ನಮ್ಮ ದೇಶದಲ್ಲಿ ನ್ಯಾಯಾಲಯಗಳ ಸ್ಥಾಪನೆಯ ಪೂರ್ವದಲ್ಲೇ ತೌಳವ ನಾಡಿನಲ್ಲಿ ನೊಂದವರಿಗೆ ನ್ಯಾಯ ಕೊಡಲು ದೈವಗಳ ಧರ್ಮ ಪೀಠಗಳನ್ನು ಸ್ಥಾಪಿಸಲಾಯಿತು. ಅದು ರಾಜಾಡಳಿತದ ಕಾಲವಾಗಿತ್ತು. ರಾಜನ ಆಸ್ಥಾನದಲ್ಲೂ ವಾದಿ ಪ್ರತಿವಾದಿಗೆ ಸಮ್ಮತದ ತೀರ್ಮಾನ ಲಭಿಸದೆ ಇದ್ದಾಗ ಸ್ವತಃ ರಾಜನೇ ದೈವಗಳ ಧರ್ಮ ಸನ್ನಿಧಿಯಲ್ಲೇ ಪ್ರಮಾಣ ಮಾಡಲು ಆಜ್ಞಾಪಿಸುತ್ತಿದ್ದರು.
ತೌಳವ ನೆಲದ ಆಧಾರ ಸ್ಥಂಭಗಳಂತೆ ನಾಲ್ಕು ದಿಕ್ಕುಗಳಲ್ಲಿ ನೆಲೆಯಾಗಿತ್ತು. ಆ ಧರ್ಮ ದೈವಗಳ ಮೂಲ ನೆಲೆ ದೈವ ಭಾಷೆಯಲ್ಲಿ ಹೇಳುವುದಾದರೆ “ಬಡಕಾಯಿ ಬಾರಕೂರು, ತೆನ್ಕಾಯಿ ಕಾನತ್ತೂರು, ಮುಡಾಯಿ ಕುಡುಮ, ಪಡ್ಡಾಯಿ ಕೊಂಡಾಣ ಅಂಚತ್ತ ಸತ್ಯ ಪ್ರಮಾಣ” ಎಂಬ ನುಡಿ ಇತ್ತು. ಕಳೆದ 50 ವರ್ಷಗಳವರೆಗೆ ನಮ್ಮ ಹಿರಿಯರು ಈ ನಾಲ್ಕು ಸ್ಥಳಗಳ ಹೆಸರು ಅಥವಾ ಅಲ್ಲಿ ನೆಲೆಯಾಗಿದ್ದ ದೈವಗಳ ಹೆಸರನ್ನು ಹೇಳಲು ಧೈರ್ಯ ಮಾಡುತ್ತಿರಲಿಲ್ಲ. ಅಪ್ಪಿ ತಪ್ಪಿ ಹೆಸರು ಹೇಳಿದರೆ ಕೈ ಬೆರಳನ್ನು ಕಚ್ಚಿ ಕ್ಷಮೆ ಯಾಚಿಸುವಷ್ಟು ಭಯ ಭಕ್ತಿ ಇತ್ತು. ಸ್ಥಳಗಳ ಬದಲಾಗಿ ತೆನ್ಕಾಯಿ ಎಂದರೆ ಕಾನತ್ತೂರು ಮತ್ತು ಪಡ್ಡಾಯಿ ಎಂದರೆ ಕೊಂಡಾಣ ಎಂಬರ್ಥದಲ್ಲಿ ಹೇಳುತ್ತಿದ್ದರು.
