ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಸಣ್ಣ ಹಳ್ಳಿ ಹಾರಾಡಿ ಗ್ರಾಮದಲ್ಲಿ ಜನಿಸಿದ ಮಂದರ ಶೆಟ್ಟಿ ಇವತ್ತು ಬ್ರಹ್ಮಾವರ ಪರಿಸರದಲ್ಲಿ ಕೊಡುಗೈ ದಾನಿಯಾಗಿ ಗುರುತಿಸಿಕೊಂಡವರು. ಪಡು ಹಾರಾಡಿಯ ಮೇಲ್ಪಾಲು ಮನೆ ಅಂತಯ್ಯ ಶೆಟ್ಟಿ ಹಾಗೂ ಬಾರ್ಕೂರು ಹೊಳೆ ಹೊದ್ದಿನಮನೆ ಪ್ರೇಮ ಶೆಡ್ತಿಯವರ ಆರು ಜನ ಮಕ್ಕಳ ತುಂಬು ಸಂಸಾರದಲ್ಲಿ ನಾಲ್ಕನೇಯವರಾಗಿ ಜನಿಸಿದರು. ಊರಿನ ಗರಡಿಯ ಮೊಕ್ತೇಸರರ ಕುಟುಂಬದವರಾದ ಪ್ರತಿಷ್ಠೆ ಇದ್ದರೂ ಕೂಡ ವ್ಯವಸಾಯದ ಆದಾಯದ ಮೇಲೆ ಸಂಸಾರ ಸಾಗಬೇಕಾದ ಅನಿವಾರ್ಯತೆಯಿದೆ ಎಂದು ತಮ್ಮ ಶಿಕ್ಷಣದ ಜವಾಬ್ದಾರಿಯನ್ನು ತಾವೇ ತೆಗೆದುಕೊಳ್ಳಬೇಕಾಯಿತು. ವಿದ್ಯಾರ್ಥಿ ದೆಸೆಯಲ್ಲಿ ತರಕಾರಿ ಬೆಳೆದು ಅದರಿಂದ ಗಳಿಸಿದ ಹಣದಿಂದ ಶಿಕ್ಷಣ ಮುಂದುವರೆಸಿ ಪದವಿ ಶಿಕ್ಷಣ ಮುಂದುವರೆಸಿದರು. ನಂತರ ತನ್ನ ಮುಂದಿನ ಕೆಲಸಕ್ಕಾಗಿ ಬಹರೈನ್ ಕಡೆಗೆ ಪ್ರಯಾಣ ಬೆಳೆಸಿದರು. ಅಲ್ಲಿ ತನಕ ಕೆಲಸ ಹಾಗೂ ಶಿಕ್ಷಣವನ್ನು ಕೆಲಸದ ಜೊತೆ ಮುಂದುವರೆಸಿದರು.
ಕಂಪ್ಯೂಟರ್ ಸಂಬಂಧಿತ ಕೋರ್ಸ್ ಗಳನ್ನು ಮುಗಿಸಿ, ತಾನು ಗಳಿಸಿರುವ ಸಂಪರ್ಕಗಳ ಸಹಾಯ ಪಡೆದು ಲಂಡನ್ ಗೆ ಧಾವಿಸಿದರು. ಕಳೆದ ಇಪ್ಪತ್ತು ವರ್ಷಗಳಿಂದ ಲಂಡನ್ನಿನಲ್ಲಿ ಕೆಲಸ ನಿರ್ವಹಿಸಿಕೊಂಡು ಬಂದಿದ್ದಾರೆ. ಸದಾ ಏನಾದರೊಂದು ಸಾಧಿಸುತ್ತಲೇ ಇರುವ ಮನಸ್ಸಿನ ಇವರು ಲಂಡನ್ನಿನ ಕೆಲಸದ ಜೊತೆಗೆ ಪುಣೆ, ಮುಂಬಯಿ ಹಾಗೂ ಬೆಂಗಳೂರಿನಂತಹ ನಗರದಲ್ಲಿ ಹೋಟೆಲ್, ಬೇಕರಿಯಂತಹ ಉದ್ಯಮವನ್ನು ಸ್ಥಾಪಿಸಿ ಇನ್ನಷ್ಟು ಜನರಿಗೆ ಉದ್ಯೋಗವನ್ನು ಕಲ್ಪಿಸಿಕೊಟ್ಟರು. ಈ ಉದ್ಯಮಗಳ ಏಳು ಬೀಳು, ಲಾಭ ನಷ್ಟಗಳನ್ನು ಸಮಾನ ಮನಸ್ಸಿನಿಂದ ಸ್ವೀಕರಿಸಿದರು.
