ಮುಂಬಯಿ ಸೃಜನಾ ಲೇಖಕಿಯರ ಬಳಗದ ಕಾರ್ಯಕ್ರಮಕ್ಕೆ ಹೋಗಲೆಂದು ಮಾಟುಂಗಾದಲ್ಲಿ ಮೈಸೂರು ಅಸೋಸಿಯೇಷನ್ ನತ್ತ ಹೆಜ್ಜೆ ಹಾಕುತ್ತಾ ಸಾಗುವಾಗ ಹಲಸಿನ ಹಣ್ಣಿನ ಘಮ-ಘಮ ಪರಿಮಳ ನನ್ನನ್ನು ಸೆಳೆಯಿತು. ಇನ್ನೂ ಹಲಸಿನ ಹಣ್ಣು ತಿನ್ನದೆ ಇರಲು ಸಾಧ್ಯವೇ? ಮಾರಾಟಗಾರನಲ್ಲಿ ವಿಚಾರಿಸಿದೆ. ಕಾಲು ಕೆಜಿ ಸೊಳೆಗೆ(ಬೀಜ ಸಹಿತ) 70 ರೂಪಾಯಿ ಎಂದ ಪುಣ್ಯಾತ್ಮ. ಈಗ ನೆನಪಾಯಿತು ನೋಡಿ ವಿವಿಧ ತಳಿಯ ಹಲಸಿನ ಹಣ್ಣು ಬೆಳೆವ ನನ್ನೂರು ಹಾಗೂ ಅಲ್ಲಿನ ಹಲಸಿನ ರುಚಿ. ಒಂದು ರೂಪಾಯಿಯೂ ನೀಡದೆ ಹೊಟ್ಟೆ ತುಂಬಾ ತಿಂದು ತೇಗಿದ ಆ ದಿನಗಳು, ಅಮ್ಮ ಮನೆಯಲ್ಲಿ ಮಾಡುತ್ತಿದ್ದ ಹಲಸಿನ ಬಗೆ ಬಗೆಯ ತಿಂಡಿಗಳೆಲ್ಲ ಒಮ್ಮೆಗೆ ನೆನಪಾದವು. ಹಲಸಿನ ಹಣ್ಣು ತಿನ್ನುವ ಬಯಕೆಯೊಂದಿಗೆ ಹಲಸಿನ ಬಗ್ಗೆ 2 ಅಕ್ಷರ ಬರೆಯೋಣ ಎಂದು ಯೋಚಿಸುತ್ತಾ ಚೌಕಾಸಿ ಮಾಡಿ ಕಾಲು ಕೆಜಿಗೆ 60 ರೂಪಾಯಿ ನೀಡಿ ಹಲಸಿನ ಸೊಳೆ ಖರೀದಿಸಿದಾಗಲೇ ಹಲಸಿನ ಮಹತ್ವ ಅರಿವಾಗಲು ಪ್ರಾರಂಭವಾಯಿತು. ನಮ್ಮ ಹಳ್ಳಿಗಳಲ್ಲಿ ಯಥೇಚ್ಛವಾಗಿ ಸಿಗುವ ಹಲಸಿನ ಬಗ್ಗೆ ಕೆಲವರಿಗೆ ತೀವ್ರ ಪ್ರೀತಿ ಇನ್ನೂ ಕೆಲವರಿಗೆ ತಾತ್ಸಾರ ಈ ಎರಡೂ ಭಾವನೆ ಇದೆ.
