ಸುಮಾರು ಅರ್ಧ ಶತಮಾನದ ಹಿಂದಿನವರೆಗೆ ತುಳುನಾಡಿನಲ್ಲಿ ಬಂಟರ ತರವಾಡು ಮನೆ ಎಂದರೆ ಕುಟುಂಬಸ್ಥರಿಂದ ತುಂಬಿ ತುಳುಕುತ್ತಿತ್ತು. 1970 ರಲ್ಲಿ ಬಂದ ಭೂ ಮಸೂದೆ, ಕೈಗಾರಿಕೋದ್ಯಮ, ನಗರೀಕರಣ ಇತ್ಯಾದಿ ಕಾರಣಗಳಿಂದ ಹಳ್ಳಿಯ ಯುವಕರು ಉದ್ಯೋಗ ಅರಸಿಕೊಂಡು ದೂರದ ನಗರ ಸೇರಿದರು. ಪರಿಶ್ರಮ ಜೀವಿಗಳಾದ ತುಳುವರು ಅಲ್ಲಿಯೂ ತಮ್ಮ ಪ್ರಭಾವದಿಂದ ಸಂಪಾದಿಸಿ ನೆಲೆ ಕಟ್ಟಿಕೊಂಡರು. ಆದರೆ ತಾಯ್ನೆಲ, ಹುಟ್ಟಿದ ತರವಾಡು, ಕುಟುಂಬದ ದೈವ, ನಾಗಗಳ ಸ್ಮರಣೆ ಮೈಗೂಡಿಸಿಕೊಂಡಿದ್ದರು. ಸಂಪಾದನೆಯ ಒಂದಂಶವನ್ನು ಕೂಡಿಟ್ಟರು. ಪರವೂರಲ್ಲಿದ್ದ ಕುಟುಂಬಸ್ಥರು ಒಟ್ಟಾಗಿ ತವರಿಗೆ ಬಂದು ಊರಲ್ಲಿದ್ದವರನ್ನು ಸೇರಿಸಿಕೊಂಡು ಪಾಳು ಬಿದ್ದ ಮನೆ, ದೈವಸ್ಥಾನ ಹಾಗೂ ನಾಗಬನಗಳನ್ನು ಪುನರುದ್ಧಾರಗೊಳಿಸಿದರು. ಮೂಲ ತರವಾಡು ಮನೆಯನ್ನು ಮುರಿದು ಭವ್ಯ ಬಂಗಲೆ, ದೈವಗಳಿಗೆ ದೈವಸ್ಥಾನ, ಭಂಡಾರಾದಿಗಳನ್ನು ನಿರ್ಮಿಸಲಾಯಿತು. ಒಂದು ವಾರದ ವೈಭವದ ಬ್ರಹ್ಮಕಲಶ, ವಿವಿಧ ಹೋಮಗಳು, ನಾಗಪ್ರತಿಷ್ಠೆ, ದೈವಗಳಿಗೆ ಕೋಲ ನೇಮಗಳನ್ನು ಗ್ರಾಮ ದೇವಸ್ಥಾನದ ಬ್ರಹ್ಮಕಲಶವನ್ನು ಮೀರಿಸುವಂತಿತ್ತು. ದೇಶ ವಿದೇಶಗಳಲ್ಲಿ ದುಡಿಯುತ್ತಿದ್ದ ಉದ್ಯಮಿ, ಉದ್ಯೋಗಸ್ಥರು ಹಣದ ಹೊಳೆಯನ್ನೇ ಹರಿಸಿದರು ಎಂದರೂ ತಪ್ಪಿಲ್ಲ. ಇರಲಿ, ಎಲ್ಲವೂ ತವರಿಗಾಗಿ ಎಂಬ ಧನ್ಯತಾ ಭಾವ. ಆದರೆ ನೆಮ್ಮದಿಯ ನಿಟ್ಟುಸಿರು ದೀರ್ಘಕಾಲ ಉಳಿಯಲಿಲ್ಲ. ಆ ಮನೆ ಜೀವಂತವಾಗಿರಬೇಕಿತ್ತು. ಆದರೆ ಗೌಜಿ ಗದ್ದಲ ಕಳೆದು ಮನೆಗೆ ಬೀಗ ಹಾಕಿ ದಿನಕೊಮ್ಮೆ ಬಾಗಿಲು ತೆರೆದು ಚಾವಡಿಯಲ್ಲಿ ದೀಪ ಹಚ್ಚಲು ಕುಟುಂಬದ ಒಬ್ಬರನ್ನು ನೇಮಕ ಮಾಡಲಾಯಿತು. ಒಕ್ಕಲಾಗಿ ಒಂದೇ ವಾರದಲ್ಲಿ ತರವಾಡು ಮನೆ ಭೂತ ಬಂಗಲೆಯಾಗುತ್ತಿರುವುದು ಸರಿಯೇ?
