ಭಾರತೀಯ ಸಂಸ್ಕೃತಿಯಲ್ಲಿ ವಿವಾಹ ಸಂಸ್ಕಾರಕ್ಕೆ ತನ್ನದೇ ಆದ ಮಹತ್ವವಿದೆ. ಹುಡುಗಿ ನೋಡುವ ಶಾಸ್ತ್ರದಿಂದ ಮೊದಲುಗೊಂಡು ವಿವಾಹ ನೆರವೇರಿಸಿ ಹುಡುಗಿಯನ್ನು ಗಂಡನ ಮನೆಗೆ ಕಳುಹಿಸುವ ತನಕವೂ ಆನೇಕ ವಿಧದ ಶಾಸ್ತ್ರಗಳು, ಕಟ್ಟಳೆಗಳು ಜಾರಿಯಲ್ಲಿವೆ. ನಿಶ್ಚಿತಾರ್ಥ ಮತ್ತು ಮೆಹೆಂದಿ ಶಾಸ್ತ್ರವೂ ಇದರಲ್ಲಿ ಪ್ರಾಮುಖ್ಯವಾದುದು. ಬೇರೆ ಬೇರೆ ಜಾತಿ, ವರ್ಣಗಳಲ್ಲಿ ಮತ್ತು ಪ್ರಾದೇಶಿಕವಾಗಿ ಕೆಲವು ಭಿನ್ನತೆಗಳಿರಬಹುದಾದರೂ ಒಟ್ಟಾರೆಯಾಗಿ ಈ ಕ್ರಿಯಗಳಿಗೂ ಸಾಕಷ್ಟು ಧಾರ್ಮಿಕ ಮಹತ್ವವಿದೆ. ಎರಡೂ ಕಡೆಯ ಹಿರಿಯರಿದ್ದು ನಿಶ್ಚಿತಾರ್ಥವಾದ ಬಳಿಕ ಮದುವೆಗೆ ದಿನ ನಿಗದಿಪಡಿಸಲಾಗುತ್ತದೆ. ಮದುವೆಗೆ ಒಂದು ಅಥವಾ ಎರಡು ದಿನ ಮುಂಚಿತವಾಗಿ ನಡೆಯುವ ಒಂದು ವಿಶೇಷ ಸಮಾರಂಭವೇ ಮೆಹೆಂದಿ ಕಾರ್ಯಕ್ರಮ. ಮೆಹೆಂದಿಯನ್ನು ಅರೆದು ಸಿದ್ಧಪಡಿಸಿದ ನಂತರ ನಂಬಿದ ದೈವ ದೇವರಿಗೆ ದೀಪವಿಟ್ಟು ಎಲ್ಲರೂ ಸೇರಿ ಪ್ರಾರ್ಥನೆ ಸಲ್ಲಿಸಿದ ನಂತರ ಮನೆಯ ಚಾವಡಿಯಲ್ಲಿ ಅಥವಾ ಸೆಗಣಿ ಸಾರಿಸಿದ ಅಂಗಳದಲ್ಲಿ ತುಳಸಿಕಟ್ಟೆಯ ಎದುರು ಚಾಪೆ ಹಾಸಿ ವಧು ಅಥವಾ ವರನನ್ನು ಕುಳ್ಳಿರಿಸಿ ಬಂಧುಗಳು ಅಪ್ತರೆಲ್ಲ ಸೇರಿ ಸಂಭ್ರಮಿಸುತ್ತಿದ್ದ ಮೆಹೆಂದಿ ಕಾರ್ಯಕ್ರಮ ಸರಳ ಸಸ್ಯಾಹಾರಿ ಊಟದೊಂದಿಗೆ ಕೊನೆಗೊಳ್ಳುತ್ತಿತ್ತು. ಆದರೆ ಇಂದು ಮೆಹೆಂದಿ ಕಾರ್ಯಕ್ರಮದ ಸ್ವರೂಪವೇ ಪೂರ್ತಿ ಬದಲಾಗಿದೆ. ಯಾವುದೇ ಸಂಸ್ಕೃತಿಯಲ್ಲಿ ಕಾಲಕ್ಕೆ ತಕ್ಕಂತೆ ಬದಲಾವಣೆಯಾಗುವುದು ಸಹಜ ಪ್ರಕ್ರಿಯೆಯಾದರೂ ಅದು ಮೂಲ ಸ್ವರೂಪವನ್ನೇ ಕಳೆದುಕೊಂಡು ವಿದೇಶೀ ಸಂಸ್ಕೃತಿಗೆ ಜೋತು ಬೀಳುವುದಂತೂ ಅತ್ಯಂತ ಖೇದಕರ ಮತ್ತು ಸಾಮಾಜಿಕ ಸ್ವಾಸ್ಥ್ಯದ ದೃಷ್ಟಿಯಿಂದ ಗಂಡಾಂತರಕಾರಿಯೂ ಹೌದು.
