ಮುಂಬಯಿ:- ಮುಂಬಯಿ ವಿಶ್ವವಿದ್ಯಾಲಯ ಸ್ಥಾಪನೆಯಾಗಿ 165 ವರ್ಷವಾಗಿದೆ. ದೇಶದ ಹಳೆಯ ವಿಶ್ವವಿದ್ಯಾಲಯಗಳಲ್ಲಿ ನಮ್ಮ ಮುಂಬಯಿ ವಿಶ್ವವಿದ್ಯಾಲಯವೂ ಒಂದು. ಕನ್ನಡ ವಿಭಾಗ ಆರಂಭವಾಗಿ 45 ವರ್ಷಗಳು ಕಳೆದು ನಲ್ವತ್ತಾರರ ಹರೆಯಕ್ಕೆ ಪಾದಾರ್ಪಣೆ ಮಾಡುತ್ತಿದೆ. ಇಂತಹ ಒಂದು ಶುಭ ಸಂದರ್ಭದಲ್ಲಿ ನಮ್ಮ ವಿಭಾಗದಲ್ಲಿ ಆರು ಕೃತಿಗಳು ಲೋಕಾರ್ಪಣೆಗೊಳ್ಳುತ್ತಿರುವುದು ಸಂತೋಷದ ಸಂಗತಿ. ಕನ್ನಡವು ಕನ್ನಡವ ಕನ್ನಡಿಸುತ್ತಿರಬೇಕು ಎಂಬ ಬೇಂದ್ರೆಯವರ ಮಾತಿನಂತೆ ಕನ್ನಡ ವಿಭಾಗ ಅಹರ್ನಿಶಿ ಕೆಲಸ ಮಾಡುತ್ತಿದೆ. ನಮ್ಮಲ್ಲಿ ವಿಜ್ಞಾನ, ತಂತ್ರಜ್ಞಾನದ ಹಿನ್ನೆಲೆಯಿಂದ ಬಂದ ವಿದ್ಯಾರ್ಥಿಗಳು ಕನ್ನಡದಲ್ಲಿ ಹೆಚ್ಚಿನ ಅಧ್ಯಯನದಲ್ಲಿ ನಿರತರಾಗಿರುವುದು ದಾಖಲೆಯೇ ಸರಿ. ಕರ್ನಾಟಕದ ಯಾವ ವಿಶ್ವವಿದ್ಯಾಲಯದಲ್ಲಿಯೂ ಇಂತಹ ಅವಕಾಶಗಳು ದೊರೆಯುತ್ತಿಲ್ಲ. ಸಾಹಿತ್ಯವಲಯವಾಗಿ ಮುಂಬಯಿ ಬೆಳೆಯುತ್ತಿದೆ.
ಕನ್ನಡ ವಿಭಾಗದ ಕೃತಿಗಳ ಸಂಖ್ಯೆ ಶತಕವನ್ನು ದಾಟುವ ಹಂತದಲ್ಲಿದೆ. ತಿಳುವಳಿಕೆಗೆ ಬೇಕಾದ ಪರಿಪ್ರೇಕ್ಷೆಯನ್ನು ಕಟ್ಟಿಕೊಡುವುದು ಕನ್ನಡ ವಿಭಾಗದ ಮುಖ್ಯ ಕೆಲಸ ಎಂದು ನಾವು ಭಾವಿಸಿದ್ದೇವೆ. ನಮ್ಮ ವಿದ್ಯಾರ್ಥಿಗಳು ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ಸವಿತಾ ಅರುಣ್ ಶೆಟ್ಟಿ ಅವರು ಪ್ರತಿಭಾವಂತ ವಿದ್ಯಾರ್ಥಿಯಾಗಿ ವಿಶ್ವವಿದ್ಯಾಲಯದ ಬಂಗಾರದ ಪದಕದೊಂದಿಗೆ ಉತ್ತೀರ್ಣರಾಗಿದ್ದಾರೆ. ಅವರು ರಚಿಸಿರುವ ಶೋಧ ಕೃತಿ ಬೆಳಕಿಂಡಿ ಬೆಳಕು ಕಂಡಿರುವುದು ಸಂತೋಷದ ಸಂಗತಿ. ಅದೇ ರೀತಿ ಡಾ.ಪೂರ್ಣಿಮಾ ಶೆಟ್ತಿ, ಕಲಾ ಭಾಗ್ವತ್, ವಿದ್ಯಾ ರಾಮಕೃಷ್ಣ ಇವರ ಕೃತಿಗಳು ಇಂದು ಲೋಕಾರ್ಪಣೆಗೊಂಡಿವೆ.
