ಸೋತಾಗ ಕುಗ್ಗಲಿಲ್ಲ ಗೆದ್ದಾಗ ಹಿಗ್ಗಲಿಲ್ಲ. ಸದಾ ಒಂದಿಲ್ಲೊಂದು ಪ್ರಯೋಗಗಳ ಮೂಲಕ ತುಳು ರಂಗಭೂಮಿ, ತುಳು ಚಿತ್ರರಂಗವನ್ನು ಜೀವಂತವಾಗಿರಿಸುವಲ್ಲಿ ವಿಶೇಷ ಕೊಡುಗೆ ನೀಡುತ್ತಿರುವವರು ಕಲಾಸಾಮ್ರಾಟ್, ಅಕ್ಷರಬ್ರಹ್ಮ ವಿಜಯಕುಮಾರ್ ಕೊಡಿಯಾಲ್ಬೈಲ್. ತಾನು ಬೆಳೆಯುವ ಜತೆ ಬೇರೆ ತಂಡದ ಕಲಾವಿದರನ್ನೂ ಪ್ರೋತ್ಸಾಹಿಸುತ್ತಾ, ಬೆಳೆಸುತ್ತಿರುವ ಕಲಾವಿದರ ‘ಮಾಣಿಕ್ಯ’ ಎಂದರೆ ಅತಿಶಯೋಕ್ತಿಯಿಲ್ಲ.
ಬಾಲ್ಯದಲ್ಲಿ ಮಾಡಿದ ಮಲ್ಲಪ್ಪ ನಾಯಕನ ಪಾತ್ರದಿಂದ ಹಿಡಿದು ಇತ್ತೀಚಿನ ‘ಶಿವದೂತ ಗುಳಿಗೆ’ ನಾಟಕದ ತನಕವೂ ಸದಾ ಹೊಸತನ, ಹೊಸ ಪ್ರಯೋಗಗಳೊಂದಿಗೆ ನಾಡಿನ ಜೀವಂತ ಸಮಸ್ಯೆಗಳ ಸುತ್ತ ಬೆಳಕು ಚೆಲ್ಲಿ ಎಲ್ಲಾ ವರ್ಗದ ಪ್ರೇಕ್ಷಕರನ್ನೂ ಸೆಳೆದವರಿವರು. ಏಕತಾನತೆಯಲ್ಲೇ ಸಾಗುತ್ತಿದ್ದ ತುಳು ರಂಗಭೂಮಿಗೆ, ನಿಂತ ನೀರಾಗಿದ್ದ ತುಳು ಚಲನಚಿತ್ರರಂಗಕ್ಕೆ ಹೊಸ ಪ್ರಯೋಗಗಳ ಮೂಲಕ ಜೀವಂತಿಕೆ ತುಂಬಿದವರು. ಸದಾ ಹೊಸತನಗಳಿಗೆ ತೆರೆದುಕೊಳ್ಳುವ, ಬದಲಾವಣೆಗೆ ತುಡಿತ ಹೊಂದಿರುವ ಪ್ರಯೋಗಶೀಲ ಕಲೆಗಾರ ವಿಜಯ ಕುಮಾರ್ ಕೊಡಿಯಾಲ್ಬೈಲ್. 8, 9ನೇ ತರಗತಿಯಲ್ಲಿದ್ದಾಗಲೇ ಮನೆ ಮನೆಗೆ ಪೇಪರ್ ಹಾಕುವ ಕೆಲಸ ಮಾಡಿ, ನವಭಾರತ ಪತ್ರಿಕೆಯಲ್ಲಿ ಪಾಳಿಯಲ್ಲಿ ದುಡಿದು ಕಷ್ಟದ ದಿನಗಳಲ್ಲಿ ಬೆಳೆದ ಹುಡುಗ ಇಂದು ಒಬ್ಬ ಉತ್ತಮ ನಿರ್ದೇಶಕರಾಗಿ, ದಾಖಲೆಗಳ ವೀರನಾಗಿ ಬೆಳೆದಿರುವುದು ತುಳುನಾಡಿಗೆ ಸಂದ ಗೌರವ. ಇದೀಗ ಕೊಡಿಯಾಲ್ಬೈಲ್ ನಿರ್ದೇಶನದ ‘ಶಿವದೂತ ಗುಳಿಗೆ’ ನಾಟಕ 555 ರ ಗಡಿ ಮೀರಿ ಸಾವಿರದತ್ತ ಹೆಜ್ಜೆಯಿಡುತ್ತಿರುವುದು ನಮಗೆಲ್ಲರಿಗೂ ಹೆಮ್ಮೆಯೇ ಸರಿ.
