2023 ರ ಸಾಲಿನ ಪ್ರತಿಷ್ಠಿತ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉದ್ಯಮಿ, ಸಾಮಾಜಿಕ ಚಿಂತಕ ಶ್ರೀ ಶಶಿಕಿರಣ್ ಶೆಟ್ಟರ ಸಾಧನೆಯ ಪಥದ ಹೆಜ್ಜೆ ಗುರುತುಗಳು ಉದ್ಯಮ ಕ್ಷೇತ್ರದಲ್ಲಿ ಅಚ್ಚಳಿಯದ ಪಡಿಮೂಡಿಸಿ ಭವಿಷ್ಯದ ಉದ್ಯಮ ಕ್ಷೇತ್ರದ ಸಾಧನಾಶೀಲ ಯುವಕರಿಗೆ ದಾರಿದೀಪವಾಗಬಲ್ಲುದು. ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ಬಂಟ್ವಾಳದ ಪುಟ್ಟ ಹಳ್ಳಿಯಲ್ಲಿ ಹುಟ್ಟಿದ ಶಶಿಕಿರಣ್ ಶೆಟ್ಟಿ ಅವರು ಇಂದು ಅಂತಾರಾಷ್ಟ್ರೀಯ ಪ್ರಸಿದ್ಧಿ ಪಡೆದ ಕಾರ್ಗೋ ಸಂಬಂಧಿ ಜಾಗತಿಕ ವಿಸ್ತೃತ ವ್ಯವಹಾರಗಳನ್ನು ಹೊಂದಿದ ಸಂಸ್ಥೆಯನ್ನು ಹುಟ್ಟು ಹಾಕಿ ಫೌಂಡರ್ ಚೆಯರ್ ಮೆನ್ ಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಶ್ವ ಪ್ರಸಿದ್ಧ ಉದ್ಯಮಿಯಾಗಿದ್ದಾರೆ.
1978 ರ ಸುಮಾರಿಗೆ ಇಂಟರ್ ಮೋಡಲ್ ಟ್ರಾನ್ಸ್ ಪೋರ್ಟ್ ಎಂಡ್ ಟ್ರೇಡಿಂಗ್ ಸಿಸ್ಟಮ್ಸ್ ಫ್ರೈ.ಲಿ. ಜೊತೆಗೆ ಸೇರಿಕೊಂಡು ಉದ್ಯಮದ ಅನುಭವಗಳನ್ನು ಪಡೆದು ಈ ಉದ್ಯಮ ವ್ಯವಹಾರದ ಯಶಸ್ಸಿನ ಸಾಧ್ಯಾ ಸಾಧ್ಯತೆಗಳನ್ನು ಅಧ್ಯಯನ ಮಾಡಿ ಇದಕ್ಕೆ ಪೂರಕವಾಗಬಲ್ಲ ತನ್ನದೇ ಉದ್ಯಮ ಸ್ಥಾಪನೆ ಕುರಿತು ಯೋಚಿಸತೊಡಗಿದರು. ನಂತರ ಫೋರ್ಬಸ್ ಗೋಕಾಕ್ ಜೊತೆ ಸೇರಿ ಇನ್ನಷ್ಟು ಅನುಭವ ಸಂಪಾದಿಸಿದ ಬಳಿಕ ಟ್ರಾನ್ಸ್ ಇಂಡಿಯಾ ಫ್ರೈಟ್ ಸರ್ವಿಸಸ್ ಫ್ರೈ.ಲಿ. ಎಂಬ ಸಂಸ್ಥೆಯನ್ನು ಸ್ಥಾಪಿಸಿ ಓರ್ವ ಯಶಸ್ವಿ ಯುವ ಉದ್ಯಮಿಯಾಗಿ ಗುರುತಿಸಿಕೊಂಡರು.
