ಥಾಣೆ ಜಿಲ್ಲೆಯ ಅವಳಿ ನಗರ ಮೀರಾ ಭಾಯಂದರ್ ಇಂದು ಮಹಾರಾಷ್ಟ್ರದ ಅಭಿವೃದ್ಧಿ ಹೊಂದುತ್ತಿರುವ ನಗರಗಳಲ್ಲಿ ಒಂದೆಂದು ಪರಿಗಣಿತವಾಗಿದೆ. ಜೊತೆಗೆ ಇದು ಥಾಣೆ ಜಿಲ್ಲೆಯ ಸಾಂಸ್ಕೃತಿಕ ಕೇಂದ್ರವೆಂಬ ಹೆಗ್ಗಳಿಕೆ ಪಡೆದಿದ್ದು ಮಹಾರಾಷ್ಟ್ರದಲ್ಲೊಂದು ಮಿನಿ ಮಂಗಳೂರು ಎಂಬ ಗೌರವ ಸ್ಥಾನ ಹೊಂದಿರುತ್ತದೆ. ಇಲ್ಲಿ ಎಲ್ಲಾ ಜಾತಿ ಜನಾಂಗದ ಜನರು ಅನ್ಯೋನ್ಯತೆಯಿಂದ ಬಾಳುತ್ತಿರುವುದೇ ಅಲ್ಲದೇ ತಮ್ಮ ಸಾಂಘಿಕ, ಸಾರ್ವಜನಿಕ ಸೇವಾ ಚಟುವಟಿಕೆಗಳಿಂದ ಅನ್ಯ ಜನಾಂಗದ ಮುಖ್ಯವಾಗಿ ಮರಾಠಿ ಗುಜರಾತಿಗಳ ಸ್ನೇಹ ಪ್ರೀತಿ ವಿಶ್ವಾಸಗಳಿಗೆ ಪಾತ್ರರಾಗಿದ್ದು ಸುಮಾರು ನೂರೈವತ್ತಕ್ಕೂ ಹೆಚ್ಚು ಸಂಘ ಸಂಸ್ಥೆಗಳು ವೈವಿಧ್ಯಮಯ ಚಟುವಟಿಕೆಗಳಿಂದ ಕ್ರಿಯಾಶೀಲವಾಗಿದ್ದು ಪ್ರತಿದಿನ ಒಂದಿಲ್ಲೊಂದು ಕಾರ್ಯಕ್ರಮಗಳಿಂದ ಜನರು ಉತ್ಸಾಹದಿಂದ ಉತ್ಸವದ ವಾತಾವರಣದಲ್ಲೇ ಇರುತ್ತಾರೆ.
ಇಲ್ಲಿ ಹೆಸರಾಂತ ಸಂಘಟಕರು, ರಾಜಕೀಯ ಮುಖಂಡರು, ಕಲಾವಿದರು, ಕವಿಗಳು, ಪತ್ರಕರ್ತರು, ಉದ್ಯಮಿಗಳು ಎಲ್ಲರೂ ವಾಸ್ತವ್ಯ ಹೊಂದಿ ನೆಲೆಯಾಗಿದ್ದು ಸದಾ ಚಟುವಟಿಕೆಯಿಂದ ಕೂಡಿರುತ್ತಾರೆ. ಇಲ್ಲಿನ ಅತ್ಯಂತ ಹಳೆಯ ಬಂಟರ ಸಂಘಟನೆ ಎಂದು ಗುರುತಿಸಲ್ಪಡುವ ಬಂಟ್ಸ್ ಫೋರಂ ಮೀರಾ ಭಾಯಂದರ್ ತನ್ನ ನಿರಂತರ ಚಟುವಟಿಕೆಗಳಿಂದ ಗುರುತಿಸಲ್ಪಡುತ್ತಿದೆ. ಉಮೇಶ್ ಶೆಟ್ಟಿ ಎಂಬವರು ಈ ಸಂಘಟನೆಯ ಸ್ಥಾಪಕ ಅಧ್ಯಕ್ಷರಾಗಿದ್ದರೆ ನಂತರದ ವರ್ಷಗಳಲ್ಲಿ ಕ್ರಮವಾಗಿ ಡೆಲ್ಟಾ ಶಿವರಾಮ ಶೆಟ್ಟಿ, ಬೆಳ್ಳಿಪ್ಪಾಡಿ ಸಂತೋಷ್ ರೈ, ಜಯಪ್ರಕಾಶ್ ಭಂಡಾರಿ, ಚಂದ್ರಹಾಸ್ ಶೆಟ್ಟಿ ಇನ್ನ ಅಧ್ಯಕ್ಷ ಸ್ಥಾನವನ್ನಲಂಕರಿಸಿ ಒಬ್ಬೊಬ್ಬರೂ ತಮ್ಮದೇ ಆದ ವಿಶೇಷ ಸಂಘಟನಾ ಸಾಮರ್ಥ್ಯಗಳಿಂದ ಇದನ್ನು ಬೆಳೆಸಿ ಪೋಷಿಸಿಕೊಂಡು ಬಂದಿದ್ದು ಇದೀಗ ಇದರ ಅಧ್ಯಕ್ಷ ಸ್ಥಾನವನ್ನು ಶ್ರೀ ಉದಯ್ ಎಂ ಶೆಟ್ಟಿ ಮಲಾರಬೀಡು ಅವರು ಅಲಂಕರಿಸಿದ್ದಾರೆ.
ಉದಯ್ ಶೆಟ್ಟಿ ಅವರು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಾರಣೀಕದ ನೆಲೆ, ಶ್ರೇಷ್ಠ ಪರಂಪರೆ ಹೊಂದಿದ ಮಲಾರಬೀಡು ದಿವಂಗತ ಮಹಾಬಲ ಶೆಟ್ಟರ ಪುತ್ರ. ಮಲಾರಬೀಡು ಇದರ ಯಜಮಾನರಾಗಿದ್ದ ಮಹಾಬಲ ಶೆಟ್ಟಿ ಅವರು ತನ್ನ ತೊಂಬತ್ತ ನಾಲ್ಕನೇ ವರ್ಷ ವಯಸ್ಸಿನ ಬಳಿಕ ಇತ್ತೀಚೆಗಷ್ಟೇ ನಿಧನ ಹೊಂದಿದರು. ಒಂದು ಕಾಲದ ಬಲುದೊಡ್ಡ ಕೂಡು ಕುಟುಂಬದ ಬಂಟರ ಬೀಡಿನ ಮನೆತನಕ್ಕೆ ಹಲವಾರು ತಲೆಮಾರುಗಳ ಮೂರು ಬಂಟ ಬರಿಗಳಲ್ಲಿ ಜನ್ಮತಾಳಿದ ಜನಾಂಗ ಇದ್ದು, ಹಿಂದಿನ ಎರಡು ಬರಿಗಳ ವಂಶ ಅಳಿದು ಮೂರನೇ ಬರಿ ಅನ್ವಯದ ಯಜಮಾನರು ದಿವಂಗತ ಮಹಾಬಲ ಶೆಟ್ಟಿ ಅವರು ಇಲ್ಲಿನ ಕಾರಣಿಕದ ಮೂಲ ಮಲರಾಯ ದೈವದ ಸೇವೆ ಮಾಡುತ್ತಿದ್ದರು. ದಿವಂಗತ ಮಹಾಬಲ ಶೆಟ್ಟಿ ಅವರು ಸುಮಾರು ಹದಿನೈದು ವರ್ಷಗಳ ಕಾಲ ಯಜಮಾನಿಕೆ ನಡೆಸಿ ಕಳೆದ ವರ್ಷ ಹೃದಯಾಘಾತದಿಂದ ನಿಧನ ಹೊಂದಿದ್ದರು. ಮಲಾರಬೀಡಿನ ಮಲರಾಯ ದೈವ ಆದಿ ಮಲರಾಯನಾಗಿದ್ದು, ಪರಿಸರದ ಇತರ ಕಡೆಗಳಲ್ಲಿ ಮಲರಾಯ ದೈವದ ಸೇವೆ ನೇಮ ನಡೆಯುವಾಗ ಯಜಮಾನನಿಗೆ ಗೌರವದ ಕರೆ ನೀಡಿ ಜೋಡು ತೆಂಗಿನ ಕಾಯಿ ಫಲ ನೀಡಿ ಗೌರವಿಸುವ ಕ್ರಮ ಇದೆ. ಈಗ ಅವರ ಸಹೋದರ ವಿಶ್ವನಾಥ್ ರೈ ಯಜಮಾನಿಕೆ ಮಾಡುತ್ತಿದ್ದಾರೆ.