ಎಳೆಮರೆಯ ಕಾಯಿಯಂತೆ
ಮಂದರ ಶೆಟ್ಟಿಯವರು ಎಲೆಮರೆಯ ಕಾಯಿಯಂತೆ ಅನೇಕ ವರ್ಷಗಳಿಂದ ಸಮಾಜ ಸೇವೆಯನ್ನು ಮಾಡಿಕೊಂಡು ಬಂದಿದ್ದಾರೆ. ಊರಿನ ಅನೇಕ ದೇವಸ್ಥಾನಗಳ ಜೀರ್ಣೋದ್ದಾರಗಳಿಗೆ, ಜನರ ಮದುವೆ ಹಾಗೂ ಅರೋಗ್ಯ ಸಮಸ್ಯೆಗಳಿಗೆ ಶಾಲಾ ಕಾಲೇಜುಗಳ ಅಭಿವೃದ್ಧಿಗೆ ಲಕ್ಷಾಂತರ ರೂಪಾಯಿಗಳನ್ನು ದಾನವಾಗಿ ನೀಡಿದ್ದಾರೆ. ಕೋವಿಡ್ ಸಂದರ್ಭದಲ್ಲಿಯೂ ಅನೇಕರು ತಮ್ಮ ಕೆಲಸ ಮತ್ತು ಆದಾಯ ಹಾಗೂ ಕಳೆದುಕೊಂಡು ಸಂಕಷ್ಟದಲ್ಲಿರುವಾಗ ಅವರ ನೆರವಿಗಾಗಿ ಹಣ ಹಾಗೂ ದಿನ ನಿತ್ಯದ ದಿನಸಿ ನೀಡಿ ಸಹಕರಿಸಿದ್ದಾರೆ. ತನ್ನ ಊರಿನ ಪರಿಸರ ಮಾತ್ರವಲ್ಲದೇ ಲಂಡನ್ನಿನಲ್ಲೂ ಕೂಡ ನೆರವಿಗೆ ಅಗತ್ಯವಿರುವ ಅನೇಕ ವಲಸಿಗರಿಗೂ ಸೂಕ್ತ ಮಾರ್ಗದರ್ಶನ ಹಾಗೂ ಹಣಕಾಸಿನ ನೆರವನ್ನು ನೀಡುತ್ತಾ ಬಂದಿದ್ದಾರೆ.
ಇಷ್ಟು ಮಾಡಿದರೂ ಕೂಡಾ ಎಂದೂ ಇದರ ಮನ್ನಣೆ ಅಥವಾ ಪ್ರಚಾರ ಬಯಸಿದವರಲ್ಲ. ತನ್ನ ಜೀವನದ ಗುರಿಯನ್ನು ಛಲ ಬಿಡದೆ ಸಾಧಿಸುತ್ತಾ ಇತರರಿಗೂ ಸಹಾಯ ಮಾಡುತ್ತಾ, ಯಾವುದೇ ಫಲಾಪೇಕ್ಷೆಯ ಬಯಕೆ ಇಲ್ಲದೆ ಮುಂದುವರೆಸಿಕೊಂಡು ಬಂದಿದ್ದಾರೆ. ಇಂತಹ ಸರಳ ಸಜ್ಜನಿಕೆಯ ವ್ಯಕ್ತಿಗೆ ಆ ದೇವರು ಇನ್ನಷ್ಟು ಸುಖ ಶಾಂತಿ ಹಾಗೂ ಸಂಪತ್ತನ್ನು ಕರುಣಿಸಲಿ ಎಂದು ಆಶಿಸುತ್ತೇವೆ. ನಿಮ್ಮ ಸಾಧನೆಯ ಹಾದಿಯು ಆಸಂಖ್ಯಾತ ಯಶಸ್ವಿ ಮೈಲುಗಲ್ಲುಗಳಿಂದ ಕಂಗೊಳಿಸುತ್ತಿರಲಿ. ಸಮಾಜ ಸೇವೆಯು ಈ ಪಯಣದಲ್ಲಿ ದಣಿವು, ಆಯಾಸಗಳು ಕೂಡಾ ಉತ್ಸಾಹದ ಜೀವ ಹನಿಗಳಾಗಿ ಸ್ಫೂರ್ತಿಯನ್ನು ತುಂಬುತ್ತಿರಲಿ ಎನ್ನುವುದು ನಮ್ಮೆಲ್ಲರ ಬಯಕೆ.