ಉನ್ನತ ಶಿಕ್ಷಣ ಪಡೆದ ಯುವಕನೊಬ್ಬ ಅಕೌಂಟೆನ್ಸಿ ಆಂಡ್ ಫೈನಾನ್ಸ್ ಕ್ಷೇತ್ರದಲ್ಲಿ ಅಪರಿಮಿತ ಜ್ಞಾನ ಸಂಪಾದಿಸಿ ವಿದೇಶದ ನೆಲದಲ್ಲಿ ಉನ್ನತ ಹುದ್ದೆಯನ್ನಲಂಕರಿಸಿ ಅನೇಕ ವರ್ಷಗಳ ಬಳಿಕ ಸ್ವದೇಶಕ್ಕೆ ಹಿಂದಿರುಗಿ ಇಲ್ಲಿನ ಮಹಾರಾಷ್ಟ್ರದ ಪುಣೆಯಲ್ಲಿ ಹೋಟೇಲ್ ಅತಿಥಿ ಸತ್ಕಾರ ಗೃಹ ಉದ್ದಿಮೆ ನಡೆಸಿ ಈ ಕ್ಷೇತ್ರದಲ್ಲೂ ಗುರಿ ಮೀರಿದ ಸಾಧನೆಯಿಂದ ಪ್ರಸಿದ್ಧಿ ಯಶಸ್ಸು ಗಳಿಸಿದ ವ್ಯಕ್ತಿಯೋರ್ವರ ಸಾಧನೆಯ ಗಾಥೆ ಇಲ್ಲಿದೆ. ಇತಿಹಾಸ ಪ್ರಸಿದ್ಧ ಕಾರ್ಕಳದ ಕೌಡೂರು ಗ್ರಾಮದಲ್ಲಿ ಹುಟ್ಟಿದ ಪ್ರಭಾಕರ ಶೆಟ್ಟರ ತಂದೆ ಕೊರಂಗ್ರಪಾಡಿ ದೊಡ್ಡಮನೆ ವಿಠಲ ಶೆಟ್ಟಿ ಹಾಗೂ ತಾಯಿ ವನಂದೆಗುತ್ತು ಪುಷ್ಪಾವತಿ ಶೆಟ್ಟಿ.
ಮುಂಬಯಿ ವಿಶ್ವವಿದ್ಯಾಲಯದಿಂದ ಎಂ.ಕಾಂ. ವಾಣಿಜ್ಯ ಸ್ನಾತಕೋತ್ತರ ಪದವಿ ಗಳಿಸಿದ ಬಳಿಕ ಯುನೈಟೆಡ್ ಕಿಂಗ್ಡಮ್ ನ ಶಿಕ್ಷಣ ಸಂಸ್ಥೆಯ ಮೂಲಕ ಮ್ಯಾನೇಜ್ ಮೆಂಟ್ ಪ್ರಾಧಾನ್ಯದ ಚಾರ್ಟರ್ಡ್ ಅಕೌಂಟೆಂಟ್ ಪದವಿ ಸಂಪಾದಿಸಿದ ಬಳಿಕ ದೋಹಾ ಕತಾರ್ ಮೂಲದ ಪ್ರತಿಷ್ಠಿತ ಫೈನಾನ್ಸ್ ಆಂಡ್ ಅಕೌಂಟ್ಸ್ ಸಂಬಂಧಿತ ಸಂಸ್ಥೆಯೊಂದರಲ್ಲಿ ಅಧಿಕಾರಿಯಾಗಿ ಸುಮಾರು ಒಂದು ದಶಕ ಕಾಲ ಸೇವೆ ಸಲ್ಲಿಸಿದ ಬಳಿಕ ಪುಣೆಗೆ ಬಂದು ತಮನ್ನಾ ಹೊಟೇಲ್ ಆಂಡ್ ಹಾಸ್ಪಿಟಾಲಿಟಿ ಉದ್ಯಮ ಆರಂಭಿಸಿದರು. ಅತಿಥಿ ಸತ್ಕಾರ ಉದ್ಯಮದಲ್ಲಿ ವಿಶೇಷವಾಗಿ ನಾಡಿನ ಗಣ್ಯಾತಿ ಗಣ್ಯ ವ್ಯಕ್ತಿಗಳಿಗೆ ಸಕಲ ಸೌಕರ್ಯಗಳನ್ನು ಒದಗಿಸುವ, ತನ್ಮೂಲಕ ಸೇವೆಯ ಗುಣಮಟ್ಟವನ್ನು ಸತತ ಕಾಪಾಡಿಕೊಂಡು ಅವರ ವಿಶ್ವಾಸ ಗಳಿಸಿ ಮುಂದಕ್ಕೆ ಅವರದೇ ಅತಿಥಿ ಸತ್ಕಾರ ಗೃಹಕ್ಕೆ ಪ್ರಾಧಾನ್ಯತೆ ದೊರೆಯುವ ನಿಟ್ಟಿನಲ್ಲಿ ಸದಾ ಕಾರ್ಯಶೀಲರಾದ ಪರಿಣಾಮ ತಮನ್ನಾ ಇಂದು ಹೆಸರಾಂತ ಅಂತರಾಷ್ಟ್ರೀಯ ಖ್ಯಾತಿಯನ್ನು ಹೊಂದಿರುವ ಅತಿಥಿ ಸತ್ಕಾರ ಗೃಹ ಎನಿಸಿಕೊಂಡಿರುತ್ತದೆ. ಇವರ ಈ ಉದ್ಯಮ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ಹಾಗೂ ಅಂತಾರಾಷ್ಟ್ರೀಯ ವೀಕ್ಷಕರನ್ನು ಹೊಂದಿರುವ ವಿದೇಶದ ದೂರದರ್ಶನ ವಾಹಿನಿ ಇವರ ಉದ್ಯಮ ವಿಶಿಷ್ಠತೆ ಕುರಿತಂತೆ ವಿಶೇಷ ವರದಿಯನ್ನು ಪ್ರಸಾರ ಮಾಡಿರುತ್ತದೆ ಎಂದರೆ ಅವರ ಸೇವೆಯ ಗುಣಮಟ್ಟದ ಬಗ್ಗೆ ನಮಗೆ ಅರಿವಾಗುತ್ತದೆ. ಕೆಂದ್ರ ಸಚಿವ ಕಲ್ರಾಜ್ ಮಿಶ್ರಾ ಅವರ ಅಧ್ಯಕ್ಷತೆಯಲ್ಲಿ ಶೆಟ್ಟರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗಿತ್ತು. ಇನ್ಫೋಸಿಸ್ ತಂತ್ರವಿಜ್ಞಾನ ಸಂಸ್ಥೆಯಿಂದ ಅತ್ಯುತ್ತಮ ಕ್ಯಾಟರಿಂಗ್ ವೆಂಡರ್ ಪ್ರಶಸ್ತಿ ಪತ್ರ ದೊರೆತಿರುತ್ತದೆ. ಅಖಿಲ ಭಾರತ ಮಟ್ಟದ ವಾಣಿಜ್ಯ ಉದ್ಯಮ ಕ್ಷೇತ್ರದ ವಿಶೇಷ ಸಂಸ್ಥೆ ಗೌರವ ಇವರ ಈ ಸಂಸ್ಥೆಗೆ ದೊರೆತಿದೆ. ಅದೇ ರೀತಿ ಕೇಂದ್ರ ಸಚಿವರಾಗಿದ್ದ ಬೂಟಾಸಿಂಗ್ ಹಾಗೂ ಲೋಕಸಭಾ ಸದಸ್ಯರಾಗಿದ್ದ ಗೋವಿಂದ ರಾವ್ ಮಹಾದಿಕ್ ನೇತೃತ್ವದಲ್ಲಿ ಪ್ರವಾಸೋದ್ಯಮ ಖಾತೆಯ ವತಿಯಿಂದ ವಿಶೇಷ ಸೇವಾ ಸಂಸ್ಥೆಯೆಂಬಂತೆ ಗುರುತಿಸಿ ಶೆಟ್ಟರನ್ನು ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.
ಪ್ರಭಾಕರ್ ಶೆಟ್ಟಿಯವರು ತನ್ನ ನಿರಂತರ ಸಾಮಾಜಿಕ ಚಟುವಟಿಕೆಗಳಿಂದ ಪುಣೆಯಲ್ಲಿ ಪ್ರಸಿದ್ಧರು. ಇವರು ಪುಣೆ ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷರಾಗಿ, ಬಂಟರ ಸಂಘ ಪುಣೆಯ ಸಮಿತಿ ಸದಸ್ಯರಾಗಿ ಅನೇಕ ಜನಪರ ಸಂಘಟನೆಗಳ ಸಕ್ರಿಯ ಕಾರ್ಯಕರ್ತನಾಗಿ ಗುರುತಿಸಿ ಕೊಂಡಿದ್ದಾರೆ. ಪುಣೆ ಹೊಟೇಲ್ಸ್ ಆಂಡ್ ರೆಸ್ಟೋರೆಂಟ್ಸ್ ಅಸೋಸಿಯೇಷನ್ ಇದರ ಕ್ರಿಯಾಶೀಲ ಸದಸ್ಯರಾಗಿ, ಗುರುದೇವಾ ಸೇವಾ ಬಳಗ ಪುಣೆ ಇದರ ಅಧ್ಯಕ್ಷರಾಗಿ, ಪಶ್ಚಿಮ ಭಾರತ ಹೊಟೇಲ್ಸ್ ಅಸೋಸಿಯೇಶನ್ ಸದಸ್ಯರಾಗಿ ಸದಾ ಕ್ರಿಯಾಶೀಲ ವ್ಯಕ್ತಿತ್ವವನ್ನು ಹೊಂದಿದವರು. ಇವರ ಗ್ರಾಂಡ್ ತಮನ್ನಾ ಹೊಟೇಲ್ ನಲ್ಲಿ ನಲವತ್ತೇಳು ಕೊಠಡಿಗಳು, ಮೂರು ಬಾಂಕ್ವೆಟ್ ಹಾಲ್ ಗಳು, ಮೂರು ಊಟೋಪಚಾರದ ಹೊಟೇಲುಗಳು, ಈಜು ಕೊಳ, ಜಿಮ್ ಹೀಗೆ ವಿಧ ವಿಧವಾದ ಸೌಕರ್ಯಗಳಿದ್ದು ತಮನ್ನಾ ಗ್ರೂಪ್ ಆಫ್ ಹೊಟೇಲ್ಸ್ ಎಂಬ ಲಾಂಛನದಡಿ ದೇಶ ವಿದೇಶದ ಗ್ರಾಹಕರನ್ನು, ಪ್ರವಾಸಿಗರನ್ನು ಆಕರ್ಷಿಸುತ್ತಲೇ ಸದಾ ಸೇವೆಗೆ ಸಿದ್ಧವಿರುತ್ತದೆ.
ತಾನು ತನ್ನ ಆರ್ಥಿಕ ಪರಿಸ್ಥಿತಿಯನ್ನು ದೃಢಗೊಳಿಸಿ ವೈವಾಹಿಕ ಜೀವನ ಪ್ರವೇಶಿಸಿದ ಪ್ರಭಾಕರ ಶೆಟ್ಟಿಯವರು ಎಲಿಯಾಳ ಪಟ್ಟದ ಚಾವಡಿ ಎಂಬ ಪ್ರಸಿದ್ಧ ಬಂಟ ಕುಟುಂಬದ ಹಿನ್ನೆಲೆ ಹೊಂದಿದ ಶ್ರೀಮತಿ ವೀಣಾ ಶೆಟ್ಟಿ ಅವರೊಂದಿಗೆ ವಿವಾಹ ಸಂಸ್ಕಾರ ಸಂಪನ್ನರಾಗಿ ಎರಡು ಪುತ್ರ ರತ್ನಗಳನ್ನು ಪಡೆದಿದ್ದಾರೆ. ಮೊದಲ ಮಗ ಪ್ರಥ್ವೀಶ್ ಶೆಟ್ಟಿ ತನ್ನ ಸಿಎ ಪದವಿಯನ್ನು ಇಪ್ಪತ್ತೊಂದನೇ ಹರೆಯಕ್ಕೇ ಮುಗಿಸಿ ಸ್ನೇಹಾಲ್ ಎಂಬ ಎಂ.ಬಿ.