ಕನ್ನಡ ವಿಭಾಗ, ಮುಂಬಯಿ ವಿಶ್ವಾವಿದ್ಯಾಲಯದಲ್ಲಿ ಎಪ್ರಿಲ್ 13 ರ ಶನಿವಾರದಂದು ಮಧ್ಯಾಹ್ನ 2:00 ರಿಂದ ಮುಂಬಯಿ ವಿಶ್ವವಿದ್ಯಾಲಯ ಜೆ. ಪಿ. ನಾಯಕ್ ಭವನದಲ್ಲಿ ಕನ್ನಡ ವಿಭಾಗದ 46 ರ ಸಂಭ್ರಮ, ನಿರಂಜನ ಶತಮಾನೋತ್ಸವ, ಉಪನ್ಯಾಸ ಹಾಗೂ ಆರು ಕೃತಿಗಳ ಬಿಡುಗಡೆ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಕಾರ್ಯಕ್ರಮದ ಉದ್ಘಾಟನೆಯನ್ನು ಮುಂಬಯಿ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ಮಾಡಲಿದ್ದಾರೆ. ಕರ್ನಾಟಕ ಮಲ್ಲ ದೈನಿಕದ ಸಂಪಾದಕ ಚಂದ್ರಶೇಖರ ಪಾಲೆತ್ತಾಡಿ ಉಪನ್ಯಾಸ ನೀಡಲಿದ್ದಾರೆ.
ಇದೇ ಸಂದರ್ಭದಲ್ಲಿ ಮುಂಬಯಿ ವಿಶ್ವವಿದ್ಯಾಲಯ, ಕನ್ನಡ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ ಡಾ. ಜಿ. ಎನ್. ಉಪಾಧ್ಯ ಅವರ ‘ಸಾಹಿತ್ಯ ಸಿದ್ಧಿ ಸಿರಿ ಸೇವೆಯ ಸಾಕಾರ – ಡಾ. ಸುಧಾಮೂರ್ತಿ’ ಹಾಗೂ ‘ರಸ ಋಷಿ ರಾಷ್ಟ್ರಕವಿ ಕುವೆಂಪು’, ಕನ್ನಡ ವಿಭಾಗದ ಸಹ ಪ್ರಾಧ್ಯಾಪಕಿ ಡಾ. ಪೂರ್ಣಿಮಾ ಸುಧಾಕರ ಶೆಟ್ಟಿ ಅವರ ‘ನನ್ನ ಇತ್ತೀಚೆಗಿನ ಓದು’, ಕನ್ನಡ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿ ವಿದ್ಯಾ ರಾಮಕೃಷ್ಣ ಅನುವಾದಿಸಿರುವ ‘ಫ್ರಮ್ ವರ್ಡ್ಸ್ ಟು ನೋಬಲ್ ಡೀಡ್ಸ್ – ದ ಇನ್ ಸ್ಪೆರಿಂಗ್ ಟೇಲ್ ಆಫ್ ಡಾ. ಸುಧಾಮೂರ್ತಿ’, ಕನ್ನಡ ವಿಭಾಗದ ಸಂಶೋಧನಾ ವಿದ್ಯಾರ್ಥಿ ಕಲಾ ಭಾಗ್ವತ್ ಅವರ ‘ಜಾಲಂದರ’ ಹಾಗೂ ಕನ್ನಡ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿ ಸವಿತಾ ಅರುಣ್ ಶೆಟ್ಟಿ ಅವರ ‘ಬೆಳಕಿಂಡಿ’ ಎಂಬ ಆರು ಕೃತಿಗಳು ಲೋಕಾರ್ಪಣೆಗೊಳ್ಳಲಿವೆ. ಕೃತಿಗಳನ್ನು ಡಾ. ಜಿ. ಎನ್. ಉಪಾಧ್ಯ, ಪ್ರವೀಣ್ ಭೋಜ ಶೆಟ್ಟಿ, ಚಂದ್ರಶೇಖರ ಪಾಲೆತ್ತಾಡಿ ಬಿಡುಗಡೆಗೊಳಿಸಲಿರುವರು. ಕೃತಿಯ ಕುರಿತು ಕ್ರಮವಾಗಿ ನಳಿನಾ ಪ್ರಸಾದ್, ಗೀತಾ ಮಂಜುನಾಥ್, ಸುರೇಖಾ ಹರಿಪ್ರಸಾದ್ ಶೆಟ್ಟಿ, ವಿಕ್ರಮ್ ಜೋಶಿ, ಡಾ. ಉಮಾ ರಾಮರಾವ್ ಮಾತನಾಡಲಿರುವರು.
ನಿರಂಜನ ಶತಮಾನೋತ್ಸವದ ಅಂಗವಾಗಿ ನಿರಂಜನ ಸಾಹಿತ್ಯಯಾನದ ಕುರಿತು ಅಡ್ವಕೇಟ್ ಶೇಖರ ಶೆಟ್ಟಿ ಮಾತಾನಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಸಾಧಕರಿಗೆ ಗೌರವ ಕಾರ್ಯಕ್ರಮದಲ್ಲಿ ಮುಂಬಯಿ ಮಹಾನಗರದಲ್ಲಿ ಕಳೆದ ಅನೇಕ ವರ್ಷಗಳಿಂದ ಸಾಂಸ್ಕೃತಿಕ ಪರಿಚಾರಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಕರ್ನೂರು ಮೋಹನ್ ರೈ ಅವರನ್ನು ಗೌರವಿಸಲಾಗುವುದು ಹಾಗೂ ಗುಲ್ಬರ್ಗಾ ವಿಶ್ವವಿದ್ಯಾಲಯ, ಕಲಬುರಗಿ ಪ್ರಸಾರಾಂಗವು ರಾಜ್ಯ ಮಟ್ಟದ ಪುಸ್ತಕ ಬಹುಮಾನ ಯೋಜನೆಯ ಅಂಗವಾಗಿ ಕೊಡಮಾಡುವ ‘ಕನ್ನಡ ಸಾಹಿತ್ಯಕ್ಕೆ ಡುಂಡಿರಾಜ್ ಕೊಡುಗೆ’ ಕೃತಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಡಾ. ಜಿ. ಎನ್. ಉಪಾಧ್ಯ ಅವರಿಗೆ ಅತಿಥಿ ಗಣ್ಯರು ಪ್ರದಾನಿಸಲಿರುವರು. ಅದೇ ರೀತಿ ಡಾ. ಲೀಲಾ ಬಿ. ಅವರು ಸಂಶೋಧನಾ ವಿದ್ಯಾರ್ಥಿಗಳಿಗೆ ಕೊಡ ಮಾಡುವ ‘ಶೋಧ ಸಿರಿ’ ಶಿಷ್ಯ ವೇತನವನ್ನು ಸುರೇಖಾ ಹರಿಪ್ರಸಾದ್ ಶೆಟ್ಟಿ ಅವರಿಗೆ ನೀಡಲಾಗುವುದು ಎಂದು ವಿಭಾಗದ ಪ್ರಕಟಣೆಯ ಮೂಲಕ ತಿಳಿಸಲಾಗಿದೆ.