ಈ ಎಲ್ಲ ವಿದ್ಯಾರ್ಥಿಗಳು ಕನ್ನಡ ವಿಭಾಗದ ಬೆಳವಣಿಗೆಯಲ್ಲಿಯೂ ಮಹತ್ತರವಾದ ಪಾತ್ರವನ್ನು ವಹಿಸಿದ್ದಾರೆ ಎಂದು ಅಭಿಮಾನದಿಂದ ನುಡಿದರು. ಅವರು ಎಪ್ರಿ 13ರಂದು ವಿಶ್ವವಿದ್ಯಾಲಯದ ಜೆ.ಪಿ.ನಾಯಕ್ ಭವನದಲ್ಲಿ ನಡೆದ ಕನ್ನಡ ವಿಭಾಗದ ನಲ್ವತ್ತಾರರ ಸಂಭ್ರಮ, ನಿರಂಜನ ಶತಮಾನೋತ್ಸವ, ವಿಶೇಷ ಉಪನ್ಯಾಸ, ಆರು ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಕೃತಿಯ ಕುರಿತು ಮಾತನಾಡಿದ ವಿಭಾಗದ ಸಂದರ್ಶಕ ಪ್ರಾಧ್ಯಾಪಕರಾದ ಡಾ. ಉಮಾ ರಾಮರಾವ್ ಅವರು ಪರಿಚಯಿಸಿದರು. ಸಾಕಷ್ಟು ವಿಪುಲವಾಗಿರುವ ಮಿತ್ರಾ ವೆಂಕಟ್ರಾಜ್ ಅವರ ಸಾಹಿತ್ಯವನ್ನು ಚಿಕ್ಕ ಪುಸ್ತಕದಲ್ಲಿ ತುಂಬಾ ಸಶಕ್ತವಾಗಿ, ಅಚ್ಚುಕಟ್ಟಾಗಿ, ಅರ್ಥವತ್ತಾಗಿ, ಸಮರ್ಪಕವಾಗಿ ಸವಿತಾ ಅವರು ಪರಿಚಯಿಸಿದ್ದಾರೆ. ಕೃತಿಯ ಹೆಸರು ಅನ್ವರ್ಥಕವಾಗಿದೆ ಎಂದು ಅವರು ನುಡಿದರು. ಕೃತಿಕಾರರಾದ ಸವಿತಾ ಅರುಣ್ ಶೆಟ್ಟಿ ಅವರು ತಮ್ಮ ಚೊಚ್ಚಲ ಕೃತಿರಚನೆಯ ಅನುಭವವನ್ನು ಹಂಚಿಕೊಳ್ಳುತ್ತಾ, ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿ ಸೇರಿಕೊಂಡ ಮೇಲೆ ತಾನು ಕಲಿತದ್ದು ಅಪಾರ. ಓದು ಬರೆಹ ತನ್ನ ಆಸಕ್ತಿ ಆಗಿದ್ದರೂ ವಿಶ್ವವಿದ್ಯಾಲಯ ಕಲಿಸಿದ ಬರೆವಣಿಗೆಯ ಶಿಸ್ತು ಹೆಚ್ಚಿನದು. ಅದಕ್ಕೆ ಕಾರಣ ವಿಭಾಗದ ಪ್ರಾಧ್ಯಾಪಕರ ಅಧ್ಯಾಪನ, ಮಾರ್ಗದರ್ಶನ ಮತ್ತು ಪ್ರೋತ್ಸಾಹ ಎಂದು ನುಡಿದು ಮಿತ್ರಾ ವೆಂಕಟ್ರಾಜ್ ಅವರ ಸಹಕಾರವನ್ನು ಸ್ಮರಿಸಿದರು.
ಇದೇ ಸಂದರ್ಭದಲ್ಲಿ ಡಾ. ಜಿ.ಎನ್.ಉಪಾಧ್ಯ ಅವರ ಎರಡು ಕೃತಿಗಳು ಸೇರಿದಂತೆ ಡಾ.ಪೂರ್ಣಿಮಾ ಎಸ್ ಶೆಟ್ಟಿ, ಕಲಾ ಭಾಗ್ವತ್ ಹಾಗೂ ವಿದ್ಯಾ ರಾಮಕೃಷ್ಣ ಅವರ ಕೃತಿಗಳು ಲೋಕಾರ್ಪಣೆಗೊಂಡವು. ಬಂಟರ ಸಂಘದ ಅಧ್ಯಕ್ಷರಾದ ಪ್ರವೀಣ ಭೋಜ ಶೆಟ್ಟಿ, ಕರ್ನಾಟಕ ಮಲ್ಲ ಪತ್ರಿಕೆಯ ಸಂಪಾದಕರಾದ ಚಂದ್ರಶೇಖರ ಪಾಲೆತ್ತಾಡಿ, ನಾಮಾಂಕಿತ ಕತೆಗಾರರು, ಕಾದಂಬರಿಕಾರರಾದ ಮಿತ್ರಾ ವೆಂಕಟ್ರಾಜ್, ಸಂಘಟಕ ಕರ್ನೂರು ಮೋಹನ್ ರೈ ಉಪಸ್ಥಿತರಿದ್ದು ಕೃತಿಗಳನ್ನು ಬಿಡುಗಡೆಗೊಳಿಸಿ ಸಂದರ್ಭೋಚಿತವಾಗಿ ಮಾತನಾಡಿದರು. ಮುಂಬಯಿ ವಿಸ್ವ್ಹವಿದ್ಯಾಲಯ, ಕನ್ನಡ ವಿಭಾಗದ ಸಹಪ್ರಾಧ್ಯಾಪಕರಾದ ಡಾ.ಪೂರ್ಣಿಮಾ.ಎಸ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.