ಒರಿಯೆ ಮಗೆ ಇವರು ರಚಿಸಿ ನಿರ್ದೇಶಿಸಿದ ಮೊದಲ ನಾಟಕ. ಬಳಿಕ ಒಂಜಿ ನಿಮಿಷ, ಒರಿಯರ್ದ್ ಒರಿ ಅಸಲ್, ಮದಿಮೆ, ಕುಟುಂಬ, ಕೋಡೆ-ಇನಿ-ಎಲ್ಲೆ, ಸೀತಾ ಟೀಚರ್, ಅಜ್ಜೆರ್, ಕಡಲಮಗೆ, ಒಯಿಕ್ಲಾ ಆವಂದಿನಕುಲು, ಮಾಮುಗೊಂಜಿ ಮಾಮಿ, ಅಕ್ಲೆಲೆಕ ಎಂಕುಲತ್ತ್, ಮಂಡೆ ಬಲಿಪುಜಿ, ಸಂಸಾರ ಸರ್ಕಸ್, ಒರಿಯರ್ದ್ ಒರಿ ಅಸಲ್-2, ಮಣಿಕಂಠ ಮಹಿಮೆ, ಭೋಜೆ ಬುಡಿಯೆರೆಗೆ, ವಿದ್ದು, ಡಾಕ್ಟ್ರಾ- ಭಟ್ರಾ, ಶಿವದೂತೆ ಗುಳಿಗೆ, ಮೈತೆದಿ ಸೇರಿ ಒಟ್ಟು 22 ನಾಟಕ ಬರೆದು ನಿರ್ದೇಶಿಸಿದ್ದಾರೆ. ಪೌರಾಣಿಕ ನಾಟಕಗಳಾದ ದೇವು ಪೂಂಜ, ಅಪ್ಪೆ ಮೂಕಾಂಬಿಕೆ, ಜೈ ಭಜರಂಗ ಬಲಿ ಹಾಗೂ ಕುಸೆಲ್ದ ಪರಬೆ ಸಾಮಾಜಿಕ ನಾಟಕ ನಿರ್ದೇಶಿಸಿದ್ದಾರೆ. ದೇಶ ವಿದೇಶಗಳಲ್ಲಿ ಇವರ ನಾಟಕಗಳು ಸುಮಾರು 10 ಸಾವಿರದಷ್ಟು ಪ್ರದರ್ಶನ ಕಂಡಿವೆ. ರಿಚರ್ಡ್ ಕ್ಯಾಸ್ಟಲಿನೊ ನಿರ್ದೇಶನದ ಸೆಪ್ಟೆಂಬರ್-8 ಚಿತ್ರಕ್ಕೆ ಸಾಹಿತ್ಯ ಮತ್ತು ಸಹ ನಿರ್ದೇಶನ, ಕೋಟಿ ಚೆನ್ನಯ, ಮಾರಿಬಲೆ, ಸೆಪ್ಟೆಂಬರ್ 8, ಕಡಲಮಗೆ, ಕಂಚಿಲ್ದಬಾಲೆ, ಬರವುದ ಬಂಡಸಾಲೆ ನಾಟಕಕ್ಕೆ ಕಂಠದಾನವನ್ನೂ ಮಾಡಿದ ಕೀರ್ತಿ ಇವರದ್ದು. ದೂರದರ್ಶನದಲ್ಲಿ ಪ್ರಸಾರವಾದ ‘ಸಂಕಲ್ಪ’ ತುಳು ಧಾರಾವಾಹಿಗೆ ಸಾಹಿತ್ಯ, ಸಂಭಾಷಣೆ, ಸಹನಿರ್ದೇಶನ, ‘ಒರಿಯರ್ದೊರಿ ಅಸಲ್’ ತುಳು ಚಿತ್ರಕ್ಕೆ ಕಥೆ-ಚಿತ್ರಕಥೆ, ಸಾಹಿತ್ಯ ಮತ್ತು ನಿರ್ಮಾಣ ಜವಾಬ್ದಾರಿ ಕೋಡಿಯಾಲಬೈಲ್ ಅವರದ್ದು. ‘ಮದಿಮೆ’ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಿದ್ದರು. ಸುಮಾರು 30ರಷ್ಟು ತುಳು ಚಿತ್ರಗಳಿಗೆ ಸಾಹಿತ್ಯ ರಚಿಸಿದ್ದ ಹೆಗ್ಗಳಿಕೆಯೊಂದಿಗೆ ತುಳುವಿನ ಅನೇಕ ಸಿನಿಮಾಗಳಲ್ಲಿ ಬಣ್ಣಹಚ್ಚುವ ಮೂಲಕ ತನ್ನಲೊಬ್ಬ ಶ್ರೇಷ್ಠ ನಟನಿದ್ದಾನೆ ಎಂಬುದನ್ನು ಸಾಬೀತುಪಡಿಸಿದವರು.
