ಕೆಲ ತಿಂಗಳುಗಳ ಜಾಗತಿಕ ಬಂಟರ ಸಂಘಗಳ ಒಕ್ಕೂಟ (ರಿ)ದ ಸಭಾ ಕಾರ್ಯಕ್ರಮದ ವೇದಿಕೆಯಲ್ಲಿದ್ದ ದೇಶದ ಪ್ರತಿಷ್ಠಿತ ಬಂಟ ಉದ್ಯಮಿಯೊಬ್ಬರು ಅಧ್ಯಕ್ಷ ಐಕಳ ಹರೀಶ್ ಶೆಟ್ಟಿಯವರ ನಿಸ್ವಾರ್ಥ ಸಮಾಜ ಸೇವೆಯನ್ನು ಶ್ಲಾಘಿಸಿ ಒಕ್ಕೂಟದ ಸಮಾಜಸೇವೆಗೆ 50 ಲಕ್ಷ ರೂ. ದೇಣಿಗೆ ನೀಡುವುದಾಗಿ ನೆರೆದ ಜನಸ್ತೋಮದ ಮುಂದೆ ಘೋಷಿಸಿ ನುಡಿದಂತೆ ನಡೆದಿದ್ದಾರೆ. ಅಷ್ಟೇ ಅಲ್ಲದೆ, ಪ್ರತಿ ವರ್ಷವೂ ಒಕ್ಕೂಟಕ್ಕೆ 50 ಲಕ್ಷ ರೂಪಾಯಿಯನ್ನು ನೀಡುವುದಾಗಿ ಹೃದಯ ತುಂಬಿ ಹೇಳಿದರು. ಮುಂದೆ, ಒಕ್ಕೂಟವು ಸ್ವಂತ ಜಾಗ ಖರೀದಿಸಿ ಬಹುಮಹಡಿ ಕಾಂಪ್ಲೆಕ್ಸ್ ಕಟ್ಟಿಸಿ ಲಾಭ ಗಳಿಕೆ ಮಾಡಿ ಬಂದ ಹಣದಲ್ಲಿ ಸಮಾಜಸೇವೆ ಮಾಡಬೇಕೆಂದು ಹೇಳಿದರು. ಅದಕ್ಕೆ ಕೂಡಾ ತಾನು ಗರಿಷ್ಠ ಮಟ್ಟದಲ್ಲಿ ಆರ್ಥಿಕ ಸಹಕಾರ ನೀಡುವುದಾಗಿ ಹೇಳಿದ್ದಾರೆ. ಅವರೇ ಪ್ರಸಿದ್ಧ ಉದ್ಯಮಿ ದೇಶದ ಪ್ರತಿಷ್ಠಿತ ಹೇರಂಬಾ ಇಂಡಸ್ಟ್ರೀಸ್ ಲಿಮಿಟೆಡ್ನ ಚೇರ್ಮೆನ್ ಮಂಜೇಶ್ವರ ಮೂಲದ ಸದಾಶಿವ ಕೆ. ಶೆಟ್ಟಿ.
ನಿಸ್ವಾರ್ಥ ಸಮಾಜಸೇವಕರಾಗಿರುವ ಸದಾಶಿವ ಕೆ. ಶೆಟ್ಟಿ ಅವರು ಕಾಸರಗೋಡು ಜಿಲ್ಲೆಯ ಮಂಜೇಶ್ವರ ಬಳಿಯ ಕನ್ಯಾನದ ಕೂಳೂರಿನ ಫಕೀರ ಶೆಟ್ಟಿ ಮತ್ತು ಶೀಲಾವತಿ ದಂಪತಿಗಳ ಸುಪುತ್ರರಾಗಿ ಜೂನ್ 13, 1954 ರಂದು ಜನಿಸಿದರು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಹುಟ್ಟೂರಿನಲ್ಲಿ ಕಲಿತ ಅವರು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಓದಿದರು. ಆ ಬಳಿಕ ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಎಂ.ಎಸ್ಸಿ ಸ್ನಾತಕೋತ್ತರ ಪದವಿ ಪಡೆದರು.