ಎ. ಎಚ್ ಆರ್ ಪದವೀಧರೆ ಯುವತಿ ಜೊತೆ ಸಪ್ತಪದಿ ತುಳಿದು ಸಂತಸದ ಸಾಂಸಾರಿಕ ಜೀವನ ಹೊಂದಿದ್ದು, ಎರಡನೆ ಪುತ್ರ ಡಾ. ಪ್ರಖ್ಯಾತ್ ಶೆಟ್ಟಿ ಎಂಬಿಬಿಎಸ್ ಪೂರ್ಣಗೊಳಿಸಿ ಜನರಲ್ ಮೆಡಿಸಿನ್ ವಿಭಾಗದಲ್ಲಿ ಎಂಡಿ ಪೂರ್ಣಗೊಳಿಸಿ ಡಾಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೊದಲ ಪುತ್ರ ಸಿಎ ಪ್ರಥ್ವೀಶ್ ಅವರು ಆದ್ಯ ಎಂಬ ಹೆಣ್ಣು ಮಗುವನ್ನು ಹೊಂದಿದ್ದು, ಎರಡನೇ ಪುತ್ರ ಡಾ. ಪ್ರಖ್ಯಾತ್ ಶೆಟ್ಟಿಯವರು ಡಾ. ದಕ್ಷಾ ಶೆಟ್ಟಿಯವರನ್ನು ಮದುವೆಯಾಗಿ ಗೃಹಸ್ಥಾಶ್ರಮ ಪ್ರವೇಶಿಸಿದ್ದಾರೆ. ಡಾ ದಕ್ಷಾ ಪ್ರಖ್ಯಾತ್ ಶೆಟ್ಟಿಯವರು ಎಂಬಿಬಿಎಸ್ ಪೂರ್ಣಗೊಳಿಸಿ ಈಗ ಪೆಥಾಲಜಿ ವಿಭಾಗದಲ್ಲಿ ಎಂಡಿ ಅಭ್ಯಸಿಸಿಸುತ್ತಿದ್ದಾರೆ. ಪ್ರಥಮ ಪುತ್ರನ ಮಾವ ಪುಣೆಯ ಪ್ರಸಿದ್ಧ ಉದ್ಯಮಿ, ಸಾಯಿ ಫ್ಯಾಷನ್ಸ್ ಮಾಲೀಕ, ಬಂಟ್ಸ್ ಅಸೋಸಿಯೇಶನ್ ಪುಣೆ ಇದರ ಮಾಜಿ ಅಧ್ಯಕ್ಷ ಹಾಗೂ ಪುಣೆ ಗುರುದೇವಾ ಸೇವಾ ಬಳಗದ ಮಾಜಿ ಅಧ್ಯಕ್ಷರಾದ ನಾರಾಯಣ ಶೆಟ್ಟಿಯವರು. ದ್ವಿತೀಯ ಪುತ್ರನ ಮಾವ ಹೆಸರಾಂತ ಉದ್ಯಮಿ ದಿವಾಕರ ಶೆಟ್ಟಿ ಅವರು ಭದ್ರಾವತಿ ಬಂಟರ ಸಂಘದ ಮಾಜಿ ಅಧ್ಯಕ್ಷರು ಹಾಗೂ ಮಾಜಿ ಲಯನ್ಸ್ ಗವರ್ನರ್ ಆಗಿದ್ದವರು.
ಪ್ರಭಾಕರ್ ಶೆಟ್ಟಿಯವರು ಪುಣೆಯಲ್ಲಿ ಗ್ರಾಂಡ್ ತಮನ್ನಾ ಅಲ್ಲದೇ, ಎಕ್ಸಿಕ್ಯೂಟಿವ್ ತಮನ್ನಾ, ಬಿಝ್ ತಮನ್ನಾ, ಶ್ರೀ ಇನ್ ಬೈ ತಮನ್ನಾ, ಪ್ರೀಮಿಯರ್ ತಮನ್ನಾ, ಡೈಲಿ ಬೇಕರ್ ( ಬ್ರೆಡ್ ಮತ್ತು ಕೇಕ್ ಉತ್ಪಾದನ ಕೇಂದ್ರ ) ಎಂಬ ಈ ಐದು ಸಂಸ್ಥೆಯನ್ನು ಹೊಂದಿದ್ದಾರೆ. ಹೀಗೆ ಓರ್ವ ಉದ್ಯಮಿಯಾಗಿ, ಆದರ್ಶ ಕೌಟುಂಬಿಕ ಜೀವನ ಹೊಂದಿದ ಸಂಘಟಕ, ಸಮಾಜ ಸೇವಕ, ಬಂಟ ಸಮುದಾಯದ ಅಮೂಲ್ಯ ರತ್ನ ಬಹುಜನ ಮಾನಿತರೂ ಆಗಿರುವ ಪ್ರಭಾಕರ ಶೆಟ್ಟರ ಭವಿಷ್ಯದ ಬಾಳು ಆನಂದಮಯವಾಗಿರಲಿ. ಆರೋಗ್ಯ ಸಮೃದ್ಧಿಗಳಿಂದ ಕೂಡಿದ ದೀರ್ಘಾಯುಷ್ಯ ಹೊಂದಲಿ ಎಂದು ಸಮಸ್ತ ಬಂಟ ಸಮಾಜದ ಪರವಾಗಿ ಬಂಟ ಸಾಧಕ ಜಗತ್ತಿನ ಮುಖವಾಣಿ ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಸದಾಶಯ ಶುಭ ಹಾರೈಕೆಗಳು.
ಸರ್ವರಿಗೆ ಸನ್ಮಂಗಲವಾಗಲಿ. ಶುಭಂ…
ಅರುಣ್ ಶೆಟ್ಟಿ ಎರ್ಮಾಳ್
ಗೌರವ ಸಂಪಾದಕರು