ಮಲಾರಬೀಡಿನ ಪೂರ್ವಜರಾದ ಬಲ್ಲ ಬರಿಯವರ ಕಾಲದಲಿ ಉದ್ಭವಗೊಂಡಿದ್ದ ಆದಿಮಲರಾಯ ಹಲವಾರು ವರುಷಗಳ ಕಾಲಾ ನಂತರ ಅವರ ಸೇವಾ ಕಾರ್ಯದಿಂದ ಅಸಮಾಧಾನ ಹೊಂದಿದ ದೈವ ಅವರ ವಂಶದ ಕುಡಿ ಮುಂದುವರಿಯದಂತೆ ಮಾಡಿ ಬಳಿಕ ಕುಂದರನ ಬರಿಯ ಜನಾಂಗದ ಸೇವೆ ಸ್ವೀಕರಿಸಿ ಕ್ರಮೇಣ ಅವರ ಶ್ರದ್ಧೆ ಕುಂದಿದ ಪರಿಣಾಮ ಆದಿಮಲರಾಯ ಅವರ ವಂಶದಲ್ಲೂ ಸಂತಾನ ಮುಂದುವರಿಯದಂತೆ ಮಾಡಿತೆನ್ನುವ ಐತಿಹ್ಯ ಈ ಬೀಡಿಗಿದೆ. ನಂತರ ಬಂದ ನಾಲಂದ ಬರಿಯ ಜನಾಂಗಕ್ಕೆ ಸೇರಿದವರು ಉದಯ್ ಶೆಟ್ಟಿ ಅವರ ತೀರ್ಥರೂಪರು ದಿವಂಗತ ಮಹಾಬಲ ಶೆಟ್ಟಿ ಗುರ್ಕಾರರು. ಉದಯ್ ಶೆಟ್ಟಿ ಅವರ ತಾಯಿ ದಿವಂಗತ ಶ್ರೀಮತಿ ಇಂದಿರಾ ಮಹಾಬಲ ಶೆಟ್ಟಿ ಅವರು ಪೆರ್ಮಂಕಿ ಹೊಸಮನೆ ಮಹಾಬಲ ಶೆಟ್ಟಿ ಅವರ ಪುತ್ರಿ ಹಾಗೂ ಬಲು ಪ್ರತಿಷ್ಠಿತ ಅಗರಿ ಮನೆತನದ ಹಿನ್ನೆಲೆ ಹೊಂದಿದ್ದು ಆ ಕಾಲದಲ್ಲಿ ಪ್ರಸಿದ್ಧಿಯಲ್ಲಿದ್ದ ಅಗರಿ ಲಕ್ಕಪ್ಪ ರೈ ಅವರ ಸೊಸೆ.