ತದನಂತರ,ಉದ್ಯೋಗ ನಿಮಿತ್ತ ಮುಂಬಯಿಗೆ ಹೋದ ಅವರು ನಿರ್ಲೋನ್ ಲಿಮಿಟೆಡ್, ಫಾರ್ಡ್ ಕೆಮಿಕಲ್ಸ್ ಇಂಡಸ್ಟ್ರೀಸ್ ಹೋಟೆಸ್ಟ್ ಫಾರ್ಮಾಸಿಟಿಕಲ್ಸ್ ಲಿ. ಸೇರಿದಂತೆ ಹಲವಾರು ಪ್ರತಿಷ್ಠಿತ ಕಂಪೆನಿಗಳಲ್ಲಿ ಸುಮಾರು ಎರಡು ದಶಕಗಳ ಕಾಲ ಸೇವೆ ಸಲ್ಲಿಸಿದರು.
ಹೇರಂಬಾ ಇಂಡಸ್ಟ್ರೀಸ್ ಲಿಮಿಟೆಡ್ : ಕೈಗಾರಿಕೆ ಕ್ಷೇತ್ರದಲ್ಲಿ ಸಲ್ಲಿಸಿದ 20 ವರ್ಷಗಳ ಅನುಭವವು ಅವರನ್ನು ಸ್ವಂತ ಉದ್ಯಮ ಆರಂಭಿಸಲು ಪ್ರೇರೇಪಿಸಿತ್ತು. ಕಠಿಣ ಪರಿಶ್ರಮ, ಛಲ, ಮಹತ್ವಾಕಾಂಕ್ಷೆ, ದೂರದೃಷ್ಟಿತ್ವ ಮತ್ತು ಸ್ವಾಭಿಮಾನ ಅವರನ್ನು ಸ್ವತಂತ್ರ ಉದ್ಯಮ ಸ್ಥಾಪಿಸಲು ಸ್ಪೂರ್ತಿದಾಯಕವಾಯಿತು. ಅವರು ಧೈರ್ಯದಿಂದ ಮತ್ತು ಆತ್ಮವಿಶ್ವಾಸದಿಂದ ಒಂದು ಬೃಹತ್ ಕಂಪೆನಿಯನ್ನು ಆರಂಬಿಸಲು ಕಾರಣವಾಯಿತು. ಅದೇ ಹೇರಂಬಾ ಇಂಡಸ್ಟ್ರೀಸ್ ಲಿಮಿಟೆಡ್.
ಕೃಷಿಗೆ ಸಂಬಂಧಿಸಿದ ರಾಸಾಯನಿಕಗಳು, ಗೊಬ್ಬರಗಳು ಹಾಗೂ ಔಷಧಗಳನ್ನು ಹೇರಂಬಾ ಇಂಡಸ್ಟ್ರೀಸ್ ಲಿಮಿಟೆಡ್ ಮೂಲಕ ಉತ್ಪಾದಿಸಲಾಗುತ್ತಿದ್ದು, ಆರಂಭದ ಅವಧಿಯಲ್ಲೇ ಈ ಕಂಪೆನಿ ಯಶಸ್ಸು ಸಾಧಿಸಿ ಬಹುಬೇಡಿಕೆ ಪಡೆದು ಜನಮನ್ನಣೆಗೆ ಗಳಿಸಿ ಪ್ರಸಿದ್ಧಿಗೆ ಬಂತು. ಇದಕ್ಕೆ ಮುಖ್ಯ ಕಾರಣವೇನೆಂದರೆ, ಸಂಸ್ಥೆಯ ಉತ್ಪನ್ನಗಳ ಬಳಕೆಯಿಂದ ಗ್ರಾಹಕರಿಗೆ ಉತ್ತಮ ಇಳುವರಿ ಮತ್ತು ಕೃಷಿಗೆ ಸಂಬಂಧಿಸಿದ ರೋಗಗಳಿಂದ ಮುಕ್ತಿ ಪಡೆಯಲು ಸಾಧ್ಯವಾಗಿದ್ದು ಇಲ್ಲಿ ಉಲ್ಲೇಖನೀಯವಾಗಿದೆ. ಹೇರಂಬಾ ಇಂಡಸ್ಟ್ರೀಸ್ ಲಿಮಿಟೆಡ್ ಅದ್ಭುತ ಫಲ ಕೊಟ್ಟಿದ್ದರಿಂದ ದೇಶದಾದ್ಯಂತ ಸಂಸ್ಥೆಯ ಉತ್ಪನ್ನಗಳನ್ನು ಸರಬರಾಜು ಮಾಡಿ ಅದರಲ್ಲೂ ಅವರ ಸಫಲತೆ ಗಳಿಸಿದರು.
