ಬೆಂಗಳೂರು ಕಂಬಳದ ತರುವಾಯ ತುಳು – ಕುಂದಕನ್ನಡ ಎನ್ನುವ ವಿಷಯದಲ್ಲಿ ನಾವು ತೌಳವರಲ್ಲ, ನೀವು ತುಳುವರಲ್ಲ, ನಿಮ್ಮ ಭಾಷೆಗೆ ಲಿಪಿ ಇಲ್ಲ, ನಮ್ಮ ಭಾಷೆ, ನಿಮ್ಮ ಸಂಸ್ಕೃತಿ ಎನ್ನುವ ಅರ್ಥದಲ್ಲಿ ಅನಗತ್ಯ ಚರ್ಚೆಗಳು ಆರಂಭಗೊಂಡಿದೆ. ಅಲ್ಲಿ ಎರಡೂ ಕಡೆಯಲ್ಲಿಯೂ ಸೂಕ್ಷ್ಮತೆಯನ್ನ ಅರಿಯದೆ ವಾದ ತನ್ನ ಸ್ವಾದ ಕಳೆದುಕೊಂಡು ಹೊಸ ವಿವಾದ ಸೃಷ್ಠಿಯಾಗುವ ಹಂತವನ್ನ ತಲುಪುತ್ತಿರುವುದನ್ನ ಗಮನಿಸುತ್ತಿದ್ದೇವೆ. ಅದು ಚರ್ಚೆಯ ವಸ್ತುವೂ, ವಿಷಯವೂ ಅಲ್ಲ. ತೌಳವ ಸೀಮೆ ಎನ್ನುವುದು ಕಲ್ಯಾಣಪುರದ ಹೊಳೆಯ ಆಚೆಗೆ ಮಾತ್ರವೇ ಸೀಮಿತವಲ್ಲ ಎನ್ನುವುದು ವಾದಕ್ಕೆ ಬಿದ್ದವರೆಲ್ಲರಿಗೂ ಗೊತ್ತಿಲ್ಲದೆಯೂ ಇರಬಹುದು! ಗೇರುಸೊಪ್ಪೆಯ ಶರಾವತಿ ನದಿಯಿಂದಲೂ ನೀಲೇಶ್ವರದ ಪಯಸ್ವಿನಿ ನದಿಯ ತನಕವೂ ತೌಳವ ಸೀಮೆ ಹಬ್ಬಿರುವ ಐತಿಹಾಸಿಕ ಉಲ್ಲೆಖಗಳಿವೆ. ಇತಿಹಾಸ ಸಂಶೋಧಕ ಬಾರ್ಕೂರು ಡಾ.ವಸಂತ ಶೆಟ್ಟರು ತೌಳವ ಸಂಸ್ಕೃತಿಯ ಬಗ್ಗೆ ಬಹಳ ಸ್ಪಷ್ಟವಾಗಿ ಉಲ್ಲೆಖಿಸುತ್ತಾ ’ತುಳು ಸಂಸ್ಕೃತಿ ಕೇವಲ ಆ ಭಾಷೆಗೆ ಮೀಸಲಾದದ್ದು ಅಲ್ಲವೇ ಅಲ್ಲ” ಎನ್ನುವುದನ್ನ ಸ್ಪಷ್ಟಪಡಿಸುತ್ತಾರೆ. ನಮ್ಮ ಭಾಗದ ಪಾಣಾರಾಟದ ಆರಂಭದಲ್ಲಿ ವಂಡ್ಸೆ ಹೋಬಳಿಯ ಕೆರಾಡಿಯ ದುರ್ಗಪ್ಪ ಪಾಣಾರರು ಪಂಜುರ್ಲಿಯ ಬಗ್ಗೆ ತುಳು ಪದಗಳಿಂದಲೇ ಪ್ರಾರಂಭ ಮಾಡುತ್ತಿದ್ದದ್ದು ದಾಖಲಾರ್ಹ.
