಾವು ಗಮನಿಸಬಹುದಾದ ಬಹುಮುಖ್ಯ ವಿಚಾರ, ‘ಸಾಮಾಜಿಕ ಶಾಂತಿ’ ಅಂದರೆ ನಮಗಿಂದು ಸುಖ ಜೀವನಕ್ಕೆ ಬೇಕಾದ ಎಲ್ಲಾ ಸೌಲಭ್ಯಗಳು ದೊರೆಯುತ್ತದೆ. ಆದರೆ ಮಾನಸಿಕ ನೆಮ್ಮದಿ ದೊರೆಯುತ್ತಿಲ್ಲ. ಮನುಷ್ಯನ ಬದುಕಿನಲ್ಲಿ ವಿಜೃಂಭಿಸುತ್ತಿರುವ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ ಇತ್ಯಾದಿ, ರಾಕ್ಷಸೀ ಗುಣಗಳು ಇದಕ್ಕೆ ಕಾರಣವಾಗಿರುತ್ತದೆ. ಆದುದರಿಂದ ಇಂದು ನಾವು ಸಾಮಾಜಿಕ ಬದುಕಿನಲ್ಲಿ ಬೇರೆ ಬೇರೆ ರೂಪದ ಹಿಂಸಾ ಕೃತ್ಯಗಳನ್ನು ನೋಡುತ್ತಿದ್ದೇವೆ. ಪ್ರಾಪಂಚಿಕ ಪರಿಜ್ಞಾನವಿಲ್ಲದ ಮುಗ್ಧ ಜನಗಳನ್ನು ಅಮಾನುಷ ರೀತಿಯಲ್ಲಿ ಗುಂಡಿಕ್ಕಿ ಕೊಲ್ಲುವುದು, ಕಳ್ಳತನ, ದರೋಡೆಗಳನ್ನು ನಡೆಸುವುದು ಒಂದು ರೀತಿಯ ಹಿಂಸಾ ಕೃತ್ಯವಾದರೆ, ಹೆಂಡತಿಯೊಡನೆ ಕಠೋರವಾಗಿ ನಡೆಯುವುದು, ಮಕ್ಕಳ ಆರೋಗ್ಯ, ಶಿಕ್ಷಣ, ನೈತಿಕತೆಯ ಬಗ್ಗೆ ನಿರ್ಲಕ್ಷ ತೋರುವುದು, ತನ್ನಿಂದ ಕೆಳ ಮಟ್ಟದವರನ್ನು ಹೀನಾಯಿಸುವುದು, ನೆರೆಕರೆಯವರನ್ನು ಪೀಡಿಸುವುದು, ಸ್ನೇಹಿತರಿಗೆ ಮೋಸ ಮಾಡುವುದು, ಬಡವರನ್ನು ನಿರ್ಲಕ್ಷಿಸುವುದು, ರೋಗಿಗಳು ಮತ್ತು ವೈದ್ಯರ ಸೇವೆ ಮಾಡದಿರುವಿದು, ಪ್ರಾಣಿಗಳನ್ನು ಸರಿಯಾಗಿ ಸಾಕದಿರುವುದು, ಸಸ್ಯಗಳನ್ನು ನಾಶಪಡಿಸುವುದು ಕೂಡಾ ಹಿಂಸಾ ಕಾರ್ಯಗಳಾಗಿವೆಯೆಂದು ಶಾಸ್ತ್ರಜ್ಞರ ಅಭಿಪ್ರಾಯವಾಗಿದೆ. ಈ ರೀತಿಯ ಹಿಂಸಾತ್ಮಕ ಕಾರ್ಯಗಳು ಸುವ್ಯವಸ್ಥಿತ ಸಮಾಜಕ್ಕೆ ಒಂದಲ್ಲ ಒಂದು ರೀತಿಯಲ್ಲಿ ಹಾನಿಯುಂಟು ಮಾಡುತ್ತದೆ.
