ರೋಟರಿ ಅಂತರರಾಷ್ಟ್ರೀಯ ಜಿಲ್ಲೆ 181 ವಲಯ 5 ರ 2024-2025 ನೇ ಸಾಲಿನ ರೋಟರಿ ಅಸಿಸ್ಟೆಂಟ್ ಗವರ್ನರ್ ಗಳಾಗಿ ರೋಟರಿ ಕ್ಲಬ್ ಪುತ್ತೂರು ಪೂರ್ವದ ಸೂರ್ಯನಾಥ ಆಳ್ವ, ರೋಟರಿ ಕ್ಲಬ್ ಪುತ್ತೂರು ಯುವದ ಹರ್ಷಕುಮಾರ್ ರೈ ಮಾಡಾವು ಮತ್ತು ರೋಟರಿ ಕ್ಲಬ್ ಬೆಳ್ಳಾರೆ ಟೌನ್ ನ ಕೆ. ವಿನಯ ಕುಮಾರ್ ನಿಯೋಜಿತರಾಗಿದ್ದಾರೆ. ಪುತ್ತೂರು, ಸುಳ್ಯ ಮತ್ತು ಕಡಬ ತಾಲೂಕಿಗೆ ಒಳಪಟ್ಟ 12 ರೋಟರಿ ಕ್ಲಬ್ ಗಳ ಜವಾಬ್ದಾರಿಯನ್ನು ರೋಟರಿ ಜಿಲ್ಲಾ ಗವರ್ನರ್ ವಿಕ್ರಮ್ ದತ್ತ ಅವರ ನಿರ್ದೇಶನದಂತೆ ಇವರುಗಳಿಗೆ ವಹಿಸಿಕೊಡಲಾಗಿದೆ.
ಸೂರ್ಯನಾಥ ಆಳ್ವ : ರೋಟರಿ ಕ್ಲಬ್ ಪುತ್ತೂರು ಪೂರ್ವದ ಸದಸ್ಯರಾಗಿ 1995 ರಲ್ಲಿ ರೋಟರಿ ಸಂಸ್ಥೆಗೆ ಸೇರಿ ರೋಟರಿ ಪೂರ್ವದ ವಿವಿಧ ಹುದ್ದೆಗಳನ್ನು ಅಲಂಕರಿಸಿ 2007-2008 ರಲ್ಲಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿರುತ್ತಾರೆ. ನಂತರ ರೋಟರಿವಲಯ ಮತ್ತು ಜಿಲ್ಲೆಯ ವಿವಿಧ ಜವಾಬ್ದಾರಿಯನ್ನು ನಿರ್ವಹಿಸಿ ಇದೀಗ 2004-2005 ಸಾಲಿಗೆ ಅಸಿಸ್ಟೆಂಟ್ ಗವರ್ನರ್ ಆಗಿ ನೇಮಕಗೊಂಡಿರುತ್ತಾರೆ. 1964ರಲ್ಲಿ ಬಂಟ್ವಾಳ ತಾಲೂಕಿನ ಅಳಕೆ ಗ್ರಾಮದ ಮಿತ್ತಳಿಕೆಯಲ್ಲಿ ಕಡಾರುಬೀಡು ಸಂಕಯ್ಯ ಆಳ್ವ ಮತ್ತು ಮಿತ್ತಳಿಕೆ ದೇವಕಿ ಎಸ್ ಆಳ್ವರ ಪುತ್ರನಾಗಿ ಜನಿಸಿದ ಇವರು ತನ್ನ ಪಿಯುಸಿವರೆಗಿನ ಶಿಕ್ಷಣವನ್ನು ಅಳಿಕೆ ಸತ್ಯ ಸಾಯಿ ಸಂಸ್ಥೆಯಲ್ಲಿ ಪೂರೈಸಿ, ಪದವಿ ಶಿಕ್ಷಣವನ್ನು ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಪೂರೈಸಿರುತ್ತಾರೆ. ಮುಂದೆ ತನ್ನ ಉದ್ಯೋಗವನ್ನು ವಿದ್ಯುತ್ ಗುತ್ತಿಗೆದಾರರಾಗಿ 1987ರಲ್ಲಿ ಪುತ್ತೂರಿನಲ್ಲಿ ಪ್ರಾರಂಭಿಸಿ ಪ್ರಸ್ತುತ ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತನ್ನ ಹುಟ್ಟೂರು ಅಳಿಕೆಯಲ್ಲಿ 1991 ರಲ್ಲಿ ಸಾರ್ವಜನಿಕ ಗಣೇಶೋತ್ಸವವನ್ನು ಆರಂಭಿಸಿ ಅದರ ಅಧ್ಯಕ್ಷರಾಗಿ ಪ್ರತಿ ವರ್ಷ ಬಹಳ ವಿಜೃಂಭಣೆಯಿಂದ ಗಣೇಶೋತ್ಸವವನ್ನು ನಡೆಸುತ್ತಿದ್ದಾರೆ. ಅಳಿಕೆ ಗ್ರಾಮದ ದೈವ ದೇವಸ್ಥಾನಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಸಾರ್ವಜನಿಕ ಸೇವೆಯ ಜೊತೆಗೆ ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷರಾಗಿ, ವಿವೇಕಾನಂದ ವಿದ್ಯಾವರ್ಧಕ ಸಂಘದ ಸದಸ್ಯನಾಗಿ, ನರೇಂದ್ರ ಪಿಯು ಕಾಲೇಜಿನ ಆಡಳಿತ ಸಮಿತಿಯ ಸದಸ್ಯರಾಗಿದ್ದಾರೆ. ಪ್ರಸ್ತುತ ಎಪಿಎಂಸಿ ರಸ್ತೆಯ ಮಿತ್ತಳಿಕೆ ಆರ್ಕೆಡ್ ನಲ್ಲಿ ತನ್ನ ವೃತ್ತಿ ನಡೆಸುತ್ತಿರುವ ಇವರು ಪುತ್ತೂರಿನ ದರ್ಬೆಯ ಸಿಟಿಓ ರಸ್ತೆಯ ನಿವಾಸಿಯಾಗಿದ್ದಾರೆ.
