ವಿದ್ಯಾಗಿರಿ: “ಉತ್ತಮ ಸಮಾಜವನ್ನು ಕಟ್ಟುವುದರಲ್ಲಿ ಶಿಕ್ಷಕರ ಪಾತ್ರ ಬಹು ಮುಖ್ಯ, ಶಿಕ್ಷಕರಿಗೆ ಎಲ್ಲಾ ಕ್ಷೇತ್ರಗಳಲ್ಲಿ ಆಸಕ್ತಿ ಇರಬೇಕು. ಆಗ ಮಾತ್ರ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ಕಟ್ಟಿಕೊಡಲು ಸಾಧ್ಯ” ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಹೇಳಿದರು. ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಆಳ್ವಾಸ್ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ಭಾರತ್ ಸ್ಕೌಡ್ಸ್ ಮತ್ತು ಗೈಡ್ಸ್ವತಿಯಿಂದ ನಡೆದ ಒಂದು ದಿನದ ಕಾರ್ಯಗಾರದಲ್ಲಿ ಮಾತನಾಡಿದರು. ಶಿಕ್ಷಕ ವೃತ್ತಿಯು ಶೈಕ್ಷಣಿಕ ಹಿನ್ನೆಲೆಯನ್ನು ಅವಲಂಬಿಸಿದೆಯೇ ಹೊರತು ಜಾತಿ ಧರ್ಮವನ್ನಲ್ಲ.


ಪರಿಶಿಕ್ಷಣಾರ್ಥಿಗಳಾಗಿ ಮಕ್ಕಳಿಗೆ ಯಾವ ವಿಷಯವನ್ನು ಹೇಗೆ ಕಲಿಸಬೇಕು ಎಂಬುದನ್ನು ತಿಳಿಯುವುದು ಬಹು ಮುಖ್ಯ. ಇದರಿಂದ ಮಕ್ಕಳ ಕಲಿಕೆಗೆ ಸಹಕಾರಿಯಾಗುತ್ತದೆ ಎಂದರು. ಶಿಕ್ಷಕರು ತಾವು ಉತ್ತಮ ಆದರ್ಶಗಳನ್ನು ಪಾಲಿಸುತ್ತಿದ್ದಲ್ಲಿ ಮಾತ್ರ ವಿದ್ಯಾರ್ಥಿಗಳನ್ನು ಸಮಾಜದ ಮಾದರಿ ಪ್ರಜೆಗಳಾಗಿ ರೂಪಿಸಲು ಸಾಧ್ಯ ಎಂದರು. ಶಿಕ್ಷಕರಿಗೆ ಮೊದಲು ಎಲ್ಲಾ ಕ್ಷೇತ್ರಗಳಲ್ಲಿ ಆಸಕ್ತಿ ಇರಬೇಕು. ನಂತರ ವಿದ್ಯಾರ್ಥಿಗಳಿಗೆ ಅವುಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಬೇಕು ಎಂದರು.
ಸ್ಕೌಡ್ಸ್ ಮತ್ತು ಗೈಡ್ಸ್ ನಮಗೆ ಸೌಹಾರ್ದತೆಯಿಂದ ಬದುಕಲು ಕಲಿಸುವುದರ ಜೊತೆಗೆ ದೇಶ ಪ್ರೇಮವನ್ನು ಬೆಳೆಸುತ್ತದೆ. ಪರಿಸರದೊಂದಿಗೆ ಬದುಕುವುದನ್ನು ಹಾಗೂ ನಮ್ಮಲ್ಲಿ ಸೇವಾ ಮನೋಭಾವವನ್ನು ಬೆಳೆಸುವಲ್ಲಿ ಸ್ಕೌಡ್ಸ್ ಮತ್ತು ಗೈಡ್ಸ್ ಮುಖ್ಯ ಪಾತ್ರ ವಹಿಸುತ್ತದೆ. ಸಮಾಜದಲ್ಲಿ ಉತ್ತಮ ವ್ಯಕ್ತಿತ್ವವನ್ನು ರೂಪಿಸಲು ಒಬ್ಬ ಉತ್ತಮ ಶಿಕ್ಷಕನಿಂದ ಸಾಧ್ಯ. ಒಬ್ಬ ಕುಂಬಾರ ಮಣ್ಣನ್ನು ತಂದು ಹದ ಮಾಡಿ ಅದನ್ನು ತಟ್ಟಿ ತಟ್ಟಿ ಒಂದು ರೂಪಕ್ಕೆ ತರುತ್ತಾನೆ ಹಾಗೆ ಶಿಕ್ಷಕರು ಕೂಡಾ ಒಬ್ಬ ವಿದ್ಯಾರ್ಥಿಯನ್ನು ಸಮಾಜದಲ್ಲಿ ಒಂದು ಸುಂದರ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ ಎಂದರು.
ಕೇವಲ ಪುಸ್ತಕಗಳಿಗೆ ಸೀಮಿತರಾಗಿರದೆ ಎಲ್ಲಾ ವಿಚಾರ ತಿಳಿದುಕೊಂಡಿರುವುದು ಅಗತ್ಯ ಹಾಗೆಯೇ ವಿದ್ಯಾರ್ಥಿಗಳಿಗೆ ಮಾರ್ಗಸೂಚಕರಾಗಿರಲು ಸಾಧ್ಯ ಎಂದರು. ಭಾರತ್ ಸ್ಕೌಡ್ಸ್ ಮತ್ತು ಗೈಡ್ಸ್ ಮೂಡುಬಿದಿರೆ ಸ್ಥಳೀಯ ಸಂಘದ ಕಾರ್ಯದರ್ಶಿ ಭಾರತಿ ನಾಯಕ್, ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ ಆಳ್ವಾಸ್ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಶಂಕರಮೂರ್ತಿ ಎಚ್ ಕೆ, ಉಪಸ್ಥಿತರಿದ್ದರು. ಜಾನ್ನೆಟ್ ಸಾಂತುಮೇಯರ್ ನಿರೂಪಿಸಿ ಕಾವ್ಯ. ಕೆ ವಂದಿಸಿದರು.











































































































