ಆಹಾರ ಕೇವಲ ದೇಹದ ಅಗತ್ಯ ಮಾತ್ರವಲ್ಲ ಮನಸ್ಸಿನ ಸಂತೋಷಕ್ಕೂ ಹೌದು. ಪ್ರತಿಯೊಂದು ಪ್ರಾಂತ್ಯಕ್ಕೂ ತನ್ನದೇ ಆದ ಆಹಾರ ತಾತ್ವಿಕತೆ ಇದ್ದು ಆಹಾರ ಪದ್ದತಿಯಲ್ಲಿ ಒಂದು ಪರಂಪರೆಯ ಅನುಭವ ಹೊಂದಿದ ಹಿರಿಯರು ಆಹಾರ ವಿಜ್ಞಾನವನ್ನು ಸುವ್ಯವಸ್ಥಿತವಾಗಿ ಅಳವಡಿಸಿಕೊಂಡಿದ್ದರು. ಆದರೆ ನಾಗರಿಕ ಸಮಾಜ ಬೆಳೆದು ಬರುತ್ತಲೇ ತನಗೊಂದು ಬೇರೆ ರೀತಿ ನೀತಿ ನಿಯಮ ನಿಬಂಧನೆ ಆಚಾರ ವಿಚಾರ ಎಂಬ ಧಾರೆಯನ್ನು ರೂಢಿಸಿಕೊಂಡು ಬರುತ್ತಾ ಕೆಲ ಆಹಾರ ಪದ್ದತಿಯನ್ನು ಗಾಳಿಗೆ ತೂರಿ ಬಿಟ್ಟಿದ್ದು ಹೌದಾದರೂ ಸರ್ವಕಾಲದಲ್ಲೂ ವಿಶೇಷವಾದ ಖಾದ್ಯವಾಗಿ ಉಳಿದುಕೊಂಡ ಕೋಳಿರೊಟ್ಟಿ ತನ್ನ ಸ್ಥಾನವನ್ನು ಕಳೆದುಕೊಂಡಿಲ್ಲ. ಆ ನಿಟ್ಟಿನಲ್ಲಿಯಾದರೂ ಈ ರೊಟ್ಟಿಗೆ ಜಿಯಾಗ್ರಾಫಿಕಲ್ ಇಂಡಿಕೇಷನ್ (ಜಿ ಐ ಮಾನ್ಯತೆ) ದೊರಕಬೇಕಿತ್ತು. ಪ್ರಾಂತ್ಯವೊಂದಕ್ಕೆ ಸೇರಿದ ಉತ್ಪನ್ನ ಆಯಾ ಪಾಂತ್ಯದ ನಿರ್ದಿಷ್ಟ ಗುಣಮಟ್ಟ ಅಥವಾ ಆದ್ಯತೆಗೆ ಅವಲಂಭಿಸಿದ ವಿಶಿಷ್ಟ ರುಚಿ ಹೊಂದಿದ್ದರೆ ಅದಕ್ಕೆ ಭೌಗೋಳಿಕ ಸೂಚ್ಯಂಕ ಮಾನ್ಯತೆ ಪಡೆಯಬಹುದು. ವಸ್ತುವೊಂದಕ್ಕೆ ಭೌಗೋಳಿಕ ಮಾನ್ಯತೆ ಪಡೆಯಬೇಕಾದರೆ ಚೆನ್ನೈನ ಜಿಯೋಗ್ರಾಫಿಕಲ್ ಇಂಡಿಕೇಷನ್ ಕಚೇರಿಯಲ್ಲಿ ಅರ್ಜಿ ಸಲ್ಲಿಸಿ ವಸ್ತುವಿನ ಬಗೆಗಿನ ಸರಿಯಾದ ಮಾಹಿತಿ ನೀಡಬೇಕು. ಭೌಗೋಳಿಕ ಸೂಚನೆ ಜಿಐ ಒಂದು ನಿರ್ದಿಷ್ಟ ಸ್ಥಳ, ಪ್ರದೇಶಕ್ಕೆ ಅನುರೂಪವಾಗಿ ಕೆಲವು ವಸ್ತುಗಳಿಗೆ ಬಳಸುವ ಚಿಹ್ನೆ ಅಥವಾ ಮಾನ್ಯತೆ. ಸಂಪ್ರದಾಯಕ ವಿಶೇಷತೆಗಳನ್ನು ಹೊಂದಿರುವ ವಿಶ್ವ ವಾಣಿಜ್ಯ ಸಂಸ್ಥೆ ಸದಸ್ಯರಾಗಿ ನೊಂದಣಿ ಮತ್ತು ಸಂರಕ್ಷಣಾಕಾಯ್ದೆ ಹಕ್ಕು ವ್ಯಾಪಾರ ವ್ಯವಹಾರ ಸಂಬಂಧಿತ ಅಂಶಗಳ ಕುರಿತಾದ ವಾಣಿಜ್ಯ ಸಂಸ್ಥೆಯ ಒಪ್ಪಂದದಂತೆ ಭೌಗೋಳಿಕ ಪ್ರದೇಶದಲ್ಲಿರುವ ಅಪರೂಪದ ಅಗತ್ಯದ ದಿನ ನಿತ್ಯ ಬಳಕೆಯಲ್ಲಿರುವ ಉತ್ಪನ್ನ ಅಥವಾ ವಸ್ತುಗಳನ್ನು ಗುರುತಿಸುವ ಸೂಚನೆ. ಪ್ರಾಮಾಣಿಕವಾಗಿ ಯೋಚಿಸುವುದಾದರೆ ಕೋಳಿರೊಟ್ಟಿಗೆ ಜಿ ಐ ಮಾನ್ಯತೆ ಅದೆಂದೊ ದೊರಕಬೇಕಿತ್ತು.
ಬೆಳ್ಳಗೆ, ತೆಳ್ಳಗೆ ಸುಂದರವಾಗಿರುವ ಬಿಳಿ ಹಪ್ಪಳದಂತೆ ಕಾಣುವ, ಬಾಯಿಗೆ ಹಾಕಿದರೆ ಕುರುಕುರು ಶಬ್ದ ಬರುವ ಗರಿಗರಿ ಕೋಳಿರೊಟ್ಟಿ ಎಂದರೆ ದಕ್ಷಿಣ ಕನ್ನಡ, ಕರಾವಳಿಗರಿಗೆ ಚಿರಪರಿಚಿತ. ಎಲ್ಲಾ ವಯೋಮಾನದವರು ತಿನ್ನಲು ಅನುಕೂಲವಾದ ಅಕ್ಕಿ ರೊಟ್ಟಿ ಅದಕ್ಕೆಂದೇ ಮಾಡುವ ಊರು ಕೋಳಿ ಸಾರಿನ ಜೊತೆಗೆ ಬೇರೆ ಯಾವುದೇ ತಿನಿಸನ್ನು ಹೋಲಿಕೆ ಮಾಡಿದರೂ ರೊಟ್ಟಿ ಹಾಗೂ ನಾಟಿ ಕೋಳಿ ಸಾರಿನ ಅನ್ಯೋನ್ಯತೆಗೆ ಬೇರೆ ಯಾವುದೇ ಆಹಾರ ಸರಿಸಾಟಿ ಇಲ್ಲ. ಕೋಳಿರೊಟ್ಟಿ ಎಂದರೆ ಮಾಂಸಹಾರಿಗಳ ಬಾಯಲ್ಲಿ ನೀರೂರುತ್ತದೆ. ಅದರಲ್ಲೂ ಮಳೆಗಾಲಕ್ಕೆ ಖಾರ ರಸ ತಯಾರಿಸಲು ಬ್ಯಾಡಗಿ ಮೆಣಸು ಹಾಗೂ ವಿಶೇಷ ರುಚಿಯ ಕಾಳುಮೆಣಸು ಹಾಕಿ ತೆಂಗಿನ ಕಾಯಿ ಹಾಲಿನಿಂದ ತಯಾರಾದ ಊರಿನ ಶೈಲಿಯ ಸ್ಥಳೀಯವಾದ ಸಾಂಬಾರು ಪದಾರ್ಥಗಳಾದ ಕೊತ್ತಂಬರಿ ಬೀಜ, ಜೀರಿಗೆ, ಬೆಳ್ಳುಳ್ಳಿ ಹಾಕಿ ತಯಾರಿಸಿದ ಕೋಳಿ ಪ್ರಿಯರ ನೆಚ್ಚಿನ ರೊಟ್ಟಿ ಸಾರಿಗೆ ಮೊದಲ ಸ್ಥಾನ ಅಡುಗೆ ರುಚಿ ಮತ್ತು ಪೌಷ್ಟಿಕತೆ ಮಾತ್ರವಲ್ಲದೇ ಕೋಳಿ ಸಾರು ಹಾಗೂ ರೊಟ್ಟಿಯ ಬಣ್ಣವೂ ನೋಡಲು ಚೆನ್ನಾಗಿರಬೇಕು.