ವರ್ಷದಲ್ಲಿ ಒಂದೆರಡು ಸರ್ತಿ ಪರ್ವ, ನೇಮಗಳಿಗೆ ಎಲ್ಲರೂ ಬಂದು ಸಂಭ್ರಮಿಸಿ ಹೋಗುವುದು. ಇತ್ತ ಒಂದೆರಡು ವರ್ಷದಲ್ಲಿ ಕುಟುಂಬಸ್ಥರಿಗೆ ನಾನಾ ವಿಧದ ಕಷ್ಟನಷ್ಟಗಳು ಮೇಲಿಂದ ಮೇಲೆ ಬಂತು. ಪುನಃ ಪ್ರಶ್ನೆ ಚಿಂತನೆ ಮಾಡಿದರು. ದೈವಗಳು, ಗುರುಹಿರಿಯರು ಮುನಿಸಿಕೊಂಡು ಒಕ್ಕಲಿಲ್ಲದ ತರವಾಡಿನಲ್ಲಿ ನೆಲೆಯಾಗಿರಲು ಒಪ್ಪುವುದಿಲ್ಲ ಎಂದು ಕೇಳಿ ಬಂತು. ಇದಕ್ಕೆ ಕಾರಣ ಯಾರು? ಹೀಗೆ ಆಗಲು ಪ್ರಧಾನ ಕಾರಣ ಏನೆಂದು ವಿಚಾರಿಸಿದರೆ ಉತ್ತರ ಸ್ಪಷ್ಟ. ಸರಿಯಾದ ಪೂರ್ವ ಚಿಂತನೆಯ ಕೊರತೆ. ಹಣ ( ಸಂಪತ್ತು) ಇದ್ದರೆ ಮನೆ, ಅರಮನೆ, ಬಂಗಲೆಯು ಕಟ್ಟಬಹುದು. ಆದರೆ ತರವಾಡು ಮನೆ, ದೇವಸ್ಥಾನ, ದೈವಸ್ಥಾನ, ನಾಗಪ್ರತಿಷ್ಠೆಗಳನ್ನು ಮಾಡಲಾಗುವುದಿಲ್ಲ. ಅದಕ್ಕೆ ಅದರದ್ದೇ ಆದ ವಿಧಿವಿಧಾನ ಕಟ್ಟುಕಟ್ಟಳೆಗಳಿವೆ. ಅದನ್ನು ಮೀರಿದರೆ ನೀರಲ್ಲಿಟ್ಟ ಹೋಮದಂತೆ ಆಗುವುದರಲ್ಲಿ ಸಂಶಯವಿಲ್ಲ.