ಉದಯ್ ಶೆಟ್ಟಿ ಅವರು ಮಲಾರ್ ಪ್ರಾಥಮಿಕ ಶಾಲೆಯಲ್ಲಿ ಆರಂಭಿಕ ಶಿಕ್ಷಣ ಬಳಿಕ ಕನ್ಯಾನ ವಾಣಿ ವಿಜಯ ಹೈಸ್ಕೂಲು ಪದವಿಪೂರ್ವ ಕಾಲೇಜಿನ ಮುಖಾಂತರ ಪದವಿಪೂರ್ವ ಶಿಕ್ಷಣ ಮುಗಿಸಿ ಮುಂಬಯಿ ನಗರ ಸೇರಿಕೊಂಡರು. ಇಲ್ಲಿನ ಬಹು ಪ್ರಸಿದ್ಧಿಯ ಗಾಂಭೀರ್ ಕ್ಯಾಂಟೀನ್ ನಲ್ಲಿ ಮ್ಯಾನೇಜರ್ ಆಗಿ ದುಡಿಯುತ್ತಲೇ ಸಿದ್ಧಾರ್ಥ್ ಕಾಲೇಜಿನಲ್ಲಿ ಪದವಿ ಶಿಕ್ಷಣ ಪೂರೈಸಿ ಬಳಿಕ ಕೆ.ಸಿ. ಕಾಲೇಜಿಂದ ಹೊಟೇಲ್ ಮ್ಯಾನೇಜ್ ಮೆಂಟ್ ಡಿಪ್ಲೊಮಾ ಸಂಪಾದಿಸಿ ಕೊಂಡರು. ನಗರದ ಎಂ. ಎಲ್. ಎ. ಹಾಸ್ಟೆಲ್ ಕ್ಯಾಂಟೀನ್ ನಲ್ಲಿ ಬಳಿಕ ಚೆಂಬೂರು ಸುಧೀರ್ ಶೆಟ್ಟಿ ಅವರ ಗ್ರಾಂಡ್ ಸೆಂಟ್ರಲ್ ಹೋಟೇಲ್ ಗಳಲ್ಲಿ ಸುದೀರ್ಘ ಸೇವೆ ಸಲ್ಲಿಸಿ ಪ್ರಸ್ತುತ ಖಾರ್ ಜಿಮ್ಖಾನ ಇಲ್ಲಿ ಕೆಲವು ವರ್ಷಗಳಿಂದ ಸೀನಿಯರ್ ಮ್ಯಾನೇಜರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. 1986 – 87 ರ ಇಸವಿಯಲ್ಲಿ ಮುಂಬಯಿ ನಗರಕ್ಕಾಗಮಿಸಿ ಸ್ವಪ್ರಯತ್ನದಿಂದ ಉತ್ತಮ ಶಿಕ್ಷಣ ಪಡೆದು ವೈಯಕ್ತಿಕ ಜೀವನದಲ್ಲಿ ತನ್ನ ನಯ ವಿನಯ ಮಧುರ ಮಾತುಗಳಿಂದ ಮನಸೂರೆಗೊಳ್ಳುವ ಸುಂದರ ಸ್ಫುರದ್ರೂಪಿ ವ್ಯಕ್ತಿತ್ವ ಶ್ರೀ ಉದಯ್ ಎಂ ಶೆಟ್ಟಿ ಮಲಾರಬೀಡು ಇವರದ್ದು. ಇವರ ವಿಷಯದಲ್ಲಿ ಯಾರಲ್ಲಿ ಕೇಳಿ ನೋಡಿದರೂ ಉದಯಣ್ಣೆ ಬಾರೀ ಎಡ್ಡೆ ಜನ ಎಂಬ ಅಭಿಪ್ರಾಯ ಬರುತ್ತದೆ. ತನ್ನ ಮೂವತ್ತಾರು ವರ್ಷಗಳ ಕಾಲದ ಮುಂಬಯಿ ಜೀವನದಲ್ಲಿ ಮೊದಲ ಎರಡು ದಶಕಗಳಲ್ಲಿ ಶಿಕ್ಷಣ ಹಾಗೂ ತನ್ನ ವೃತ್ತಿ ಜೀವನದಲ್ಲಿ ಮಗ್ನರಾಗಿದ್ದ ಉದಯ್ ಶೆಟ್ಟಿ ಅವರು ನಂತರದ ಅವಧಿಯಲ್ಲಿ ನಗರ ವಾಸದಲ್ಲೊಂದು ಭದ್ರ ನೆಲೆಕಂಡುಕೊಂಡಾದ ಮೇಲೆ ಸಾರ್ವಜನಿಕ ಸೇವೆಯಲ್ಲಿ ಸಂಘಟನೆಯಲ್ಲಿ ತನ್ನನ್ನು ತೊಡಗಿಸಿಕೊಂಡರು. ತನ್ನ ಕುಟುಂಬ ಪರಿವಾರಕ್ಕೆ ಅನ್ನ ನೀಡುವ ಉದ್ಯೋಗಕ್ಕೂ ನ್ಯಾಯ ಒದಗಿಸುತ್ತಲೇ ಇತರ ಉದ್ಯೋಗೇತರ ಸಾಮಾಜಿಕ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಅತ್ಯಲ್ಪ ಅವಧಿಯಲ್ಲೇ ಓರ್ವ ಉದಯೋನ್ಮುಖ ನಾಯಕನಾಗಿ ಹೊರ ಹೊಮ್ಮಿದರು.
