ನಾವು ನೀವೆಲ್ಲಾ ಮಾತಿನಲ್ಲಿ ಮಹಾ ಜಾಣರು. ಪುಂಖಾನು ಪುಂಖವಾಗಿ ಮಾತು ಹನಿ ಚೆಲ್ಲುತ್ತಲೇ ಇರುತ್ತೇವೆ. ಆದರೆ ವಾಸ್ತವ? ಮಾತು ಮಾತಿಗೆ ನಾವೇ ಶ್ರೇಷ್ಠ, ಇತರರು ಸಾಮಾನ್ಯರೆಂಬ ಭಾವವೇ ಮಾಧ್ಯಮಗಳಲ್ಲಿ ಅಲ್ಲಿ ಇಲ್ಲಿ ಹೆಚ್ಚು ಕೇಳಿ ಬರುವುದೇ ಒಂದು ವಿಪರ್ಯಾಸ. ನಾವು ಸರ್ವಧರ್ಮ ಸಮನ್ವಯದ ಸಹಬಾಳ್ವೆಯ ವಿಶ್ವ ಗುರುವೆನಿಸಿರುವ ಭಾರತ ಮಾತೆಯ ಮಕ್ಕಳು. ಆದರೆ ಮತ- ಧರ್ಮ- ಪಂಗಡಗಳ ಚೀ- ಮುಳ್ಳಿನೊಳಗೇ ಸಿಕ್ಕಿ, ತಪ್ಪಿಸಿಕೊಳ್ಳಲು ಅವರ-ಇವರ ಬೊಟ್ಟು ಮಾಡಿ ತೋರಿಸುವುದು. ಹೇಳಿಕೆ ಕೊಡುವುದು ಸರಿಯೇ? ನಮ್ಮ ಮುಂದೆ ನಮ್ಮ ಭವಿಷ್ಯದ ಮಕ್ಕಳು ಯುವಕರಿದ್ದಾರೆ. ಅವರ ಮನದಲ್ಲಿ ಸದ್ಭಾವ ಮೂಡಿಸುವ ನುಡಿಗಳು ಕೇಳಿಬರಬೇಕು. ಸಾಮಾಜಿಕ ನೆಮ್ಮದಿ ನೆಲೆಯಾಗಬೇಕು.
“ನಾವು ನಡೆಯುವ ದಾರಿ ಮುಂದಿನ ಪೀಳಿಗೆಗೆ ಅನುಕರಣೀಯವಾಗಿಬೇಕು. ಸಂಸ್ಕಾರಯುತ ಭವಿಷ್ಯವನ್ನು ರೂಪಿಸಲು ಹದಿಹರೆಯ ಸೂಕ್ತ ಸಂದರ್ಭವಾಗಿದೆ” ಎಂದು ಹೇಳುವ ನಾವು ಆ ಹರೆಯದಲ್ಲಿದ್ದಾಗ ಏನು ಮಾಡಿರುವೆವು. ಈಗ ಏನು ಮಾಡ್ತಾ ಇದ್ದೇವೆ? ಈ ಪ್ರಶ್ನೆಗಳು ಉತ್ತರ ಸಿಗದ ಪ್ರಶ್ನೆಗಳಾಗಿಯೇ ಉಳಿದು ಹೋಗಿವೆ. “ಈ ರಾಷ್ಟ್ರದ ಏಳ್ಗೆಗೆ ನಾವು ನಮ್ಮ ನಾಯಕರೇ ಯೋಗ್ಯರು. ಉಳಿದವರು ಅಯೋಗ್ಯರು. ಇಲ್ಲಿ ಯಾರೂ ಸುರಕ್ಷಿತವಾಗಿಲ್ಲ. ಅದು ನಮ್ಮಿಂದ ಮಾತ್ರ ಸಾಧ್ಯ. ಭ್ರಷ್ಟ, ಅಸಮರ್ಥರ ಕಿತ್ತೊಗೆಯಬೇಕು. ಜನರ ತೀವ್ರ ಸಂಕಷ್ಟ ನಮಗೇ ಅರ್ಥವಾಗುವುದು. ಕೆಲವರು ಭವಿಷ್ಯದ ಶತ್ರುಗಳು. ಅವರಿಗೆ ದೇಶದ ಸಂಸ್ಕೃತಿ, ಪರಂಪರೆ ಬಗ್ಗೆ ಅರಿವಿಲ್ಲ” ಎಂದೆಲ್ಲಾ ಹೇಳುವ ಜನನಾಯಕರ ನಡೆ ನಮಗೆಷ್ಟು ಆದರ್ಶ”.