ವಿದೇಶಗಳಿಂದಲೂ ಬೇಡಿಕೆ : ಹೇರಂಬಾ ಇಂಡಸ್ಟ್ರೀಸ್ ಭಾರತದಾದ್ಯಂತ ತನ್ನ ಉತ್ಪನ್ನಗಳ ಮೂಲಕ ಬಹುಬೇಡಿಕೆಯ ಕಂಪೆನಿಯಾಗಿ ಬೆಳೆದರೆ, ವಿದೇಶಗಳಿಂದಲೂ ಇದರ ಉತ್ಪನ್ನಗಳಿಗೆ ಬೇಡಿಕೆಗಳು ಬರಲಾರಂಭಿಸಿದವು. ಪರಿಣಾಮ, ಚೀನಾ ಸಹಿತ 60 ದೇಶಗಳಿಗೆ ಹೇರಂಬಾದ ಉತ್ಪನ್ನಗಳು ರಫ್ತಾಗುತ್ತಿವೆ. ವಿದೇಶಗಳ ಮಾರುಕಟ್ಟೆಗಳಲ್ಲೂ ಹೇರಂಬಾದ ಉತ್ಪನ್ನಗಳು ಭಾರೀ ಬೇಡಿಕೆ ಪಡೆದು ಜನಮನ್ನಣೆ ಗಳಿಸಿವೆ.
ಸಾವಿರ ಕೋಟಿ ದಾಟಿದ ವ್ಯವಹಾರ : ಸುಮಾರು 27ವರ್ಷಗಳ ಹಿಂದೆ ಮುಂಬಯಿಯಲ್ಲಿ ಸದಾಶಿವ ಕೆ. ಶೆಟ್ಟಿ ಮತ್ತು ರಘುರಾಮ ಶೆಟ್ಟಿ ಸಹೋದರರಿಂದ ಆರಂಭವಾದ ಹೇರಂಬಾ ಇಂಡಸ್ಟ್ರೀಸ್ ಲಿಮಿಟೆಡ್ ಕಂಪೆನಿಯು ಇಂದು ದೇಶದಲ್ಲೇ ಅತ್ಯಂತ ಪ್ರಮುಖ ಬಹುಬೇಡಿಕೆಯ ಪ್ರತಿಷ್ಠಿತ ಕಂಪೆನಿಯಾಗಿ ಬೆಳೆದಿದೆ. ಇದನ್ನು ಉತ್ತಮವಾಗಿ ಮುನ್ನಡೆಸುತ್ತಿರುವ ಸದಾಶಿವ ಕೆ. ಶೆಟ್ಟಿಯವರು ಇಂದು ಸಹಸ್ರಾರು ಉದ್ಯೋಗಿಗಳಿಗೆ ಅನ್ನದಾತರಾಗಿದ್ದಾರೆ. ಈ ಕಂಪೆನಿಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ಮಂದಿ ಉದ್ಯೋಗಿಗಳಿದ್ದಾರೆ.
ಕಳೆದ ವರ್ಷ ಕಂಪೆನಿಯು 1200 ಕೋಟಿ ರೂ.ಗಳಿಗಿಂತಲೂ ಹೆಚ್ಚು ವ್ಯವಹಾರವನ್ನು ನಡೆಸಿ ಹೊಸ ದಾಖಲೆ ಬರೆದಿದೆ. ಹೇರಂಬಾ ಇಂಡಸ್ಟ್ರೀಸ್ ಲಿಮಿಟೆಡ್ ನ ಕಾರ್ಪೊರೇಟ್ ಕಚೇರಿಯು ಮುಂಬಯಿಯ ಬೊರಿವಿಲಿಯಲ್ಲಿದ್ದು, ಮುಂಬಯಿಯ ವಾಶಿ, ಸರಿಗಂ ಮತ್ತು ಗುಜರಾತಿನ ಸಾಯಿಕಾದಲ್ಲಿ ಇದರ ಪ್ರಮುಖ ಕಾರ್ಖಾನೆಗಳು ಕಾರ್ಯಚರಿಸುತ್ತಿವೆ.
ದೇಶದ ಬಹುಮುಖ್ಯ ಆಗ್ರೋ ಕೆಮಿಕಲ್ಸ್ ಕಂಪೆನಿಯಾಗಿ ಬೆಳೆದು ಅಗ್ರಸ್ಥಾನ ಪಡೆದಿರುವ ಹೇರಂಬಾ ಇಂಡಸ್ಟ್ರೀಸ್ ಲಿಮಿಟೆಡ್ ಸ್ಟಾಕ್ ಎಕ್ಸ್ಚೇಂಜ್ ಪಟ್ಟಿಯಲ್ಲೂ ದಾಖಲಾಗಿ ಹೊಸ ಇತಿಹಾಸ ಬರೆದಿದೆ. ಈ ಕಂಪೆನಿಗೆ ಸದಾಶಿವ ಕೆ. ಶೆಟ್ಟಿ ಅವರು ಚೇರ್ಮೆನ್ ಆಗಿದ್ದು, ಸಹೋದರ ರಘುರಾಮ ಶೆಟ್ಟಿಯವರು ಆಡಳಿತ ನಿರ್ದೇಶಕರಾಗಿದ್ದಾರೆ. ಸದಾಶಿವ ಕೆ. ಶೆಟ್ಟಿಯವರ ಧರ್ಮಪತ್ನಿ ಸುಜಾತ ಶೆಟ್ಟಿಯವರು ನಿರ್ದೇಶಕಿಯಾಗಿದ್ದಾರೆ.
ಎಕ್ಸ್ಪೋರ್ಟ್ ಅವಾರ್ಡ್ : ಹೇರಂಬಾ ಲಿಮಿಟೆಡ್ ಕೀಟನಾಶಕ ರಫ್ತು ವಿಷಯದಲ್ಲಿ ಗಣನೀಯ ಸಾಧನೆ ದಾಖಲಿಸಿದ್ದು. 10 ವರ್ಷಗಳ ಹಿಂದೆಯೇ ಎಕ್ಸ್ಪೋರ್ಟ್ ಅವಾರ್ಡ್ ಅಂದರೆ ರಫ್ತು ಪ್ರಶಸ್ತಿ ಪಡೆದು ಕೊಂಡಿದೆ. ಇದನ್ನು ಆಗಿನ ಮಾಜಿ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಸರಕಾರದ ಪರವಾಗಿ ಕಂಪೆನಿಗೆ ನೀಡಿದ್ದರು. ಇದು ಕಂಪೆನಿಯ ಪ್ರತಿಷ್ಠೆಯನ್ನು ಇನ್ನಷ್ಟು ಉನ್ನತ ಮಟ್ಟಕ್ಕೆ ಕೊಂಡ್ಯೊಯ್ದಿದೆ.