ಬಾಲ್ಯದಲ್ಲೇ ತುಂಟ ಹುಡುಗ :
1964ರಲ್ಲಿ ಜನಿಸಿದ್ದ ಕೊಡಿಯಾಲ್ಬೈಲ್ ಇದ್ದಿದ್ದು ಪೂನಾದಲ್ಲಿ. ತಂದೆ ನಿಧನ ಬಳಿಕ ಮಂಗಳೂರಿಗೆ ಬಂದಾಗ ಅವರಿಗೆ ಗೊತ್ತಿದದ್ದು ಮರಾಠಿ ಭಾಷೆ ಮಾತ್ರ. ಮಂಗಳೂರಿನ ಕೊಡಿಯಾಲ್ಬೈಲ್ನಲ್ಲಿ ವಾಸಿಸುತ್ತಿದ್ದ ಕಾರಣ ತನ್ನ ಹೆಸರಿಗೆ ಕೊಡಿಯಾಲ್ಬೈಲ್ ಸೇರಿಕೊಂಡರು. ಕೆನರಾ ಮೈನ್ ಶಾಲೆಯಲ್ಲಿ ಬಾಲ್ಯದ ಶಿಕ್ಷಣ. ಐದನೇ ತರಗತಿಯಲ್ಲಿ ‘ಕಿತ್ತೂರು ಚೆನ್ನಮ್ಮ’ ನಾಟಕದಲ್ಲಿ ಮಲ್ಲಪ್ಪ ನಾಯಕ ಪಾತ್ರ ಮಾಡಿದ್ದ ಅವರು ಸದಾ ಕ್ರಿಯಾಶೀಲರು. ನಾಟಕ, ಛದ್ಮವೇಷ ಇತ್ಯಾದಿ ಪಠ್ಯೇತರ ಚಟುವಟಿಕೆಗಳಲ್ಲೇ ಹೆಚ್ಚು ಆಸಕ್ತಿ ಹೊಂದಿದ್ದರು. ತುಂಟತನದ ಚಟುವಟಿಕೆಗಳೂ ಹೆಚ್ಚಿತ್ತು. ಬಾಲ್ಯದ ತುಂಟತನದಲ್ಲೂ ಏನೋ ಒಂದು ರಚನಾತ್ಮಕ ಚಟುವಟಿಕೆ ಗಮನಿಸಿದ ಅಧ್ಯಾಪಕ ರತ್ನಾಕರ ರಾವ್, ನಾಟಕ ಕ್ಷೇತ್ರದಲ್ಲೇ ಮುಂದುವರಿಯಲು ಪ್ರೋತ್ಸಾಹ ನೀಡುವ ಮೂಲಕ ಅವರಲಿದ್ದ ಕಲೆಗೆ ನೀರೆರೆದು ಪೋಷಿಸಿದರು. ಎಸ್ಎಸ್ಎಲ್ಸಿ ತನಕ ಕೆನರಾ ಮೈನ್ನಲ್ಲಿ ಕಲಿತಿದ್ದಾಗ ಅವರ ತುಂಟತನಗಳಿಂದಾಗಿ ಮುಂದಿನ ಶಿಕ್ಷಣಕ್ಕೆ ಅಲ್ಲಿ ಪ್ರವೇಶ ಸಿಗಲಿಲ್ಲ. ಮುಂದೆ ಗಣಪತಿ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣ ಮುಗಿಸಿದರು. ತಾಯಿ ಬೀಡಿ ಕಟ್ಟುತ್ತಾ ಓದಿಸಲು ಪಟ್ಟ ಶ್ರಮ ಕೊಡಿಯಾಲ್ಬೈಲ್ರವರ ಇಂದಿನ ಸಾಧನೆಗೆ ಸ್ಫೂರ್ತಿ ಎಂದರೆ ತಪ್ಪಾಗಲಾರದು.
ಮೊದಲ ನಾಟಕವೇ ಫ್ಲಾಫ್ :
‘ಥೈಯ್ಯ ತಕ ಥೈಯ’ ಇವರು ಬರೆದ ಮೊದಲ ನಾಟಕ. 1983ರಲ್ಲಿ ಈ ನಾಟಕದ ಪ್ರದರ್ಶನ ಸಭೆ ಅದ್ದೂರಿಯಾಗಿಯೇ ನಡೆಯಿತಾದರೂ ನಾಟಕ ಯಶಸ್ವಿಯಾಗಿಲ್ಲ. ಆದರೂ ಛಲ ಬಿಡದೆ 1984ರಲ್ಲಿ ‘ಒರಿಯೆ ಮಗೆ’ ನಾಟಕ ಬರೆದರು. ಬಳಿಕ ’ಒಂಜಿ ನಿಮಿಷ’, ರಂಗಭೂಮಿಯಲ್ಲಿ ದಾಖಲೆ ಬರೆದ ‘ಒರಿಯರ್ದೊರಿ ಅಸಲ್’ ನಾಟಕ ತುಳುನಾಡಿನಲ್ಲಿ ಅಪಾರ ಯಶ ಕಂಡಿತು. ಇದು ತುಳು ರಂಗಭೂಮಿಯ ಪ್ರಥಮ ಏಕಾಂಕ ನಾಟಕವೂ ಆಗಿತ್ತು. ಕಮರ್ಷಿಯಲ್ ದೃಷ್ಟಿಕೋನದಿಂದ ಸೂಪರ್ಹಿಟ್ ನಾಟಕವಾಗಿ ಹಣ, ಹೆಸರು ತಂದುಕೊಟ್ಟಿತು. ಮಹಾರಾಷ್ಟ್ರದಲ್ಲಿ ವೃತ್ತಿಪರ ನಾಟಕಕ್ಕೆ ಅಡಿಪಾಯ ಹಾಕಿದ್ದು ಕೂಡ ಇದೇ ನಾಟಕ. ಒರಿಯರ್ದೊರಿ ಅಸಲ್ ನಾಟಕ ಹಿಟ್ ಆದರೂ ವಿಮರ್ಶಕರ ಟೀಕೆಗೆ ಗುರಿಯಾಯಿತು. ವಿಮರ್ಶಕರು ಇದು ನಾಟಕವೇ ಅಲ್ಲ ಎಂದು ಬರೆದರು ಆದರೂ ಎಲ್ಲೂ ಇವರು ಕುಗ್ಗಲಿಲ್ಲ.