1994 ರಲ್ಲಿ ತನ್ನ ಮಹತ್ವಾಕಾಂಕ್ಷೆಯ ಆಲ್ ಕಾರ್ಗೋ ಲೋಜಿಸ್ಟಿಕ್ ಲಿಮಿಟೆಡ್ ಎಂಬ ಸ್ವಂತ ಉದ್ದಿಮೆ ಆರಂಭಿಸಿ ಹಂತ ಹಂತವಾಗಿ ಇದು ಜಾಗತಿಕ ವ್ಯವಹಾರಗಳ ಮೂಲಕ ಪ್ರಸಿದ್ಧಿ ಪಡೆಯಿತು. ಲೋಜಿಸ್ಟಿಕ್ ಕ್ಷೇತ್ರದಲ್ಲಿ ವಿಸ್ತೃತ ಅಧ್ಯಯನ ಬಳಿಕ ಕೆಲವು ಪ್ರತಿಷ್ಠಿತ ಪ್ರಸಿದ್ಧ ಸಂಸ್ಥೆಗಳೊಂದಿಗೆ ಕಾಂಟ್ರಾಕ್ಟ್ ವ್ಯವಹಾರ ಕುದುರಿಸಿಕೊಂಡು ತನ್ನ ಆದಾಯದ ಮೂಲವನ್ನು ಮತ್ತಷ್ಟು ವ್ಯಾಪಕಗೊಳಿಸಿದರು. ಕಂಟೆಯ್ನರ್ ಫ್ರೈಟ್ ಸ್ಟೇಶನ್ಸ್, ಲೋಜಿಸ್ಟಿಕ್ ಪಾರ್ಕ್ ಜೊತೆ ಕಾಂಟ್ರಾಕ್ಟ್ ಒಪ್ಪಂದದೊಂದಿಗೆ ವ್ಯವಹಾರ ಆರಂಭಿಸಿ ಇ.ಸಿ.ಯು ವರ್ಲ್ಡ್ ವೈಡ್ ಗ್ಲೋಬಲ್ ನಾನ್ ವೆಸ್ಸೆಲ್ ಆಪರೇಟಿಂಗ್ ಕಾಮನ್ ಕ್ಯಾರಿಯರ್ ಇ.ಸಿ.ಯು ಕಂಪನಿಗಳು ತನ್ನ ಕಂಪನಿಯೊಂದಿಗೆ ವಿಲೀನಗೊಂಡು ತನ್ನ ಲೋಜಿಸ್ಟಿಕ್ ಉದ್ಯಮದ ಕಾರ್ಯಕ್ಷೇತ್ರ ಇನ್ನಷ್ಟು ವಿಸ್ತಾರವಾಗಿ ಇಂದು ದೊಡ್ಡ ಮಟ್ಟದಲ್ಲಿ ಹೆಸರು ಪಡೆದಿರುವುದರ ಜೊತೆಗೆ ಶೆಟ್ಟರ ಹೆಸರು ಅಂತರಾಷ್ಟ್ರೀಯ ಪ್ರಸಿದ್ಧಿಯ ಉದ್ಯಮಿಗಳ ಪಟ್ಟಿಯಲ್ಲಿ ದಾಖಲೆ ಪಡೆಯಿತು.