ತರವಾಡು ಮನೆಯ ಕೆಲಸಕ್ಕೆ ಮುಂಚಿತವಾಗಿ ಕುಟುಂಬಸ್ಥರೆಲ್ಲಾ ಸೇರಿಕೊಂಡು ಅನುಭವಿ ಸ್ಥಳೀಯ ಚಿಂತಕರನ್ನು ಸೇರಿಸಿಕೊಂಡು ತರವಾಡು ಹೇಗಿರಬೇಕು? ಚಾವಡಿಯಲ್ಲಿ ಯಾವ ದೈವ ಹೊರಗೆ ಯಾವ ದೈವಗಳಿಗೆ ಸ್ಥಾನ, ನಾಗವನ ಹಾಗೂ ಗುಳಿಗವನ ಸಾನಿಧ್ಯಗಳ ಬಗ್ಗೆ ನಿಖರವಾದ ಚಿಂತನೆ ಹಾಗೂ ತಂಬಿಲ, ಅಗೇಲು, ಉತ್ಸವಾದಿಗಳು, ಪ್ರತಿಷ್ಠೆ, ಆರಾಧನೆ ಇತ್ಯಾದಿ ಪೂರ್ವ ಪದ್ಧತಿ ಸಂಪ್ರದಾಯಗಳು ಹೇಗಿತ್ತು? ಮತ್ತು ಮುಂದೆ ಹೇಗಿರಬೇಕು? ಎಂಬ ಅರಿವು ಇತ್ಯಾದಿ ಎಲಲ್ಲಾ ಮಾಹಿತಿಗಾಗಿ ಪೂರ್ವ ಕಾಲದಿಂದಲೇ ಇಲ್ಲೇ ಹುಟ್ಟಿ ಬೆಳೆದ ಬಲ್ಯಾಯ, ಕಣಿಯ ಮತ್ತು ಮೂಲದವರನ್ನು ಸೇರಿಸಿಕೊಂಡು ಪೂರ್ವಾಪರ ಚಿಂತನೆ ಆಗಬೇಕಿತ್ತು. ಅದಕ್ಕೆ ಬದಲಾಗಿ ಕೇವಲ ಆರೇಳು ಶತಮಾನದ ಹಿಂದೆ ಇಲ್ಲಿಗೆ ಬಂದ ಪುರೋಹಿತ ವರ್ಗದವರಿಂದ ದೈವಕಾರ್ಯ ಮಾಡಲಾಯಿತು. ಅವರು ದೇವಸ್ಥಾನಗಳ ಪೂಜಾ ಕಾರ್ಯ, ದೇವಪ್ರಶ್ನೆ, ಯಜ್ಞ ಯಾಗ ಹೋಮಾದಿಗಳನ್ನು ಮಾಡಬಹುದು. ದೇವ ಕಾರ್ಯಗಳಲ್ಲಿ ಕಾಲಕಾಲಕ್ಕೆ ಹಲವಾರು ಬದಲಾವಣೆಗಳು ಆಗುತ್ತಾ ಇವೆ. ಅದು ಕಾಲ ಧರ್ಮವೋ, ಅನುಕೂಲ ಶಾಸ್ತ್ರವೋ ಆಗಿರಬಹುದು. ಆದರೆ ದೈವಗಳು ಮೂಲ ಬದಲಾವಣೆ ಒಪ್ಪುವುದೇ ಇಲ್ಲ. ಇಂದು ಕೂಡಾ ದೈವದ ನುಡಿಯಲ್ಲಿ ನೀವು ಭಕ್ತಿಯಿಂದ ನನಗೆ ಕಾಡಿನ ಪುರ್ಪ, ತೋಡ ನೀರು, ತೋಟದ ಹಾಳೆಯಲ್ಲಿ ಕೋಲ ಕೊಟ್ಟರೆ ಸಾಕೆಂದು ಹೇಳುತ್ತವೆ. ಒಟ್ಟಾಗಿ ನಮಗೆ 5 ಸೀಯಾಳ, ಪಂಚಾಮೃತ ಶ್ರದ್ಧಾಭಕ್ತಿಯಿಂದ ಸಲ್ಲಿಸಿದರೆ ಸಾಕೆಂದು ನುಡಿಯುತ್ತವೆ.