ಒಯಿಕ್ಲಾ ಆವಂದಿನಕುಲು :
ಕಾಮಿಡಿಯನ್ನೇ ಪ್ರಧಾನವಾಗಿ ಬರೆದ ಅಸಲ್ಗೆ ವಿಮರ್ಶಕರು ಮಾಡಿದ ಆರೋಪಗಳಿಗೆ ಉತ್ತರವಾಗಿ ಶಾಂತಿ ಸಂಘರ್ಷದ ಸಂದೇಶದ ‘ಒಯಿಕ್ಲಾ ಆವಂದಿನಕುಲು’ ಬರೆದರು. 99 ಪ್ರಯೋಗ ಕಂಡ ಆ ನಾಟಕ ಕೆಲವೊಂದು ಕಾರಣಗಳಿಂದಾಗಿ ಮುಂದೆ ಸಾಗಲಿಲ್ಲ. ಹಲವರ ಕೆಂಗಣ್ಣಿಗೆ ಈ ನಾಟಕ ಈಡಾಯಿತಾದರೂ ಅಸಲ್ ನಾಟಕ ಟೀಕಿಸಿದವರು ಇದನ್ನು ಹೊಗಳಿದ್ದು ಇದೆ ಎನ್ನುತ್ತಾರೆ. ಆಯಾ ಕಾಲದ ಜ್ವಲಂತ ಸಮಸ್ಯೆಗಳನ್ನು ನಾಟಕದ ಮೂಲಕ ಬಿಂಬಿಸಲು ಪ್ರಯತ್ನಿಸಿದ್ದು, ಬಹುಪಾಲು ಜನಮನ್ನಣೆ ಗಳಿಸಿತ್ತು.
ಮಾಮುಗೊಂಜಿ ಮಾಮಿ 500+ :
‘ಒಯಿಕ್ಲಾ ಆವಂದಿನಕುಲು’ ಬಳಿಕ ‘ಮಾಮುಗೊಂಜಿ ಮಾಮಿ ನಾಟಕ ಬರೆದರು. 500ಕ್ಕೂ ಅಧಿಕ ಪ್ರದರ್ಶನದೊಂದಿಗೆ ಅದು ಭರ್ಜರಿ ಯಶಸ್ಸು ಸಂಪಾದಿಸಿತು. ಮುಂದೆ ಕಾರ್ಗಿಲ್ ಸಂಘರ್ಷದ ಕಥಾವಸ್ತು ಇಟ್ಟುಕೊಂಡು ಬರೆದ ‘ಮಂಡೆ ಬಲಿಪುಜಿ’ ಮಹಾರಾಷ್ಟ್ರದಲ್ಲಿ ಭರ್ಜರಿ ಹಿಟ್ ಆದರೂ ಊರಿನ ಪ್ರೇಕ್ಷಕರು ಅದನ್ನು ಇಷ್ಟಪಡಲಿಲ್ಲ. ಮರಾಠಿ ಭಾಷೆಯ ‘ಆಲ್ ದ ಬೆಸ್ಟ್’ ನಾಟಕವನ್ನು ತುಳುವಿಗೆ ಭಾಷಾಂತರಿಸಿ ಬರೆದ ‘ಅಸಲ್ ಮೂರ್ತಿಲು’ 50-50 ಎನಿಸಿತು. ವಾಸ್ತುಶಾಸ್ತ್ರದ ವಿಷಯದಲ್ಲಿ ಬರೆದ ‘ಸಂಸಾರದ ಸರ್ಕಸ್’ ಸಾಧಾರಣ ಯಶಸ್ಸು ಸಂಪಾದಿಸಿತು.