ಮೆಹೆಂದಿಯ ಹಿಂದಿರುವ ಭಾವನಾತ್ಮಕ ಬೆಸುಗೆಯ ಬಂಧಗಳು ಇಂದು ಪೂರ್ತಿ ಕಳಚಿಕೊಂಡಿದ್ದು ಎಲ್ಲವೂ ತಮ್ಮ ದೊಡ್ಡಸ್ತಿಕೆ ಮತ್ತು ಆಡಂಬರ ಪ್ರದರ್ಶನದ ರಂಗವಾಗುತ್ತಿದೆ. ಇದರಲ್ಲಿಯೂ ಮುಖ್ಯವಾಗಿ ಇಂದು ಕುಡಿದು ಕುಣಿದು ಕುಪ್ಪಳಿಸುವುದೇ ಮೆಹೆಂದಿಯ ಮುಖ್ಯ ಭಾಗ ಎಂಬಂತಾಗಿದೆ. ಕಂಠಪೂರ್ತಿ ಕುಡಿಯಲು ಮದ್ಯ, ಹೊಟ್ಟೆ ಬಿರಿಯುವಷ್ಟು ತಿನ್ನಲು ಮಾಂಸಾಹಾರ ಊಟ ಇಷ್ಟು ಸಿಕ್ಕಿದ ಮೇಲೆ ಸುಮ್ಮನಿರುವುದಾದರೂ ಹೇಗೆ? ಜೊತೆಗೆ ಎದೆ ಒಡೆದು ಹೋಗಬಹುದಾದ ಡಿ.ಜೆ.ಸೌಂಡ್ ನಲ್ಲಿ ಕಿವಿಗಡಚಿಕ್ಕುವ ರೆಕಾರ್ಡ್ ಹಾಡಿಗೆ ಕುಣಿತ ಪ್ರಾರಂಭಗೊಳ್ಳುತ್ತದೆ. ಪ್ರಾರಂಭದಲ್ಲಿ ಸಿನಿಮಾ ಗೀತೆಗಳಿಗೆ ಹೆಜ್ಜೆ ಹಾಕುತ್ತಿದ್ದವರು ಇನ್ನೂ ಒಂದೊಂದೇ ಹೆಜ್ಜೆ ಮುಂದಿಕ್ಕುತ್ತಾ ದೈವ ದೇವರ ಆವೇಶವನ್ನು ಮೈಗೂಡಿಸಿಕೊಂಡು ಮೈಮೇಲೆ ಬಂದವರಂತೆ ದೊಂದಿ, ಜೀಟಿಗೆ ಹಿಡಿದು ಅರ್ಭಟಿಸುತ್ತಾರೆ. ದೂರದರ್ಶನ ಕಾರ್ಯಕ್ರಮದಲ್ಲಿ ಸೃಜನ್ ಲೋಕೇಶ್ ನಮ್ಮ ಭೂತಾರಾಧನೆಯ ಬಗ್ಗೆ ಹೇಳಿದ ಒಂದು ಮಾತಿಗೆ ಎಂತಹ ಉಗ್ರ ಪ್ರತಿಭಟನೆ ವ್ಯಕ್ತವಾಯಿತೆಂದರೆ ಕೊನೆಗೆ ಸೃಜನ್ ಕ್ಷಮೆಯಾಚಿಸಬೇಕಾಯಿತು. ತುಳುವರೂ ಹೆಮ್ಮೆ ಪಟ್ಟುಕೊಂಡರು. ಆದರೆ ಇದೀಗ ನಾವೇ ದೈವಾರಾಧನೆಯನ್ನು ಅವಹೇಳನ ಮಾಡುವಂತೆ ನಡೆದುಕೊಳ್ಳುತ್ತಿರುವುದು ತುಳುವರೆಲ್ಲರೂ ತಲೆತಗ್ಗಿಸುವಂತೆ ಮಾಡುತ್ತಿದೆ. ಈಗ ಕ್ಷಮೆ ಕೇಳಬೇಕಾದವರು ಯಾರು ಎನ್ನುವುದೇ ಚಿಂತಿಸಬೇಕಾದ ವಿಷಯವಾಗಿದೆ. ಈಗಲೇ ತುಳುವರು ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ದೇವರ ದರ್ಶನ, ಬಲಿ ಉತ್ಸವ, ನಾಗದರ್ಶನ ಎಲ್ಲವೂ ಈಗಿನ ಭೂತಗಳ ಜೊತೆ ಸೇರಿಕೊಂಡು ಇನ್ನಷ್ಟು ಅವಮಾನಕರ ಪ್ರಸಂಗಗಳನ್ನು ಎದುರಿಸಬೇಕಾಗಿ ಬರಬಹುದು. ಕುಡಿದ ಮತ್ತಿನಲ್ಲಿ ಕೆಲವು ಯುವಕರು ಮಾಡುವ ಅತಿರೇಕದಿಂದ ಅನೇಕ ಕಡೆ ಮೆಹೆಂದಿ ಹೋಗಿ ಬಡಿದಾಟದ ತಾಣವಾಗಿರುವುದರ ಜೊತೆಗೆ ಆನೇಕ ಅನಾಹುತಗಳಿಗೂ ಸಾಕ್ಷಿಯಾದದ್ದಿದೆ.
ಮಾಂಸಾಹಾರ ಸೇವನೆಯೊಂದಿಗೆ ಕುಡಿತ ಕುಣಿತಗಳಿಂದ ಕೂಡಿದ ಮೆಹೆಂದಿ ಕಾರ್ಯಕ್ರಮ ನಮ್ಮ ಸಂಸ್ಕೃತಿಯ ಭಾಗವಂತೂ ಅಲ್ಲ. ವಿದ್ಯಾವಂತರು, ಸುಸಂಸ್ಕೃತರು ಅಂತ ವಿಶ್ವವೇ ನಮ್ಮನ್ನು ಹಾಡಿ ಹೊಗಳುತ್ತಿರುವಾಗ ನಾವು ವಿದೇಶೀ ಸಂಸ್ಕೃತಿಯನ್ನು ಅಪ್ಪಿಕೊಳ್ಳುವ ಭರದಲ್ಲಿ ನಮ್ಮ ಸಂಸ್ಕೃತಿಯ ಅವಹೇಳನವನ್ನು ನಾವೇ ಮಾಡಿಕೊಳ್ಳುತ್ತಿರುವುದು ದುರಂತವೇ ಸರಿ. ಇಂದು ಮೆಹೆಂದಿ ಕಾರ್ಯಕ್ರಮ ಮದುವೆಗಿಂತಲೂ ಮುಖ್ಯವಾದುದು ಎಂಬುದಾಗಿ ಅನಿಸಿಕೊಂಡಿರುವುದೇ ಈ ಕುಡಿತ ಮತ್ತು ಕುಣಿತಗಳಿಂದ. ಇಲ್ಲಿಯೂ ಇದನ್ನು ಅದ್ದೂರಿಯಾಗಿ ಮಾಡಲು ಪೈಪೋಟಿ. ಈ ಕಾರಣದಿಂದಾಗಿಯೇ ಮದುವೆಗೆ ಇನ್ನೂರು ಜನ ಬಂದರೂ ಮೆಹೆಂದಿಗೆ ಐನೂರು ಜನರಾದರೂ ಸೇರುತ್ತಾರೆ ಎಂದು ನನ್ನ ಮಿತ್ರರೊಬ್ಬರು ನನ್ನೊಂದಿಗೆ ಹೇಳಿದ ಮಾತು ನೂರಕ್ಕೆ ನೂರು ಸತ್ಯ ಅನಿಸುತ್ತದೆ. ಮೆಹೆಂದಿಗೆ ಆಮಂತ್ರಣವಿಲ್ಲದಿದ್ದರೂ ಸುದ್ದಿ ತಿಳಿದು “ಪ್ರೀತಿ”ಯಿಂದ ಹೋಗುವವರೂ ಬಹಳಷ್ಟು ಜನರಿದ್ದಾರೆ. ಇಂತಹ ಆಡಂಬರ, ವಿಕ್ರತಿ ಮುಂದೆ ನಮ್ಮನ್ನೆಲ್ಲಾ ಎಲ್ಲಿಗೆ ಕರೆದೊಯ್ಯಬಹುದೆಂದು ಯೋಚಿಸಿದರೆ ಭಯವಾಗುತ್ತದೆ. ಅನುಕೂಲವಿದ್ದವರಂತೂ ಮಾಡುತ್ತಾರೆ. ಆದರೆ ಈಗ ಬಡವರ್ಗದವರು ಕೂಡಾ ಜಿದ್ದಿಗೆ ಬಿದ್ದಂತೆ ಇದನ್ನು ಆಚರಿಸಲು ಹೋಗಿ ಸಾಲದ ಸುಳಿಗೆ ಬೀಳುತ್ತಿದ್ದಾರೆ. ಆನೇಕ ಕಡೆಗಳಲ್ಲಿ ಮದುವೆಗಿಂತಲೂ ಹೆಚ್ಚು ವೆಚ್ಚ ಇಂತಹ ಕಾರ್ಯಕ್ರಮಗಳಿಗಾಗುತ್ತಿದೆ. ಇನ್ನು ಮಕ್ಕಳ ಹುಟ್ಟುಹಬ್ಬ ಕೂಡಾ ಕೆಲವೆಡೆ ಇದೇ ರೀತಿಯಲ್ಲಿ ಪೂರ್ತಿ ವಿದೇಶೀ ಸಂಸ್ಕೃತಿಯ ಪಡಿಯಚ್ಚಿನಲ್ಲಿಯೇ ನಡೆಯುತ್ತಿದೆ. ದೀಪ ಆರಿಸಿ, ಕೇಕ್ ಕತ್ತರಿಸಿ ಕುಣಿಯುವುದರಲ್ಲಿಯೇ ಹೆತ್ತವರೂ ಸಾರ್ಥಕತೆಯನ್ನು ಅನುಭವಿಸುತ್ತಾರೆ. ಇವೆಲ್ಲವೂ ನಾವು ನಮ್ಮ ಪರಂಪರೆ, ಸಂಸ್ಕೃತಿಯ ಬಗ್ಗೆ ತೋರುತ್ತಿರುವ ಅನಾದರವನ್ನು ಎತ್ತಿ ತೋರಿಸುತ್ತದೆ.