ಕೋಳಿ ಮಾಂಸದ ಖಾದ್ಯಗಳೊಂದಿಗೆ ಅಕ್ಕಿ ರೊಟ್ಟಿ ಸಾಮಾನ್ಯವಾಗಿ ಅತಿಥಿಗಳು ಬಂದಾಗ, ಪಾರ್ಟಿ, ನಿಶ್ಚಿತಾರ್ಥ, ಸೀಮಂತ ಹೀಗೆ ಹೆಚ್ಚಿನ ಔತಣದಲ್ಲಿ ಕೋಳಿ ರೊಟ್ಟಿ ಇದ್ದೇ ಇರುತ್ತವೆ. ರೊಟ್ಟಿ ಕೋಳಿ ಗಸಿಯೊಂದಿಗೆ ಹೇಗೆ ಹೊಂದಾಣಿಕೆ ಹೊಂದಿದೆ ಅಂದರೆ ಕೋಳಿ ರೊಟ್ಟಿ ಎಂದರೆ ಏನು ಎಂದು ಎಲ್ಲರಿಗೂ ಅರ್ಥವಾಗುತ್ತದೆ. ಅದೇ ಅಕ್ಕಿ ರೊಟ್ಟಿ ಅಂದರೆ ಕೋಳಿ ರೊಟ್ಟಿಯಾ ಎಂದು ಕೇಳುತ್ತಾರೆ. ಈ ಅಕ್ಕಿ ರೊಟ್ಟಿಯನ್ನು ತಿನ್ನಲು ಹೆಚ್ಚಾಗಿ ಕೋಳಿ ರಸವನ್ನು ಬಳಸುವುದರಿಂದ ಇದಕ್ಕೆ ಕೋಳಿ ರೊಟ್ಟಿ ಎಂಬ ಉಪನಾಮ ಬಂದಿದೆ. ಮನೆ ಮಾತಾಗಿರುವ ಕೋರಿ ರೊಟ್ಟಿ ಬೇರೆಲ್ಲಾ ರೊಟ್ಟಿಯ ಹಾಗೆ ಬೇಗ ಹಾಳಾಗುವುದಿಲ್ಲ. ವರ್ಷ ಗಟ್ಟಲೆ ಶೇಖರಿಸಿ ಇಡಬಹುದು. ಬೂಷ್ಟು ಹಿಡಿದು ರುಚಿ ಕೆಡುವುದಿಲ್ಲ. ಮನೆಯಲ್ಲಿ ಮಾಡಿ ಅಥವಾ ಅಂಗಡಿಯಿಂದ ತಂದು ಶೇಖರಿಸಿ ಇಟ್ಟುಕೊಳ್ಳಬಹುದು. ರೊಟ್ಟಿ ಚೆನ್ನಾಗಿ ಕಾದು ಒಣಗಿರಬೇಕು. ಆಗ ರುಚಿಯು ಹೆಚ್ಚುತ್ತದೆ. ಮನೆಗೆ ಯಾರಾದರೂ ಅರ್ಜೆಂಟಾಗಿ ನೆಂಟರು ಬಂದರೆ ಸಂಗ್ರಹಿಸಿ ಇಟ್ಟಿದ್ದ ರೊಟ್ಟಿಯೊಂದಿಗೆ ಕೋಳಿ ರಸ ಊಟಕ್ಕೆ ರೆಡಿಯಾಗುತ್ತದೆ. ರಾಗಿ, ಗೋಧಿ ರೊಟ್ಟಿ, ಮಕ್ಕರೊಟ್ಟಿಯಂತೆ ಇಡಿ ರೊಟ್ಟಿ ಬಡಿಸುವುದಿಲ್ಲ. ಬದಲಿಗೆ ರೊಟ್ಟಿಯ ತುಂಡು ತುಂಡುಗಳನ್ನು ಬಡಿಸಲಾಗುತ್ತದೆ.