ಅಪರೂಪದ ಸಮಾಜಸೇವಕ : ಹಣವಂತರೆಲ್ಲ ದಾನಿಗಳಲ್ಲ. ಶ್ರೀಮಂತರೆಲ್ಲ ತಮ್ಮ ಪ್ರತಿಷ್ಠೆ ಅಂತಸ್ತನ್ನು ಬದಿಗಿರಿಸಿ ಸಮಾಜದ ಪರವಾಗಿ, ಬಡವರ ಧ್ವನಿಯಾಗಿ ನಿಲ್ಲುವವರಲ್ಲ. ಆದರೆ, ಪ್ರತಿಷ್ಠಿತ ಉದ್ಯಮಿ ಸದಾಶಿವ ಕೆ. ಶೆಟ್ಟಿ ಅವರು ಈ ಮಾತಿಗೆ ಹೊರತಾಗಿದ್ದಾರೆ. ಅವರೊಬ್ಬ ಹೃದಯ ಶ್ರೀಮಂತಿಕೆಯ ಬಡವರ ಬಂಧು, ಅಗರ್ಭ ಶ್ರೀಮಂತರಾಗಿದ್ದರೂ ತಮ್ಮ ದುಡಿಮೆಯ ಬಹುಪಾಲನ್ನು ಅವರು ಸಮಾಜಸೇವೆಗೆ ಮೀಸಲಿಟ್ಟಿದ್ದಾರೆ. ಇಂದಿಗೂ ಹುಟ್ಟೂರಿನ ವ್ಯಾಮೋಹವನ್ನು ಬಿಟ್ಟಿರಲಾರದ ಅವರು ಊರಿನ ಹತ್ತು ಹಲವು ಸಮಾಜಪರ ಸೇವಾಕಾ ರ್ಯಗಳಿಗೆ ತುಂಬು ಹೃದಯದ ಆರ್ಥಿಕ ಸಹಕಾರವನ್ನು ನೀಡುತ್ತಾ ಬಂದಿದ್ದಾರೆ.
ಊರಲ್ಲಿರುವ ಕೆಲವು ದೇವಸ್ಥಾನ, ದೈವಸ್ಥಾನ ಮತ್ತು ಭಜನಾ ಮಂದಿರ ಸಮಿತಿಯಲ್ಲಿದ್ದುಕೊಂಡು ಧಾರ್ಮಿಕ ಸೇವೆ ಸಲ್ಲಿಸುತ್ತಿದ್ದಾರೆ. ಕಷ್ಟದಲ್ಲಿರುವವರಿಗೆ, ನೊಂದವರಿಗೆ, ಅನಾರೋಗ್ಯ ಪೀಡಿತರಿಗೆ ಆರ್ಥಿಕ ನೆರವು ನೀಡುತ್ತಾ ಬಂದಿದ್ದಾರೆ. ಬಡ ಕುಟುಂಬಗಳ ಎಷ್ಟೋ ಮಂದಿಗೆ ಉದ್ಯೋಗವನ್ನು ನೀಡಿದ ಅವರು ಕೃಷಿ ಮೇಲಿನ ಪ್ರೀತಿಯನ್ನು ಉಳಿಸಿ ಬೆಳೆಸಿದ್ದಾರೆ. ಅದಕ್ಕವರ ಕೃಷಿಗೆ ಸಂಬಂಧಿಸಿದ ಉತ್ಪನ್ನಗಳಿಗೆ ಹೆಸರುವಾಸಿಯಾದ ಹೇರಂಬಾ ಲಿಮಿಟೆಡ್ ದೇಶ ವಿದೇಶಗಳಲ್ಲಿ ಪ್ರಖ್ಯಾತಿ ಹೊಂದಿರುವುದೇ ಪ್ರಮುಖ ಸಾಕ್ಷಿಯಾಗಿದೆ. ಅವರು ಮುಂಬಯಿಯ ಬಂಟರ ಸಂಘ, ಹುಟ್ಟೂರಿನ ಸಮೀಪದ ಉಪ್ಪಳ ಕೊಂಡೆವೂರು ನಿತ್ಯಾನಂದ ಆಶ್ರಮ ಸೇರಿದಂತೆ ಹಲವಾರು ದೇವಸ್ಥಾನಗಳಲ್ಲಿ ಟ್ರಸ್ಟಿಯಾಗಿದ್ದಾರೆ.
