ಪೊವಾಯಿ ಕನ್ನಡ ಸೇವಾ ಸಂಘದ ಅಧ್ಯಕ್ಷರಾದ ನ್ಯಾಯವಾದಿ ಆರ್ ಜಿ ಶೆಟ್ಟಿಯವರು ಮೂಲತಃ ಉಡುಪಿ ಜಿಲ್ಲೆಯ ಕಳತ್ತೂರು ಕೋರಂಟ್ ಗುತ್ತು ದಿ. ಗೋಪಾಲ ಎನ್ ಶೆಟ್ಟಿ ಹಾಗೂ ಕುತ್ಯಾರು ಪಣಿಮಾರು ಗುತ್ತು ದಿ. ದೇವಕಿ ಶೆಟ್ಟಿ ದಂಪತಿಗಳ ಸುಪುತ್ರರು. ಇವರು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಎಳ್ಳೂರು ಕಸಬಾ ಇರಂದಾಡಿಯಲ್ಲಿ ಮುಗಿಸಿ ಪದವಿ ಶಿಕ್ಷಣವನ್ನು ಸಂತ ಮೇರಿ ಕಾಲೇಜು ಶಿರ್ವದಲ್ಲಿ ಮುಗಿಸಿದರು. ಕಾನೂನು ಪದವಿಯನ್ನು ಜೆ.ಸಿ ಲಾ ಕಾಲೇಜು ವಿಲೇಪಾರ್ಲೆ ಇಲ್ಲಿ ಪೂರೈಸಿದರು.
ಕಾಲೇಜು ಜೀವನದಲ್ಲೇ ತನ್ನಲ್ಲಿರುವ ಪ್ರತಿಭೆಯನ್ನು ತೋರ್ಪಡಿಸಿದ ಇವರು ಸಂತ ಮೇರಿ ಹೈಸ್ಕೂಲ್ ಎನ್.ಎಸ್.ಎಸ್ ಗ್ರೂಫ್ ನಾಯಕರಾಗಿ, ಜೆ.ಸಿ ಲಾ ಕಾಲೇಜು ವಿಲೇಪಾರ್ಲೆ ಮುಂಬಯಿ ಇಲ್ಲಿ ಕ್ರೀಡಾ ಕಾರ್ಯದರ್ಶಿಯಾಗಿ ಅಂದೇರಿ ಕೋರ್ಟು ನ್ಯಾಯವಾದಿ ಬಾರ್ ಅಸೋಸಿಯೇಶನ್ ನ 2 ವರ್ಷ ಜತೆ ಕಾರ್ಯದರ್ಶಿಯಾಗಿ, 2 ವರ್ಷ ಪ್ರದಾನ ಕಾರ್ಯದರ್ಶಿಯಾಗಿ, 5 ವರ್ಷ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದ ಅನುಭವವನ್ನು ಹೊಂದಿದ್ದಾರೆ. ಕನ್ನಡ ಸೇವಾ ಸಂಘ ಪೊವಾಯಿ ಯ ಉಪಾಧ್ಯಕ್ಷರಾಗಿ ಸ್ಮರಣ ಸಂಚಿಕೆ ಕಾರ್ಯಾಧ್ಯಕ್ಷನಾಗಿ, ಸದಸ್ಯತನ ಸಮಿತಿ ಕಾರ್ಯಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. 2008ರಿಂದ 2011 ರವರೆಗೆ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಪ್ರಸ್ತುತ ಸಂಘವು ರಜತ ಮಹೋತ್ಸವ ಆಚರಿಸುತ್ತಿದ್ದು ಬಹುಜನರ ಅಪೇಕ್ಷೆಯ ಮೇರೆಗೆ ಪುನಃ 2 ವರ್ಷದ ಅವಧಿಗೆ ಸೇವೆ ಸಲ್ಲಿಸುತ್ತಿದ್ದಾರೆ. ಮಾತೃ ಭೂಮಿ ಕೋ ಓಪರೇಟಿವ್ ಕ್ರೆಡೀಟ್ ಸೊಸೈಟಿಯ ಕಾನೂನು ಸಲಹೆಗಾರರಾಗಿ, ಬಂಟರ ಸಂಘ ಮುಂಬಯಿ ಇದರ ಅಂದೇರಿ -ಬಾಂದ್ರಾ ಪ್ರಾದೇಶಿಕ ಸಮಿತಿಯ ಕಾರ್ಯನಿರ್ವಹಕರಾಗಿ, ಎಳ್ಳೂರು ಮಹತೋಬಾರ ವಿಶ್ವೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಮುಂಬಯಿ ಇದರ ಉಪಾಧ್ಯಕ್ಷರಾಗಿ, ಕುತ್ಯಾರ್ ಕೇಂಜ ಗರಡಿ ಜೀರ್ಣೋದ್ಧಾರ ಸಮಿತಿ ಮುಂಬೈ ಇದರ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿ ಸಾಮಾಜಿಕ ಹಾಗೂ ಧಾರ್ಮಿಕ ಸೇವೆಯಲ್ಲಿ ಅಪಾರವಾದ ಅನುಭವ ಹೊಂದಿದ್ದಾರೆ. ಬಂಟ್ಸ್ ಫೋರಮ್ ಮುಂಬಯಿ ಇದರ ಕೋಶಾಧಿಕಾರಿಯಾಗಿ, ಕರ್ನಾಟಕ ಸಲ್ಯೂಟ್ ತರಂಗದ ಸಲಹೆಗಾರ ರಾಗಿ, ಕಳೆದ 15 ವರ್ಷದಿಂದ ಅಂದೇರಿ ನ್ಯಾಯವಾದಿ ಬಾರ್ ಅಸೋಸಿಯೇಶನ್ ನ ವಿಶ್ವಸ್ಥರಾಗಿ, ಕನ್ನಡ ಸೇವಾ ಸಂಘ ಪೊವಾಯಿಯ ಸ್ವಂತ ಕಚೇರಿ ಆಗುವಲ್ಲಿ ಅತೀ ಹೆಚ್ಚು ದೇಣಿಗೆ ಸಂಗ್ರಹಹಿಸಿದ ಕೀರ್ತಿ ಆರ್ ಜಿ ಶೆಟ್ಟರಿಗೆ ಸಲ್ಲುತ್ತದೆ. ಕಳೆದ 35 ವರ್ಷದ ಸಮಾಜ ಸೇವೆಯಲ್ಲಿ ಬಡ ವರ್ಗದ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಸಹಾಯ, ವೈದ್ಯಕೀಯ ನೆರವು ನೀಡುತ್ತಾ ಬರುವ ಶೆಟ್ಟಿಯವರು ಅಪ್ಪಟ ಶಿಕ್ಷಣ ಪ್ರೇಮಿ. ಕೊರೋನ ಮಹಾ ಮಾರಿಯಲ್ಲಿ ತತ್ತರಿಸಿದ ತುಳು ಕನ್ನಡಿಗರ ಮನೆ ಮನೆಗೆ ಆಹಾರ ಕಿಟ್ ಹಂಚಿ ರಾತ್ರಿ ಹಗಲು ಆರೋಗ್ಯದ ಕಡೆ ಗಮನ ಹರಿಸದೆ ಜನ ಸಾಮಾನ್ಯರ ಬಗ್ಗೆ ಕಾಳಜಿ ವಹಿಸುವ ಶೆಟ್ಟಿಯವರ ಸೇವೆಯನ್ನು ಎಲ್ಲರೂ ಮೆಚ್ಚುವಂತದ್ದೇ. ಪೊವಾಯಿ ಪರಿಸರದಲ್ಲಿ ಮಹಾನಗರ ಪಾಲಿಕೆಯು ನಿರ್ಮಿಸಿದ ಶ್ರೀ ಶ್ರೀ ವಿಶ್ವೇಶ್ವರ ತೀರ್ಥ ಸ್ವಾಮೀಜಿಯವರ ಹೆಸರಿನ ವೃತ್ತವನ್ನು ಉದ್ಘಾಟಿಸುವ ಭಾಗ್ಯ ನ್ಯಾಯವಾದಿ ಆರ್ ಜಿ ಶೆಟ್ಟಿಯವರ ಪಾಲಿಗೆ ಒದಗಿ ಬಂದದ್ದುಬಂಟ ಸಮಾಜದ ಹಾಗೂ ತುಳು ಕನ್ನಡಿಗರಾದ ನಮಗೆಲ್ಲಾ ಹೆಮ್ಮೆಯ ವಿಷಯ. ದಾಂಪತ್ಯ ಜೀವನದಲ್ಲಿ ಕನ್ನಡ ಸೇವಾ ಸಂಘ ಪೊವಾಯಿ ಇದರ ಮಾಜಿ ಮಹಿಳಾ ಕಾರ್ಯಧ್ಯಕ್ಷೆ ಶ್ರೀಮತಿ ಜ್ಯೋತಿ ಆರ್ ಜಿ ಶೆಟ್ಟಿ ಅವರನ್ನು ವರಿಸಿಕೊಂಡು, ಮಗಳು ರೀತಿಕಾ ಅವರೊಂದಿಗೆ ಸುಖಮಯ ಜೀವನ ನ್ಯಾಯವಾದಿ ಆರ್ ಜಿ ಶೆಟ್ಟಿಯವರು ಸಾಗಿಸುತ್ತಿದ್ದಾರೆ.