ಸಂಸ್ಕೃತ ಭಾಷೆಯನ್ನು ಅಧ್ಯಯನ ಮಾಡುವುದರಿಂದ ಅಪರಿಮಿತ ಜ್ಞಾನ ಸಿದ್ಧಿಯಾಗುತ್ರದೆ. ಸಂಸ್ಕೃತ ಭಾಷೆಯ ಸಂಭಾಷಣೆಯಿಂದ ಮನಸ್ಸಿನ ಸ್ಥಿತಿ ಅತ್ಯಂತ ಶುದ್ಧವಾಗುತ್ತದೆ. ಸಂಸ್ಕೃತ ತಿಳಿದವರು ಎಲ್ಲರ ಜತೆ ಸಂಸ್ಕೃತದಲ್ಲೇ ಸಂಭಾಷಣೆ ಮಾಡುವ ಮೂಲಕ ಭಾಷೆಯನ್ನು ಎಲ್ಲೆಡೆ ಪಸರಿಸಲು ಪ್ರಯತ್ನಿಸಬೇಕು ಎಂದು ಸಂಸ್ಕೃತ ಭಾರತೀಯ ಅಖಿಲ ಭಾರತ ಸಹಶಿಕ್ಷಣ ಪ್ರಮುಖ ಡಾ. ಸಚಿನ್ ಕಠಾಳೆ ಹೇಳಿದ್ದಾರೆ. ಸಂಸ್ಕೃತ ಭಾರತೀ ಮಂಗಳೂರು ವತಿಯಿಂದ ನಗರದ ಡೊಂಗರಕೇರಿಯ ಕೆನರಾ ಹೈಸ್ಕೂಲ್ ನ ಶ್ರೀ ಸುಧೀಂದ್ರ ಸಭಾಭವನದಲ್ಲಿ ನಡೆದ ಸಂಸ್ಕೃತ ಮಹೋದಧಿ ಜನಪದ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಸಂಸ್ಕೃತಿ ಮತ್ತು ಪರಂಪರೆ ಸಂಸ್ಕೃತದಲ್ಲಿದೆ. ಭಾರತದಲ್ಲಿ ಯಾವುದೆಲ್ಲ ಉತ್ತಮವಾದುದು ಇದೆಯೋ ಅದನ್ನು ರಕ್ಷಿಸಬೇಕು. ಯಾವುದು ಕೆಡುಕು ಬಯಸುತ್ತದೋ ಅದನ್ನು ನಾಶ ಮಾಡಬೇಕು. ಧರ್ಮ ಪಾಲನೆಯೇ ಧರ್ಮ ರಕ್ಷಣೆ ಎಂದರು. ಅಧ್ಯಕ್ಷತೆ ವಹಿಸಿದ್ದ ಮಂಗಳೂರು ನಗರ ಸಂಸ್ಕೃತ ಭಾರತೀ ಅಧ್ಯಕ್ಷ ಎಂ. ಆರ್. ವಾಸುದೇವ ಮಾತನಾಡಿ, ಸಂಸ್ಕೃತ ಭಾಷೆಯು ಭಾರತೀಯ ಭಾಷೆಗಳಿಗೆ ತಾಯಿ ಸ್ಥಾನದಲ್ಲಿದೆ. ಎಲ್ಲಾ ಕಲೆಗಳಿಗೂ, ವಿಜ್ಞಾನಕ್ಕೂ ಸಂಸ್ಕೃತದ ಕೊಡುಗೆ ಇದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ದ.ಕ. ಜಿಲ್ಲಾಧ್ಯಕ್ಷ ಪಿ.ಬಿ. ಹರೀಶ್ ರೈ ಮಾತನಾಡಿ, ಸಂಸ್ಕೃತ ಭಾಷೆಗೆ ಅದ್ಭುತವಾದ ಶಕ್ತಿ ಇದೆ. ಭಾಷೆ ನಶಿಸಿ ಹೋದರೆ ನಮ್ಮ ಸಂಸ್ಕೃತಿಯೇ ನಾಶವಾಗುತ್ತದೆ ಎಂದು ಹೇಳಿದರು. ಸಂಸ್ಕೃತ ಭಾರತೀ ಮಂಗಳೂರು ನೂತನ ಅಧ್ಯಕ್ಷರಾಗಿ ಕೆ.ಎಂ.ಸಿ. ಪ್ರಾಧ್ಯಾಪಕ ಡಾ. ವೇಣುಗೋಪಾಲ ಅವರ ನೇಮಕವನ್ನು ಘೋಷಿಸಲಾಯಿತು. ಸಂಸ್ಕೃತ ಭಾರತೀ ಪ್ರಾಂತ ಸಂಪರ್ಕ ಪ್ರಮುಖ ಕೆ.ವಿ. ಸತ್ಯನಾರಾಯಣ, ಮಂಗಳೂರು ವಿಭಾಗ ಸಂಯೋಜಕ ನಟೇಶ, ಮಹಾನಗರ ಸಂಯೋಜಕಿ ಸಂಧ್ಯಾ ಕಾಮತ್, ಗಣಪತಿ ಕಾಮತ್ ಇದ್ದರು. ರವಿಶಂಕರ ಹೆಗಡೆ ಅತಿಥಿಗಳ ಪರಿಚಯ ಮಾಡಿದರು. ಗಜಾನನ ಭೋವಿಕಾನ ಸ್ವಾಗತಿಸಿ, ಶರಣ್ಯ ವಂದಿಸಿದರು. ಶೀಲಾ ಶಂಕರಿ ನಿರೂಪಿಸಿದರು. ಬಳಿಕ ಸಂಸ್ಕೃತದಲ್ಲಿ ಯಕ್ಷಗಾನ ಪ್ರದರ್ಶನ ಸಹಿತ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.