ಬಸರೂರಿನಲ್ಲಿ ತೌಳವೇಶ್ವರ ದೇವಸ್ಥಾನವಿರುವುದು, ಬಾರ್ಕೂರನ್ನು ತುಳು ರಾಜಧಾನಿ ಎಂದಿರುವುದು, ಹೊಸಂಗಡಿಯನ್ನ ಆಳಿದ ಹೊನ್ನೆಕಂಬಳಿ ಅರಸರು ತೌಳವ ರಾಜರು ಎನ್ನುವುದು ಎಲ್ಲವೂ ಐತಿಹಾಸಿಕ ಸತ್ಯ. ತುಳುಭಾಷೆ ಮಾತಾಡಲು ಬಾರದವರನ್ನ ಘಟ್ಟದಕ್ಲು ಎಂದು ನಿಂದಿಸುವುದೂ ಅಪರಾಧ ಎನ್ನುವುದನ್ನ ತುಳು ಭಾಶಿಕರೂ ಅರ್ಥ ಮಾಡಿಕೊಳ್ಳಬೇಕು, ತುಳು ಭಾಶಿಕರ ಬಗ್ಗೆ ವ್ಯಂಗ್ಯ ಮಾಡುವುದೂ ಅಪರಾಧ ಎನ್ನುವುದನ್ನ ಕುಂದಾಪ್ರ ಕನ್ನಡ ಮಾತಾಡುವವರೂ ಅರಿಯಬೇಕು. ಕುಂದಾಪ್ರ ಸೀಮೆಯನ್ನ ಬಿಟ್ಟರೆ ತುಳುಸಂಸ್ಕೃತಿಯೇ ಪೂರ್ಣಗೊಳ್ಳುವುದಿಲ್ಲ ಎನ್ನುವುದಕ್ಕೆ ಬಸರೂರಿನ ತೌಳವೇಶ್ವರ ದೇವಸ್ಥಾನವೇ ಸಾಕ್ಷಿ. ಸಿರಿ ಪಾಡ್ದನದಲ್ಲಿ ಬಿರುಮಾಳ್ವರು ಸಿರಿಗೆ ತನ್ನ ತಂಗಿಯ ಮಗ ಕಾಂತ ಪೂಂಜನನ್ನ ಮದುವೆ ಮಾಡಿಸುತ್ತಾರೆ, ಆತ ಬಸರೂರಿನವನು, ಬಿರುಮಾಳ್ವರ ತಂಗಿಯನ್ನ ಬಸರೂರಿಗೆ ಕೊಟ್ಟಿರುವುದು ಎನ್ನುವುದನ್ನ ನಾವಿಲ್ಲಿ ಅರ್ಥ ಮಾಡಿಕೊಳ್ಳಬಹುದು. ಸಿರಿಯ ಗಂಡನಮನೆ ಬಸರೂರು ಅಲ್ಲ ಅದು ಬಸಲೂರು ಎನ್ನುವ ಚರ್ಚೆಯೂ ಇದೆಯಾದರೂ ಆಕೆ ಗಂಡನ ವಿರುದ್ಧ ಬಂಡಾಯ ಸಾರಿ ತನ್ನ ಮಗುವಿನೊಂದಿಗೆ ಸಾಗುವಾಗ ಆಕೆ ಯಾವ, ಯಾವ ನದಿಯನ್ನ ಹಾದು ಹೋಗುತ್ತಾಳೆ ಎನ್ನುವ ಉಲ್ಲೆಖದಲ್ಲಿ ಅದು ಇದೇ ಬಸರೂರು ಎನ್ನುವುದನ್ನ ನಾವು ಅರಿಯಬಹುದಾಗಿದೆ. ಗಂಡು-ಹೆಣ್ಣಿನ ಕೊಡು, ಕೊಳ್ಳುವಿಕೆ ಆ ರಾಯರ ಕಾಲದಿಂದಲೂ ಇತ್ತು ಎನ್ನುವುದಕ್ಕೆ ಇದೊಂದು ಉದಾಹರಣೆ.
