ಅಖಿಲ ಭಾರತ ಬೀಚ್ ಕುಸ್ತಿ ಸಮಿತಿಯ ಅಧ್ಯಕ್ಷರಾಗಿ ಬೆಳ್ಳಿಪಾಡಿ ಗುಣರಂಜನ್ ಶೆಟ್ಟಿ ಆಯ್ಕೆಯಾಗಿದ್ದಾರೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಸಮಿತಿಯ ವಿಶೇಷ ಸಾಮಾನ್ಯ ಸಭೆಯಲ್ಲಿ ಅಖಿಲ ಭಾರತ ಬೀಚ್ ಕುಸ್ತಿ ಸಮಿತಿಯ ಅಧ್ಯಕ್ಷರಾಗಿ ಬಿ. ಗುಣರಂಜನ್ ಶೆಟ್ಟಿಯವರನ್ನು ಆಯ್ಕೆ ಮಾಡಲಾಯಿತು. ಪ್ರತಿಷ್ಠಿತ ಭಾರತೀಯ ಕುಸ್ತಿ ಒಕ್ಕೂಟದ ಜಂಟಿ ಕಾರ್ಯದರ್ಶಿಯಾಗಿ ಇತ್ತೀಚಿಗಷ್ಟೇ ಆಯ್ಕೆಯಾಗಿದ್ದ ಕರ್ನಾಟಕ ರಾಜ್ಯ ಕುಸ್ತಿ ಸಂಘದ ಅಧ್ಯಕ್ಷ ಬಿ. ಗುಣರಂಜನ್ ಶೆಟ್ಟಿ ಅವರು ನಡುಮೊಗರುಗುತ್ತು ವಿಠಲ ಶೆಟ್ಟಿ ಮತ್ತು ಬೆಳ್ಳಿಪ್ಪಾಡಿ ಊರಮಾಲುಗುತ್ತು ಪ್ರಪುಲ್ಲ ವಿ. ಶೆಟ್ಟಿ ದಂಪತಿಯ ಪುತ್ರ ಹಾಗೂ ಹಾಗೂ ಡಾ. ಸಾಯಿ ರಮೇಶ್ ಶೆಟ್ಟಿ ಮತ್ತು ದಕ್ಷಿಣ ಭಾರತದ ಖ್ಯಾತ ನಟಿ ಅನುಷ್ಕಾ ಶೆಟ್ಟಿಯವರ ಸಹೋದರ.
ಬೆಂಗಳೂರಿನಲ್ಲಿ ಉದ್ಯಮಿಯಾಗಿರುವ ಗುಣರಂಜನ್ ಶೆಟ್ಟಿ ಅವರು ಶ್ರೀ ಮಹಾಲಿಂಗೇಶ್ವರ ಸೇವಾ ಟ್ರಸ್ಟ್ ಬೆಂಗಳೂರು, ಐ ಕ್ಯಾರ್ ಬ್ರಿಗೇಡ್, ಐ ಕ್ಯಾರ್ ಫೌಂಡೇಶನ್, ಜಯಕರ್ನಾಟಕ ಜನಪರ ವೇದಿಕೆಯ ಸ್ಥಾಪಕಾಧ್ಯಕ್ಷರೂ ಆಗಿದ್ದು ಇತ್ತೀಚೆಗೆ ರಾಜ್ಯ ರಾಜಧಾನಿಯಲ್ಲಿ ಯಶಸ್ವಿಯಾಗಿ ನಡೆದು ಇತಿಹಾಸ ಸೃಷ್ಠಿಸಿರುವ ಬೆಂಗಳೂರು ಕಂಬಳ ಸಮಿತಿಯ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.