ಕಡಂದಲೆ ಎಂದರೆ ನೆನಪಾಗುತ್ತಾರೆ ಹೆಸರಾಂತ ಸಾಹಿತಿಗಳು, ರಾಜಕಾರಣಿಗಳು, ಗುತ್ತಿನ ಗತ್ತಿನ ಬಂಟ ಮನೆತನದ ಉದ್ಯಮಿಗಳು, ಶಿಕ್ಷಣ ತಜ್ಞರು. ಸುಬ್ರಹ್ಮಣ್ಯ ಸ್ವಾಮಿ ನೆಲೆ ನಿಂತ ತುಳುನಾಡಿನ ಪವಿತ್ರ ನೆಲ ತುಳುವ ತುಂಡರಸರು ವೈಭವದಿಂದ ಆಳಿದ ನೆಲ. ಇಲ್ಲಿನ ಕಡಂದಲೆ ಪರಾರಿ ಎಂಬ ಕೂಡು ಕುಟುಂಬದ ಬಂಟರ ಐತಿಹಾಸಿಕ ಹಿನ್ನೆಲೆಯ ಸದಸ್ಯರೆಲ್ಲರೂ ಮೇಧಾವಿಗಳು, ಕಾನೂನು ಜ್ಞಾನವುಳ್ಳ ನ್ಯಾಯ ತೀರ್ಮಾನ ಸಮರ್ಥರು, ಪರಿಶ್ರಮಿಗಳು, ಕೃಷಿ ಬೇಸಾಯ ನಿರತರು, ಕೆಲವರು ದೇಶ ವಿದೇಶಗಳಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದವರು. ಅಂಥಹ ಪ್ರತಿಷ್ಠಿತ ಕುಟುಂಬದಲ್ಲಿ ಜನ್ಮ ತಾಳಿ ಇಂದು ಹತ್ತಾರು ಕ್ಷೇತ್ರಗಳಲ್ಲಿ ಶಾಶ್ವತ ಕೀರ್ತಿ ಪಡೆದ ಮಹನೀಯರಲ್ಲಿ ಆದರಣೀಯ ಕಡಂದಲೆ ಪರಾರಿ ಪ್ರಕಾಶ್ ಎಲ್ ಶೆಟ್ಟರು ಕೂಡಾ ಒಬ್ಬರು. ಬೊಡಂತಿಲ ಪಡು ದಿವಂಗತ ಲೋಕಯ್ಯ ಶೆಟ್ಟಿ ಹಾಗೂ ಪುತ್ತಿಗೆ ಗುತ್ತು ಕಡಂದಲೆ ಪರಾರಿ ಶ್ರೀಮತಿ ಜಲಜಾ ಎಲ್ ಶೆಟ್ಟಿ ದಂಪತಿಯರ ಕೀರ್ತಿ ವರ್ಧನ ಸಂತಾನವಾಗಿ ಜನಿಸಿದ ಶೆಟ್ಟರು ಬಾಲ್ಯದ ದಿನಗಳಿಂದಲೇ ಆಳ ಚಿಂತನೆಯ ಹೊಳೆವ ಕಂಗಳ ಪ್ರತಿಭಾವಂತ ಬಾಲಕರಾಗಿದ್ದರು. ಪ್ರಕಾಶ್ ಶೆಟ್ಟಿ ಅವರು ಮುಂಬಯಿ ಹೈಕೋರ್ಟ್ ನ ಹೆಸರಾಂತ ವಕೀಲರು ಜೊತೆಗೆ ಸಿಟಿಸೆಶ್ಷನ್ ಗ್ರೇಟರ್ ಬಾಂಬೆ ಕಾನೂನು ತಜ್ಞರು. ವಾಣಿಜ್ಯ ಮತ್ತು ಕಾನೂನು ಪದವೀಧರ ಪ್ರಕಾಶ್ ಶೆಟ್ಟರು ಓರ್ವ ನ್ಯಾಯವಾದಿಯಾಗಿ ಕಾರ್ಯ ಪ್ರವೃತ್ತರಾಗಿದ್ದಾರೆ. ಜೊತೆಗೆ ನಗರದ ಹೆಸರಾಂತ ಸಂಘಟನೆಗಳಿಗೆ, ಉದ್ಯಮಗಳಿಗೆ ಕಾನೂನು ಸಲಹೆಗಾರರಾಗಿ ಹೆಸರು ಸಂಪಾದಿಸಿದ್ದಾರೆ. ಶ್ರೀಯತರು ಅದೆಷ್ಟೋ ಜಟಿಲ ಸಂಕೀರ್ಣ ಹಾಗೂ ಗೊಂದಲದ ಕೇಸ್ ಗಳನ್ನು ಬಗೆ ಹರಿಸಿ ನ್ಯಾಯ ಒದಗಿಸಿ ಕೊಟ್ಟ ಧೀಮಂತರು. ಕೇವಲ ಹಣ ಸಂಪಾದನೆಯನ್ನೇ ಲಕ್ಷ್ಯವಿರಿಸಿಕೊಳ್ಳದೆ ಸಾಮಾಜಿಕ ನ್ಯಾಯಕ್ಕೆ ಮಹತ್ವ ನೀಡಿದ ಅಪರೂಪದ ನ್ಯಾಯವಾದಿ ಇವರು.