ಹಿಂದೆಲ್ಲಾ ಹಳ್ಳಿ ಮನೆಗಳಲ್ಲಿ ಕೋಳಿ ತಾವೇ ಸಾಕಿ ಕೊಳ್ಳುತ್ತಿದ್ದರು. ನೈಸರ್ಗಿಕವಾಗಿ ಬೆಳೆವ ಕೋಳಿ ಅಗತ್ಯ ಬಿದ್ದಾಗ ಮಾತ್ರ ಮಾಂಸಕ್ಕಾಗಿ ಬಳಸಲಾಗುತ್ತದೆ. ಇತ್ತೀಚೆಗೆ ಕೆಲ ವರ್ಷಗಳಿಂದ ಕೋಳಿ ಫಾರಂಗಳು ಕೋಟಿಗಟ್ಟಲೇ ವ್ಯವಹರಿಸುತ್ತಿದೆ. ನಮ್ಮ ಕೋಳಿ ರೊಟ್ಟಿಯ ಜನಪ್ರಿಯತೆ ಅದರ ರುಚಿ, ಸಮಯದ ಅಭಾವದಲ್ಲಿ ಮೊದಲೇ ತಂದು ಇರಿಸಿ ಕೊಳ್ಳಬಹುದಾದ ಸುಲಭ ಸಾಧನ. ಬಹು ಬೇಗನೆ ಕೆಡುವ ಪದಾರ್ಥ ಇದಲ್ಲ. ಭೌಗೋಳಿಕ ಮಾನ್ಯತೆ ದೊರೆಯಬೇಕಾದ ಆಹಾರ ಪದಾರ್ಥವಿದು. ಕೇವಲ ರುಚಿ ಮಾತ್ರವಲ್ಲ ಇದರ ಉದ್ಯಮದ ರುಚಿ ಹತ್ತಿದವರು ಅನೇಕರಿದ್ದಾರೆ. ಯುವಕರಿಗೆ ಬದುಕಲು ದಾರಿಯಾದ ಉದ್ಯಮವೂ ಹೌದು. ಗೃಹೋದ್ಯಮವಾಗಿ ರೊಟ್ಟಿ ಕಾರ್ಖಾನೆಗಳನ್ನು ನಡೆಸುವವರು ಇದರಲ್ಲಿ ನೆಲೆ ಕಂಡು ಕೊಂಡಿದ್ದಾರೆ. ರೊಟ್ಟಿ ಮಾಡಿ ದೇಶ ವಿದೇಶಗಳಿಗೆ ಮಾರಾಟ ಮಾಡುತ್ತಾರೆ. ಈಗ ಆನ್ ಲೈನ್ ಗಳಲ್ಲೂ ಕೋಳಿ ರೊಟ್ಟಿ ತರಿಸಿಕೊಳ್ಳಬಹುದು. ರೊಟ್ಟಿ ಅದರ ಮೇಲೆ ಕೋಳಿ ಸಾರು ಹೊಯ್ದು ತಿನ್ನಲು ಪ್ರಾರಂಬಿಸಿದರೆ ಕೆಲವರಿಗೆ ಸ್ವರ್ಗಕ್ಕೆ ಮೂರೇ ಗೇಣು ಅದರಲ್ಲೂ ಕೋಳಿ ಅಂಕದಲ್ಲಿ ದೊರೆತ ಕೋಳಿ ಸಾರಿನ ರುಚಿ ಬಲು ಸೊಗಸು.