ಹರ್ಷ ಕುಮಾರ್ ರೈ: ರೋಟರಿ ಕ್ಲಬ್ ಪುತ್ತೂರು ಯುವದ ಸ್ಥಾಪಕ ಸದಸ್ಯರಾಗಿರುವ ಇವರು ಕ್ಲಬ್ ನ ಅಧ್ಯಕ್ಷರಾಗಿ ವಲಯ ಸೇನಾನಿಯಾಗಿ ಆಸ್ಟ್ರೇಲಿಯಾ ರೋಟರಿ ಅಂತರಾಷ್ಟ್ರೀಯ ಸಮ್ಮೇಳನದ ಸಂಯೋಜಕರಾಗಿ ಕಾರ್ಯನಿರ್ವಹಿಸಿದ್ದಾರೆ. ಪ್ರಸ್ತುತ ರಸ್ತೆ ಸುರಕ್ಷತೆ ಮತ್ತು ಜಾಗೃತಿಯ ರೋಟರಿಯ ಜಿಲ್ಲಾ ಚೈರ್ ಮ್ಯಾನ್ ಆಗಿ, ಸಿಂಗಾಪುರ ರೋಟರಿ ಅಂತರಾಷ್ಟ್ರೀಯ ಸಮ್ಮೇಳನದ ಸಂಚಾಲಕರಾಗಿ ಮತ್ತು ರೋಟರ್ಯಾಕ್ಟ್ ಕ್ಲಬ್ ಮಂಗಳೂರು ಯುನೈಟೆಡ್ ಇದರ ಕ್ಲಬ್ ರಾಯಭಾರಿಯಾಗಿ ಹುದ್ದೆಯನ್ನು ನಿರ್ವಹಿಸುತ್ತಿದ್ದಾರೆ. ಇವರು ರೋಟರಿಯಲ್ಲಿ ಮಾಡಿರುವ ಜನಪರ, ಸಾಮಾಜಿಕ ಸೇವಾ ಕಾರ್ಯಗಳನ್ನು ಗುರುತಿಸಿ ರೋಟರಿ ಜಿಲ್ಲಾ ಗವರ್ನರ್ ಮತ್ತು ರೋಟರಿ ಅಂತರಾಷ್ಟ್ರೀಯ ಅಧ್ಯಕ್ಷರಿಂದ ಹಲವು ಬಾರಿ ಗೌರವ ಮತ್ತು ಪ್ರಶಂಸನಾ ಪತ್ರವನ್ನು ಪಡೆದಿದ್ದಾರೆ. ಇವರು ಕ್ಲಬ್ ಅಧ್ಯಕ್ಷರಾಗಿ ಕೊರೋನಾ ಸಂದರ್ಭದಲ್ಲಿ ಮಾಡಿರುವ ರೋಟರಿ ಸೇವಾ ಕಾರ್ಯದಿಂದ ಕ್ಲಬ್ ಮೊತ್ತ ಮೊದಲ ಬಾರಿಗೆ ಪ್ಲಾಟಿನಮ್ ಪ್ಲಸ್ ವಿಭಾಗದಲ್ಲಿ ಗುರುತಿಸಲ್ಪಟ್ಟಿತ್ತು. ಜಿಲ್ಲಾ ಗವರ್ನರ್ ಎಚ್.ಆರ್.ಕೇಶವ್ ಅವರ ಮಾರ್ಗದರ್ಶನದಲ್ಲಿ ಕಂದಾಯ ಜಿಲ್ಲೆಗಳಾದ ದಕ್ಷಿಣ ಕನ್ನಡ, ಕೊಡಗು, ಮೈಸೂರು ಮತ್ತು ಚಾಮರಾಜ ನಗರಗಳಲ್ಲಿ ಆಯಾ ರೋಟರಿ ಕ್ಲಬ್ ಗಳ ನೇತೃತ್ವದಲ್ಲಿ ರಸ್ತೆ ಸುರಕ್ಷಿತೆ ಮತ್ತು ಜಾಗೃತಿ ಸಂಬಂಧ ಪಟ್ಟ ಅತೀ ಹೆಚ್ಚು ಕಾರ್ಯಕ್ರಮಗಳನ್ನು ಸಂಘಟಿಸಿ ರೋಟರಿ ಇಂಡಿಯಾದಲ್ಲಿಯೇ ಹೊಸ ದಾಖಲೆ ನಿರ್ಮಿಸಿದ ಹೆಗ್ಗಳಿಕೆ ಇವರದು.
ಇವರು ಪುತ್ತೂರು ತಾಲೂಕು ಯುವ ಬಂಟರ ಸಂಘದ ಅಧ್ಯಕ್ಷರಾಗಿ, ಜನ್ಮ ಫೌಂಡೇಶನ್ ಟ್ರಸ್ಟ್ ಇದರ ಅಧ್ಯಕ್ಷರಾಗಿ, ಬ್ರೈಟ್ ವೇ ಇಂಡಿಯಾ ಸಂಸ್ಥೆಯ ಆಡಳಿತ ನಿರ್ದೇಶಕರಾಗಿ, ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನ ಗೌರವ ಕೋಶಾಧ್ಯಕ್ಷರಾಗಿ, ಇಂಡಿಯನ್ ರೋಡ್ ಕಾಂಗ್ರೆಸ್ ಇದರ ತಾಂತ್ರಿಕ ಸಲಹೆಗಾರರಾಗಿ, ವಿಶ್ವ ಹಿಂದೂ ಪರಿಷತ್ ಜಿಲ್ಲಾ ವಿಶೇಷ ಸಂಪರ್ಕ ಪ್ರಮುಖರಾಗಿ, ಎಸಿಸಿಇ ಮಂಗಳೂರು ಇದರ ಕಾರ್ಯಕಾರಿ ಸಮಿತಿ ಸದಸ್ಯರಾಗಿ, ದಕ್ಷಿಣ ಕನ್ನಡ ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಷನ್ ಎಕ್ಸಿಕ್ಯೂಟಿವ್ ಸದಸ್ಯರಾಗಿ ಸೇರಿದಂತೆ ಹಲವು ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡಿದ್ದಾರೆ.
ವಿನಯ್ ಕುಮಾರ್ : ಸುಳ್ಯ ತಾಲೂಕು ಬೆಳ್ಳಾರೆ ಗ್ರಾಮದ ಭಾರದ್ವಾಜ ಪ್ರಿಂಟರ್ಸ್ ನ ಮಾಲಕರಾದ ರೋ ಕೆ ವಿನಯಕುಮಾರ್ ಅವರು ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಇದರ 2017-18 ಸಾಲಿನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದವರು. ಇವರ ಅಧ್ಯಕ್ಷತೆಯಲ್ಲಿ ರೋಟರಿ ಜಿಲ್ಲೆಯಿಂದ ರೋಟರಿ ಸೇವಾ ಕಾರ್ಯಗಳನ್ನು ಗುರುತಿಸಿ ಬೆಳ್ಳಾರೆ ಕ್ಲಬ್ ಗೆ 27 ಅವಾರ್ಡ್ ದೊರಕಿಸಿಕೊಡುವಲ್ಲಿ ಯಶಸ್ವಿ ಆಗಿದ್ದರು.2023 ನೇ ಇಸವಿಯಲ್ಲಿ ರೋಟರಿ ಪೀಸ್ ಸೆಂಟರ್ ನ trained endorser ಆಗಿಯೂ ಕರ್ತವ್ಯ ನಿರ್ವಹಿಸಿ ಅನುಭವ ಪಡೆದಿರುವ ಇವರು ಭಾರತೀಯ ರೆಡ್ ಕ್ರಾಸ್ ಸೊಸೈಟಿ ಸುಳ್ಯ ತಾಲೂಕು ಘಟಕದ ಕೋಶಾಧಿಕಾರಿಯಾಗಿ, ಬಾಲವಿಕಾಸ ಸಮಿತಿ ಬೆಳ್ಳಾರೆ ಇದರ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬೆಳ್ಳಾರೆ ವಾಣಿಜ್ಯ, ವರ್ತಕ ಮತ್ತು ಕೈಗಾರಿಕಾ ಸಂಘದ ಸ್ಥಾಪಕ ಕಾರ್ಯದರ್ಶಿಯಾಗಿದ್ದು ಪ್ರಸ್ತುತ ಸಂಘದ ನಿರ್ದೇಶಕರಾಗಿದ್ದಾರೆ. ರೋಟರಿ ಜಿಲ್ಲಾ ಸಾಕ್ಷರತಾ ವಿಭಾಗದ ಉಪಾಧ್ಯಕ್ಷರಾಗಿ ಈ ಸಾಲಿನ ವರ್ಷದಲ್ಲಿ ಜವಾಬ್ದಾರಿ ವಹಿಸಿಕೊಂಡಿರುವ ವಿನಯಕುಮಾರ್ ರವರು ಡಿಜಿಟಲ್ ರೋಟರಿಯಲ್ಲಿ ಹೆಚ್ಚಿನ ಜ್ಞಾನ ಹೊಂದಿದ್ದಾರೆ.