ಬದಲಾವಣೆ ತಂದ ಅಸಲ್ ಏರ್ :
ತುಳು ರಂಗಭೂಮಿ ಹಾಸ್ಯವೆಂಬ ಏಕತಾನತೆಯಿಂದ ಬಳಲಿತ್ತು. ಏನಾದರೊಂದು ಹೊಸತು ಕೊಡಬೇಕೆಂದು ಮನಸ್ಸು ತುಡಿಯುತ್ತಿದ್ದಾಗ ಮರಾಠಿಯ ಕೇದಾರ್ ಶಿಂದೆಯವರ ದಾಖಲೆ ಬರೆದ ‘ಸೈರಿಸೈ’ ನಾಟಕವನ್ನು ತುಳುವಿಗೆ ಭಾಷಾಂತರಿಸಿ ‘ಅಸಲ್ ಏರ್’ ಮಾಡಿದರು. ರಾಜೇಶ್ ಬಂಟ್ವಾಳ್ ಇದರಲ್ಲಿ ನಾಲ್ಕು ಪಾತ್ರ ಮಾಡಿ ಭೇಷ್ ಎನಿಸಿಕೊಂಡರು. ಏಕತಾನತೆಯಿಂದ ಬೇಸತ್ತಿದ್ದ ತುಳು ಪ್ರೇಕ್ಷಕರು ಸ್ವೀಕರಿಸಿದರು. ಮುಂದೆ ದಯಾನಾಯಕ್ ಜೀವನದ ಕಥೆ ಆಧರಿಸಿದ ‘ವಿದ್ದು’ ಹಿಟ್ ಆಯಿತು. ಬೇಕರಿ ಮಾಲೀಕ – ಕುಕ್ ನಡುವಿನ ಸಂಘರ್ಷದ ಕಥೆಯಿದ್ದ ‘ಭೋಜೆ ಬುಡಿಯೆರೆಗೆ’ ಕೂಡ ಯಶಸ್ಸು ಸಂಪಾದಿಸಿತು.
ಮದಿಮೆಯಿಂದ ಹೆಸರೂ ಬಂತು :
ನಾಡಿನ ಜ್ವಲಂತ ಸಮಸ್ಯೆ ವರದಕ್ಷಿಣೆಯ ಕಥಾವಸ್ತು ಇಟ್ಟುಕೊಂಡು ನವಿರಾದ ಹಾಸ್ಯ, ಗಟ್ಟಿ ಕಥೆ ಮೂಲಕ ಜನರಿಗೆ ಕೊಟ್ಟ ’ಮದಿಮೆ’ ನಾಟಕ ಎಲ್ಲಾ ಕೋನಗಳಲ್ಲೂ ಸೂಪರ್ಹಿಟ್ ಆಯಿತು. ಉತ್ತಮ ಸಂದೇಶ ಕೊಟ್ಟ ಮದಿಮೆ ನಾಟಕವನ್ನು ಜನರೂ, ವಿಮರ್ಶಕರೂ ಸ್ವೀಕರಿಸಿದರು. ಒರಿಯರ್ದೊರಿ ಅಸಲ್ ಬಳಿಕ ಅಪಾರ ಯಶಸ್ಸು, ಹೆಸರು, ಹಣ ತಂದುಕೊಟ್ಟದ್ದು ಮದಿಮೆ. ಇದಾದ ಬಳಿಕ ‘ಕುಟುಂಬ’ ನಾಟಕದಲ್ಲಿ ಸ್ವದೇಶಿ ಆಂದೋಲನದ ರಾಜೀವ್ ದೀಕ್ಷಿತರ ಮಾತುಗಳನ್ನು ಒಬ್ಬ ಪಾತ್ರಧಾರಿ ಮೂಲಕ ಜನರಿಗೆ ತಲುಪಿಸಿದರು. ನೆಲ, ಜಲ, ಸಂಸ್ಕೃತಿ ಕುರಿತ ‘ಕೋಡೆ ಇನಿ ಎಲ್ಲೆ’ ನಾಟಕ ಜನಜಾಗೃತಿ ಮೂಡಿಸಿತು. ಪೊಲೀಸ್ ಭದ್ರತೆ ಮೂಲಕ ಈ ನಾಟಕ ಆಡಬೇಕಾದ ಸನ್ನಿವೇಶವೂ ಬಂತು. ವೀಣಾಧರಿ ಸಲಹೆಯಂತೆ ಬರೆದ ನಾಟಕ ‘ಸೀತಾ ಟೀಚರ್’ ಬದುಕಿನ ವಿವಿಧ ಮಜಲುಗಳನ್ನು ತೋರಿಸಿತು. ವಿಜ್ಞಾನ, ವೈದಿಕದ ಬಗ್ಗೆ ‘ಡಾಕ್ಟ್ರಾ ಭಟ್ರಾ’ ಹೀಗೆ ಹಲವು ನಾಟಕಗಳು ಸಾಮಾಜಿಕ ಸಮಸ್ಯೆಗಳನ್ನು ಬಿಂಬಿಸಿವೆ ಎಂದು ವಿಮರ್ಶಕರಿಂದ ಮೆಚ್ಚುಗೆ ಸಿಕ್ಕಿತು. ನಿತ್ಯಾನಂದ ಭಗವಾನ್ ಕುರಿತು ’ಅಜ್ಜೆರ್’ನಂಥಹ ಭಕ್ತಿಪ್ರಧಾನ ನಾಟಕಗಳನ್ನು ಮಾಡಿದರು. ಮಣಿಕಂಠ ಮಹಿಮೆಯ ಸೀನರಿಗಳೂ ಹೆಸರು ತಂದುಕೊಟ್ಟಿತು.