ರಾಜಾಡಳಿತದ ಬಳಿಕದಲ್ಲಿ ನ್ಯಾಯಾಲಯಗಳು ಸ್ಥಾಪನೆಯಾದರೂ ಬಲಶಾಲಿಯಲ್ಲಿ ನೇರವಾಗಿ ಹೋರಾಡಲು ಶಕ್ತಿ ಇಲ್ಲದೇ ಕೋರ್ಟು ಕಚೇರಿಗೆ ಹೋಗಲು ತಾಕತ್ತು ಇಲ್ಲದಾಗ ನೊಂದವರು ತಣ್ಣೀರಲ್ಲಿ ಮುಳುಗಿ ಒದ್ದೆ ಬಟ್ಟೆಯಲ್ಲಿ ತನ್ನ ಮನೆಯ ತುಳಸಿ ಕಟ್ಟೆಯ ಬಳಿ ನಿಂತು ತನಗಾದ ಅನ್ಯಾಯವನ್ನು ಕುಟುಂಬದ ನಾಗ ದೈವಗಳ ಸಾಕ್ಷಿಯಾಗಿ ಮೇಲಿನ ಯಾವುದಾದರೂ ಒಂದು ಸ್ಥಳದ ದೈವಗಳನ್ನು ನೆನೆದು ‘ನೀನು ನೋಡಿದಂತೆ ಇರಲಿ’ ಎಂದು ಅಡ್ಡ ಬೀಳುತ್ತಿದ್ದರು. ಹೆಚ್ಚೆಂದರೆ ಒಂದು ವರ್ಷದ ಒಳಗೆ ಅವನ ಕಾರ್ಯ ಸಾಧನೆ ಆಗುತ್ತಿತ್ತು. ಅನಂತರ ಆದಷ್ಟು ಬೇಗನೆ ಆ ಸ್ಥಳಕ್ಕೆ ಹೋಗಿ ಅಲ್ಲಿನ ಧರ್ಮದರ್ಶಿಯಲ್ಲಿ ಕಾರ್ಯವನ್ನು ವಿವರಿಸಿ ಅರಿಕೆ ಒಪ್ಪಿಸಿ ಬರುತ್ತಿದ್ದರು.
ಸಾಧಾರಣ 1950 ರ ಬಳಿಕ ಸಂಬಂಧ ಪಟ್ಟವರು ತಮ್ಮ ದೂರನ್ನು ಅಲ್ಲಿಗೆ ಹೋಗಿಯೇ ಧರ್ಮದರ್ಶಿಯಲ್ಲಿ ಒಪ್ಪಿಸಿ ಅವರು ವಾದಿಗೆ ನೋಟಿಸ್ ಕಳುಹಿಸುತ್ತಿದ್ದರು. ಆ ದಿನ ವಾದಿ ಪ್ರತಿವಾದಿಗಳ ವಿಮರ್ಶೆ ಕ್ಷೇತ್ರದ ಚಾವಡಿಯಲ್ಲಿ ನಡೆಯುತ್ತಿತ್ತು. ಅಂತಿಮವಾಗಿ ಅಲ್ಲಿಂದ ಒಂದು ತೀರ್ಮಾನ ಹೇಳುತ್ತಿದ್ದರು. ಅದು ಒಪ್ಪಿಗೆ ಆಗದಿದ್ದಲ್ಲಿ ದೈವದ ನಡೆಯಲ್ಲಿ ನ್ಯಾಯ ತೀರ್ಮಾನವನ್ನು ದೈವಗಳಿಗೆ ಒಪ್ಪಿಸಿ ಪ್ರಾರ್ಥಿಸಿ ಪ್ರಸಾದ ಕೊಡುತ್ತಾರೆ. ನ್ಯಾಯ ದಾನ ಸರಿಯಾಗಿದ್ದರೆ ಧರ್ಮಾಧಿಕಾರಿ ಹೇಳಿದಷ್ಟು ಮೊತ್ತವನ್ನು ಅಲ್ಲಿಗೆ ಹೋಗಿ ಕೊಡಲೇ ಬೇಕಾಗಿತ್ತು.