ಹಿಂದಿನ ತರವಾಡು ಜೀವನ ಕ್ರಮ ಚಾವಡಿಯಲ್ಲಿ ಧರ್ಮದೈವದ ಉಯ್ಯಾಲೆಯಾದರೆ ಎಡ ಬಲ ಭಾಗದಲ್ಲಿ ಇತರ ದೈವಗಳ ಸಾನಿಧ್ಯ ಇರುತ್ತಿತ್ತು. ಸಸ್ಯಾಹಾರಿ ದೈವಗಳಿಗೆ ಮನೆಯ ಅಂಗಳದಲ್ಲಿ ಅಥವಾ ಮಾಡಗಳಲ್ಲಿ ಸ್ಥಾನ ಇರುತ್ತಿತ್ತು. ಚಾವಡಿಯ ಸುತ್ತು ಕೋಣೆಗಳಲ್ಲಿ ಕುಟುಂಬದ ದಂಪತಿ ಮಲಗುವ ಕೋಣೆ. ಅಡುಗೆ ಕೋಣೆಯಲ್ಲಿ ಮಂತ್ರದೇವತೆಯ ಸಾನ್ನಿಧ್ಯ. ಅದು ನಿತ್ಯ ಅಡುಗೆ (ಆಹಾರ) ಯ ರಕ್ಷಕಿಯಾದರೆ, ಚಾವಡಿಯಲ್ಲಿರುವ ದೈವಗಳ ಕುಟುಂಬ (ಮನೆ) ದವರ ರಕ್ಷಣೆ ಹೊಣೆ ಹಾಗೆಯೇ ಹೊರಗಿರುವ ಜಾನುವಾರು ಮತ್ತು ಕೃಷಿಯ ರಕ್ಷಣೆಯನ್ನು ನಾಗ, ಗುಳಿಗ ಹಾಗೂ ಇತರ ಶಕ್ತಿಗಳು ಮಾಡುತ್ತವೆ ಎಂಬ ನಂಬಿಕೆ ಇತ್ತು. ಒಂದು ರೀತಿಯಲ್ಲಿ ತುಳುನಾಡಿನಲ್ಲಿ ನಮಗೂ ದೈವಗಳಿಗೂ ಹೋಲುವ ಸಂಬಂಧ ಎಂದರೂ ತಪ್ಪಿಲ್ಲ. ಆದರೆ ಈಗ ಆಧುನಿಕ ತರವಾಡು ಮನೆಯಲ್ಲಿ ಎಲ್ಲಾ ಕೋಣೆಗಳಲ್ಲೂ ಬೇರೆ ಬೇರೆ ದೈವಗಳಿಗೆ ಸ್ಥಾನ ಕಲ್ಪಿಸಲಾಗಿದೆ. ಚಾವಡಿ ಮಾತ್ರ ಬರಿದಾಗಿದೆ. ವಾಸ್ತವದಲ್ಲಿ ಇದೊಂದು ದೈವಗಳ ತರವಾಡು (ದೈವಾಲಯ) ಎನ್ನುವುದೇ ಸರಿಯಲ್ಲವೇ ದೇವಾಲಯಗಳಲ್ಲಿ ದೇವರು ಮತ್ತು ಪರಿವಾರ ದೈವಗಳಿಗೆ ಮಾತ್ರ ನೆಲೆ. ಅಲ್ಲಿ ಕುಟುಂಬ ವಾಸ ಮಾಡಬಾರದೆಂಬ ನಿಯಮ ಇರುವಂತೆ ಇಲ್ಲಿಯೂ ತಂತ್ರಿ ವರ್ಗದವರು ತರವಾಡು ಮನೆ ದೈವಗಳಿಗೆ ಮಾತ್ರ ಎಂಬ ಅಪ್ಪಣೆಯಾಗಿರಬೇಕು. ಆದರೆ ತುಳುವ ಸಂಪ್ರದಾಯ ಪ್ರಕಾರ ದೈವಗಳು ನಮ್ಮೊಂದಿಗೆ ಮನೆಯಲ್ಲಿರುತ್ತವೆ. ಪ್ರತಿಯೊಂದು ಬ್ರಾಹ್ಮಣ ಸಂಪ್ರದಾಯದವರಿಗೆ ಮನೆ (ಕುಲ) ದೇವರು ಇದ್ದಂತೆ. ತುಳು ವಂಶಜರಿಗೆ ಕುಲದೈವಗಳು ಮನೆಯಲ್ಲಿ ಬೇರೆ ದೇವರ ಕೋಣೆ ಇಲ್ಲ. ಮನೆಯ ಒಡತಿ ಅಡುಗೆ ಮಾಡಿ ಎಲ್ಲರಿಗೆ ಬಡಿಸುವ ಮೊದಲು ತಡ್ಯೆಯ ಮೇಲೆ ಮರದ ತಟ್ಟೆಯಲ್ಲಿ ಬಡಿಸಿ ಪ್ರೇತಾತ್ಮ (ಪಿತೃ) ಗಳಿಗೆ ಇಡಬೇಕು. ಸದ್ಯ ಒಕ್ಕಲೇ ಇಲ್ಲದ ಈಗಿನ ಮನೆಯಲ್ಲಿ ದೈವ ಹಾಗೂ ಗುರುಹಿರಿಯರಿಗೆ ನಿತ್ಯ ದಾಸೋಹ ಎಲ್ಲಿದೆ? ವರ್ಷದಲ್ಲಿ ಒಂದೆರಡು ಬಾರಿ ಪರ್ವಗಳಿಗೆ ಬಂದವರು ಒಟ್ಟು ಸೇರಿ ಸಂಭ್ರಮಿಸಿ ಹೋಗುತ್ತಾರೆ. ಇತ್ತೀಚೆಗೆ ಹೊಸ ಕುಟುಂಬಗಳೆಲ್ಲ ನಾನಾ ತರದ ಕಷ್ಟ ನಷ್ಟಗಳು, ರೋಗ ರುಜಿನಗಳು ಮೇಲಿಂದ ಮೇಲೆ ಬರುತ್ತಿರುವಾಗ ಪುನಃ ಪ್ರಶ್ನೆ ಚಿಂತಿಸಿದಾಗ ಕುಟುಂಬ ದೈವಗಳು ಹಾಗೂ ಗುರು ಹಿರಿಯರು ಮುನಿಸಿಕೊಂಡಿದ್ದಾರೆ. ಪಿತೃಗಳಿಗೆ ಮೋಕ್ಷ ಆಗಲಿಲ್ಲ ಇತ್ಯಾದಿ. ವರ್ಷಗಳ ಹಿಂದೆ ಕೋಟಿಗಟ್ಟಲೆ ಸುರಿದಿದ್ದು ವ್ಯರ್ಥವಾಯಿತೇ? ಈಗಿನ ತರ ವಾಡಿನಲ್ಲಿ (ಒಕ್ಕಲಿಲ್ಲದ) ಬಡಿಸಿದ್ದನ್ನು ಇವರು ಸ್ವೀಕರಿಸುವುದಿಲ್ಲ ಎಂದು ತಿಳಿದು ಬಂತು.
ಒಂದು ಉದಾಹರಣೆ ಹೇಳುವುದಾದರೆ, ಮಂಜೇಶ್ವರ ಮಾಗಣೆಗೆ ಸೇರಿದ ದೊಡ್ಡ ಕುಟುಂಬಸ್ಥರೆಲ್ಲ ಒಟ್ಟು ಸೇರಿ ದೊಡ್ಡ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ತರವಾಡು, ದೈವಸ್ಥಾನ, ಭಂಡಾರಗಳು ಹಾಗೆಯೇ ಮನೆಯಂಗಳದಲ್ಲಿ ನಾಗಪ್ರತಿಷ್ಠೆ, ಬ್ರಹ್ಮರಾಕ್ಷಸ ಗುಡಿ, ಜಲದುರ್ಗೆ ಇತ್ಯಾದಿಗಳನ್ನು ನಿರ್ಮಿಸಿ ವಿಜೃಂಭಣೆಯಿಂದ ಬ್ರಹ್ಮಕಲಶ ಮಾಡಿ ಕೇವಲ ಎರಡೇ ವರ್ಷದಲ್ಲಿ ಸಂಪೂರ್ಣ ಅಗೆದು ತೆಗೆದು ಪೂರ್ವ ಪದ್ಧತಿಯಂತೆ ನಂಬಿಕೊಂಡು ಬರುತ್ತಿದ್ದಾರೆ. ಇದಕ್ಕೇನು ಕಾರಣ? ಒಟ್ಟಾರೆಯಾಗಿ ಹೇಳುವುದಾದರೆ ಶೇ 90ರಷ್ಟು ಬಂಟ ಸಮುದಾಯದ ತರವಾಡುಗಳು ಜೀರ್ಣೋದ್ದಾರವಾಯಿತು. ಆದರೆ ಎಲ್ಲಿಯೂ ಪುನಃ ಶಾಂತಿ, ತೃಪ್ತಿ ಇಲ್ಲ ಎನ್ನುತ್ತಾರೆ. ಇದಕ್ಕೆ ಒಂದೇ ಪರಿಹಾರ ತರವಾಡಿನಲ್ಲಿ ಸ್ಥಿರವಾಗಿ ವಾಸವಿರುವ ವ್ಯವಸ್ಥೆ ಮಾಡುವುದು ಹಾಗೂ ಇಲ್ಲಿನ ದೈವ ಮೂಲ ಕೃಷಿ ಪರಂಪರೆಯನ್ನು ಉಳಿಸೋಣ.
ಕಡಾರು ವಿಶ್ವನಾಥ್ ರೈ