ಡೊಂಬಿವಲಿ ಪರಿಸರದ ಹೋಟೆಲ್ ಉದ್ಯಮಿ, ಶ್ರೇಷ್ಠ ಸಮಾಜ ಸೇವಕ, ಶಿಕ್ಷಣ ಪ್ರೇಮಿ, ಸಮಾಜ ಸೇವೆಯೇ ತಮ್ಮ ಜೀವನದ ಗುರಿಯನ್ನಾಗಿಸಿಕೊಂಡು ಕಳೆದ ಹಲವಾರು ದಶಕಗಳಿಂದ ಕಲ್ಯಾಣ್, ಡೊಂಬಿವಲಿ ಪರಿಸರದಲ್ಲಿ ಸಾಮಾಜಿಕ ಸೇವೆಯ ಮೂಲಕ ತುಳು ಕನ್ನಡಿಗರ ಹಾಗೂ ಭೂಮಿ ಪುತ್ರರ ಮನದಾಳದಲ್ಲಿ ವಿಶೇಷ ಸ್ಥಾನ ನಿರ್ಮಿಸಿಕೊಂಡ ಹೊರನಾಡ ಕನ್ನಡಿಗರ ಹೆಮ್ಮೆಯ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾದ ಕರ್ನಾಟಕ ಸಂಘ ಡೊಂಬಿವಲಿಯ ಕಾರ್ಯಾಧ್ಯಕ್ಷ ದಿವಾಕರ ಶೆಟ್ಟಿ ಇಂದ್ರಾಳಿ ಅವರ ಸಾಧನೆ ಮತ್ತು ಸಮಾಜ ಸೇವೆಯನ್ನು ಗುರುತಿಸಿ, ಅಂತರರಾಷ್ಟ್ರೀಯ ಮಾನವ ಅಭಿವೃದ್ಧಿ ವಿಶ್ವವಿದ್ಯಾಲಯವು ಮಾರ್ಚ್ 17 ರಂದು ಗೋವಾದಲ್ಲಿ ನಡೆದ ವೈಶಿಷ್ಟ್ಯಪೂರ್ಣ ಪ್ರಶಸ್ತಿ ಸಮಾರಂಭದಲ್ಲಿ 2023-2024 ಗೌರವ ಡಾಕ್ಟರೇಟ್ ಪ್ರಶಸ್ತಿ ನೀಡಿ ಗೌರವಿಸಿದೆ.
ನಮ್ಮ ಸಾಧನೆ ನಿಂತ ನೀರಾಗಿರದೆ ಹರಿಯುವ ನದಿಯಂತಿರಬೇಕು. ನಾವು ಎಷ್ಟು ದಿನ ಬದುಕಿದೆವು ಎನ್ನುವುದು ಮುಖ್ಯವಾಗಿರದೆ ಯಾವ ರೀತಿ ಬದುಕಿದೆವು ಎಂಬುದು ಮುಖ್ಯ. ಅದರೊಂದಿಗೆ ನಾವು ಎಷ್ಟು ಜನರ ಮಧ್ಯೆ ಇದ್ದೇವೆ ಎಂಬುವದಕ್ಕಿಂತ ಎಷ್ಟು ಜನರ ಮಸಸ್ಸಿನಲ್ಲಿ ನೆಲೆನಿಂತಿದ್ದೇವೆ ಎನ್ನುವುದು ಮುಖ್ಯ ಎಂಬ ತತ್ವ ಸಿದ್ಧಾಂತಗಳನ್ನು ತನ್ನ ಜೀವನದಲ್ಲಿ ಅಳವಡಿಸಿಕೂಂಡ ದಿವಾಕರ ಶೆಟ್ಟಿ ಇಂದ್ರಾಳಿಯವರು ಬಾರ್ಕೂರು ಬಡ್ತಿಬೈಲು ದಿ. ತೇಜಪ್ಪ ಶೆಟ್ಟಿ ಹಾಗೂ ಬುಡ್ನಾರ್ ದೊಡ್ಡಮನೆ ದಿ. ಜಲಜಾ ದಂಪತಿಯ ಸುಪುತ್ರರು. ಬಿಕಾಂ ಪದವಿವರೆಗಿನ ಶಿಕ್ಷಣವನ್ನು ತಾಯ್ನಾಡಿನ ಉಡುಪಿಯಲ್ಲಿ ಪೂರೈಸಿ, ತನ್ನ ಬದುಕನ್ನು ಕಟ್ಟಿಕೊಳ್ಳಲು ಮಯಾನಗರಿ ಮುಂಬಯಿ ಮಹಾನಗರಕ್ಕೆ ಆಗಮಿಸಿದರು. ಪ್ರಾರಂಭದಲ್ಲಿ ಖಾಸಗಿ ಕಂಪನಿಯೊಂದರಲ್ಲಿ ವ್ಯವಸ್ಥಾಪಕ ಹುದ್ದೆಯಲ್ಲಿ ಕಾರ್ಯ ನಿರ್ವಹಿಸಿದರು. ತಾನು ಏನನ್ನಾದರೂ ಸಾಧನೆ ಮಾಡಬೇಕೆಂಬ ಛಲದಿಂದ ಉದ್ಯೋಗವನ್ನು ತ್ಯಜಿಸಿ ಹೋಟೆಲ್ ಉದ್ದಿಮೆಯನ್ನು ಪ್ರಾರಂಭಿಸಿ ತಮ್ಮ ಅವಿರತ ಪರಿಶ್ರಮದಿಂದ ಡೊಂಬಿವಲಿ ಪರಿಸರದಲ್ಲಿ ಹೋಟೆಲ್ ಉದ್ಯಮದಲ್ಲಿ ವಿಶಿಷ್ಟ ಸ್ಥಾನ ನಿರ್ಮಿಸಿಕೊಂಡ ದಿವಾಕರ ಶೆಟ್ಟಿ ಇಂದ್ರಾಳಿಯವರು ಡೊಂಬಿವಲಿ ಹೋಟೆಲ್ ಓನರ್ಸ್ ಅಸೋಸಿಯೇಷನ್ ಸಂಘಟಣೆಯ ಕಾರ್ಯದರ್ಶಿಯಾಗಿ ಹನ್ನೆರಡು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.