ತುಳು ಚಿತ್ರರಂಗದ ಕ್ರಾಂತಿ :
ನಾಟಕಗಳ ನಡುವೆಯೇ ಕೋಸ್ಟಲ್ವುಡ್ನಲ್ಲೂ ಏನಾದರೂ ಬದಲಾವಣೆ ತರುವ ತುಡಿತವಿತ್ತು. ಅದೇ ಕಾಲಕ್ಕೆ ಒರಿಯರ್ದೊರಿ ಅಸಲ್ ಸಿನಿಮಾ ಸೆಟ್ಟೇರಿಸಿದರು. ವಿನೂತನ ತಂತ್ರಜ್ಞಾನ, ಹೊಸತನ, ಹೊಸ ಶೈಲಿಯ ಪ್ರಚಾರ ತಂತ್ರಗಳಿಂದ ಸಿನಿಮಾ ಅದ್ದೂರಿ ಯಶಸ್ಸು ಕೂಡ ಕಂಡಿತು. ತನ್ಮೂಲಕ ತುಳು ಚಿತ್ರರಂಗ ಹೊಸ ದಿಕ್ಕಿನತ್ತ ಕೂಡ ಸಾಗಿತು. ಒರಿಯರ್ದೊರಿ ಅಸಲ್ ನಾಟಕದ ಮೂಲಕ ತುಳು ರಂಗಭೂಮಿಗೆ ಆಧುನಿಕ ಸ್ಪರ್ಶ ತಂದು ಕೊಟ್ಟಿದ್ದ ಕೊಡಿಯಾಲ್ಬೈಲ್ ಅದೇ ನಾಟಕವನ್ನು ಸಿನಿಮಾವಾಗಿಸಿ ನಿಂತ ನೀರಾಗಿದ್ದ ಕೋಸ್ಟಲ್ವುಡ್ಗೆ ಜೀವಂತಿಕೆ ತುಂಬಿದ್ದರು. 25 ವಾರ (ದಿನಕ್ಕೆ 4 ಪ್ರದರ್ಶನ) ಹೌಸ್ಫುಲ್ ಪ್ರದರ್ಶನ ಕಂಡ ತುಳುವಿನ ಮೊದಲ ಸಿನಿಮಾ ಇದಾಗಿತ್ತು. ಈ ದಾಖಲೆಯನ್ನು ಈವರೆಗೆ ಬೇರೆ ಯಾವ ಸಿನಿಮಾವೂ ಸರಿಗಟ್ಟಿಲ್ಲ.
ಬರವುದ ಬಂಡಸಾಲೆ :
ಅಮೀರ್ ಖಾನ್ ಅಭಿನಯದ ‘ತಾರೇ ಜಮೀನ್ ಪರ್’ ಚಿತ್ರ ಬಿಡುಗಡೆಗೆಯ ಆರು ವರ್ಷಗಳ ಮೊದಲೇ ಅಂಥದ್ದೇ ಕಥಾ ವಸ್ತು ಹೊಂದಿದ್ದ ’ಬರವುದ ಬಂಡಸಾಲೆ’ ಮಕ್ಕಳ ತುಳುಚಿತ್ರ ನಿರ್ದೇಶಿಸಿದ್ದರು. ಈ ಕಿರುಚಿತ್ರ ಮಕ್ಕಳ ಶಿಕ್ಷಣದ ಬಗ್ಗೆ ಬೆಳಕು ಚೆಲ್ಲಿತ್ತು.