ಅತ್ಯಂತ ದೊಡ್ಡ ಗಾತ್ರದ ಹಣ್ಣು ಹಲಸು. ಇದರ ಬೆಳೆಯಲ್ಲಿ ಭಾರತ ಜಗತ್ತಿನ ದ್ವಿತೀಯ ಸ್ಥಾನ ಮತ್ತು ಭಾರತದಲ್ಲಿ ಕರ್ನಾಟಕಕ್ಕೆ ಮೊದಲ ಸ್ಥಾನವಿದೆ ಎಂಬ ವರದಿ ಓದಿದ ಮೇಲೆ ಹಲಸಿನ ಮೇಲಿನ ಕುತೂಹಲ ಇನ್ನೂ ಜಾಸ್ತಿಯಾಯಿತು. ಗಾತ್ರ, ಬಣ್ಣ, ರುಚಿ ಮೂರರಲ್ಲೂ ಇದರ ಮಹತ್ವವನ್ನು ವಿವರಿಸಬಹುದು. ಹಳ್ಳಿಯಿಂದ ಡೆಲ್ಲಿ ತನಕ ದೇಶದಿಂದ ವಿದೇಶದ ತನಕ ಹಲಸು ಜನಪ್ರಿಯಗೊಂಡಿದ್ದು ಹೌದು. ಹಲಸನ್ನು ಸಂಸ್ಕರಿಸಿ ವಿವಿಧ ಆಹಾರ ಉತ್ಪನ್ನಗಳನ್ನು ತಯಾರಿಸಿ ದೇಶಿ- ವಿದೇಶಿ ಮಾರುಕಟ್ಟೆಗಳಲ್ಲಿ ವಹಿವಾಟು ನಡೆಯುತ್ತಿದೆ. ಹಲಸನ್ನು ವಾಣಿಜ್ಯ ಕೃಷಿ ರೂಪದಲ್ಲಿ ಇನ್ನೂ ಗಟ್ಟಿಗೊಳಿಸಬೇಕಾಗಿದೆ. ನಮ್ಮ ದೇಶದಲ್ಲಿ ಹೆಕ್ಟೇರ್ ಗಟ್ಟಲೇ ಹಲಸು ಬೆಳೆಯುವ ಮಣ್ಣು, ವಾತವರಣ ಹಾಗೂ ಪ್ರದೇಶವಿದೆ. ಕೃಷಿ ವಿಶ್ವವಿದ್ಯಾಲಯ, ಸಸ್ಯ ಶಾಸ್ತ್ರಜ್ಞರು ಅಧ್ಯಯನ ಮಾಡಿ ಹಳ್ಳಿಯ ರೈತರಿಗೆ ಮಾಹಿತಿ ದೊರಕಿಸಿದರೆ ಮುಂದಿನ ವರ್ಷಗಳಲ್ಲಿ ಹಲಸಿಗೆ ಇನ್ನೂ ಹೆಚ್ಚಿನ ಮಹತ್ವ ದೊರೆಯಬಹುದು. ಹಲಸಿನ ಗಿಡ ನೆಟ್ಟು ಪೋಷಣೆ, ರಕ್ಷಣೆ, ಹಣ್ಣಿನ ಸಂಸ್ಕರಣೆ, ಮಾರಾಟ ಮತ್ತು ರಫ್ತುಗಳ ವಿಷಯವಾಗಿ ಬೆಳೆಗಾರಿಗೆ ಕೃಷಿ ವಿಶ್ವ ವಿದ್ಯಾಲಯಗಳು, ತೋಟಗಾರಿಕಾ ಇಲಾಖೆಯು ಮಾಹಿತಿ ನೀಡಿದಲ್ಲಿ ಹಲಸಿನ ವಾಣಿಜ್ಯಕರಣದಲ್ಲಿ ಒಳ್ಳೆಯ ಫಲಿತಾಂಶ ಪಡೆಯಬಹುದು. ಹಲಸು ಒಂದು ಹಂತದವರೆಗೆ ನಿರ್ಲಕ್ಷಿತವಾಗಿರುವುದು ನಿಜವಾದರೂ, ಕೆಲವೆಡೆ ನೀರು ಗೊಬ್ಬರ ಹಾಕಿ ರೈತರು ಹಲಸು ಪ್ರಧಾನ ಬೆಳೆಯಾಗಿ ಬೆಳೆಯಲು ಪ್ರಾರಂಭಿಸಿದ್ದಾರೆ. ಸಿಂಧೂರ, ಸವ್ರದಾ, ಚಂದ್ರ ,ಬಕ್ಕೆ, ಮುದ್ರಾಕ್ಷಿ, ನಂದನ ,ಅನಂತ, ಕೆಂಪು ಹಾಗೂ ಹಳದಿ ರುದ್ರಾಕ್ಷಿ, ಹೆಜ್ಜೇನು, ಸೂರ್ಯ ಇನ್ನೂ ನಾನಾ ತಳಿಯ ಹಲಸುಗಳಿವೆ.
ಹಸಿವು ನೀಗಿಸುವ ಹಲಸಿಗೆ ಕುರೂಪಿ ಪಟ್ಟ: ಜೋಯ್ ವಿಲಿಯಂ ಎಂಬ ಲೇಖಕಿ ‘ದಿ ಗಾಡಿಯನ್’ ಎಂಬ ಬ್ರಿಟಿಷ್ ಪತ್ರಿಕೆಯೊಂದರಲ್ಲಿ ಹಲಸು ಒಂದು ಕುರೂಪಿ ಹಣ್ಣು. ಭಾರತದಲ್ಲಿ ಜನರು ತಿನ್ನಲು ಗತಿ ಇಲ್ಲದಾಗ ಇದನ್ನು ಸೇವಿಸುತ್ತಾರೆ, ಮುಳ್ಳುಗಳಿಂದ ಅಸಹ್ಯಕರವಾಗಿ ಕಾಣುವ ಹಣ್ಣಿನಲ್ಲಿ ಯಾವುದೇ ತೆರನಾದ ರುಚಿ ಇಲ್ಲ ಆಕಾರವಂತು ರಾಕ್ಷಸ ಆಕೃತಿಯನ್ನು ನೋಡಿದಂತಾಗುತ್ತದೆ ಎಂದು ಲೇಖನದಲ್ಲಿ ವಿವರಿಸಿದ್ದಾರೆ. ಈ ಪತ್ರಿಕಾ ಲೇಖನಕ್ಕೆ ಬಾರಿ ಅಕ್ಷೇಪ ವ್ಯಕ್ತವಾಗಿ ಹಲಸಿನ ಹಣ್ಣು ಬಾರಿ ಪ್ರಚಾರವನ್ನು ಪರೋಕ್ಷವಾಗಿ ಗಿಟ್ಟಿಸಿಕೊಂಡಿತ್ತು. ಕೇರಳದ ಶೇಫ್ ಗಳು ತಾವು ತಯಾರಿಸಿದ ಹಲಸಿನ ತಿಂಡಿ ತಿನಿಸುಗಳ ವಿವರವನ್ನು ಲೇಖಕಿಗೆ ರವಾನಿಸಿ ಇನ್ನೂ ಹೆಚ್ಚಿನ ಸಂಶೋಧನೆ ಮಾಡಿ ಬರೆಯಬೇಕಿತ್ತು ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಬ್ರಿಟಿಷ್ ಪತ್ರಿಕೆಯಲ್ಲಿ ಹಲಸಿನ ಅವಹೇಳನದಿಂದ ಸಿಡಿದೆದ್ದ ಹಲಸಿನ ಅಭಿಮಾನಿಗಳು 75% ಅಂಶ ಹಲಸಿನ ಹಣ್ಣು ಭಾರತದಲ್ಲಿ ಎಸೆಯುತ್ತಾರೆ ಎಂದು ಬರೆದ ಲೇಖಕಿಯನ್ನು ಕೇರಳ ಯುವ ಸಮೂಹ ನಾವು ಹಲಸಿನ ಬೀಜ ಕೂಡ ಎಸೆಯುವುದಿಲ್ಲ, ಹಲಸು ಪ್ರಿಯರು ನಾವು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ವ್ಯಕ್ತಪಡಿಸಿದ್ದಾರೆ. ಅತ್ಯಾಕರ್ಷಕ ಬಣ್ಣ, ದೂರದಿಂದಲೇ ಸೆಳೆಯುವ ಪರಿಮಳದೊಂದಿಗೆ ಆಕರ್ಷಸುವ ಹಲಸನ್ನು ಕೇರಳ ರಾಜ್ಯ ಫಲವೆಂದು ಘೋಷಿಸಿದ ನಂತರವೂ ಬ್ರಿಟಿಷ್ ಪತ್ರಿಕೆ ಹಲಸಿನ ಬಗ್ಗೆ ಮಾಡಿರುವ ಅವಹೇಳನಕ್ಕೆ ಕ್ಷಮೆ ಯಾಚಿಸುವಂತೆ ಕೇಳಿಕೊಂಡಿದೆ. ಕುರೂಪಿ ಹಣ್ಣು, ವಾಸನೆಯಿಂದ ಕೂಡಿದ್ದು, ಕೀಟ, ಹಾವುಗಳನ್ನು ಸೆಳೆಯುವ ಹಣ್ಣು ಎಂದು ಉಲ್ಲೇಖಿಸಿದ ಲೇಖಕಿ ಕ್ಷಮಾಪತ್ರ ಭಾರತಕ್ಕೆ ಕಳುಹಿಸಬೇಕೆಂದು ಕೇರಳ ಜನತೆ ಅಗ್ರಹಿಸಿಕೊಂಡಿದ್ದಾರೆ. ಯಾರು ಏನೇ ಹೇಳಲಿ ಹಲಸಿನ ಪರಿಮಳಕ್ಕೆ ಸರಿ ಸಾಟಿ ಬೇರೊಂದಿಲ್ಲ, ಅದರ ರುಚಿ ಬಲ್ಲವರೇ ಬಲ್ಲರು. ಹಸಿವು ನೀಗಿಸುವ ಹಲಸಿಗೆ ಕುರೂಪಿ ಪಟ್ಟ ಬೇಡವೇ ಬೇಡ.