‘ಅಹಿಂಸೆ’ ಸಾಮಾಜಿಕ ಜೀವನಕ್ಕೆ ಆಧ್ಯಾತ್ಮ ವಿಜ್ಞಾನದ ಮಹತ್ವದ ಕೊಡುಗೆಯಾಗಿದೆ. “ಅಹಿಂಸಾ ಪರಮೋ ಧರ್ಮ” ಅಂದಿದ್ದಾರೆ ನಮ್ಮ ಹಿರಿಯರು. ಅಹಿಂಸೆಗಿಂತ ಮಿಗಿಲಾದ ಧರ್ಮವಿಲ್ಲ. ದಯೆ ಇದಕ್ಕೆ ಪ್ರೇರಕ ಶಕ್ತಿಯಾಗಿರುತ್ತದೆ. ನಾವು ಪರಮಾತ್ಮನಿಗೆ ಒಪ್ಪಿಸಬಹುದಾದ ಶ್ರೇಷ್ಠ ಹೂವೆಂದರೆ ‘ಅಹಿಂಸೆ’ ಅಂದಿದ್ದಾರೆ ಆಧ್ಯಾತ್ಮ ಚಿಂತಕರು. ಅಹಿಂಸೆ ಅಂದಾಗ ಜನ ಸಾಮಾನ್ಯರಾದ ನಾವು ಇನ್ನೊಂದು ಜೀವಿಯನ್ನು ಕೊಲ್ಲದಿರುವಿಕೆಯೇ ಅಹಿಂಸೆಯೆಂದು ಭಾವಿಸುತ್ತೇವೆ. ಹಿಂಸೆ ಮಾಡದಿರುವುದೇ ಅಹಿಂಸೆ ಎಂಬ ನಕಾರಾತ್ಮಕ ಶಬ್ದಾರ್ಥದ ಅರ್ಥಕ್ಕೆ ಮಾತ್ರ ಅಹಿಂಸಾ ತತ್ವವನ್ನು ಬಂಧಿಸಿಡುತ್ತೇವೆ. ಆದರೆ ಅದು ಅಷ್ಟಕ್ಕೆ ಮಾತ್ರ ಸೀಮಿತವಲ್ಲ ಅಹಿಂಸೆಯು ಪ್ರೀತಿ, ದಯೆ, ಕ್ಷಮೆ, ತಾಳ್ಮೆ, ಅಪಕಾರಕ್ಕೆ ಪ್ರತ್ಯುಪಕಾರ, ಕಷ್ಟ ಸಹಿಷ್ಣುತೆ, ಇಂದ್ರೀಯ ನಿಗ್ರಹ, ಸರ್ವಧರ್ಮ ಸಮಾನತ್ವ, ಅಸ್ತೇಯ, ಅಪರಿಗ್ರಹ, ಪರೋಪಕಾರ, ದೈವಭಕ್ತಿ ಮುಂತಾದ ದೈವೀ ಗುಣಗಳನ್ನು ಹೊಂದಿದೆ ಎಂಬುದು ಗಮನಾರ್ಹ ವಿಚಾರವಾಗಿದೆ. ಈ ರೀತಿಯ ಮೌಲ್ಯಗಳನ್ನು ನಾವು ಅರ್ಥೈಸಿಕೊಂಡು ನಮ್ಮ ಬದುಕಿನಲ್ಲಿ ಆಚರಣೆಗೆ ತಂದಾಗ ಅಹಿಂಸಾ ಧರ್ಮದ ಪಾಲನೆಯಾಗುತ್ತದೆ. ಆಗ ನಾವು ನಿಜವಾದ ಮನುಷ್ಯರೆನಿಸಿಕೊಳ್ಳುತ್ತೇವೆ. ಇದು ಶಕ್ತಿಶಾಲಿ ಸಮಾಜ ನಿರ್ಮಾಣಕ್ಕೆ ಪೂರಕವಾಗಿರುತ್ತದೆ.