ಶಿವಧೂತೆ ಗುಳಿಗನ ಅಬ್ಬರ :
ಕಡಿಮೆ ಅವಧಿಯಲ್ಲಿ ಹೆಚ್ಚು ಪ್ರದರ್ಶನ ಮತ್ತು ಅತೀ ಹೆಚ್ಚು ಪ್ರೇಕ್ಷಕರು ವೀಕ್ಷಿಸುವ ಮೂಲಕ ದಾಖಲೆ ಬರೆದ ನಾಟಕ ‘ಶಿವಧೂತೆ ಗುಳಿಗೆ’. ಈಗಾಗಲೇ ತುಳು ಮತ್ತು ಕನ್ನಡದಲ್ಲಿ ದೇಶ ವಿದೇಶದಲ್ಲಿ ಇಲ್ಲಿವರೆಗೆ 555 ಪ್ರದರ್ಶನ ಮೂಲಕ ದಾಖಲೆಯ ಶೋ ಕಂಡಿದ್ದು, ಮಲಯಾಳಂ, ಮರಾಠಿ, ಇಂಗ್ಲಿಷ್ ಭಾಷೆಯಲ್ಲೂ ಪ್ರದರ್ಶನಕ್ಕೆ ಕೊಡಿಯಾಲ್ಬೈಲ್ ಸಿದ್ಧರಾಗಿದ್ದಾರೆ. ಇಲ್ಲಿಯವರೆಗೆ ಯಾವುದೇ ನಾಟಕ ಒಬ್ಬನ ನಿರ್ದೇಶನದಲ್ಲಿ ಐದು ಭಾಷೆಯಲ್ಲಿ ಪ್ರದರ್ಶನ ಕಂಡಿಲ್ಲ. ಸದ್ಯದಲ್ಲೇ ಐದು ಭಾಷೆಯಲ್ಲಿ ಶೋ ಕಾಣುವ ಮೂಲಕ ವಿಜಯಣ್ಣ ಗಿನ್ನೆಸ್ ರೆಕಾರ್ಡ್ನತ್ತ ಹೆಜ್ಜೆ ಇಟ್ಟಿದ್ದಾರೆ. ದೇಶದಾದ್ಯಂತ ರಿಷಭ್ ಶೆಟ್ಟಿ ನಿರ್ದೇಶನದ ಕಾಂತಾರ ಸಿನಿಮಾದ ಹವಾ ಸೃಷ್ಟಿಸಿದ್ದರೂ, ತುಳುನಾಡು ಸಹಿತ ಹೊರ ರಾಜ್ಯಾದ್ಯಂತ ಮೂರು ವರ್ಷದ ಹಿಂದೆಯೇ ಅಂತಹ ಹವಾ ಸೃಷ್ಟಿಸಿದ್ದ ಕೀರ್ತಿ ವಿಜಯಕುಮಾರ್ ಕೊಡಿಯಾಲ್ಬೈಲ್ ಅವರದ್ದು. ತುಳು ರಂಗಭೂಮಿಯಿಂದ ಜನ ವಿಮುಖರಾಗುತ್ತಿದ್ದಾರೆ ಎನ್ನುವ ಕೂಗು ಕೇಳಿಬಂತಹ ಸಂದರ್ಭ ಶಿವಧೂತೆ ಗುಳಿಗೆ ಎನ್ನುವ ಬೂಸ್ಟರ್ ಡೋಸ್ ರಂಗಭೂಮಿಯಲ್ಲಿ ಸಂಚಲನ ಸೃಷ್ಟಿಸಿದೆ. ಒಂದೇ ದಿನ ಮೂರು ಪ್ರದರ್ಶನಗಳನ್ನು ಕಂಡದ್ದು ಇದೆ. ಸೀಸನ್ಗಳಲ್ಲಿ ಕನಿಷ್ಠ ಒಂದೇ ದಿನ ಎರಡು ಪ್ರದರ್ಶನಗಳನ್ನು ಕಾಣುತ್ತಿರುವುದು ನಾಟಕದ ಹೆಚ್ಚುಗಾರಿಕೆ.
ಮೈತಿದಿ’ಯ ಬೂಸ್ಟರ್ ಡೋಸ್ :
ಸಿನಿಮಾ ಮಾದರಿಯಲ್ಲೂ ನಾಟಕ ಮಾಡಬಹುದು ಎಂಬುದನ್ನು ‘ಮೈತೆದಿ’ ಮೂಲಕ ತೋರಿಸಿಕೊಟ್ಟಿದ್ದು, ಪ್ರೇಕ್ಷಕ ವರ್ಗದಿಂದ ಪ್ರಶಂಸನೀಯ ಮಾತುಗಳು ಕೇಳಿಬರುತಿದ್ದು, ತುಳುನಾಟಕ ರಂಗಕ್ಕೆ ಬೂಸ್ಟರ್ ಡೋಸ್ ನೀಡಿದಂತಿದೆ. ಪೌರಾಣಿಕ ಕಥಾ ಹಂದರದಿಂದ ಹೊರಬಂದು ಸಾಮಾಜಿಕ ನೆಲೆಗಟ್ಟಿನ ಕಥೆಯಿಂದ ಹೆಣೆದ ನಾಟಕದ ಪ್ರತಿಯೊಂದು ದೃಶ್ಯವೂ ಪ್ರೇಕ್ಷಕನನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ಸಾಗಿದೆ. ನವರಸಗಳ ಮಿಳಿತದೊಂದಿಗೆ ರಂಗಭೂಮಿಗೆ ಹೊಸ ಆಯಾಮ ನೀಡಿದೆ. ಇದು ಬರೀ ನಾಟಕವಲ್ಲ ನಮ್ಮ ನಿಮ್ಮೊಳಗಿನ ಜೀವನದ ಕಥೆ. ಸಮಾಜದಲ್ಲಿ ಈಗ ನಡೆಯುತ್ತಿರುವ ಪಿಡುಗುಗಳನ್ನು ನವರಸಗಳ ಪಾಕದೊಂದಿಗೆ ಮನಮುಟ್ಟುವಂತೆ ಕಟ್ಟಿಕೊಟ್ಟಿದ್ದಾರೆ ಕೋಡಿಯಾಲಬೈಲ್. ನಾಟಕದ ತುಂಬಾ ಬಡತನದ ನೋವಿದೆ, ಖುಷಿ ಇದೆ, ದೇಶಪ್ರೇಮ ಇದೆ. ಸಾಮರಸ್ಯ ಇದೆ. ನೈಜತೆ ಇದೆ. ಅಕ್ಕರೆಯೂ ಇದೆ. ಕೆಲವೊಂದು ದೃಶ್ಯದಲ್ಲಿ ಪ್ರೇಕ್ಷಕರ ಕಣ್ಣಂಚನ್ನು ತೇವಗೊಳಿಸುವ ಮ್ಯಾಜಿಕನ್ನೂ ನಿರ್ದೇಶಕರು ಮಾಡಿದ್ದಾರೆ. ನಾಟಕದುದ್ದಕ್ಕೂ ಸುಂದರವಾದ ರಂಗದೃಶ್ಯ ಕಾವ್ಯವನ್ನು ಹೆಣೆದ ಕೀರ್ತಿ ಕೋಡಿಯಾಲ್ಬೈಲ್ ಅವರಿಗೆ ಸಲ್ಲುತ್ತದೆ.
ಇಡೀ ಕುಟುಂಬದ ಸಂಗಮ :
ಒಂದು ನಾಟಕ ಇರಲಿ, ಸಿನಿಮಾ ಇರಲಿ ಅಚ್ಚುಕಟ್ಟುತನಕ್ಕೆ ಹೆಸರೇ ವಿಜಯಕುಮಾರ್ ಕೊಡಿಯಾಲಬೈಲ್. ಕಲಾಸಂಗಮ ತಂಡದಲ್ಲಿ ಕೊಡಿಯಾಲಬೈಲ್ ಅವರ ಪತ್ನಿ ರೂಪಾ ವಿಜಯಕುಮಾರ್ ಸದಾ ಬೆನ್ನೆಲುಬಾಗಿದ್ದರೆ, ಪುತ್ರ ತಸ್ಮಯ್ ತಾಂತ್ರಿಕವಾಗಿ ನಿಪುಣರಾಗಿ ಎಲ್ಲ ತಾಂತ್ರಿಕ ಕೆಲಸ ಮಾಡುವುದರಲ್ಲಿ ಎತ್ತಿದ ಕೈ. ಪುತ್ರಿ ವಿಶಿಷ್ಟ ಸಾಫ್ಟವೇರ್ ಇಂಜಿನಿಯರ್ ಆಗಿದ್ದರೂ ಬಿಡುವಿನ ವೇಳೆ ನಾಟಕದಲ್ಲಿ ಬಣ್ಣ ಹಚ್ಚುವ ಮೂಲಕ ತನ್ನ ಕಲಾ ಚಾತುರ್ಯ ಮೆರೆಯುತ್ತಿದ್ದಾರೆ. ಸಹೋದರ ಚಂದ್ರಕುಮಾರ್ ಕೊಡಿಯಾಲಬೈಲ್ ನಾಟಕದ ಸಮಗ್ರ ನಿರ್ವಹಣೆ ನೋಡುವ ಮೂಲಕ ನಾಟಕದ ಯಶಸ್ಸಿಗೆ ಸದಾ ತಮ್ಮ ಕೊಡುಗೆ ನೀಡುತ್ತ ಬಂದಿದ್ದಾರೆ.
ತುಳುರಂಗಭೂಮಿ, ತುಳುಚಿತ್ರರಂಗದಲ್ಲಿ ದಾಖಲೆ ನಿರ್ಮಿಸಿದ ಕೋಡಿಯಾಲ್ಬೈಲ್ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯೊಂದಿಗೆ ಉನ್ನತ ಗೌರವಗಳು ಸಿಗುವಂತಾಗಲಿ. ತುಳುನಾಡಿಗೆ ಇನ್ನಷ್ಟು ಹೊಸತನದ ಹೊಸ ಪ್ರಯೋಗಗಳನ್ನು ನೀಡುವಂತಾಗಲು ದೇವರು ಅನುಗ್ರಹ ಕರುಣಿಸಲಿ ಎಂದು ಆಶಿಸೋಣ.
ಬರಹ: ಪ್ರಶಾಂತ್ ಸಿದ್ದಕಟ್ಟೆ