ಹಲಸು ಮೇಳ : ಹಲಸಿನ ಬೇಡಿಕೆ ಹೆಚ್ಚಿಸಲು ಹಲಸು ಮೇಳಗಳನ್ನು ಅಲ್ಲಲ್ಲಿ ಆಯೋಜಿಸಲಾಗುತ್ತದೆ. ಮಾರುಕಟ್ಟೆಗಳಲ್ಲಿ ಹಲಸಿನ ಹಣ್ಣುಗಳು ಘಮ ಘಮಿಸುವ ಸಮಯದಲ್ಲಿ ತೋಟಗಳಲ್ಲಿ ಕೊಳೆತು ಹೋಗುವ ಹಲಸಿನ ಹಣ್ಣುಗಳು ಮೇಳದಲ್ಲಿ ಮೇಳೈಸಲು ಅವಕಾಶ ನೀಡಲಾಗಿದೆ. ಹಲಸಿನ ಉತ್ಪನ್ನ ತಯಾರಿಸಿ ಮಾರಾಟ ಮಾಡುವ ಮೂಲಕ ಗೃಹಿಣಿಯರು ಆರ್ಥಿಕ ಸದೃಢರಾಗಲು ಸಾಧ್ಯವಿದೆ. ಬಣ್ಣ ಗಾತ್ರ ಹಾಗೂ ರುಚಿಯಲ್ಲಿ ವೈವಿಧ್ಯತೆ ಹೊಂದಿರುವ ವಿವಿಧ ಹಲಸಿನ ತಳಿ ಮತ್ತು ಉತ್ಪನ್ನಗಳಾದ ಹಲ್ವಾ, ಹಪ್ಪಳ, ಪಾಯಸ, ಚಿಪ್ಸ್, ಉಪ್ಪಿಗೆ ಹಾಕಿದ ಸೊಳೆ, ಬಗೆ ಬಗೆಯ ತಿಂಡಿಗಳು, ಇನ್ನೂ ನೂರಾರು ಉತ್ಪನ್ನಗಳ ಸಮಗ್ರ ಪ್ರದರ್ಶನ ಹಾಗೂ ಮಾರಾಟ ಕೇಂದ್ರವಾಗಿ ಇತ್ತೀಚಿನ ಹಲಸಿನ ಮೇಳಗಳು ಕಾರ್ಯವೆಸಗುತ್ತಿವೆ.
ಹಲಸು ಮೇಳದಲ್ಲಿ ಹಲಸಿನ ಕೃಷಿಯ ಕ್ರಮ ಮತ್ತು ಮೌಲ್ಯ ವರ್ಧನೆಯ ಬಗ್ಗೆ ಸಂವಾದ ಹಾಗೂ ಮಾಹಿತಿ ನೀಡಲಾಗುತ್ತದೆ. ಹಲಸು ಮೇಳ ಆಯೋಜನೆಯಿಂದ ನಗರದ ಜನರಿಗೆ ಎಲ್ಲಾ ತರದ ಹಲಸು ನೋಡಲು ಹಾಗೂ ತಿನ್ನಲು ಸಿಗುತ್ತದೆ. ಹಳ್ಳಿಯವರಿಗೂ ಅವರ ಉತ್ಪನ್ನಕ್ಕಾಗಿ ಗ್ರಾಹಕರನ್ನು ಹುಡುಕಾಡುವ ಅಗತ್ಯವಿರುವುದಿಲ್ಲ, ಅಷ್ಟೇ ಅಲ್ಲದೆ ಬೆಳೆಗಾರರಲ್ಲಿ ಹೊಸ ಭರವಸೆ ಮೂಡುತ್ತದೆ. ಮೇಳಗಳಲ್ಲಿ ಹಲಸಿನಿಂದ ತಯಾರಿಸಿದ ವ್ಯೆವಿಧ್ಯಮಯ ಖಾದ್ಯ ತಯಾರಿ ಪ್ರಾತ್ಯಕ್ಷಿಕೆಯ ಆಕರ್ಷಣೆ ಜನರನ್ನು ಸೆಳೆದರೆ ರೈತರಿಗೆ ವ್ಯಾಪಾರವೂ ಹೆಚ್ಚಾಗುತ್ತದೆ. ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಪ್ರಾದೇಶಿಕ ನಿರ್ದೇಶಕರಾದ ಜಯಶಂಕರ್ ಶರ್ಮಾ ಹಲಸಿನ ಉತ್ಪಾದನೆಗಳ ಸಾಧ್ಯತೆಗಳ ಬಗ್ಗೆ ವಿವರಿಸಿ ಹಲಸು ಒಂದು ಪರಿಪೂರ್ಣ ಆಹಾರ. ಕಣ್ಣಿಗೆ ಅಂದ ಮೂಗಿಗೆ ಸುವಾಸನೆ, ಕೈಗೆ ಹಿತಸ್ಪಶಃ, ನಾಲಿಗೆಗೆ ರುಚಿ, ಹೊಟ್ಟೆಗೆ ಬೇಕಾಗುವ ಪೋಷಕಾಂಶಗಳನ್ನು ಒದಗಿಸಿ ಕೊಡುವ ಸವೇಂದ್ರಿಯ ತೃಪ್ತಿ ನೀಡಬಲ್ಲ ಆಹಾರ ಒಟ್ಟಿನಲ್ಲಿ ಹಲಸಿಗೆ ಬೆಲೆ ಇದೆ ನೆಲೆ ಇದೆ ಎನ್ನಬಹುದು ಎನ್ನುತ್ತಾರೆ.
ಒಟ್ಟಿನಲ್ಲಿ ಹಲಸೆಂದರೆ ನಿರ್ಲಕ್ಷಿಸುವ ಹಣ್ಣು ಅಲ್ಲ ಎನ್ನುವ ಉದ್ದೇಶವನ್ನು ಹೊಂದಿ ಹಲಸಿನ ವ್ಯೆವಿಧ್ಯತೆಗಳನ್ನು ಪರಿಚಯಿಸುವಲ್ಲಿ ಮೇಳಗಳು ಯಶಸ್ವಿಯಾಗಿದೆ. ಮಾಟುಂಗಾದಲ್ಲಿ ಮೂಗಿಗೆ ತಾಗಿದ ಹಲಸಿನ ಪರಿಮಳ ನನ್ನನ್ನು ಹಲಸಿನ ಮೇಳ ನೋಡಬೇಕೆಂಬ ಬಯಕೆ ಮೂಡಿಸಿತು. ಹಲಸಿನ ರುಚಿಯನ್ನು ಬಲ್ಲವರೆ ಬಲ್ಲರು ಇದರಲ್ಲಿ ಮಾಡುವ ಬಗೆ ಬಗೆಯ ಹಲ್ವ, ಪಾಯಸ, ಹಲಸಿನ ಹಣ್ಣಿನ ಕಡುಬು(ಗಟ್ಟಿ) ದೋಸೆ, ಮುಳಕ, ಜ್ಯಾಮ್, ಚಾಕೊಲೆಟ್, ಜ್ಯೂಸ್, ಶೀರಾ, ಹೋಳಿಗೆ, ಐಸ್ ಕ್ರಿಂ, ವಡೆ ಹೀಗೆ ಹಲಸಿನ ಅನೇಕ ಬಗೆಯ ತಿನಿಸು ಜನಪ್ರಿಯ. ಕೇರಳದಿಂದ ಹಲಸಿನ ಕಡುಬುಗಳು ಕೊಲ್ಲಿ ರಾಷ್ಟ್ರಗಳಿಗೆ ರಫ್ತಾಗುತ್ತದೆ. ಹಲಸಿನ ಮಂಚೂರಿಯನ್ ಗೂ ಬಾರಿ ಬೇಡಿಕೆ ಇದೆ. ಕೇರಳದಲ್ಲಿ ಹಲಸಿನ ಬೃಹತ್ ಉದ್ಯಮವೇ ಇದ್ದು ಲಾಭದಾಯಕವಾಗಿ ನಡೆಯುತಿದೆ. ಒಂದು ಕಾಲದಲ್ಲಿ ಮರದ ಬುಡದಲ್ಲಿ ಬಿದ್ದು ಹಾಳಾಗುವ ಹಲಸಿಗೆ ಇತ್ತೀಚಿನ ದಿನಗಳಲ್ಲಿ ಭಾರಿ ಬೇಡಿಕೆ. ಹಲಸನ್ನು ಕೇರಳ ಸರ್ಕಾರದ ರಾಜ್ಯಹಣ್ಣು ಎಂದು ಘೋಷಿಸಿದೆ.
ಹಲಸಿನ ಚಾಕೊಲೆಟ್ ಹಾಗೂ ಬಿಸ್ಕತ್ತು ತಯಾರಿಸಲು ಕ್ಯಾಂಪ್ಕೋ ಕಂಪೆನಿ ಮುಂದೆ ಬಂದಿದೆ. ಹಲಸಿನ ಸಾರ್ವಕಾಲಿಕ ಬಳಕೆ ಮತ್ತು ಮಾರಾಟದ ವಿಸ್ತಾರದ ಕುರಿತು ರೈತರು ಹಾಗೂ ಉದ್ಯಮಿಗಳು ಜಂಟಿ ಸಭೆ ನಡೆಯುತ್ತಿರುತ್ತವೆ. ಆದರೆ ಇನ್ನೂ ಹೆಚ್ಚಿನ ಎಚ್ಚರಿಕೆ ವಹಿಸಿದಲ್ಲಿ ಹಾಳಾಗಿ ಕೊಳೆತು ನಾರುವ ಹಲಸು ಉತ್ತಮ ಉದ್ಯಮಕ್ಕೆ ತಳಹದಿಯಾಗಲಿದೆ. ಹಳ್ಳಿಗಳಲ್ಲಿ ಬೆಳೆಯುವ ಹಲಸಿಗೆ ನಗರದಲ್ಲಿ ಬಹುದೊಡ್ಡ ಮಾರುಕಟ್ಟೆಯಿದ್ದರೂ ಹಲಸು ಕೊಳ್ಳುವ ವ್ಯಾಪಾರಿಗಳು ಹಳ್ಳಿಗಳತ್ತಾ ಮುಖ ಮಾಡದೆ ಹಲಸು ಮರದಲ್ಲೇ ಕೊಳೆತು ನಾರುವ ಸ್ಥಿತಿಗೆ ಕೆಲವೊಮ್ಮೆ ತಲುಪುವುದೂ ಇದೆ. ಹಲಸಿನ ಬಣ್ಣ ಪರಿಮಳದಿಂದಲೇ ಗಮನ ಸೆಳೆದು ಬಾಯಿಯಲ್ಲಿ ನೀರೂರಿಸುವ ಸೊಳೆಗಳು ಕಿಲೋ ಲೆಕ್ಕದಲ್ಲಿ ದರ ನೀಡಿ ಖರೀದಿಸುವ ಗ್ರಾಹಕರು ನಗರದಲ್ಲಿ ಇದ್ದರೂ ಮಾರುಕಟ್ಟೆ ಸಮಸ್ಯೆ ಎದುರಾಗಬಹುದೆಂದು ವ್ಯಾಪಾರಿಗಳು ಹಲಸು ಕೊಳ್ಳಲು ಹಿಂಜರಿಯುವುದೂ ಇದೆ. ಹಲಸು ಕೊಯ್ಲಿಗೆ ಎಪ್ರಿಲ್ ಅಂತ್ಯದಿಂದ ಜುಲೈ ತಿಂಗಳವರೆಗೆ ದಿನ ನಿತ್ಯ ಬಿಡುವಿಲ್ಲದೆ ಹಳ್ಳಿಯಲ್ಲಿರುವ ಹಲಸಿನ ರುಚಿಯನ್ನು ನಗರ ವಾಸಿಗಳಿಗೆ ತಲುಪಿಸುವ ಅಧಿಕ ವ್ಯಾಪಾರಸ್ಥರು ರೈತರ ಮನೆ ಬಾಗಿಲಿಗೆ ಹಲಸು ಕೊಳ್ಳಲು ಮುಗಿಬಿದ್ದರೆ ರೈತರಿಗೆ ಒಂದಿಷ್ಟು ಕಾಸು ಸಿಗುತ್ತಿತ್ತು. ಒಟ್ಟಿನಲ್ಲಿ ಹಸಿವು ನೀಗಿಸುವ ಹಲಸಿನ ಘಮ-ಘಮ ಈಗ ಎಲ್ಲೆಡೆ.
ಲತಾ ಸಂತೋಷ್ ಶೆಟ್ಟಿ ಮುದ್ದುಮನೆ