ಪ್ರಕಾಶ್ ಶೆಟ್ಟಿಯವರು ಬಾಂಬೆ ಬಂಟ್ಸ್ ಅಸೋಸಿಯೇಶನ್ ಇದರ ಸ್ಥಾಪಕ ಸದಸ್ಯರಾಗಿದ್ದು, ನಂತರದ ವರ್ಷಗಳಲ್ಲಿ ಅನೇಕ ಜವಾಬ್ದಾರಿಯುತವಾಗಿ ಸ್ಥಾನಗಳನ್ನು ಅಲಂಕರಿಸಿದ ಬಳಿಕ ಅದರ ಅಧ್ಯಕ್ಷರಾಗಿ ಆಯ್ಕೆಗೊಂಡ ಬಳಿಕ ತನ್ನ ಅಧಿಕಾರಾವಧಿಯಲ್ಲಿ ಸಂಘಟನೆಯನ್ನು ಅತ್ಯಂತ ಸಮರ್ಥ ರೀತಿಯಲ್ಲಿ ಮುನ್ನಡೆಸಿದ ಹೆಗ್ಗಳಿಕೆಗೆ ಪಾತ್ರರಾದರು. ಮಾತೃಭೂಮಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಯ ನಿರ್ದೇಶಕರಾಗಿ ಗಮನೀಯ ಸೇವೆ ಸಲ್ಲಿಸಿದ ಇವರು ಪ್ರಥಮ ಬಾರಿ ಬಂಟ್ಸ್ ಡೈರೆಕ್ಟರಿ ಸಂಚಿಕೆಯನ್ನು ಹೊರ ತಂದಿದ್ದರು. ಈ ಬಂಟ್ಸ್ ಡೈರೆಕ್ಟರಿಯನ್ನು ಬಾಂಬೆ ಬಂಟ್ಸ್ ಅಸೋಸಿಯೇಶನ್ ಪ್ರಕಾಶನಗೊಳಿಸಿದ್ದು ಬಂಟ ಸಮಾಜ ಬಾಂಧವರ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿತ್ತು. ತನ್ನ ತವರು ನೆಲದಲ್ಲಿ ತಳವೂರಬಹುದಾಗಿದ್ದ ಬೃಹತ್ ಕೈಗಾರಿಕಾ ಘಟಕದ ದೆಸೆಯಿಂದ ಕಲುಷಿತಗೊಳ್ಳಲಿದ್ದ ಪರಿಸರ, ಗಾಳಿ, ನೀರು ಕುರಿತಂತೆ ಜಾಗೃತರಾಗಿ ಅದರ ವಿರುದ್ಧ ಪ್ರತಿಭಟನೆ ನಡೆಸಿ ಯಶ ಸಂಪಾದಿಸಿದ್ದರು. ಆ ವೇಳೆಗೆ ಹೋರಾಟ ಸಮಿತಿಯ ಅಧ್ಯಕ್ಷರಾಗಿ ಮುಂಚೂಣಿಯಲ್ಲಿದ್ದರು. ಭಿವಂಡಿ ನಗರಪಾಲಿಕೆ ವ್ಯಾಪ್ತಿಯ ಸಮಗ್ರ ಅಭಿವೃದ್ಧಿಗೆ ಶಕ್ತಿ ಮೀರಿ ಶ್ರಮಿಸಿ ಅಲ್ಲಿನ ವಾಸ್ತವ್ಯ ಪ್ರದೇಶ ನಿವಾಸಿಗಳ ನೂರಾರು ಸಮಸ್ಯೆಗಳನ್ನು ಬಗೆಹರಿಸಿಕೊಟ್ಟಿದ್ದಾರೆ ಶೆಟ್ಟರು. ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿಯ ಅಧ್ಯಕ್ಷರಾಗಿ ಹಲವಾರು ಪರಿಸರ ವಿರೋಧಿ ಸಂಘಟನೆಗಳ ಕಾರ್ಖಾನೆಗಳ ವಿರುದ್ಧ ಹೋರಾಡಿ ಯಶಸ್ಸನ್ನು ಕಂಡುಕೊಂಡ ಕೀರ್ತಿ ಶ್ರೀಯುತರಿಗಿದೆ. ಶೆಟ್ಟಿಯವರು N I A ಇದರ ಪಬ್ಲಿಕ್ ಪ್ರಾಸಿಕ್ಯೂಟರ್ ಮಹಾರಾಷ್ಟ್ರಆಗಿ ನೇಮಕಗೊಂಡು ಅನೇಕ ಅಪರಾಧಗಳ ವಿರುದ್ಧ ವಾದ ಮಂಡನೆಗಳಿಂದ ಅಪಾರ ಯಶಸ್ಸನ್ನು ಗಳಿಸಿಕೊಂಡಿದ್ದರು. ಕೆಲವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರಾದ ಗಂಭೀರ ಅಪರಾಧಗಳ ಸಮೂಲಾಗ್ರ ವಿಷಯ ಸಂಗ್ರಹಣೆ ಮಾಡಿ ಅಪರಾಧಿಗಳನ್ನು ಕೋರ್ಟಿಗೆಳೆದು ವಾದಿಸಿ ಜಯ ಸಂಪಾದಿಸಿದ್ದರು. ಮಹಾರಾಷ್ಟ್ರ ಸರಕಾರದ ವತಿಯಿಂದ ಸ್ಪೆಶಲ್ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ನೇಮಕಗೊಂಡು ಪಾಕಿಸ್ತಾನ ಗುಪ್ತಚರ ರಾಯಭಾರಿ ಸಂಬಂಧಿಸಿದಂತೆ ಅಪರಾಧಿಗಳ ಪತ್ತೆ ಹಚ್ಚಿ ಅವರಿಗೆ ಏಳು ವರ್ಷಗಳ ಕಾಲ ಕಾರಾಗೃಹ ವಾಸದ ಸವಿಯುಣಿಸಿದ ಕುಶಲ ಕಾನೂನು ತಜ್ಞರು. ರಾಷ್ಟ್ರೀಯ ಸಮಗ್ರತೆ ಕಾಯ್ದೆ ಸಂಬಂಧಿ ಅದೆಷ್ಟೋ ಅಪರಾಧಗಳ ಸಂಚು ಬೇಧಿಸಿ ಸರಕಾರಕ್ಕೆ ಮಹದುಪಕಾರ ಮಾಡಿದ್ದಾರೆ. ಲಷ್ಕರೆ ತೋಹಿಬಾ ಸಂಬಂಧಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಒಳಗೊಂಡ ಅಪರಾಧಿಗಳಿಗೆ ಶಿಕ್ಷೆ ಕೊಡಿಸುವಲ್ಲಿ ಶೆಟ್ಟರ ಪಾತ್ರ ಅವರ್ಣನೀಯ. ಕೋರೆಗಾಂ ಮಾಲೆಗಾಂ ಉಗ್ರರ ಚಟುವಟಿಕೆಗಳಿಗೆ ಕಾನೂನು ರೀತ್ಯಾ ಪ್ರತಿಬಂಧ ಮಾಡುವಲ್ಲಿ ಹಾಗೂ ಕಾನೂನು ಉಲ್ಲಂಘಿಸುವ ಉಗ್ರಗಾಮಿಗಳಿಗೆ ಕಾನೂನು ಶಿಕ್ಷೆ ಕೊಡಿಸುವಲ್ಲಿ ಶೆಟ್ಟರ ಪಾತ್ರ ಮರೆಯಲಾಗದು. ಅಪ್ಪಟ ರಾಷ್ಟ್ರಭಕ್ತರಾದ ಇವರು ತನ್ನ ಕಾನೂನು ಜ್ಞಾನವನ್ನು ದೇಶದ ಸಮಗ್ರತೆ ಭದ್ರತೆ ಹಾಗೂ ಸಾರ್ವಜನಿಕ ನ್ಯಾಯಕ್ಕೋಸ್ಕರ ಉಪಯೋಗಿಸಿ ಸರ್ಕಾರದ ಹಾಗೂ ಸಾರ್ವಜನಿಕರ ಮುಕ್ತ ಕಂಠದ ಶ್ಲಾಘನೆಗೆ ಪಾತ್ರರಾಗಿದ್ದಾರೆ.