ಆದರೆ ಬಾರಕೂರಿನಲ್ಲಿ ನ್ಯಾಯಾಲಯ ಸ್ಥಾಪನೆಯ ಕಾಲದಲ್ಲೇ ಅಲ್ಲಿ ನ್ಯಾಯದಾನ ವ್ಯವಸ್ಥೆಯು ಧರ್ಮದರ್ಶಿಗಳ ನೇತೃತ್ವದಲ್ಲಿ ನಡೆಯುವುದನ್ನು ನಿಲ್ಲಿಸಿದ್ದಾರೆ. ಪ್ರಸ್ತುತ ಕಾನತ್ತೂರು ಕೊಂಡಾಣದಲ್ಲಿ ನೊಂದ ಭಕ್ತರು ನೀಡುವ ಸಂಪತ್ತನ್ನು ನೋಡಿ ಅನುವಂಶೀಯ ಮೊಕ್ತೇಸರ ಮನೆತನದವರು ಅಧಿಕಾರಕ್ಕಾಗಿ ಹಗ್ಗಜಗ್ಗಾಟ ನಡೆಸಿ ನ್ಯಾಯಾಲಯದ ಮೆಟ್ಟಿಲೇರಿಸಿದರು. ನ್ಯಾಯ ಪೀಠವು ಅಧಿಕಾರವನ್ನು ಪರ್ಯಾಯ ವ್ಯವಸ್ಥೆಯಲ್ಲಿ ಹಂಚಿಕೊಟ್ಟರು. ಆದರೆ ಅವರೊಳಗಿನ ಮೈಮನಸ್ಸು ಆಗಾಗ ಕೈಕೈ ಮಿಲಾಯಿಸುವ ವರೆಗೆ ತಲುಪಿದ್ದು, ನೇಮೋತ್ಸವ ಸಂದರ್ಭದಲ್ಲಿ ಪೊಲೀಸರ ರಕ್ಷಣೆಯಲ್ಲಿ ದೈವ ಕೋಲ ನಡೆಸಬೇಕಾದ ಸ್ಥಿತಿಗೆ ಮುಟ್ಟುವಂತಾಗಿದೆ. ಏನೇ ಆಗಲಿ ಅದು ನಮಗೆ ಬಾಧಕವಲ್ಲ ಎಂದು ಈಗಲೂ ವಿಶ್ವಾಸಿ ಭಕ್ತರು ದೇಶ ವಿದೇಶಗಳಿಂದ ಬಂದು ಹಣ, ಚಿನ್ನ, ಬೆಳ್ಳಿ, ನಗ ನಾಣ್ಯಗಳನ್ನು ತಂದು ಸುರಿಯುತ್ತಿದ್ದಾರೆ.
ಪ್ರಸ್ತುತ ಕೊಂಡಾಣದಲ್ಲಿ ಕಳೆದ ಕೆಲವು ವರ್ಷಗಳಿಂದ ಆಗುತ್ತಿದ್ದ ಶೀತಲ ಸಮರ ಗುಟ್ಟಾಗಿ ಉಳಿದಿಲ್ಲ. ಆದರೆ ಇತ್ತೀಚೆಗೆ ನಡೆದ ಘಟನೆ ರಷ್ಯಾ ಉಕ್ರೇನ್, ಇಸ್ರೇಲ್ ಪ್ಯಾಲೆಸ್ತೀನ್ ಯುದ್ಧ ಭೂಮಿಯ ದೃಶ್ಯವೇ ಕೊಂಡಾಣ ದೈವ ಸನ್ನಿಧಿಯಲ್ಲೇ ಕಾಣುವಂತಾಯಿತು. ಹತ್ತಿಪ್ಪತ್ತು ಕೋಟಿ ರೂಪಾಯಿಗಿಂತಲೂ ಹೆಚ್ಚು ಬೆಲೆಬಾಳುವ ದೈವಗಳ ಚಿನ್ನಾಭರಣಗಳನ್ನು ಸಂರಕ್ಷಿಸಲು ಹೊಸ ಭಂಡಾರಮನೆ ನಿರ್ಮಾಣವಾಗಿ, ಇನ್ನೇನು ಮಾಡಿಗೆ ಹಂಚು ಹೊದಿಸಲು