ಮೀರಾ ಭಾಯಂದರ್ ಪರಿಸರದ ಹೆಚ್ಚಿನ ಕಾರ್ಯಕ್ರಮಗಳಲ್ಲಿ ಉತ್ಸಾಹದಿಂದ ಭಾಗವಹಿಸುತ್ತಾ, ಸಮಾಜ ಬಾಂಧವರ ಸಂಪರ್ಕ ಹೊಂದಿ ಬಳಿಕ ಇಲ್ಲಿನ ಬಂಟರ ಸಂಘಟನೆ ಬಂಟ್ಸ್ ಫೋರಂ ಮೀರಾ ಭಾಯಂದರ್ ನ್ನು ಸೇರಿಕೊಂಡು ಸಾಮಾನ್ಯ ಸದಸ್ಯನಾಗಿ, ಕ್ರಿಯಾಸಮಿತಿ ಸದಸ್ಯನಾಗಿ, ಯುವವಿಭಾಗ, ಪ್ರಮುಖವಾಗಿ ಕ್ರೀಡಾ ಸಮಿತಿಯ ಕಾರ್ಯಾಧ್ಯಕ್ಷನಾಗಿ ತನ್ನ ಕಾರ್ಯ ಕೌಶಲ್ಯ ಸಂಘಟನಾ ಸಾಮರ್ಥ್ಯವನ್ನು ಪ್ರಕಟಪಡಿಸಿದರು. ಇವರ ಅಧಿಕಾರಾವಧಿಯ ಕ್ರೀಡಾ ಸ್ಫರ್ಧೆ ಅಧ್ಬುತ ಯಶಸ್ವಿ ಪಡೆದು ಪರಿಸರದ ಸಂಘಟನೆಗಳ, ಸಾರ್ವಜನಿಕರ ಮುಕ್ತ ಕಂಠದ ಶ್ಲಾಘನೆಗೆ ಪಾತ್ರವಾಯಿತು. ಪರಿಸರದ ಹೆಚ್ಚಿನ ಸಮಾಜ ಬಾಂಧವರು ಇದರಲ್ಲಿ ಪಾಲ್ಗೊಂಡು ಸಂಭ್ರಮಿಸಿದ್ದರು. ಇವರ ಸಜ್ಜನಿಕೆಯ ಸವಿನುಡಿ, ಶಿಸ್ತು, ಆಚಾರ ವಿಚಾರ ಇವರ ವ್ಯಕ್ತಿತ್ವಕ್ಕೆ ವಿಶೇಷ ಮೆರುಗನ್ನು ನೀಡಿದೆ. ಇವರು ಗುರು ಹಿರಿಯರಿಗೆ ನೀಡುವ ಗೌರವ, ಬಡಬಾಂಧವರ ಕುರಿತ ಕರುಣೆ, ಪ್ರಾಮಾಣಿಕ ದುಡಿಮೆಗಳಿಂದ ಪರಿಸರದಲ್ಲಿ ಓರ್ವ ಉತ್ತಮ ಸಂಘಟಕನೆಂದು ಗುರುತಿಸಿಕೊಂಡಿದ್ದು ಇದೀಗ ತಮ್ಮ ಯೋಗ್ಯತೆಗೆ ಸಿಕ್ಕ ಸಹಜ ಗೌರವವೆಂಬಂತೆ ಬಂಟ್ಸ್ ಫೋರಂ ಮೀರಾ ಭಾಯಂದರ್ ಇದರ ಅಧ್ಯಕ್ಷಗಾದಿ ದಕ್ಕಿದೆ.