ಹೊರನಾಡ ಕನ್ನಡಿಗರ ಪ್ರತಿಷ್ಠಿತ ಸಂಸ್ಥೆಯಾದ ಕರ್ನಾಟಕ ಸಂಘ ಡೊಂಬಿವಲಿ ಇದರ ಕಾರ್ಯಕಾರಿ ಸಮಿತಿಯಲ್ಲಿ ಕಳೆದ ಮೂರು ದಶಕಗಳಲ್ಲಿ ಸಂಘದ ಹಾಗೂ ಸಂಘ ಸಂಚಾಲಿತ ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿದ್ದು ಸಂಘದ ಕಾರ್ಯದರ್ಶಿ, ಕಾರ್ಯಾಧ್ಯಕ್ಷ ಹಾಗೂ ಅಧ್ಯಕ್ಷರಾಗಿಯೂ ಸೇವೆಯನ್ನು ಸಲ್ಲಿಸಿದ್ದು ಪ್ರಸ್ತುತ ಸಂಘದ ಕಾರ್ಯ ಸಾಮ್ರಾಟ ಕಾರ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನಾರಾಯಣ ಗುರುಗಳ ತತ್ವದಂತೆ ಯಾರೊಬ್ಬರೂ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಮಂಜುನಾಥ ವಿದ್ಯಾಲಯ ಹಾಗೂ ಮಂಜುನಾಥ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಅವಿರತವಾಗಿ ಶ್ರಮಿಸಿ ಸಂಸ್ಥೆಯ ಹೆಸರನ್ನು ಬಾನೆತ್ತರಕ್ಕೆ ಏರಿಸುವಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ.
ಜಾತೀಯ ಸಂಘಟನೆಯಲ್ಲಿ ಅಗ್ರ ಪಂಕ್ತಿಯಲ್ಲಿರುವ ಬಂಟರ ಸಂಘ ಮುಂಬಯಿ ಇದರ ಡೊಂಬಿವಲಿ ಪ್ರಾದೇಶಿಕ ಸಮಿತಿಯ ಪ್ರಥಮ ಕಾರ್ಯಾಧ್ಯಕ್ಷರಾಗಿ, ಸಂಚಾಲಕರಾಗಿ ಸೇವೆ ಸಲ್ಲಿಸಿದ ಇವರ ಸೇವಾ ಮನೋಭಾವನೆಯನ್ನು ಕಂಡ ಕೇಂದ್ರ ಸಮಿತಿ ಪ್ರಾದೇಶಿಕ ಸಮಿತಿಗಳ ಪೂರ್ವ ವಲಯದ ಸಮನ್ವಯಕರಾಗಿ, ಜೊತೆ ಕಾರ್ಯದರ್ಶಿಯಾಗಿ, ಸದ್ಯ ಶಿಕ್ಷಣ ಮತ್ತು ಸಾಮಾಜಿಕ ಸಮಿತಿಯ ಕಾರ್ಯಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಡೊಂಬಿವಲಿ ಪರಿಸರದ ಅನೇಕ ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿರುವ ಶ್ರೀಯುತರು ಶ್ರೀರಾಧಕೃಷ್ಣ ಶನೀಶ್ವರ ಮಂದಿರ, ಮುಂಬ್ರಾ ಮಿತ್ರ ಭಜನಾ ಮಂಡಳಿ, ಶ್ರೀ ಅಯ್ಯಪ್ಪ ಸೇವಾ ಸಮಿತಿ, ಸಿರಿನಾಡ ವೆಲ್ಫೇರ್ ಅಸೋಸಿಯೇಷನ್ ಈ ಸಂಘಟಣೆಗಳ ಹಿತ ಚಿಂತಕರಾಗಿದ್ದಾರೆ.
ಸಮಾಜ ಸೇವೆಯನ್ನು ತನ್ನ ರಕ್ತಗತ ಮಾಡಿಕೊಂಡಿರುವ ದಿವಾಕರ ಶೆಟ್ಟಿ ಇಂದ್ರಾಳಿ ಅವರು ಪತ್ನಿ ಕರ್ನಾಟಕ ಸಂಘ ಡೊಂಬಿವಲಿ ಲಲಿತ ಕಲಾ ವಿಭಾಗದ ಕಾರ್ಯಾಧ್ಯಕ್ಷೆ ಸುಷ್ಮಾ ಶೆಟ್ಟಿ, ಮಗಳು ಶ್ರೀಮತಿ ಶೀತಲ್ ಹಾಗೂ ಪುತ್ರ ಅಕ್ಷಯ್ ಅವರೊಂದಿಗಿನ ಸುಮಧುರ ಜೀವನ ಇವರದ್ದಾಗಿದೆ. ಉತ್ಕೃಷ್ಟ ಸಮಾಜ ಸೇವೆಗಾಗಿ ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ದಿವಾಕರ ಶೆಟ್ಟಿ ಇಂದ್ರಾಳಿಯವರಿಗೆ ನಮ್ಮೆಲ್ಲರ ಶುಭಾಶಯಗಳು.