ಸಾಂಸ್ಕೃತಿಕವಾಗಿ ಸಣ್ಣ ಸಣ್ಣ ಅನುಸರಣೆಗಳಲ್ಲಿ ಭಿನ್ನತೆ ಇದೆಯಾದರೂ ತೌಳವ ಸಂಸ್ಕೃತಿ ಎಲ್ಲೂ ಬೇರೆ ಬೇರೆಯಾದದ್ದಲ್ಲ, ತುಳು ರಾಜ್ಯ ಎಂದು ಕರೆದದ್ದು ಭಾಷೆ ಆಧಾರಿತವಾಗಿಯಂತು ಅಲ್ಲವೇ ಅಲ್ಲ. ಇದು ತೌಳವ ಸೀಮೆ ಎನ್ನುವುದಕ್ಕೆ ಹೊಸಂಗಡಿಯಲ್ಲಿದ್ದ ಶಾಸನ ಕಲ್ಲುಗಳ ಬಗ್ಗೆಯೂ ಚರ್ಚೆ ನಡೆದಿತ್ತು. ಬಹಳ ಮುಖ್ಯವಾಗಿ ನಾವು ಅರ್ಥ ಮಾಡಿಕೊಳ್ಳಬೇಕಿದೆ ಸಂಸ್ಕೃತಿ ಮೊದಲು ಭಾಷೆ ನಂತರ, ನಮ್ಮದೆಲ್ಲವೂ ತೌಳವ ಸಂಸ್ಕೃತಿ ಎನ್ನುವುದನ್ನ ಯಾರೂ ಅಲ್ಲಗಳೆಯಲಾಗುವುದಿಲ್ಲ. ಕೃಷ್ಣದೇವರಾಯನನ್ನ ತೌಳವ ರಮಾರಮಣ, ಕನ್ನಡ ರಮಾರಮಣ ಎಂದೂ ಬಣ್ಣಿಸಿರುವುದನ್ನ ಗಮನಿಸಬಹುದು, ಗೊಕರ್ಣದ ತನಕದ ಮಂಡಲವನ್ನ ತೌಳವ ಮಂಡಲ ಎಂದು ಕರೆದಿರುವುದು ಐತಿಹಾಸಿಕ ಸತ್ಯ. ಇತಿಹಾಸ ಸಂಶೋಧಕ ಸದ್ಯೋಜಾತ ಭಟ್ಟರು ಅದನ್ನ ಉಲ್ಲೇಖಿಸುತ್ತಾರೆ. ಗೋಕರ್ಣ, ಕಾಯ್ಕಿಣಿ, ಶಾಸನಗಳಲ್ಲಿ ತುಳು ಮಂಡಲ ಮತ್ತು ಹೈವ ಮಂಡಲ ಎನ್ನುವ ಪುರಾವೆಗಳಿವೆ. ವಿಜಯನಗರ ಸಾಮ್ರಾಟರು ಮಂಗಳೂರು ರಾಜ್ಯ ಮತ್ತು ಬಾರ್ಕೂರು ರಾಜ್ಯ ಕೇಂದ್ರವನ್ನಾಗಿಸಿ ಎರಡನ್ನೂ ತುಳುನಾಡು ಎಂದೇ ಬಣ್ಣಿಸಿ ಆ ಕಾಲಕ್ಕೆ ರಾಜ್ಯಪಾಲರ ನೇಮಕ ಮಾಡಿದ್ದರು. ಮುಂದೆ ಬಾರ್ಕೂರು ರಾಜ್ಯ ಸೀಮೆಯಲ್ಲಿ ಆಡಳಿತದ ಬದಲಾವಣೆ ಭಾಷೆಯ ಬದಲಾವಣೆಗೂ ಕಾರಣವಾಗಿರಬಹುದು. ಕುಂದಾಪ್ರ ಕನ್ನಡದಲ್ಲಿ ತುಳು ಭಾಷೆಯ ನೂರಾರು ಪದಗಳಿರುವುದು ಗೊತ್ತಿಲ್ಲದೇ ಇರುವುದಲ್ಲ. ಎರಡೂ ಭಾಗದಲ್ಲಿಯೂ ಭಾಷೆಯ ಕಾರಣಕ್ಕೆ ಸಂದರ್ಭಾನುಸಾರ ತಾರತಮ್ಯ ನೀತಿಯನ್ನ ಅನುಸರಿಸಿರುವ ಅನುಭವ ನಮಗೂ ಆದದ್ದಿದೆ, ಅವರಿಗೂ ಆಗಿದೆ. ಭಾಷೆಯನ್ನ ಮುಂದಿಟ್ಟುಕೊಂಡು ನಮ್ಮ ಸಂಸ್ಕೃತಿಯ ಮೇಲೆ ನಡೆಸುವ ಧಾಳಿಯ ಅಪಾಯದ ಅರಿವು ನಮಗಿರಬೇಕಿದೆ. ತೌಳವ ಸಂಸ್ಕೃತಿಯ ವಿಸ್ತಾರವನ್ನ ನಾವು ಅರ್ಥಮಾಡಿಕೊಂಡು ಪಾರಸ್ಪರಿಕವಾಗಿ ಮನಸು ಒಡೆಯುವ ಚರ್ಚೆಯನ್ನ ನಿಲ್ಲಿಸಿ ಸೌಹಾರ್ಧ ಬಾಳ್ಖೆಯನ್ನ ಬದುಕುವುದೇ ನಮ್ಮ ಗುರಿಯಾಗಬೇಕು ಎನ್ನುವುದು ಎರಡೂ ವಿಭಾಗದ ’ವಾದ’ ಮಂಡಿಸುವ ಅಣ್ಣಂದಿರಲ್ಲಿ ನನ್ನ ವಿನಂತಿ’ ನಮ್ಮಲ್ಲಿ ಕೊರಗರು ಮಾತಾಡಲು ಬಳಸುವ ಭಾಷೆ ತುಳು ಎನ್ನುವ ತಪ್ಪು ಕಲ್ಪನೆ ಇದೆ. ಆದರೆ ಅದು ತುಳುವಲ್ಲ. ಅದೊಂದು ಸ್ವತಂತ್ರ ದ್ರಾವಿಡ ಭಾಷೆ ಎನ್ನುವುದನ್ನ ಸಂಶೋಧಕರು ಹೇಳುತ್ತಾರೆ. ದಕ್ಷಿಣದ ಪಂಜಿನ ಕುರುಲು (ಹಂದಿ ಮರಿಗಳು) ಪಂಜುರ್ಲಿ ದೈವವನ್ನ, ಕಲ್ಕುಡ ದೈವವನ್ನೇ ನಾವೆಲ್ಲರೂ ಆರಾಧಿಸುತ್ತೇವೆ, ಇಲ್ಲಿನ ಮಾರಣಕಟ್ಟೆಯ ಬ್ರಹ್ಮಲಿಂಗ ತೆಂಕಿನವರಿಗೆ ಬಹಳ ಕಾರಣಿಕದ ಆರಾಧ್ಯ ದೈವ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಏಕತಭಾವವನ್ನು ಭಾಷೆಯ ನೆಪದಲ್ಲಿ ನಾವು ಘಾಸಿಗೊಳಿಸಕೂಡದು. ಅಲ್ಲಿಂದ ಹೆಣ್ಣು ತರುವುದು, ಇಲ್ಲಿಂದ ಹೆಣ್ಣು ಕೊಡುವುದು ಎಲ್ಲಾ ಕಾಲದಲ್ಲಿಯೂ ನಡೆಯುತ್ತಲೇ ಇದ್ದವು, ಯಾರಿಗೋ ಮಾನ್ಯತೆ, ಆದ್ಯತೆ ಸಿಗಲಿಲ್ಲ ಎನ್ನುವ ಕಾರಣಕ್ಕೆ ಆಯಾ ಪ್ರದೇಶದವರ ನಡುವೆಯೇ ಸಂಘರ್ಷ ಮೂಡಿಸುವ ಮಾತಾಡುವುದು ತರವಲ್ಲ, ವಾದದಲ್ಲಿ ಗೆಲ್ಲಬೇಕು ಎನ್ನುವ ಭಾವ ನಮ್ಮೊಳಗಿನ ಅಹಂಕಾರ ಕೆರಳಲಿಕ್ಕೆ ಕಾರಣವಾಗುತ್ತದೆ, ಅದು ಎರಡೂ ಕಡೆಯ ಸಂಬಂಧಗಳ ನಡುವೆ ಬಿರುಕು ಮೂಡಿಸುತ್ತದೆ. ಎಲ್ಲರೂ ನಮ್ಮವರೇ. ನಾವೆಲ್ಲರೂ ಅರ್ಥಮಾಡಿಕೊಳ್ಳಬೇಕಿರುವ ಸತ್ಯ ಒಂದೇ ಒಂದು ’ಒಡೆಯುವುದು ಸುಲಭ ಆದರೆ ಒಡಗೂಡುವುದು ಕಷ್ಟ’ ನಾವು ಕತ್ತರಿಯಾಗದೆ ಸೂಜಿದಾರವಾಗೋಣ.
ವಸಂತ್ ಗಿಳಿಯಾರ್