ರೊಟ್ಟಿ ಮಾಡುವ ಕ್ರಮ : ಅಡುಗೆಯ ರುಚಿ ವ್ಯಕ್ತಿಯಿಂದ ವ್ಯಕ್ತಿಗೆ ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗುತ್ತಾ ವೈವಿಧ್ಯಮಯ ಆಹಾರ ಪದಾರ್ಥಗಳಲ್ಲಿ ಕೋಳಿ ರೊಟ್ಟಿ ಜನಪ್ರಿಯ ಖಾದ್ಯಾಗಳಲ್ಲಿ ಒಂದು. ಬೇರೆಲ್ಲಾ ರೊಟ್ಟಿಯಂತೆ ಈ ರೊಟ್ಟಿ ತಯಾರಿಸಲಾಗುವುದಿಲ್ಲ. ಇದರ ತಯಾರಿಕೆಯಲ್ಲಿ ಭಿನ್ನತೆ ಇದೆ. ನೆನೆ ಹಾಕಿದ ಅಕ್ಕಿಗೆ ಉಪ್ಪು ಹಾಕಿ ನುಣ್ಣಗೆ ಕಡೆದು ತಯಾರಿಸಿದ ಹಿಟ್ಟನ್ನು ಕಾವಲಿಗೆ ಎರೆದು ರೊಟ್ಟಿ ತಯಾರಿಸಲಾಗುತ್ತದೆ. ಇದರ ತಯಾರಿಕೆಯಲ್ಲಿ ಒಬ್ಬೊಬ್ಬರದ್ದು ಒಂದೊಂದು ತರ ರುಚಿ ಹಾಗೂ ತಯಾರಿಸುವ ವಿಧಾನ ಕೆಲವೆಡೆ ಕೇವಲ ಸೋನಾ ಮಸೂರಿ ಅಕ್ಕಿಯಿಂದ ರೊಟ್ಟಿ ತಯಾರಿಸುತ್ತಾರೆ. ಒಂದು ಕೆಜಿ ಅಕ್ಕಿಗೆ 100 ಗ್ರಾಮ್ ಉದ್ದಿನ ಬೆಳೆ, ಒಂದು ಚಮಚ ಜೀರಿಗೆ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಎಲ್ಲವನ್ನೂ ನೀರು ಸೇರಿಸಿ ನುಣ್ಣಗೆ ಅರೆದು ಒಲೆಯ ಮೇಲೆ ಸೌದೆ ಉರುವಲು ಬೆಂಕಿಯಿಂದ ಕಾದ ದಪ್ಪ ಕಾವಲಿಯ ಮೇಲೆ ಬೇಕಾದ ಪ್ರಮಾಣದಲ್ಲಿ ಹಿಟ್ಟು ಸುರಿದು ತೆಳು ಪದರದಂತೆ ಕಾವಲಿ ತುಂಬಾ ಹೊಯ್ದು ತಗೆಯಬೇಕು. ಕೈ ಚುರುಕಿನವರು ಪಟಪಟನೆ ರೊಟ್ಟಿ ಮಾಡಿ ರೆಡಿಗೊಳಿಸುತ್ತಾರೆ. ನಮ್ಮ ಆಹಾರ ಪದ್ದತಿಗಳನ್ನು ಬೇರೆ ರಾಜ್ಯ ಹಾಗೂ ವಿದೇಶದ ಆಹಾರ ಪದ್ದತಿಗಳು ಆಕ್ರಮಿಸಿಕೊಂಡಿದ್ದು ಅಲ್ಲಲ್ಲಿ ಕಂಡು ಬಂದರೂ ಕೋಳಿ ರೊಟ್ಟಿಯ ಸ್ಥಾನ ಆಕ್ರಮಿಸಲು ಯಾವ ಖಾದ್ಯದಿಂದಲೂ ಸಾಧ್ಯವಿಲ್ಲ ಎನ್ನಿಸುತ್ತದೆ. ಅದು ನಮ್ಮೊಳಗೆ ಅಷ್ಟು ಹಾಸು ಹೊಕ್ಕಾಗಿದೆ. ನಮ್ಮ ಊರಿನ ಊಟದ ಸಂಸ್ಕೃತಿ ಆಹಾರ ಪದ್ದತಿ ಮರೆಯದೇ ಆಗಾಗ ಸ್ವೀಕರಿಸುತ್ತಿರಬೇಕು. ರುಚಿಯ ಬೆನ್ನು ಹತ್ತಿ ಬಗೆ ಬಗೆಯ ಅಡುಗೆ ಮಾಡಿಕೊಂಡರೂ ನಮ್ಮ ಕೋಳಿ ರೊಟ್ಟಿಗೆ ಯಾವುದೇ ರೀತಿಯ ಹೊಡೆತ ಬಿದ್ದಿಲ್ಲ ಅದರ ಸ್ಥಾನ ಕುಗ್ಗಿಲ್ಲ. ಪರ ಊರಿಗೆ ಹೋಗುವಾಗ ಜೊತೆಗೆ 2 ಪ್ಯಾಕ್ ರೊಟ್ಟಿ ಇದ್ದೇ ಇರುತ್ತದೆ. ಹಾಗೆ ಆದಷ್ಟು ಬೇಗ ಕೋಳಿರೊಟ್ಟಿಗೆ ಜಿ ಐ ಮಾನ್ಯತೆ ದೊರಕುವಂತಾಗಲಿ. ನಾವೇಲ್ಲಾ ಸೇರಿ ಶ್ರಮಿಸೋಣವೇ.
ಲತಾ ಸಂತೋಷ್ ಶೆಟ್ಟಿ ಮುದ್ದುಮನೆ