ಪ್ರಕಾಶ್ ಶೆಟ್ಟರು ತನ್ನ ಪ್ರಾಥಮಿಕ ಶಿಕ್ಷಣವನ್ನು ಬೊಡಂತಿಲ ಪಡು ಪ್ರಾಥಮಿಕ ಶಾಲೆಯಲ್ಲಿ ಪೂರೈಸಿ, ಫ್ರೌಡ ಶಿಕ್ಷಣವನ್ನು ಕಡಂದಲೆ ಹೈಸ್ಕೂಲ್ ನಲ್ಲಿ ಪೂರೈಸಿದರು. ಗುರುಪುರ ಸರಕಾರಿ ಹೈಸ್ಕೂಲ್ ಮುಖಾಂತರ ಎಸ್ಸೆಸ್ಸೆಲ್ಸಿ ಪೂರೈಸಿ ಮುಂಬಯಿಗೆ ಬಂದು ಭಿವಂಡಿ ಬಿ.ಎನ್.ಎನ್ ಕಾಲೇಜು ಸೇರಿ ಬಿ.ಕಾಂ.ಪದವಿ ಗಳಿಸಿದರು. ವಿಪಿಎಂ ಲಾ ಕಾಲೇಜು ಥಾಣೆ ಮತ್ತು ಸಿದ್ಧಾರ್ಥ ಲಾ ಕಾಲೇಜು ಮುಖಾಂತರ 1978 ರಲ್ಲಿ ಉತ್ತಮ ಫಲಿತಾಂಶದೊಂದಿಗೆ ಕಾನೂನು ಪದವಿ ಪಡೆದರು. ಉಳೆಪಾಡಿ ಕಲೆಂಬಿ ಮನೆತನದ ಶ್ರೀಮತಿ ಕಿಶೋರಿ ಪಿ ಶೆಟ್ಟಿಯವರು ಇವರ ಸಾಂಸಾರಿಕ ಜೀವನಕ್ಕೆ ಜೊತೆಯಾದರು. ಪುತ್ರ ಸೂರಜ್ ಕುಮಾರ್ ಶೆಟ್ಟಿ ಕಾನೂನು ಶಿಕ್ಷಣ ಪಡೆದು ವಕೀಲರಾಗಿ ಹರ್ಷಾ ಶೆಟ್ಟಿ ಎಂಬವರ ಜೊತೆ ವಿವಾಹವಾಗಿ ನೆಮ್ಮದಿಯ ಸಂಸಾರ ಸಾಗಿಸುತ್ತಿದ್ದಾರೆ. ಸೌರಭ್ ಶೆಟ್ಟಿ ಯು ಎಸ್ ಎ ವಾಷಿಂಗ್ಟನ್ ವಿಶ್ವವಿದ್ಯಾಲಯದಿಂದ ಬಿ.ಇ.ಎಂ.ಎಸ್ ಪದವಿಧರರು. ಇನ್ನೊಬ್ಬ ಪುತ್ರ ಸಾರ್ಥಕ್ ಶೆಟ್ಟಿ ಬಿಕಾಂ ಎಫ್ ಸಿ ಎ ಎಲ್ ಎಲ್ ಬಿ ಮುಗಿಸಿ ಮುಂಬಯಿ ಹೈಕೋರ್ಟ್ ನಲ್ಲಿ ವಕೀಲರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಸುದೀರ್ಘ ಕಾಲದ ಓರ್ವ ಯಶಸ್ವಿ ನ್ಯಾಯವಾದಿಯಾಗಿ ಕಾನೂನು ತಜ್ಞನಾದ ಪ್ರಕಾಶ್ ಶೆಟ್ಟರು ಅಸಂಖ್ಯ ಪ್ರಕರಣಗಳಲ್ಲಿ ತನ್ನ ವಾಕ್ಚಾತುರ್ಯ ಕಾರ್ಯಪಟುತ್ವದಿಂದ ವಿಜಯ ಸಂಪಾದಿಸಿ ಕೀರ್ತಿವಂತರಾಗಿದ್ದು, ಇವರು ಯಶಸ್ಸು ಗಳಿಸಿದ ಪ್ರಕರಣಗಳ ವಿವರದ ಪಟ್ಟಿ ಕುರಿತ ದೀರ್ಘ ಅಧ್ಯಾಯದ ಎಲ್ಲವನ್ನೂ ಇಲ್ಲಿ ವಿವರಿಸುವುದು ಕಷ್ಟ ಸಾಧ್ಯ. ಕೊಲೆ ಸೇರಿದಂತೆ ಅದೆಷ್ಟೋ ಕ್ರಿಮಿನಲ್ ಗಳಿಗೆ ಶಿಕ್ಷೆ ವಿಧಿಸುವಲ್ಲಿ, ಹತ್ಯಾಕಾಂಡ ನರಮೇಧ ಪ್ರಕರಣಗಳ ನೈಜ ಆರೋಪಿಗಳನ್ನು ಬಯಲಿಗೆಳೆದು ರಾಷ್ಟ್ರದ ವಿವಿಧ ಭಾಗಗಳಿಂದ ನಗರಕ್ಕೆ ತರಿಸಿ ಕಾನೂನಿನಡಿ ಶಿಕ್ಷೆ ವಿಧಿಸುಶಲ್ಲಿ ಮಹಾರಾಷ್ಟ್ರ ಸರಕಾರಕ್ಕೆ ಇವರ ಕೊಡುಗೆ ಅನನ್ಯ. ನಾಸಿಕ್ ವಿಜಯಾ ಬ್ಯಾಂಕ್ ವಂಚನೆಯ ಪ್ರಕರಣ ಸೇರಿದಂತೆ ಅಸಂಖ್ಯ ಹಣಕಾಸು ಅಪರಾಧ ಸಂಬಂಧಿ ಪ್ರಕರಣಗಳನ್ನು ಬೆಳಕಿಗೆ ತಂದು ಸಂತ್ರಸ್ತರಿಗೆ ನ್ಯಾಯ ಒದಗಿಸಿದ್ದಾರೆ. ಪತ್ರಕರ್ತರೋರ್ವರ ಕೊಲೆ ಪ್ರಕರಣ, ಪ್ರತಿಷ್ಠಿತ ನಾಯಕರೋರ್ವರ ಡ್ರೈವರ್ ಹತ್ಯಾ ಪ್ರಕರಣ, ಉದ್ಯಮಿಗಳು ಹಾಗೂ ಚಿತ್ರಜಗತ್ತಿನ ಕೊಲೆ ಪ್ರಕರಣ, ಭೂಗತ ಡಾನ್ ಗಳ ಕ್ರಿಮಿನಲ್ ಚಟುವಟಿಕೆಗಳಿಗೆ ಮುಟ್ಟುಗೋಲು ಹಾಕುವಲ್ಲಿ ಶೆಟ್ಟರ ಯೋಗದಾನಗಳು ಅವರ ಕಾನೂನು ಸಹವಾಸದ ಜೀವನ ವೃತ್ತಾಂತದಲ್ಲಿ ದಾಖಲೆಯಾಗಿವೆ. ಬಂಟ್ಸ್ ನ್ಯಾಯ ಮಂಡಳಿಯ ಅಧ್ಯಕ್ಷರಾಗಿ, ಮುಂಬಯಿ ಗುರುದೇವ ಸೇವಾ ಬಳಗದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ ಅಸಾಮಾನ್ಯ ಮೇಧಾವಿಯೋರ್ವ ಬಂಟ ಸಮಾಜದವರೆನ್ನುವ ಅಭಿಮಾನ ನಮಗಿದೆ. ಶ್ರೀಯುತರ ಭವಿಷ್ಯದ ಬಾಳು ಸುಖಮಯವಾಗಿರಲಿ. ಆರೋಗ್ಯ ಸ್ಥಿರವಾಗಿದ್ದು ದೀರ್ಘಕಾಲ ಸಂತೃಪ್ತ ಬಾಳನ್ನು ಸಾಗಸಲೆಂದು ಬಂಟ್ಸ್ ನೌ ಮಾಧ್ಯಮ ಸಂಸ್ಥೆ ಶುಭ ಹಾರೈಸುತ್ತದೆ.
ಶುಭಂ..
ಅರುಣ್ ಶೆಟ್ಟಿ ಎರ್ಮಾಳ್
ಗೌರವ ಸಂಪಾದಕರು