ತನ್ನ ಸ್ವಂತ ಕಛೇರಿಯನ್ನು ಹೊಂದಿರುವ, ಗರಿಷ್ಠ ಮಟ್ಟದ ಸದಸ್ಯರನ್ನು ಹೊಂದಿರುವ, ಅಪಾರ ಸಂಖ್ಯೆಯ ಯುವ ಹಾಗೂ ಮಹಿಳಾ ಸದಸ್ಯರನ್ನೂ ಗಳಿಸಿರುವ ಬಂಟ್ಸ್ ಫೋರಂ ಇವರ ಸಾರಥ್ಯದಲ್ಲಿ ಇನ್ನಷ್ಟು ಪ್ರಗತಿ ಕಾಣಲಿದೆ ಎಂಬ ಅಭಿಪ್ರಾಯ ಬಂಟ ಬಾಂಧವರ ವಲಯದಲ್ಲಿ ಕೇಳಿ ಬರುತ್ತಿದೆ. ಸುಮಾರು ಎಂಟು ವರ್ಷಗಳ ಕಾಲ ಈ ಸಂಘಟನೆಯ ನಂಟು ಹೊಂದಿರುವ ಶೆಟ್ಟರು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ಬೆನ್ನಲ್ಲೇ ಇದೇ ಬರುವ ದಿನಾಂಕ 14 ರಂದು ಮೀರಾ ಭಾಯಂದರ್ ನಲ್ಲಿ ಮಹಿಳಾ ವಿಭಾಗದವರ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಸಂಸ್ಥೆಯ ಈ ನವ ವರ್ಷದ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ನಡೆಯಲಿದ್ದು ಇದು ಉದಯ ಶೆಟ್ಟಿ ಅವರ ಅವಧಿಯ ಪ್ರಪ್ರಥಮ ಕಾರ್ಯಕ್ರಮವಾಗಿದ್ದು ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರೋತ್ಸಾಹಿಸುವಂತೆ ಕೋರಲಾಗಿದೆ.
ಉದಯ್ ಶೆಟ್ಟಿ ಅವರು ಧರ್ಮ ಪತ್ನಿ ಶ್ರೀಮತಿ ಸುಧಾ ಉದಯ್ ಶೆಟ್ಟಿ ಹಾಗೂ ವಂಶದ ಕುಡಿ ಕು.ಖುಷಿ ಉದಯ್ ಶೆಟ್ಟಿ ನಾಮಕ ಪುತ್ರಿಯ ಜೊತೆ ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ. ಉದಯ್ ಶೆಟ್ಟಿ ಅವರ ಸಾಂಘಿಕ, ಸಾರ್ವಜನಿಕ ಹಾಗೂ ಕೌಟುಂಬಿಕ ಜೀವನ ದಿನೇ ದಿನೇ ಏಳಿಗೆ ಕಾಣಲಿ. ಸರ್ವಶಕ್ತ ಭಗವಂತ ಶೆಟ್ಟರ ಕುಟುಂಬ ಪರಿವಾರವನ್ನು ಸುಖವಾಗಿಟ್ಟಿರಲಿ ಎಂದು ಅವರ ಆಪ್ತರ ಹಾಗೂ ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ವತಿಯಿಂದ ಪ್ರಾರ್ಥನೆ ಶುಭ ಹಾರೈಕೆ.
ಲೋಕಾ ಸಮಸ್ತ ಸುಖಿನೋ ಭವಂತು…
ಅರುಣ್ ಶೆಟ್ಟಿ ಎರ್ಮಾಳ್
ಗೌರವ ಸಂಪಾದಕರು