ಹೀಗೆ ಐದೈದು ವರ್ಷ ನಮ್ಮದೇ ಆಡಳಿತ ಎಂದು ಬೊಬ್ಬಿಡುವ ನಾಯಕರಿಂದ ಸಾಮಾನ್ಯ ನಾಗರಿಕರಾದ ನಾವು ಏನನ್ನು ನಿರೀಕ್ಷಿಸಬಹುದು. ನಮ್ಮ ಮಾತಿನ ಮೇಲೆ ನಮಗೆ ಹಿಡಿತವಿರಬೇಕು. ಅದೇ ಸಮಾಜಕ್ಕೆ ಆದರ್ಶವಾಗಿ ನಿಲ್ಲಬೇಕು. ನಾವೆಲ್ಲರೂ ಭಾರತ ಮಾತೆಯ ಮಕ್ಕಳು. ನಮಗೆ ನಮ್ಮ ಸಂವಿಧಾನ ನಮ್ಮ ಕಾನೂನು ಮುಖ್ಯ. ಪಾಲಿಸೋಣ, ಸೇರಿ ಬದುಕೋಣ. ಯಾರೇ ಗೆಲ್ಲಲಿ ಸೋಲಲಿ ಅತ್ಮಾವಲೋಕನ ಮಾಡೋಣ ತಪ್ಪುಗಳ ತಿದ್ದಿ ನಡೆಯೋಣ. ನಮ್ಮ ಭಾರತ ದೇಶ ಪ್ರಪಂಚದಲ್ಲೇ ಬಹು ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಮಹಾಚುನಾವಣೆಗೆ ನಾಂದಿ ದೀಪ ಹಚ್ಚಲಾಗಿದೆ. ನಮ್ಮ ನಡೆ- ನುಡಿಗಳಲ್ಲಿ ಹಿಡಿತವಿರಬೇಕು. ಗುಪ್ತಮತ ನೀಡೋ ವ್ಯವಸ್ಥೆಯು ಸಂವಿಧಾನದ ಕೊಡುಗೆಯಾಗಿದೆ. ಯಾವುದೇ ಆಸೆ ಆಮಿಷಗಳಿಗೆ, ಬಣ್ಣದ, ಓಲೈಕೆಯ ಮಾತುಗಳಿಗೆ ಮರುಳಾಗಿ, ಅಸಮರ್ಥರ ಆರಿಸಿದರೆ ಅದಕ್ಕೆ ನಾವು ದೊಡ್ಡ ಬೆಳೆಯನ್ನೇ ಮುಂದಿನ ದಿನಗಳಲ್ಲಿ ತೆರಬೇಕಾಗಿ ಬರಬಹುದು.
ಇಂದು ಈ ರಾಷ್ಟ್ರದ ಜೀವಂತ ಸಂಪನ್ಮೂಲ ನಮ್ಮ ವಿದ್ಯಾರ್ಥಿಗಳು, ಯುವಕರು. ಅವರು ವಿಜ್ಞಾನಿಗಳಾಗಿ, ಸೈನಿಕರಾಗಿ, ಆರಕ್ಷಕರಾಗಿ, ವೈದ್ಯರಾಗಿ, ಉದ್ಯಮಿಗಳಾಗಿ, ಸಮಾಜ ಪ್ರೇಮಿಗಳಾಗಿ, ಕೃಷಿಕರಾಗಿ, ಸಾಹಿತಿಗಳಾಗಿ, ಕಲಾವಿದರಾಗಿ, ಕ್ರೀಡಾಪಟುಗಳಾಗಿ, ಒಟ್ಟು ಸಮಾಜದ ಬೆಳಕುಗಳಾಗಿ ಬೆಳಗುವ ಯುವ ಶಕ್ತಿಗಳಿಗೆ ನಾವು ತುಂಬಾನೇ ಅವಕಾಶ ನೀಡಲೇ ಬೇಕು.2024ರ ಮಹಾಚುನಾವಣೆಯಲ್ಲಿ, ಅಭಿವೃದ್ಧಿಯ ಮಾತುಗಳನ್ನಾಡುವ ಯಾರನ್ನೇ ಮಾತುಗಳಲ್ಲಿ ಚುಚ್ಚದೆ ವಿರೋಧಿಸದೆ, ಆತ್ಮಾಭಿಮಾನಕ್ಕೆ ಕುಂದು ಬಾರದ ಹಾಗೆ ನಾನು ಆ ಪಕ್ಷದವ, ನಾನು ಈ ಪಕ್ಷದವ ಜಾತಿ ಪಂಗಡದವ ಎನ್ನುವ ಮಾತುಗಳಿಗೆ ಕಿವಿಯಾಗದೆ, ಅಮೂಲ್ಯ ಮತ ನೀಡೋಣ. ಸುಭದ್ರ ನಾಡ ಕಟ್ಟೋಣ. ಭಾರತ ಮಾತೆಗೆ ಜಯವಾಗಲಿ. ಕನ್ನಡ ತಾಯಿಗೆ ಶುಭವಾಗಲಿ. ತುಳು ಸೇರಿಲೆಕ ಮಾತಾ ಭಾಷೆಲು ಗೆಂದೊಡು ಬೆಳಗೊಡು.
ನಾರಾಯಣ ರೈ ಕುಕ್ಕುವಳ್ಳಿ