ಗತಿ ಲಿಮಿಟೆಡ್ ಮತ್ತು ನೋರ್ಡಿಕೋನ್ ಎಂಬ ಹೆಸರಾಂತ ಕಂಪೆನಿಗಳೆಂದು ಗುರುತಿಸಿ ಕೊಂಡವುಗಳು ಕೂಡಾ ಕ್ರಮೇಣ ಶೆಟ್ಟರ ಕಂಪನಿಯೊಂದಿಗೆ ವಿಲೀನಗೊಂಡು ಭದ್ರ ಬಂಡವಾಳದೊಂದಿಗೆ ಕಂಪನಿ ವಿಸ್ತರಣೆಯಾಯಿತು. ಶೆಟ್ಟರು IIM ಮುಂಬಯಿ ಇದರ ಬೋರ್ಡ್ ಆಫ್ ಗವರ್ನೆನ್ಸಿಯ ಚೆಯರ್ ಮೇನ್ ಆಗಿ ನಿಯುಕ್ತಿಗೊಂಡಿರುವುದು ಅವರ ಆಡಳಿತ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ. ಶೆಟ್ಟರು ಕಮಾಂಡರ್ ಆಫ್ ದಿ ಆರ್ಡರ್ ಆಫ್ ಲಿಯೋಪೋಲ್ಡ್ I I by King Philippe of Belgium ಗೌರವಕ್ಕೆ ಆಯ್ಕೆಯಾಗಿದ್ದಾರೆ. ಅಲ್ಲದೇ ಮಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದುಕೊಂಡಿದ್ದಾರೆ. ಗ್ಲೋಬಲ್ ಫ್ರೈಟ್ ಅವಾರ್ಡನ್ನು ಗ್ಲೋಬಲ್ ಲೋಜಿಸ್ಟಿಕ್ ಕ್ಷೇತ್ರದಲ್ಲಿ ತೋರಿಸಿದ ಅಪ್ರತಿಮ ಸಾಧನೆಗೆ ಜೀವಮಾನ ಪ್ರಶಸ್ತಿ ರೂಪದಲ್ಲಿ ಸ್ವೀಕರಿಸಿದ ಧನ್ಯಾತ್ಮರು. ಲಿಯೋಡ್ಸ್ ಲೋಡಿಂಗ್ ಲಿಸ್ಟ್ ಇನ್ಪೋರ್ಮಾ ಲಂಡನ್ ಪ್ರಶಸ್ತಿ, ದ್ವಿತೀಯ ಅತ್ಯುತ್ತಮ ನಾಗರಿಕ ಪ್ರಶಸ್ತಿ ಜೊತೆಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ನಮ್ಮ ಶಶಿಕಿರಣ್ ಶೆಟ್ಟರು.
1957 ರಲ್ಲಿ ಜನಿಸಿದ ಶಶಿಕಿರಣ್ ಶೆಟ್ಟಿ ಅವರು ಬಂಟ್ವಾಳ ಎಸ್ ವಿ ಎಸ್ ಕಾಲೇಜಿನಿಂದ ಪದವಿ ಪೂರೈಸಿ ಬಳಿಕ ಮುಂಬಯಿಗೆ ಆಗಮಿಸಿದ ಅವರಿಗೆ ಲೋಜಿಸ್ಟಿಕ್ ಕ್ಷೇತ್ರದಲ್ಲಿ ಸೇರಿಕೊಳ್ಳುವ ಅವಕಾಶ ದೊರೆತ ಪರಿಣಾಮ ಇಂದು ಅದೇ ಕ್ಷೇತ್ರದ ಸುಪ್ರಸಿದ್ಧ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ. ನಿಟ್ಟೆ ವಿದ್ಯಾಸಂಸ್ಥೆಯಿಂದ Dsc ಉಪಾದಿ ಮೂಲಕ ಗೌರವ ಡಾಕ್ಟರೇಟ್ ಕೂಡಾ ಪಡೆದ ಹೆಗ್ಗಳಿಕೆ ಇವರಿಗಿದೆ. ತಾನು ಉದ್ಯಮ ಕ್ಷೇತ್ರದಲ್ಲಿ ಯಶಸ್ಸು ಪಡೆದ ಬಳಿಕ ಅಸಂಖ್ಯ ವಿದ್ಯಾವಂತ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸಿಕೊಟ್ಟು ಅವರ ಭವಿಷ್ಯ ರೂಪಿಸುವುದರೊಂದಿಗೆ ಅವರ ಕುಟುಂಬದ ಪಾಲಿಗೆ ಅನ್ನದಾತರಾಗಿದ್ಧಾರೆ. ಬಡ ಕುಟುಂಬಗಳಿಗೆ ಉದಾರ ದಾನ ನೀಡಿದ್ದಾರೆ.
ಯಾವುದೇ ಪ್ರಚಾರದ ಅಭಿಲಾಷೆ ಇಲ್ಲದೇ ತನ್ನ ಉದ್ಯಮವನ್ನು ತಪಸ್ಸು ಎಂಬಂತೆ ಸ್ವೀಕರಿಸಿ ಏಕಾಗ್ರತೆ ಪರಿಶ್ರಮದಿಂದ ಅದ್ಭುತ ಯಶಸ್ಸು ಪಡೆದ ಅಪರೂಪದ ಸಾಧಕರಿವರು. ಶ್ರೀಯುತರು Best CEO ಪ್ರಶಸ್ತಿಯನ್ನು ಸಾರಿಗೆ ಮತ್ತು ಲೋಜಿಸ್ಟಿಕ್ ವಿಭಾಗದ ಯೋಗದಾನಕ್ಕೆ ಪಡೆದಿದ್ದಾರೆ. ಬಂಟ ಸಮುದಾಯದ ಸಂಘಟನೆಗಳಿಂದ, ಸಾಮಾಜಿಕ ಸಂಘಟನೆಗಳಿಂದ ಸತತ ಸನ್ಮಾನಕ್ಕೆ ಪಾತ್ರರಾಗಿದ್ದಾರೆ. ಮುಂಬಯಿ ಬಂಟರ ಸಂಘ ಸೇರಿದಂತೆ ಇತರ ಕಡೆಗಳಲ್ಲಿ ಸ್ವಜಾತಿ ಬಾಂಧವರ ಸಂಘಟನೆಗಳಿಗೆ, ಧಾರ್ಮಿಕ ಕ್ಷೇತ್ರಗಳಿಗೆ, ಶಿಕ್ಷಣ ಸಂಸ್ಥೆಗಳಿಗೆ, ಬಡಕುಟುಂಬಗಳಿಗೆ ಕೊಟ್ಟ ದಾನ ಲೆಕ್ಕಕ್ಕೆ ಸಿಗದಷ್ಟಿದೆ.
ಆರತಿ ಶೆಟ್ಟಿ ಎಂಬ ಪ್ರತಿಷ್ಠಿತ ಮನೆತನದ ಹಿನ್ನೆಲೆ ಹೊಂದಿದ ಯುವತಿ ಜೊತೆ ಗೃಹಸ್ಥ ಜೀವನ ಆರಂಭಿಸಿದ ಶಶಿಕಿರಣ್ ಶೆಟ್ಟಿ ಅವರು ವೈಷ್ಣವ್ ಹಾಗೂ ಶ್ಲೋಕಾ ಎಂಬ ಇಬ್ಬರು ಮಕ್ಕಳೊಂದಿಗೆ ಸಂತಸ ಸಮೃದ್ಧಿಯ ಜೀವನ ಬಾಳುತ್ತಿದ್ದಾರೆ. ಇಂಥವರು ತಮ್ಮ ವೈಯಕ್ತಿಕ ಜೀವನದಲ್ಲಿ ಪ್ರಗತಿ ಕಂಡುಕೊಳ್ಳುವುದರ ಜೊತೆಗೆ ಒಟ್ಟು ಸಮಾಜದ ಪುರೋಗತಿಗೆ ಕಾರಣರಾಗಿ ವಿಶ್ವಮಾನ್ಯರಾಗುತ್ತಾರೆ. ಮುಂದಿನ ಜೀವನಯಾನದಲ್ಲಿ ಶೆಟ್ಟಿ ಅವರು ಇನ್ನಷ್ಟು ಪ್ರಗತಿ ಕಾಣಲಿ. ಆರೋಗ್ಯ ಸ್ಥಿರವಿದ್ದು, ಆಯುಷ್ಯ ವೃದ್ಧಿಸುತ್ತಿರಲಿ. ಕುಟುಂಬ ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ಮನೆಮಾಡಲಿ ಎಂದು ಸಮಸ್ತ ಬಂಟ ಸಮುದಾಯದ ಪರವಾಗಿ ಬಂಟ್ಸ್ ನೌ ಮಾಧ್ಯಮ ಸಂಸ್ಥೆ ಶುಭ ಹಾರೈಸುತ್ತದೆ.
ಶುಭವಾಗಲಿ ಸರ್ವರಿಗೆ..
ಅರುಣ್ ಶೆಟ್ಟಿ ಎರ್ಮಾಳ್
ಗೌರವ ಸಂಪಾದಕರು