ಅವರನ್ನೊಮ್ಮೆ ಕಣ್ಣೆದುರು ಕಂಡಾಗ ತುಳುವರ ನಂಬಿಕೆಯ ದೈವಾರಾಧನೆಯ ಯಜಮಾನಿಕೆಗಾಗಿಯೇ ಜನ್ಮತ್ತಳೆದವರೆಂಬ ಭಾವ. ಅಜಾನುಬಾಹು ಸದೃಢ ದೇಹ, ಅದಕೊಪ್ಪುವ ಸುಂದರ ಮುಖ ಚರ್ಯೆ, ಗಂಭೀರ ತೀಕ್ಷ್ಣ ಕಣ್ಣನೋಟ. ಶೋಭೆಯಂತಿರುವ ಆ ದಪ್ಪ ಮೀಸೆ, ಅದರಂಚಿನ ತುಟಿಗಳೆಡೆಯ ತಿಳಿ ನಗುವಿನ ಸ್ಪರ್ಶ. ಘನಸ್ತಿಗೆಯ ಹೆಜ್ಜೆಯ ನಡಿಗೆ. ತುಳುವರ ಹೆಗ್ಗುರುತಿನ ದಿರಿಸು. ಭೂಷಣಪ್ರಾಯವಾದ ಮಡಿ ಕಚ್ಚೆ, ತೋಳ ಸುತ್ತುವರಿದ ಅಡ್ಡ ಶಾಲು. ಕೈತಟ್ಟಿನಲಿ ಹೊಳೆಯುವ ಅಧಿಕಾರದ ಸ್ವರ್ಣ ಮುದ್ರೆ. ಹಿರಿತನದ ಮುಡಿಗೊಪ್ಪುವ ಶುಭ್ರ ಮುಂಡಾಸು. ವ್ಯಕ್ತಿಯ ವ್ಯಕ್ತಿತ್ವಕ್ಕೆ ಇದಕ್ಕಿಂತ ಹೆಚ್ಚಿನ ವರ್ಣನೆ ಬೇಕೇ? ಗೌರವ ಭಕ್ತಿ ಏಕ ಕಾಲಕ್ಕೆ ಮೇಲೈಸಿ, ತನ್ನಿಂತಾನೆ ಕರಮುಗಿದು ಪಾದ ಸ್ಪರ್ಶಿಸಿ ಆ ಕೈಗಳಿಂದ ಆಶೀರ್ವಾದದ ಅಪ್ಪುಗೆಯನ್ನು ಪಡೆಯಬೇಕೆನ್ನುವ ತವಕ. ಗಡುಸು ಧ್ವನಿಯಲ್ಲಿ “ಎಡ್ಡೆಯಾಲ ಮಗ ” ಎನ್ನುವ ಕಾಳಜಿಯ ಮಾತು. “ಮಾತ ಸಮ ಆಪುಂಡು” ಎನ್ನುವ ನುಡಿಯೊಂದಿಗೆ ಆ ಕೈಗಳಿಂದ ಪಡೆದ “ಉಳ್ಳಾಯನ” ಎರಡೆಲೆ ಗಂಧದ ಅನುಗ್ರಹ.
ಬರವಣಿಗೆ, ಮಾತುಗಳಿಗೆ ನಿಲುಕದ, ಹೃದಯಕ್ಕೆ ಬಲು ಹತ್ತಿರದ ಧೀಮಂತಿಕೆಯ ನಿಜರೂಪ, ಯೋಗ ಮತ್ತು ಯೋಗ್ಯತೆ ಇವೆರಡರ ಸಂಗಮ ಪುರುಷೋತ್ತಮ ಅವರೇ ನಮ್ಮ ಖಂಡಿಗೆ ಬೀಡಿನ ಯಜಮಾನರು, ಖಂಡಿಗೆ “ಶ್ರೀ ಧರ್ಮರಸು ಉಳ್ಳಾಯ”ನ ಕ್ಷೇತ್ರದ ಗಡಿ ಪ್ರಧಾನರೂ ಆದ ಶ್ರೀ ಆದಿತ್ಯ ಮುಕ್ಕಾಲ್ದಿಯವರು.
ಅವರೊಬ್ಬ “ರಾಜಋಷಿ” ನ್ಯಾಯ ಅನ್ಯಾಯಗಳ ಬಗ್ಗೆ ನ್ಯಾಯಾಧೀಶರಂತೆ ನಿಖರವಾಗಿ ತೀರ್ಪು ಕೊಡಬಲ್ಲ ಪ್ರಭುದ್ದರು. ದೈವಾರಾಧನೆಯ ಕಳದಲ್ಲಿ ಧ್ರುವತಾರೆಯಂತೆ ಕಂಡವರು. ಹೌದು, ಅವರೋರ್ವ ಸೂರ್ಯನಿದ್ದಂತೆ. ಉದಯ ಕಾಲದ ಕಂಪಿನ ಚಿತ್ತಾರದಂತೆ ಅವರ ವ್ಯಕ್ತಿತ್ವವನ್ನು ಸವಿದವರು ಹಲವರು. ನಡು ಬಿಸಿಲ ನೇಸರನ ಉರಿಯಂತಹ ಅವರ ನೇರ ನಡೆನುಡಿಗೆ ಅಂಜಿ ಬಸವಳಿದವರು ಹಲವರು. ತಂಪಿನ ಸವಿ ಗಾಳಿಯ ಸಂಧ್ಯಾ ಕಾಲದ ರವಿಯಂತೆ ಅವರೊಡಗೂಡಿ ಹಿತವನ್ನು ಕಂಡವರು ಹಲವರು.
ಅವರದು ವರ್ಣಾತೀತ ವ್ಯಕ್ತಿತ್ವ. ಪದಗಳು ಸಾಲದ, ಜೋಡಣೆಗೆ ಸಿಲುಕದ, ಬರವಣಿಗೆಯ ನಾಲ್ಕಕ್ಷರದ “ಶ್ರದ್ದಾಂಜಲಿ”ಯ ಜೊತೆಗೆ ಕಣ್ಣಂಚಿನಿಂದ ಹರಿಯುತ್ತಿರುವ ಕಣ್ಣೀರ ಕಂಬನಿಗಿಂತ ಹೆಚ್ಚೇನು ಎನ್ನಲ್ಲಿಲ್ಲ. ಮಾಸುತಿಲ್ಲ ನಿಮ್ಮ ನೆನಪು. ಹುಟ್ಟಿ ಬನ್ನಿ ಮಗದೊಮ್ಮೆ ಈ ತುಳುವರ ಪುಣ್ಯ ಮಣ್ಣಲ್ಲಿ.
ಅಳಿದಿರಬಹುದು ಕಾಯ, ನಿಮ್ಮ ಕೀರ್ತಿ ಸದಾ ಅಮರ.
ಗೌರವಪೂರ್ಣ ಶ್ರದ್ದಾಂಜಲಿ.
-ಸುಕೇಶ್ ಚೌಟ