ಊರಿನ ಹಲವಾರು ದೇವಸ್ಥಾನಗಳ ಜೀರ್ಣೋದ್ಧಾರ ಕಾರ್ಯದಲ್ಲಿ ಸಕ್ರೀಯರಾಗಿ ಗುರುತಿಸಿಕೊಂಡಿದ್ದಾರೆ. ದೇವಸ್ಥಾನಗಳಿಗೆ ಆರ್ಥಿಕ ಸಹಕಾರ ನೀಡಿ ಕೊಡುಗೈ ದಾನಿ ಎಂದು ಶ್ಲಾಘನೆಗೆ ಪಾತ್ರರಾಗಿದ್ದಾರೆ. ಕೃಷಿ ಪ್ರಧಾನ ಸಂಸ್ಕೃತಿ ಹಾಗೂ ಧಾರ್ಮಿಕ ಕೇಂದ್ರಗಳ ನಂಟನ್ನು ತನ್ನ ಬದುಕಿನಲ್ಲಿ ಅಳವಡಿಸಿ ಸಾರ್ಥಕತೆಯನ್ನು ಕಂಡಿರುವ ಅವರನ್ನು ಅನೇಕ ಸಂಘ, ಸಂಸ್ಥೆಗಳು ಹಾಗೂ ಧಾರ್ಮಿಕ ಕೇಂದ್ರಗಳು ಸನ್ಮಾನಿಸಿ ಗೌರವಿಸಿವೆ.
ಸಂಸಾರ : ಸದಾಶಿವ ಕೆ. ಶೆಟ್ಟಿ ಮತ್ತು ಸುಜಾತ ಶೆಟ್ಟಿ ದಂಪತಿಗಳಿಗೆ ಇಬ್ಬರು ಮಕ್ಕಳು. ಶ್ರೇಯಾ ಶೆಟ್ಟಿ ಮತ್ತು ಶ್ರೀರಾಜ್ ಶೆಟ್ಟಿ. ಶ್ರೀರಾಜ್ ಶೆಟ್ಟಿ ಅವರು ತಂದೆ ಸದಾಶಿವ ಕೆ. ಶೆಟ್ಟಿಯವರೊಂದಿಗೆ ಕಂಪೆನಿ ವ್ಯವಹಾರ ನೋಡಿಕೊಳ್ಳುತ್ತಿದ್ದಾರೆ. ಶ್ರೀರಾಜ್ ಶೆಟ್ಟಿ ಅವರ ಪತ್ನಿ (ಸದಾಶಿವ ಶೆಟ್ಟಿಯವರ ಸೊಸೆ) ಡಾ. ಪ್ರಕೃತಿ ಶೆಟ್ಟಿ ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸದಾಶಿವ ಕೆ. ಶೆಟ್ಟಿಯವರ ಮಗಳು ಶ್ರೇಯಾ ಶೆಟ್ಟಿ ಅವರಿಗೆ ಮೇಘರಾಜ್ ಶೆಟ್ಟಿ ಅವರೊಂದಿಗೆ ವಿವಾಹ ಮಾಡಿಕೊಡಲಾಗಿದೆ.
ಪದ್ಮಶ್ರೀ ಪ್ರಶಸ್ತಿಗೆ ಅರ್ಹರು : ಸದಾಶಿವ ಕೆ. ಶೆಟ್ಟಿಯವರು ಆಪದ್ಬಾಂಧವರಾಗಿ ಸಲ್ಲಿಸುತ್ತಿರುವ ಸಮಾಜಸೇವೆ, ದಾನ ಧರ್ಮ ಮತ್ತು ಕೈಗಾರಿಕಾ ಕ್ಷೇತ್ರದಲ್ಲಿ ಅವರು ದಾಖಲಿಸಿರುವ ಅಭಿವೃದ್ಧಿಪರ ಸಾಧನೆಯನ್ನು ಪರಿಗಣಿಸಿ ಭಾರತ ಸರಕಾರವು ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಬೇಕಾಗಿದೆ.