ಬಂಟರ ಸಂಘ ಕುವೈಟ್ ಆಯೋಜನೆಯಲ್ಲಿ ನಡೆದ ಬಂಟಾಯನ -2025 ಕಲಾ ಸಾಂಸ್ಕೃತಿಕ ಮಹೋತ್ಸವವು ಅದ್ದೂರಿಯಾಗಿ ಮತ್ತು ಅರ್ಥಪೂರ್ಣವಾಗಿ ಜರುಗಿತು. ಇಂಡಿಯನ್ ಸೆಂಟ್ರಲ್ ಸ್ಕೂಲ್ ಅಬ್ಬಾಸಿಯಾದ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮವು ಕಲೆ, ನೃತ್ಯ ಮತ್ತು ಸಾಂಸ್ಕೃತಿಕ ವೈಭವದಿಂದ ಜನರ ಮನಗೆದ್ದಿತು. ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಕತಾರ್ ಬಂಟರ ಸಂಘದ ಅಧ್ಯಕ್ಷ ನವೀನ್ ಶೆಟ್ಟಿ ಇರುವೈಲು ವಿಶೇಷ ಆಹ್ವಾನಿತ ಅತಿಥಿಯಾಗಿ ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷ ಶೋಧನ್ ಶೆಟ್ಟಿ ನೆರೆದ ಗಣ್ಯರನ್ನು ಮತ್ತು ಅತಿಥಿಗಳನ್ನು ಗೌರವಪೂರ್ವಕವಾಗಿ ಸ್ವಾಗತಿಸಿದರು. ಬಂಟರ ಸಂಘ ಕುವೈಟ್ ವತಿಯಿಂದ ಗುರ್ಮೆ ಸುರೇಶ್ ಶೆಟ್ಟಿ ಮತ್ತು ನವೀನ್ ಶೆಟ್ಟಿ ಇರುವೈಲು ಅವರನ್ನು ಸಾಂಪ್ರದಾಯಿಕ ಗೌರವ ಮತ್ತು ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಮುಖ್ಯ ಅತಿಥಿ ಗುರ್ಮೆ ಸುರೇಶ್ ಶೆಟ್ಟಿ ತಮ್ಮ ಭಾಷಣದಲ್ಲಿ ವಚನ ಸಾಹಿತ್ಯ ಮತ್ತು ಕಗ್ಗಗಳ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಿದರು. ಭಾರತೀಯ ಕುಟುಂಬ ವ್ಯವಸ್ಥೆಯ ಉದ್ದೇಶ ಮತ್ತು ಉಪಯೋಗಗಳ ಬಗ್ಗೆ ವಿವರಿಸಿ, ಜನರ ಮನದಟ್ಟು ಮಾಡಿದರು. ಜೊತೆಗೆ ತಮ್ಮ ಬೋಸ್ಟನ್ ಪ್ರವಾಸದ ಅನುಭವಗಳನ್ನು ಹಂಚಿಕೊಂಡು, ಸಮಾಜ ಮತ್ತು ಸಂಘ ಸಂಸ್ಥೆಗಳು ಭಾರತೀಯ ಯುವ ಜನತೆಗೆ ಹೇಗೆ ಉತ್ತಮ ಅಡಿಪಾಯ ಒದಗಿಸುತ್ತಿವೆ ಎಂದು ತಿಳಿಸಿದರು.

ವಿಶೇಷ ಅತಿಥಿ ನವೀನ ಶೆಟ್ಟಿ ಇರುವೈಲು ತಮ್ಮ ಭಾಷಣದಲ್ಲಿ ಸಂಘ ಸಂಸ್ಥೆಗಳು ಮತ್ತು ವ್ಯಕ್ತಿತ್ವ ನಿರ್ಮಾಣದಲ್ಲಿ ಅವುಗಳ ಪಾತ್ರದ ಬಗ್ಗೆ ಅದ್ಭುತವಾಗಿ ಅನುಭವ ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಅತಿಥಿ ಕಲಾವಿದರ ತಂಡ ತೆಲಿಕೆದ ತೆನಾಲಿ ಮನೋಹರವಾದ ಹಾಸ್ಯ ಪ್ರದರ್ಶನದ ಮೂಲಕ ಜನಮನ ಗೆಲ್ಲುವಲ್ಲಿ ಯಶಸ್ವಿಯಾಯಿತು. ಇದರ ಜೊತೆಗೆ ಬಹು ಮುಖ್ಯವಾಗಿ ಸಾಂಸ್ಕೃತಿಕ ಕಾರ್ಯದರ್ಶಿ ಮನೋಜ್ ಕುಮಾರ್ ಶೆಟ್ಟಿಯವರ ಪರಿಕಲ್ಪನೆಯಲ್ಲಿ ವಿವಿಧ ನೃತ್ಯ ಪ್ರದರ್ಶನಗಳು ಮನಮೋಹಕವಾಗಿ ಮೂಡಿ ಬಂದವು. ಸುಷ್ಮಾ ದಿನೇಶ್ ಶೆಟ್ಟಿ ನಿರ್ದೇಶನದ ಚಿಣ್ಣರ ಮನಮೋಹಕ ನೃತ್ಯ ಮತ್ತು ಯುಗ ಯುಗದ ಕಾರ್ಣಿಕ ನೃತ್ಯ ರೂಪಕ, ಶಾಲಿನಿ ಯದುನಾಥ್ ಆಳ್ವ ನಿರ್ದೇಶನದ ವರ್ಣಮಯ ರಕ್ತಬೀಜಾಸುರ ಮರ್ದಿನ ಮಹಾ ಕಾಳಿ ರುದ್ರನರ್ತನ, ಪ್ರಶಾಂತ್ ಆಳ್ವ ನಿರ್ದೇಶನದ ಉಡಲ್ ದ ಉಳ್ಳಾಲ್ತಿ, ಸೌಮ್ಯ ಪ್ರಸಾದ್ ಶೆಟ್ಟಿ ನಿರ್ದೇಶನದ ಸೆಮಿ ಕ್ಲಾಸಿಕಲ್ ನೃತ್ಯ, ಮಂಜುಳಾ ಪ್ರವೀಣ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿಬಂದ ಯಕ್ಷಗಾನ ನೃತ್ಯ, ಕೊನೆಯಲ್ಲಿ ನವೀನ್ ಶೆಟ್ಟಿ ಬಜಾಲ್ ನಿರ್ದೇಶನದ ಅದ್ಭುತವಾಗಿ ಮೂಡಿಬಂದ ಕಾರ್ಣಿಕದ ಪಿಲಿ ಎಲ್ಲಾ ಕಾರ್ಯಕ್ರಮಗಳು ನೆರೆದವರ ಕಣ್ಮನ ಸೆಳೆದು ಪ್ರಶಂಶೆಗೆ ಪಾತ್ರವಾಯಿತು.