ತಯಾರಾಗಿತ್ತು. ಆದರೆ ಒಂದು ದಿನ ಮುಂಜಾನೆ ಕಟ್ಟಡವನ್ನು ಜೆಸಿಬಿ ತಂದು ಮತ್ತೊಂದು ಗುಂಪಿನವರು ಧರಾಶಾಯಿಗೊಳಿಸಿದರು. ಇಲ್ಲಿ ದೈವ ಭಕ್ತ ಜನಸಾಗರದ ಚಿಂತೆ ಏನೆಂದರೆ, ಧರ್ಮದರ್ಶಿ ಗುಂಪಿನವರ ನ್ಯಾಯಾಲಯ ನಮಗೆ ಮುಖ್ಯವಲ್ಲ. ನೀವು ನಿಜವಾಗಿಯೂ ಆ ಬಂಟ ದೈವಗಳ ಭಕ್ತರಾಗಿದ್ದಲ್ಲಿ ಜಿಲ್ಲಾಧಿಕಾರಿ, ದತ್ತಿ ಕಮಿಷನರ್ ಹಾಗೂ ಊರಿನ ಪ್ರಮುಖರನ್ನು ಸೇರಿಸಿ ಚರ್ಚಿಸಿ ಅಂತಿಮವಾಗಿ ದೈವಗಳ ಅನುಮತಿ ಪಡೆಯಬೇಕಿತ್ತು. ಆದರೆ ಈಗ ಲೋಕವೇ ನೋಡುವ ಈ ಕುರುಕ್ಷೇತ್ರ ಯುದ್ಧ ಭೂಮಿಯ ದೃಶ್ಯಗಳನ್ನು ವಿಶ್ವಾಸಿಗಳ ಮನಸ್ಸಿನಿಂದ ಅಳಿಸಲು ಸಾಧ್ಯವೇ?
ತಡೆಯಲಾರದೆ ನೊಂದ ಪ್ರಜ್ಞಾವಂತ ಭಕ್ತ ಸಮಾಜ ನಿಮ್ಮ ಈ ಕ್ರೂರ ವಿನೋದವನ್ನು ನೋಡಿ ಬೇಸತ್ತು ದೈವ ವ್ಯಾಪಾರಿಗಳೆಂಬ ಬಿರುದು ನೀಡಿದರೆ ತಿರಸ್ಕರಿಸಲು ನಿಮಗೆ ಸಾಧ್ಯವೇ? ಎಲ್ಲಾ ನಿತ್ಯ ಭಕ್ತಿಯ ಧೂಪ ದೀಪದ ಸೇವೆ ನಡೆಯಬೇಕಿದ್ದ ಕೊಂಡಾಣದ ದೈವದ ಭಂಡಾರ ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬಂದಿಯಾಗಿರುವುದು ನಿಮಗೆ ಭೂಷಣವಾದರೂ ತಲೆ ತಲಾಂತರದಿಂದ ನಂಬಿ ಬರುತ್ತಿದ್ದ ಭಕ್ತರ ಕಣ್ಣೀರಿಗೆ ದಯವಿಟ್ಟು ಗುರಿಯಾಗದಿರಿ. ಭಕ್ತರ ತಾಳ್ಮೆಯ ಕಟ್ಟೆ ಒಡೆಯುವ ಮೊದಲಾಗಿ ವಿದ್ಯಾವಂತ, ಬುದ್ದಿವಂತ ದೈವರಾಧಕರಿಗೆ ಒಗ್ಗಟ್ಟಿನ ಸಂದೇಶ ನೀಡಿ. “ನೀವು ದೈವವನ್ನು ನಂಬದಿದ್ದರೂ ದೈವ ನಿಮ್ಮನ್ನು ನಂಬುವಂತಾಗಲಿ” ಎಂಬುದು ಪ್ರಾರ್ಥನೆ.
ಕಡಾರು ವಿಶ್ವನಾಥ್ ರೈ