ವಿದ್ಯಾಗಿರಿ: ಬದುಕಿದ ಮೇಲೆ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು. ಹುಟ್ಟಿದರೂ- ಸತ್ತರೂ ಗೊತ್ತಾಗದ ಸೆಗಣಿಯ ಹುಳುವಿನಿಂತೆ ನಮ್ಮ ಬದುಕು ಆಗಬಾರದು ಬೆಂಗಳೂರಿನ ಸಾಧನಾ ಕೋಚಿಂಗ್ ಸೆಂಟರ್- ಐಎಎಸ್
ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ನಿರ್ದೇಶಕಿ ಡಾ. ಜ್ಯೋತಿ ಹೇಳಿದರು. ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಬೆಂಗಳೂರಿನ ಸಾಧನಾ ಕೋಚಿಂಗ್ ಸೆಂಟರ್ ವತಿಯಿಂದ ಗುರುವಾರ ನಡೆದ ಯುಪಿ ಎಸ್ಸಿ/ ಕೆಪಿಎಸ್ಸಿ ನಾಗರಿಕ ಸೇವೆಗಳ ಪರೀಕ್ಷೆಗಳಿಗೆ ತರಬೇತಿಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
‘ನಾವು ಐತಿಹಾಸಿಕ ಹೆಜ್ಜೆ ಇಡಲು ಬಯಸಿದ್ದೇವೆ. ಕೊಟ್ಟ ನಂಬಿಕೆ, ಇಟ್ಟ ಜವಾಬ್ದಾರಿಯನ್ನು ಸಾಧನಾ ಸಂಸ್ಥೆ ಉಳಿಸಿಕೊಂಡು ಬಂದಿದೆ’ ಎಂದರು. ‘ಪ್ರತಿಯೊಂದು ಪರೀಕ್ಷೆಗಳಿಗೂ ಕಷ್ಟ ಪಡಲೇಬೇಕು. ಐಎಎಸ್ -ಐಪಿಎಸ್ ಸುಲಭದ ಮಾತಲ್ಲ. ಪ್ರತಿಯೊಂದು ವಿಷಯ, ಹಲವಾರು ಹೊಸ ಮಾಹಿತಿಗಳನ್ನು ಅಧ್ಯಯನ ಮಾಡಬೇಕು. ವಿದ್ಯಾರ್ಥಿಗಳು ಬುದ್ಧಿವಂತರಾಗಿರುವಾಗ, ಶಿಕ್ಷಕರು ಅದಕ್ಕಿಂತ ಹೆಚ್ಚಿನ ಬುದ್ಧಿವಂತಿಕೆಯನ್ನು ಹೊಂದಿರಬೇಕು. ಸಾಧನೆ ಮಾಡುವ ಉದ್ದೇಶ ಇದ್ದಾಗ, ತರಬೇತಿ ಸಾರ್ಥಕತೆ ಪಡೆಯುತ್ತದೆ ಎಂದರು.
ಪರೀಕ್ಷೆ ತೇರ್ಗಡೆ ಹೊಂದಿದರೆ ಉನ್ನತ ಅಧಿಕಾರಿಗಳ ಸಾಲಿನಲ್ಲಿ ನೀವು ನಿಲ್ಲುತ್ತೀರಿ. ಓದುವ ಸಮಯದಲ್ಲಿ ಓದು, ಆಡುವ ಸಮಯದಲ್ಲಿ ಆಟವು ಸಹಜ. ಆದರೆ ಸ್ಪರ್ಧಾತ್ಮಕ ತರಬೇತಿಯ ಸಂದರ್ಭ ಮಾತ್ರ ಎಲ್ಲವನ್ನು ಸ್ವಲ್ಪ ದೂರ ಇಡುವುದು ಉತ್ತಮ. ನಮಗೆ ಕಲಿಯಬೇಕು ಎಂಬ ಹಸಿವಿದ್ದರೆ ಸಾಕು. ಅದೇ ನಮ್ಮ ಜೀವನವನ್ನು ರೂಪಿಸುತ್ತದೆ ಎಂದರು. ಓದಿದವರೆಲ್ಲರೂ ಐಎಎಸ್ -ಐಪಿಎಸ್ ಆಗುವುದಿಲ್ಲ, ಆದರೆ ನಮ್ಮಿಂದ ಆಗುವುದಿಲ್ಲ ಎಂಬ ಹಿಂಜರಿಕೆ
ಮಾತ್ರ ಬೇಡ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ನೀಡುವ ಸೇವೆಯನ್ನು ಮಾಡಬೇಕು ಎಂಬ ಕನಸು ಬಹಳ ವರ್ಷಗಳಿಂದ ಇತ್ತು. ಅಂತಹ ಕನಸಿಗೆ ಒಡಂಬಡಿಕೆಯ
ಮೂಲಕ ಆರಂಭ ಸಿಕ್ಕಿದೆ. ಸಂತೋಷವಾಗಿದೆ. ಶಿಕ್ಷಣ ಸಂಸ್ಥೆಯು ಕಾಲ ಮತ್ತು ವಿದ್ಯಾರ್ಥಿ ಬೇಡಿಕೆಗಳನ್ನು ಅರ್ಥ ಮಾಡಿಕೊಳ್ಳಬೇಕು. ಸಂಸ್ಥೆಯು ವಿದ್ಯಾಭ್ಯಾಸ ದ ಜೊತೆಗೆ, ಒಳ್ಳೆ ಮನಸ್ಸನ್ನು ಕಟ್ಟುವ ಕೆಲಸ ನಡೆಸುತ್ತಾ ಬಂದಿದೆ. ವಿದ್ಯೆಯು ನಿಂತ ನೀರಂತೆ ಆಗಬಾರದು. ಹರಿಯಬೇಕು. ಯಾವುದೇ ಹಂತದಲ್ಲೂ ಸೋಲದಂತೆ ನಡೆಯಬೇಕು ಎಂದರು.
ಈ ನಾಗರಿಕ ಸೇವೆಯ ಪರೀಕ್ಷಾ ತರಬೇತಿಯು ಪ್ರಾಥಮಿಕ ಶಿಕ್ಷಣದಲ್ಲಿಯೇ ಪ್ರಾರಂಭವಾದರೆ ಉತ್ತಮ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸುಲಭ ಸ್ಪಂದನೆ ಸಾಧ್ಯವಿಲ್ಲ. ಇದು ದೀರ್ಘ ಹೋರಾಟ. ಫಲಿತಾಂಶ ಬೇಗ ಬರಬೇಕು ಎಂದು ಎದುರು
ನೋಡುವುದಕ್ಕಿಂತ ಕಲಿಕೆಯಲ್ಲಿ ಪ್ರಯತ್ನ ಬೇಕು ಎಂದರು. ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್, ಸಾಧನಾ ಕೋಚಿಂಗ್ ಸೆಂಟರ್ನ ತರಬೇತುದಾರ ನಂಜುಂಡ ಗೌಡ, ಹರಿಪ್ರಸಾದ್, ಆಡಳಿತಧಿಕಾರಿ ಮಹಾದೇವರಾಜು ಎಲ್, ಆಳ್ವಾಸ್ ಕಾಲೇಜಿನ ಆಡಳಿತಧಿಕಾರಿ ಬಾಲಕೃಷ್ಣ ಶೆಟ್ಟಿ ಇದ್ದರು. ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ. ಯೋಗೀಶ್ ಕೈರೋಡಿ ಕಾರ್ಯಕ್ರಮ ನಿರೂಪಿಸಿದರು.