ಅಹಿಂಸೆ ಆಟಂ ಬಾಂಬಿಗಿಂತ ಪ್ರಬಲ ಅಸ್ತ್ರವಾಗಿದೆ. ಆದರೆ ಇದರ ಪ್ರಯೋಗದಿಂದ ಮನುಕುಲಕ್ಕೆ ಯಾವ ರೀತಿಯ ಕೆಡುಕೂ ಆಗದು. ವಿರೋಧಿಗಳಿಗೆ ಸಂಕಟ ಕೊಡುವುದು ಹಿಂಸೆಯ ಗುರಿಯಾದರೆ ಸ್ವಯಂ ಸಂಕಟ ಅನುಭವಿಸುತ್ತಾ ವಿರೋಧಿಯ ಹೃದಯ ಪರಿವರ್ತನೆ ಅಹಿಂಸಾ ಕಾರ್ಯವಾಗಿದೆ. ಮಹಾತ್ಮ ಗಾಂಧೀಜಿಯವರು ತನ್ನ ಬದುಕಿನಲ್ಲಿ ಅಹಿಂಸಾ ಧರ್ಮದ ಪಾಲನೆಯೊಂದಿಗೆ ಮಹಾತ್ಮರೆನಿಸಿಕೊಂಡರು. ಅಹಿಂಸೆಯನ್ನು ಬ್ರಿಟಿಷ್ ಸಾಮ್ರಾಜ್ಯ ಶಾಹಿಗಳನ್ನು ಭಾರತದಿಂದ ಓಡಿಸುವ ಅಸ್ತ್ರವನ್ನಾಗಿಸಿದರು. ಭಾರತೀಯ ಸಮಾಜದ ಉದ್ಧಾರಕೋಸ್ಕರ ಅಹಿಂಸಾ ಧರ್ಮದ ಮೌಲ್ಯಗಳನ್ನು ಪ್ರಚಾರ ಪಡಿಸಿದರು. ಅದು ಈ ರೀತಿಯಲ್ಲಿತ್ತು, “ಸತ್ಯ ಅಹಿಂಸಾ, ಅಸ್ತೇಯ, ಬ್ರಹ್ಮಚರ್ಯ, ಅಸಂಗ್ರಹ, ಶರೀರ ಶ್ರಮ, ಆಸ್ವಾದ, ಸರ್ವತ್ರಭಯ ವರ್ಜನ, ಸರ್ವಧರ್ಮ ಸಮಾನತ್ವ, ಸ್ವದೇಶಿ, ಸ್ವರ್ಶಭಾವನ.” ಆದರೆ ಇಂದು ನಾವು ಇವೆಲ್ಲವುಗಳನ್ನು ಮರೆತು ಬಿಟ್ಟಿರುವುದು ವಿಷಾದನೀಯ. ಯುವ ಜನಾಂಗ ಆ ಬಗ್ಗೆ ಗಮನ ಹರಿಸುವ ಅಗತ್ಯತೆ ಇದೆ. ಅಪಾರ ಸಂಖ್ಯೆಯ ಜನಗಳಿಂದ ಗೌರವಿಸಲ್ಪಡುತ್ತಿರುವ, ದ್ವೇಷ, ಅಸೂಯೆ, ಅಂಹಕಾರಗಳಂತಹ ಹಿಂಸೆಯ ಪ್ರತಿರೂಪಗಳನ್ನು ಮೆಟ್ಟಿನಿಂತ ಆಧ್ಯಾತ್ಮಿಕ ವ್ಯಕ್ತಿ ಹಿಂದಿನ ಪೇಜಾವರ ಮಠಾಧೀಶರು, ಅವರು ಹಿಂದೆ ಜನ ಸಾಮಾನ್ಯರ ಮನೆಗಳಿಗೆ ಭೇಟಿನೀಡಿ ಅಲ್ಲಿ ಸೇರಿರುವ ಜನಗಳೊಡನೆ ಪ್ರಕಟಪಡಿಸುವ ಮಾನವೀಯ ಮೌಲ್ಯಗಳು ನಿಜವಾಗಿಯೂ ಅಹಿಂಸಾ ಧರ್ಮದ ಪಾಲನೆಯಾಗಿದೆ. ಬೂದಿ ಕೆಂಡದಿಂದ ಬರುತ್ತದೆ. ಅದೇ ಬೂದಿ ಕೆಂಡವನ್ನು ಮುಚ್ಚಿ ಬಿಡುತ್ತದೆ. ಇದರ ಮೇಲೆ ಗಾಳಿ ಬೀಸಿದಾಗ ಬೂದಿ ಹಾರಿ ಹೋಗಿ ಕೆಂಡ ಪ್ರಜ್ವಲಿಸುತ್ತದೆ. ಅದೇ ರೀತಿ ನಮ್ಮನ್ನು ಆವರಿಸಿರುವ ರಾಕ್ಷಸೀ ಗುಣಗಳು ಸಚ್ಚಿಂತನೆ, ಸದ್ಭಾವನೆ, ಸತ್ಸಂಗ, ಸತ್ಕಾರ್ಯಗಳ ಮೂಲಕ ಹಾರಿ ಹೋಗಬೇಕು. ಆಗ ನಮ್ಮ ಬದುಕೂ ಕೂಡ ಪ್ರಜ್ವಲಿಸುತ್ತದೆ. ನಾವು ಸಮಾಜದ ಉಪಯುಕ್ತ ಪ್ರಜೆಗಳೆನಿಸಿಕೊಳ್ಳುತ್ತೇವೆ.
ರವೀಂದ್ರ ರೈ ಕಲ್ಲಿಮಾರು