ಭಾರತೀಯ ಸಂಸ್ಕೃತಿ ವಿಶೇಷವಾಗಿ ನಮ್ಮ ಅನನ್ಯವಾದ ತುಳು ಸಂಸ್ಕೃತಿಯನ್ನು ಮೆರೆಸಬೇಕಾದುದು ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ. ಮೇಲಿನ ಘಟನೆಗಳು ನಮ್ಮನ್ನು ನಿರಾಶವಾದದೆಡೆಗೆ ತಳ್ಳಿದರೂ ಆನೇಕ ಕಡೆ ಇದಕ್ಕೆ ವ್ಯತಿರಿಕ್ತವಾಗಿ ನಿಶ್ಚಿತಾರ್ಥ, ಮೆಹೆಂದಿ, ಹುಟ್ಟುಹಬ್ಬ, ಸೀಮಂತ, ನಾಮಕರಣ ಇತ್ಯಾದಿ ಕಾರ್ಯಕ್ರಮಗಳೆಲ್ಲ ಧಾರ್ಮಿಕ, ಆಧ್ಯಾತ್ಮಿಕ ಹಿನ್ನೆಲೆಯೊಂದಿಗೆ ವಿಧಿಪೂರ್ವಕವಾಗಿ ನಡೆಯುತ್ತಿರುವುದು ಕೂಡಾ ಒಂದು ಆಶಾದಾಯಕ ಬೆಳವಣಿಗೆಯಾಗಿದೆ. ಇಂದು ಅಂಗಳದಲ್ಲಿ ಭಜನಾ ಕಾರ್ಯಕ್ರಮ ಹಾಗೂ ಮದ್ಯವಿಲ್ಲದ ಸಾದಾ ಭೋಜನದೊಂದಿಗೆ ಮೆಹೆಂದಿ ಕಾರ್ಯಕ್ರಮ ಅಲ್ಲಲ್ಲಿ ನಡೆಯುತ್ತಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಸದಸ್ಯರ ಮತ್ತು ವಿವಿಧ ಸಹಕಾರಿ ಸಂಸ್ಥೆಗಳ ಸ್ವಸಹಾಯ ಸಂಘಗಳ ಸದಸ್ಯರ ಮನೆಗಳಲ್ಲಿ ಇದು ಹೆಚ್ಚಾಗಿ ನಡೆಯುತ್ತಿದೆ. ಅದೇ ರೀತಿ ಹುಟ್ಟುಹಬ್ಬವನ್ನು ಕೂಡಾ ಮನೆಯಲ್ಲಿ ಮಗುವಿಗೆ ಹೊಸ ಬಟ್ಟೆ ತೊಡಿಸಿ, ದೇವರ ಮುಂದೆ ಕೂಡಿಸಿ ಆರತಿ ಎತ್ತಿ ಆಶೀರ್ವದಿಸಿ ಸಿಹಿ ತಿನ್ನಿಸಿ ನಂತರ ಮಗುವಿನೊಂದಿಗೆ ದೇವಾಲಯಕ್ಕೆ ಹೋಗಿ ಪೂಜೆ ಅರ್ಚನೆ ಸಲ್ಲಿಸಿ, ಅನಾಥ ಮಕ್ಕಳಿಗೋ, ವಿಶೇಷ ಚೇತನ ಮಕ್ಕಳಿಗೋ ಸಿಹಿಯನ್ನಾಗಲೀ, ಊಟವನ್ನಾಗಲೀ ನೀಡುವುದಲ್ಲದೇ, ಆಸ್ಪತ್ರೆಗೆ ತೆರಳಿ ರೋಗಿಗಳಿಗೆ ಹಣ್ಣು ಹಂಪಲು ನೀಡಿ ಬರುವ ಹೆತ್ತವರೂ ನಮ್ಮಲ್ಲಿರುವುದು ನಮ್ಮ ಸೌಭಾಗ್ಯ. ಈಗೀಗ ಆನೇಕರು ಶುಭ ಸಮಾರಂಭಗಳ ನೆನಪಿಗೆ ಪ್ರಕೃತಿ ಪೂಜೆಯ ಭಾಗವಾಗಿ ಒಂದು ಗಿಡ ನೆಟ್ಟು ಪೋಷಿಸುವ ಕಾರ್ಯವನ್ನು ಮಾಡುತ್ತಿರುವುದು ಕೂಡಾ ಸ್ತುತ್ಯಾರ್ಹವೆ ಆಗಿದೆ. ಮೂಡುಬಿದಿರೆಯ ನರ್ಸರಿ ಶಾಲೆಯೊಂದರ ಮುಖ್ಯಸ್ಥರು ಎಲ್ಲಾ ಮಕ್ಕಳ ಹುಟ್ಟುಹಬ್ಬದಂದು ಆ ಮಕ್ಕಳ ಮನೆಗೆ ಹೋಗಿ ಮಗುವಿನ ಹುಟ್ಟು ಹಬ್ಬದ ನೆಪದಲ್ಲಿ ಗಿಡವೊಂದನ್ನು ನೀಡಿ ಮಗು ಹಾಗೂ ಮನೆಯವರ ಸಹಕಾರ ಪಡೆದು ನೆಡಲಾಗುತ್ತದೆ. ಈ ಪ್ರಯೋಗ ಅತ್ಯಂತ ಯಶಸ್ವಿಯಾಗಿದ್ದು ಹೀಗೆ ನೆಟ್ಟ ಗಿಡವನ್ನು ದಿನವೂ ಮಗು ಮತ್ತು ಮನೆಯವರು ಗಮನಿಸುತ್ತಾ ಅದನ್ನು ಆರೈಕೆ ಮಾಡುವುದರಿಂದ ಪರೋಕ್ಷವಾಗಿ ಪ್ರಕೃತಿಗೂ ಸಲ್ಲಿಸುವ ಮಹೋನ್ನತ ಕೊಡುಗೆಯೂ ಆಗುತ್ತದೆ. ಇದೊಂದು ಎಲ್ಲಾ ಶಿಕ್ಷಣ ಸಂಸ್ಥೆಗಳೂ ಅನುಕರಿಸಬಹುದಾದ ಕಾರ್ಯಕ್ರಮವಾಗಿದೆ.
ನನ್ನ ಸಾಹಿತ್ಯ ಮಿತ್ರರೊಬ್ಬರು ತಮ್ಮ ಮಕ್ಕಳ ಹುಟ್ಟುಹಬ್ಬದ ದಿನದಂದು ಸಾಹಿತ್ಯ ಕಾರ್ಯಕ್ರಮ ಹಮ್ಮಿಕೊಂಡು ಉಪನ್ಯಾಸ, ಪುಸ್ತಕ ಬಿಡುಗಡೆ, ಕವಿಗೋಷ್ಠಿಗಳನ್ನು ನಡೆಸಿ ನಂತರ ಮಗುವಿನ ಹುಟ್ಟುಹಬ್ಬವನ್ನು ಆಚರಿಸಿದರು. ಇದೊಂದು ಸಾಹಿತ್ಯ ಪ್ರಿಯರು ಕೈಗೊಳ್ಳಬಹುದಾದ ಅನುಕರಣೀಯ ಕಾರ್ಯಕ್ರಮವಾಗಿದೆ. ನಾವು ಇವರಂತಾಗದಿದ್ದರೂ ನಮ್ಮ ಸಂಸ್ಕೃತಿಗೆ ಅಪಚಾರ, ಅವಹೇಳನವಾಗದಂತೆ ನಡೆದುಕೊಂಡರೆ ಅದೇ ನಾವು ನಮ್ಮ ಸಮಾಜಕ್ಕೆ ಸಲ್ಲಿಸುವ ದೊಡ್ಡ ಕೊಡುಗೆಯಾದೀತು.
ಸದಾನಂದ ನಾರಾವಿ