ತೆಲಿಕೆದ ತೆನಾಲಿ ತಂಡದ ಎಲ್ಲಾ ಸದಸ್ಯರಿಗೆ ಮತ್ತು ಪ್ರಾಯೋಜಕರಿಗೆ ಗೌರವ ಸ್ಮರಣಿಕೆ ನೀಡಲಾಯಿತು. ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಸನತ್ ದೇವಾಡಿಗ, ರಿತೇಶ್ ಪೂಜಾರಿ, ಶಾಂತಲಾ ಸತೀಶ್ ಆಚಾರ್ಯ, ನಿತಿನ್ ಜಿತೇಂದ್ರ ಸೋಟ ಅವರಿಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು. ನೆರೆದ ಎಲ್ಲಾ ಅತಿಥಿಗಳಿಗೆ ಪ್ರತಿಷ್ಠಿತ ಓರಿಯೆಂಟಲ್ ಸಂಸ್ಥೆಯ ಹೋಟೆಲ್ ವತಿಯಿಂದ ರುಚಿಯಾದ ಭೋಜನ ಏರ್ಪಡಿಸಲಾಗಿತ್ತು. ಅಶೋಕ್ ಕುಮಾರ್ ಶೆಟ್ಟಿ ಮತ್ತು ಶ್ರೀಲತಾ ದೇವಿಪ್ರಸಾದ್ ಶೆಟ್ಟಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರ್ವಹಿಸಿದರು. ಸಂಘದ ಪ್ರಧಾನ ಕಾರ್ಯದರ್ತಿಗಳಾದ ವಿಶ್ವನಾಥ್ ಶೆಟ್ಟಿಯವರು ಸರ್ವರಿಗೂ ಗೌರವ ಸಮರ್ಪಿಸಿದರು. ಕಾರ್ಯಕ್ರಮದ ಸಾರ್ವಜನಿಕ ಸಂಪರ್ಕಾಧಿಕಾರಿ ದೀಪ್ತಿ ಪ್ರಶಾಂತ್ ಶೆಟ್ಟಿ ಅತಿಥಿ ಸ್ವಾಗತ ಮತ್ತು ಸ್ವಾಗತ ವೇದಿಕೆ ಅಲಂಕಾರವನ್ನು ಅದ್ಭುತವಾಗಿ ನಿರ್ವಹಿಸಿದರು. ಖಜಾಂಜಿ ಸಂದೇಶ್ ಶೆಟ್ಟಿ ಖರ್ಚು ವೆಚ್ಚ ಲೆಕ್ಕಪತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ಕ್ರೀಡಾ ಕಾರ್ಯದರ್ಶಿ ದುಷ್ಯಂತ್ ಶೆಟ್ಟಿ ಸಭಾಂಗಣ ಆಯೋಜನೆ ಮತ್ತು ನಿರ್ವಹಣೆಯನ್ನು ಉತ್ತಮವಾಗಿ ಕೈಗೊಂಡರು. ಸಮಾಜದ ಒಗ್ಗಟ್ಟು, ಕಲೆ, ಸಾಹಿತ್ಯ ಮತ್ತು ಉನ್ನತ ವಿಚಾರಗಳ ಸಂದೇಶ ನೀಡುವಲ್ಲಿ ಬಂಟಾಯನ ಯಶಸ್ವಿಯಾಯಿತು. ಈ ಮಹೋತ್ಸವವು ಕುವೈಟ್ನ ಬಂಟ ಸಮುದಾಯದ ಸಾಂಸ್ಕೃತಿಕ ಚೈತನ್ಯವನ್ನು ಮತ್ತಷ್ಟು ಬಲಪಡಿಸಿತು.











































































































